ಲೇಖನ: ದು.ಗು.ಲಕ್ಷ್ಮಣ್, ಹಿರಿಯ ಪತ್ರಕರ್ತರು
“ದಿ ಕಾಶ್ಮೀರ್ ಫೈಲ್ಸ್”ಚಿತ್ರ ಖ್ಯಾತಿಯ ಜನಪ್ರಿಯ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಯವರ ಇನ್ನೊಂದು ಮಹತ್ವದ ಚಲನಚಿತ್ರ,ಕಳೆದ ಸೆ.28ರಂದು ಎಲ್ಲೆಡೆ ಬಿಡುಗಡೆಯಾಗಿ,ಪ್ರದರ್ಶನ ಕಾಣುತ್ತಿರುವ”The Vaccine War”.ಹಿಂದಿ,ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡ ಈ ಚಿತ್ರ ಕೊರೊನ ದುರಿತ ಕಾಲದಲ್ಲಿ ದೇಶಾದ್ಯಂತ ಜನರು ಕೋವಿಡ್ ಮಹಾಮಾರಿಗೆ ಯಾವುದೇ ಮದ್ದಿಲ್ಲದೆ ಸಾಯುತ್ತಿರುವಾಗ,ಭಾರತ ದೇಶದ ಸರ್ಕಾರ,ವಿಜ್ಞಾನಿಗಳು,ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(NIV) ಹೇಗಾದರೂ ಮಾಡಿ ಈ ಮಹಾಮರಿಯನ್ನು ಶಮನಗೊಳಿಸುವ ಲಸಿಕೆಯನ್ನು ಸ್ವದೇಶದಲ್ಲೇ ಅಭಿವೃದ್ಧಿಪಡಿಸಿ,ಜನರ ಜೀವ ಉಳಿಸಬೇಕೆಂಬ ಬದ್ಧತೆ,ಅದಕ್ಕೆ ತಕ್ಕ ಸಿದ್ಧತೆ,ಹೋರಾಟ ನಡೆಸುವ ಭಾವನೆಗಳನ್ನು ಮೀಟುವ ಕಥಾಹಂದರವೇ ಈ ಚಿತ್ರದ ವಸ್ತು.
ಇದೊಂದು ಸತ್ಯಕಥೆಯಾಧಾರಿತ ಸಿನೆಮಾ.ಪಾತ್ರಗಳ ಹೆಸರನ್ನಷ್ಟೇ ಬದಲಿಸಲಾಗಿದೆ.ಸನ್ನಿವೇಶ,ಸಂದರ್ಭ,ಘಟನೆಗಳು,ಅವುಗಳು ಘಟಿಸುವ ದಿನಾಂಕ,ಎಲ್ಲವೂ ನೈಜ.ವೈದ್ಯಕೀಯ ವಿಜ್ಞಾನಿಗಳ ತಂಡ,ಅದರಲ್ಲೂ ವಿಶೇಷವಾಗಿ ಮಹಿಳಾ ವಿಜ್ಞಾನಿಗಳು ಸರ್ಕಾರದ ಸೂಚನೆಯಂತೆ ನಿಗದಿತ ಸಮಯದಲ್ಲಿ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸುವ ಜಟಿಲ ಹಾಗೂ ಅತ್ಯಂತ ಕ್ಲಿಷ್ಟಕರ ಸವಾಲು ಸ್ವೀಕರಿಸಿ,ತಮ್ಮ ಬದುಕನ್ನೇ ಒತ್ತೆಯಿಟ್ಟು ಪ್ರಯೋಗಾಲಯಗಳಲ್ಲಿ ನಿದ್ದೆ ಇಲ್ಲದ ಅದೆಷ್ಟೋ ರಾತ್ರಿಗಳನ್ನು ಕಳೆಯುತ್ತಾರೆ.ಮನೆ,ಮಕ್ಕಳು,ಗಂಡನ ಸಾಮಿಪ್ಯವಿಲ್ಲದೆ ಪ್ರಯೋಗಾಲಯಗಳನ್ನೇ ಮನೆ ಮಾಡಿಕೊಳ್ಳುತ್ತಾರೆ.ಕುಟುಂಬದ ಸದಸ್ಯರ ಅನಾರೋಗ್ಯ,ಹಿರಿಯರ ಮರಣ,ಮಕ್ಕಳ ಒಂಟಿತನ ಮುಂತಾದ ಭಾವನಾತ್ಮಕ ಸಮಸ್ಯೆಗಳು ಹಿಂಡಿ, ಅಲುಗಾಡಿಸುತ್ತಿದ್ದರೂ, ತುಟಿಕಚ್ಚಿ,ಭಾವನೆಗಳನ್ನು ಅದುಮಿಕೊಂಡು ಲಸಿಕೆ ಕಂಡು ಹಿಡಿಯುವುದೊಂದೇ ತಮ್ಮ ಗುರಿ ಎಂಬಂತೆ ನಿರ್ವಿಕಾರಚಿತ್ತರಾಗಿ ಹಗಲಿರುಳು ಊಟ ತಿಂಡಿ ಪರಿವೆಯಿಲ್ಲದೆ ಶ್ರಮಿಸುತ್ತಾರೆ.ನಮ್ಮ ವಿಜ್ಞಾನಿಗಳ ಸಾಹಸ,ಬದ್ಧತೆ ಹಾಗೂ ನಮ್ಮಿಂದ ಇದು ಸಾಧ್ಯ ಎಂಬ ಧನಾತ್ಮಕ ಭಾವನೆಗಳಿಗೆ ಈ ಚಿತ್ರ ಕನ್ನಡಿ ಹಿಡಿದಿದೆ.ಇದಕ್ಕೆ ಸಿನೇಮದುದ್ದಕ್ಕೂ ಆಗಾಗ ಕೇಳಿಬರುವ We can fight this war with Science, This is not a bio war, this is info war, India can do it.. ಮೊದಲಾದ ಸಂಭಾಷಣೆಗಳೇ ನಿದರ್ಶನ.
ಒಂದೆಡೆ ವಿಜ್ಞಾನಿಗಳು ಸ್ವದೇಶಿ,ಸ್ವಾವಲಂಬಿ,ಆತ್ಮ ನಿರ್ಭರತೆಯ ಹಾದಿ ಹಿಡಿದು ಲಸಿಕೆ ತಯಾರಿಸಲು ಮುಂದಾಗಿದ್ದ ರೆ,ಇನ್ನೊಂದೆಡೆ ವಿದೇಶಗಳಿಂದ ಹಣ ಪಡೆದ ದೇಶವಿರೋಧಿ ಮಾಧ್ಯಮಗಳು,ಭಾರತದ ವಿಜ್ಞಾನಿಗಳಿಂದ ವ್ಯಾಕ್ಸಿನ್ ತಯಾರಿಕೆ ಅಸಾಧ್ಯ.ಅದೇನಿದ್ದರೂ ಅಮೆರಿಕ,ಚೀನಾ ದೇಶಗಳ ವ್ಯಾಕ್ಸಿನ್ ಗೇ ನಾವೆಲ್ಲ ಮೊರೆ ಹೋಗಬೇಕು.ಭಾರತದಲ್ಲಿ ಅಂಥ ಪ್ರತಿಭಾವಂತ ವಿಜ್ಞಾನಿಗಳೂ ಇಲ್ಲ,ಲಸಿಕೆ ತಯಾರಿಕೆಗೆ ಅಗತ್ಯವಿರುವ ಮೂಲ ಸೌಕರ್ಯಗಳೂ ಇಲ್ಲ,ಅಲ್ಲದೆ ಅಷ್ಟು ಬೇಗ ತಯಾರಿಸುವುದಂತೂ ಅಸಾಧ್ಯ..ಇತ್ಯಾದಿ ನಕಾರಾತ್ಮಕ,ಆಧಾರರಹಿತ ಸುದ್ದಿ,ಲೇಖನಗಳನ್ನೇ ವೈಭವೀಕರಿಸಿ ಪ್ರಕಟಿಸಿ ದೇಶದ ಮಾನ ಹರಾಜು ಹಾಕುತ್ತಿರುತ್ತವೆ.ದೇಶಹಿತ, ಜನರ ಹಿತ ಯಾವುದೂ ಈ ಮಾಧ್ಯಮಗಳಿಗೆ ಮುಖ್ಯ ಅನಿಸುವುದೇ ಇಲ್ಲ. India can’t do it ಎನ್ನುವುದೊಂದೇ ಮಾಧ್ಯಮಗಳ ಮಂತ್ರ.
