ಶಾಮ ಪ್ರಸಾದ್ ಹೆಚ್ ಪಿ
ಪ್ರಥಮ ವರ್ಷದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ವಿದ್ಯಾರ್ಥಿ
ಎಸ್.ಡಿ.ಎಮ್ ಕಾಲೇಜು, ಉಜಿರೆ


ಕನ್ನಡ ರಂಗಭೂಮಿ ಕಂಡ ಪ್ರಸಿದ್ಧ ಹಿರಿಯ ರಂಗಭೂಮಿ ಕಲಾವಿದ. ತಮ್ಮ ವಿಡಂಬನಾತ್ಮಕವಾದ ನಟನೆಯಿಂದಲೇ ಕನ್ನಡ ನಾಡಿನಾದ್ಯಂತ ಪ್ರಸಿದ್ಧಿ ಪಡೆದ ಮಾಸ್ಟರ್ ಹಿರಣ್ಣಯ್ಯರವರ ಜನುಮದಿನವಿಂದು. ಕನ್ನಡದ ರಂಗಭೂಮಿಗೆ “ಕಲ್ಚರಲ್ ಕಮಿಡಿಯನ್” ಎನ್ನುವ ಗರಿಮೆಯನ್ನು ಪಡೆದುಕೊಂಡವರು. ಮಾಸ್ಟರ್ ಹಿರಣ್ಣಯ್ಯ ಬೆಳೆದಿದ್ದು ಮದರಾಸಿನಲ್ಲಾದರೂ ಕನ್ನಡದ ಬಗ್ಗೆ ಅಪಾರ ಪ್ರೀತಿ ಗೌರವ. ತಮ್ಮ ನಾಟಕಗಳಲ್ಲಿ ನೀಡುತ್ತಿದ್ದ ನಿರೂಪಣೆಗಳೇ ಕನ್ನಡದ ಮೇಲಿದ್ದ ಭಾಷಾ ಹಿಡಿತವನ್ನು ಪ್ರತಿಬಿಂಬಿಸುತ್ತದೆ.


ಹಿರಣ್ಣಯ್ಯನವರಿಗೆ ಪ್ರಸಿದ್ಧಿ ತಂದುಕೊಟ್ಟದ್ದು ರಂಗಭೂಮಿಯಾದರೂ ಅವರು ಮೊದಲು ಪಾದಾರ್ಪಣೆ ಮಾಡಿದ್ದು ಚಲನಚಿತ್ರಕ್ಕೆ. ತಮ್ಮ ತಂದೆ ಕೆ ಹಿರಣ್ಣಯ್ಯರವರು ೧೯೪೦ರಲ್ಲಿ ರಚಿಸಿ ನಿರ್ದೇಶಿಸಿದ ವಾಣಿ ಎನ್ನುವ ಚಿತ್ರದ ಮುಖಾಂತರ ಪಾದರ್ಪಣೆ ಮಾಡಿದರು. ೧೯೪೮ ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರವನ್ನು ಮಾಡಲು ಹೋಗಿ ಸೋತಿದ್ದರು. ಛಲ ಬಿಡದ ಮಾಸ್ತರ್ ಕಾಲೇಜಿನಲ್ಲೇ ಸಂಘ ಕಟ್ಟಿ “ಆಗ್ರಹ” ಎನ್ನುವ ನಾಟಕ ಮಾಡಿ ಯಶಸ್ಸು ಪಡೆದರು. ಪರೀಕ್ಷೆಯಲ್ಲಿ ಡುಮ್ಕಿ ಹೊಡೆದರು, ರಂಗಭೂಮಿಯಲ್ಲಿ ಸೈ ಎನಿಸಿಕೊಂಡಿದ್ದರು. ತಮ್ಮ ತಂದೆಯವರು ನಡೆಸುತ್ತಿದ್ದ ಕೆ ಹಿರಣ್ಣಯ್ಯ ಮಿತ್ರ ಮಂಡಲ ನಾಟಕ ತಂಡವನ್ನು ತಂದೆಯ ಮರಣದ ನಂತರ ಸ್ನೇಹಿತರು ಮತ್ತು ವಿದ್ವಾಂಸರಾದ ಅ.