ಹೀಗಿದ್ದರೂ ತಮ್ಮ ಬುದ್ಧಿಮತ್ತೆ,ವೈಜ್ಞಾನಿಕ ತಿಳುವಳಿಕೆ ಹಾಗೂ ಅಪಾರ ಪರಿಶ್ರಮದ ಮೂಲಕ ವಿಜ್ಞಾನಿಗಳು ಕೊರೊನ ಲಸಿಕೆ ಕೋ ವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿ,ಮಂಗಗಳ ಮೇಲೆ,ಅನಂತರ ಮಾನವರ ಮೇಲೆ ಪ್ರಯೋಗಿಸಿ ಯಶಸ್ವಿಯಾಗುತ್ತಾರೆ.ಆದರೆ WHO ಮಾನ್ಯತೆ ದೊರಕುವುದಿಲ್ಲ.ಸಾರ್ವಜನಿಕರು ಲಸಿಕೆ ಪಡೆದು ಕೋಟ್ಯಂತರ ಮಂದಿ ರೋಗಮುಕ್ತರಾದಾಗ WHO ಕೂಡ ಭಾರತದ ವ್ಯಾಕ್ಸಿನ್ ಗೆ ಮಾನ್ಯತೆ ಅನಿವಾರ್ಯವಾಗಿ ನೀಡ ಬೇಕಾಗುತ್ತದೆ.ದುಬಾರಿ ಬೆಲೆಯ ಅಮೆರಿಕದ ವ್ಯಾಕ್ಸಿನ್ ಖರೀದಿಸಲು ಸಾಧ್ಯವಾಗದ ಬಡ ದೇಶಗಳಿಗೆ ಭಾರತವೇ ಉಚಿತವಾಗಿ ವ್ಯಾಕ್ಸಿನ್ ಪೂರೈಕೆ ಮಾಡುತ್ತದೆ.ಭಾರತದ್ದು sub standard vaccine ಎಂದು ಸುಳ್ಳು ಪ್ರಚಾರ ಮಾಡಿದ ಕೆಲವು ಮಾಧ್ಯಮಗಳಿಗೆ ತೀವ್ರ ಮುಖಭಂಗ ಆಗುತ್ತದೆ.
ಭಾರತ್ ಬಯೋಟೆಕ್ ಸಂಸ್ಥೆ ICMR ಮತ್ತು NIV ಗಳ ಸಹಯೋಗದಲ್ಲಿ ಹೀಗೆ ಯಶಸ್ವಿ ವ್ಯಾಕ್ಸಿನ್ ತಯಾರಿಸಿದಾಗ,ಆ ವ್ಯಾಕ್ಸಿನ್ ಗಳಿಗೆ ವೈಜ್ಞಾನಿಕ,ತಾಂತ್ರಿಕ ಆಧಾರಗಳೇನು?ವ್ಯಾಕ್ಸಿನ್ ಪಡೆದವರು ಸಾಯುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಏನು?ಸತ್ತರೆ ನೀವೇ ಅದಕ್ಕೆ ಹೊಣೆಗಾರರಲ್ಲವೇ?ಸರ್ಕಾರದ ಒತ್ತಡಕ್ಕೆ ಮಣಿದು ನೀವು ವ್ಯಾಕ್ಸಿನ್ ತಯಾರಿಸಿದ್ದಲ್ಲವೇ?ಇತ್ಯಾದಿ ನಕಾರಾತ್ಮಕ ,ದುರುದ್ದೇಶಪೂರ್ವಕ ಪ್ರಶ್ನೆಗಳು ಮಾಧ್ಯಮಗೋಷ್ಠಿಯಲ್ಲಿ(ಅದೇ ಸಿನೆಮಾದ ಕ್ಲೈಮಾಕ್ಸ್ ದೃಶ್ಯ) ಎದುರಾದಾಗ ಗೋಷ್ಠಿಯಲ್ಲಿ ಹಾಜರಿದ್ದ ಹಿರಿಯ ವಿಜ್ಞಾನಿಗಳೆಲ್ಲ ಪಟಪಟನೆ ಆ ಪ್ರಶ್ನೆಗಳಿಗೆ ವೈಜ್ಞಾನಿಕ,ತಾಂತ್ರಿಕ ಆಧಾರಗಳೊಂದಿಗೆ ಉತ್ತರಿಸಿದಾಗ ಲಸಿಕೆ ತಯಾರಿಕೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಮಾಧ್ಯಮಗಳ ಸೊಲ್ಲಡಗುತ್ತದೆ.ಸುಳ್ಳು ಸುದ್ದಿ,ಲೇಖನ ಪ್ರಕಟಿಸಿದ ವಿಜ್ಞಾನ ಪತ್ರಿಕೆಯೊಂದರ ಸಂಪಾದಕಿಗೆ ಕೋರ್ಟು ಛೀಮಾರಿ ಹಾಕಿ,ಇನ್ನು ಅಂತಹ ಸುದ್ದಿ, ಲೇಖನ ಪ್ರಕಟಿಸದಂತೆ ನೀಡಿದ ತೀರ್ಪಿನ ಪ್ರತಿಯನ್ನು ವಿಜ್ಞಾನಿಗಳ ಮುಖ್ಯಸ್ಥ ಡಾ. ಭಾರ್ಗವ್ ಓದಿ ಹೇಳಿದಾಗ,ಇಡೀ ಸುದ್ದಿಗೋಷ್ಠಿಯಲ್ಲಿ ನೀರವ ಮೌನ.ಕೊನೆಗೆ ಗೋಷ್ಠಿ ಯಲ್ಲಿದ್ದವರೆಲ್ಲ ಎದ್ದು ನಿಂತು ವಿಜ್ಞಾನಿಗಳ ಈ ಅದ್ಭುತ ಸಾಧನೆ ಗೆ ಚಪ್ಪಾಳೆಗಳ ಸುರಿಮಳೆ ಸುರಿಸುತ್ತಾರೆ.
ನಾನಾ ಪಾಟೇಕರ್ ಐ ಸಿ ಎಂ ಆರ್ ಡೈರೆಕ್ಟರ್ ಜನರಲ್ ಡಾ. ಬಲರಾಮ್ ಭಾರ್ಗವ್,ಪಲ್ಲವಿ ಜೋಶಿ-NIV ನಿರ್ದೇಶಕಿ ಡಾ. ಪ್ರಿಯಾ ಅಬ್ರಹಾಂ,ಗಿರಿಜಾ ಓಕ್ ಗೋಡ್ಬಲೆ-ಡಾ. ನಿವೇದಿತಾ ಗುಪ್ತಾ, ಪ್ರಧಾನಿ ಪಾತ್ರದಲ್ಲಿ ಅನುಪಮ್ ಖೇರ್,ಭಾರತದ ವ್ಯಾಕ್ಸಿನ್ ವಿರೋಧಿ ಪತ್ರಕರ್ತೆ ರೋಹಿಣಿ ಸಿಂಗ್ ಧುಲೀಯ ಪಾತ್ರದಲ್ಲಿ ರೈಮಾ ಸೇನ್ ಮನೋಜ್ಞ ಅಭಿನಯ ನೀಡಿದ್ದಾರೆ.ಕನ್ನಡದ ಸಪ್ತಮಿ ಗೌಡ ಕಿರಿಯ ವಿಜ್ಞಾನಿಯಾಗಿ ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. I am Buddha ಮತ್ತು ಪಲ್ಲವಿ ಜೋಶಿ ಈ ಚಿತ್ರದ ನಿರ್ಮಾಪಕರು.
ಚಿತ್ರದುದ್ದಕ್ಕೂ ಆತ್ಮ ನಿರ್ಭರತೆ, ಸ್ವಾವಲಂಬಿ,ಬದ್ಧತೆ ಕುರಿತ ಸಂಭಾಷಣೆಗಳು ಪ್ರೇಕ್ಷಕರಿಗೆ ಮುದ ನೀಡುವಂತಿವೆ.ದೇಶಾಭಿಮಾನವನ್ನು ಬಡಿದೆಬ್ಬಿಸುವಂತಿವೆ.box office ನಲ್ಲಿ ಈ ಚಿತ್ರ ಹಿಟ್ ಆಗದೆ ನಿಧಾನವಾಗಿ ಓಡುತ್ತಿದೆ ಎಂದು ಕೆಲವು ಮಾಧ್ಯಮಗಳು ವಿಶ್ಲೇಷಿಸಿವೆಯಾದರೂ ,ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ತೆರೆಗೆ ಬಂದ ವೈಜ್ಞಾನಿಕ ಚಿತ್ರ ಇದು ಎಂಬ ಹೆಗ್ಗಳಿಕೆಯಂತೂ ಈ ಚಿತ್ರಕ್ಕೆ ಧಾರಾಳವಾಗಿ ಸಿಕ್ಕಿದೆ.
ಕೋ ವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಪಡೆದವರೆಲ್ಲರೂ ಈ ಚಿತ್ರ ನೋಡಲೇಬೇಕು.ಆಗ ನೀವು ಹಾಕಿಸಿಕೊಂಡ ಆ ಉಚಿತ ಲಸಿಕೆಯ ಹಿಂದೆ ವೈದ್ಯಕೀಯ ವಿಜ್ಞಾನಿಗಳ ಪರಿಶ್ರಮ,ತ್ಯಾಗ,ತಪಸ್ಸು,ಬದ್ಧತೆ ಎಂತಹುದಾಗಿತ್ತು ಎಂಬುದು ಮನವರಿಕೆ ಆಗಬಲ್ಲುದು.