ನ.ಕೃರವರ ಸಹಾಯದಿಂದ ಪುನಃ ಕಟ್ಟಿ ಬೆಳೆಸಿದ್ದರು. ಆರಂಭದಲ್ಲಿ ಅನುಭವಿಸಿದ್ದು ನಷ್ಟ ಮಾತ್ರ. ಛಲ ಬಿಡದ ಮಾಸ್ಟರ್ ಹಿರಣ್ಣಯ್ಯ ತಮ್ಮ ವಿವಿಧ ಪ್ರಯೋಗಗಳ ಮೂಲಕ ಮರಳಿ ಯಶಸ್ಸನ್ನ ಪಡೆದರು. ಲಂಚಾವತಾರ ನಾಟಕ ಎಷ್ಟು ಜನಪ್ರಿಯವಾಯಿತು ಎಂದರೆ ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನ ಕಂಡು ದಾಖಲೆ ನಿರ್ಮಿಸಿತು. ಮಹಾರಾಜರಿಂದ ಸನ್ಮಾನ ಪಡೆದು “ನಟರತ್ನಾಕರ” ಎನ್ನುವ ಬಿರುದು ಪಡೆದರು. ನಡು ಬೀದಿ ನಾರಾಯಣ, ಭ್ರಷ್ಟಾಚಾರ, ಸದಾರಮೆ, ಕಪಿಮುಷ್ಠಿ, ಮಕ್ಕಳ್ ಟೋಪಿ ಹೀಗೆ ಹಲವು ನಾಟಕಗಳು ಹಿರಣ್ಣಯ್ಯರವರ ಕೀರ್ತಿಯ ಪತಾಕೆಯನ್ನು ಹಾರಿಸಿತು. ಈ ನಾಟಕಗಳಲ್ಲದೆ ದೇವದಾಸಿ, ಅನಾಚಾರ, ಅತ್ಯಾಚಾರ, ಪುರುಷ ಮೃಗ ಹೀಗೆ ೨೫ಕ್ಕೂ ಮಿಕ್ಕ ನಾಟಕಗಳನ್ನು ರಂಗದ ಮೇಲೆ ತಂದು ಸಮಾಜದ ಕಣ್ಣು ತೆರೆಸುವ ಕಾರ್ಯವನ್ನು ಮಾಡಿದರು.


ಮಾಸ್ಟರ್ ಹಿರಣ್ಣಯ್ಯ ರವರ ನಾಟಕಗಳಲ್ಲಿ ವಿಡಂಬನೆ ಎನ್ನುವಂಥದ್ದು ಹೆಚ್ಚಾಗಿ ಕಾಣಬಹುದು ಒಂದು ನಾಟಕದಲ್ಲಿ ಅವರ ಮಾತುಗಳು ಹೀಗಿದ್ದವು “ಈ ಅಮೆರಿಕಾದವರಿಗೆ ಒಂದು ಚೂರು ಹಣ ಉಳಿಸೋಕೆ ಬರೋದೇ ಇಲ್ಲ. ಕುಡಿಯೋ ನೀರಿಗೆ ಬೇರೆ ಕೊಳಚೆ ನೀರುಗೆ ಬೇರೆ ಪೈಪ್ ಅಂತೆ. ಆ ಮುಂಡೆ ಮಕ್ಕಳಿಗೆ ಕಿಂಚಿತ್ತು ಬುದ್ಧಿ ಇಲ್ಲ. ದುಡ್ಡು ಹೇಗೆ ಉಳಿಸಬೇಕು ಅಂತ ಗೊತ್ತಿಲ್ಲ. ಅದೇ ನಮ್ಮ ಬೆಂಗಳೂರಲ್ಲಿ ನೋಡಿ ಎರಡು ಒಂದೇ ಪೈಪಲ್ ಬರುತ್ತೆ. ನಮ್ ಬುದ್ಧಿವಂತಿಕೆ ಆ ಅಮೆರಿಕದವರಿಗೆ ಎಲ್ಲಿಂದ ಬರಬೇಕು” ಹೀಗೆ ಮಾತನಾಡಿ ಭ್ರಷ್ಟಾಚಾರದ ಕುರಿತಾಗಿ ನಮ್ಮಲ್ಲಿದ್ದ ತೊಡಕುಗಳ ಕುರಿತಾಗಿ ನಿರ್ದಾಕ್ಷಿಣ್ಯವಾಗಿ ಮಾತುಗಳನ್ನ ಆಡುತ್ತಿದ್ದರು ಮಾಸ್ಟರ್ ಹಿರಣ್ಣಯ್ಯರವರು. ಎಂದಿಗೂ ನ್ಯಾಯದ ವಿರುದ್ಧವಾಗಿ ಹೋದವರಲ್ಲ. ಅಂದಿನ ಕಾಲಕ್ಕೆ ಪತ್ರಿಕೋದ್ಯಮ ಅಷ್ಟು ಬೆಳೆದಿರಲಿಲ್ಲ. ವ್ಯವಸ್ಥೆಯನ್ನ ಪ್ರಶ್ನಿಸುವ ಧೈರ್ಯವನ್ನ ಯಾರೂ ಮಾಡುತ್ತಿರಲಿಲ್ಲ. ಆದರೆ ಮಾಸ್ಟರ್ ಹಿರಣ್ಣಯ್ಯರವರು ಮುಲಾಜಿಲ್ಲದೆ ಟೀಕಿಸುತ್ತಿದ್ದರು. ತಮ್ಮ ನಾಟಕಗಳ ಮೂಲಕ ವೈಚಾರಿಕ ಕ್ರಾಂತಿಯನ್ನೇ ಹಬ್ಬಿಸಿಬಿಟ್ಟಿದ್ದರು.
ಸಾರ್ವಜನಿಕ ವಲಯದಲ್ಲಿ ಸಮಾಜದ ರಾಜಕೀಯದ ಅಂಕುಡೊಂಕುಗಳ ಬಗ್ಗೆ ಅದಕ್ಕೂ ಮಿಗಿಲಾಗಿ ಕಿರುಕುಳ ನೀಡುತ್ತಿದ್ದವರ ಕುರಿತಾಗಿ ನಾಟಕಗಳಲ್ಲಿಯೇ ಡೈಲಾಗ್ಗಳ ಮುಖೇನ ಚಾಟಿ ಬೀಸುತ್ತಿದ್ದರು. ಒಂದೊಮ್ಮೆ ರಾಜ್ಯದ ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ವಿವಿಧ ಹಂತಗಳ ಪುಡಾರಿಗಳು ಇವರ ವಿರುದ್ಧವಾಗಿ ಟೀಕಾ ಪ್ರಹಾರಗಳನ್ನು ಕೈಗೆತ್ತಿಕೊಂಡಿದ್ದರು. ಕೋರ್ಟುಗಳ ಮೆಟ್ಟಿಲು ಹತ್ತಿದ್ದು ಲೆಕ್ಕವೇ ಇರಲಿಲ್ಲ. ಹಿರಣ್ಣಯ್ಯರವರದ್ದು ಸಾಮಾಜಿಕ ಕಳಕಳಿ, ಅನ್ಯಾಯದ ವಿರುದ್ಧ ನಿರ್ದಾಕ್ಷಿಣ್ಯ ಮಾತು. ಕಡೆಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದಿದ್ದರು!

ಅಂತೆಯೇ ಕನ್ನಡದ ಬಗ್ಗೆ ಕನ್ನಡದ ಸಾಮಾನ್ಯ ಜನತೆಗೆ ಅವರು ತೋರಿಸುತ್ತಾ ಬಂದಿರುವ ಪ್ರೀತಿಯೇ ಸರಳ ಸಜ್ಜನಿಕೆ ಅನುಪಮವಾದದ್ದು. ಕನ್ನಡ ನಾಡು ನುಡಿಗಳ ಬಗೆಗೆ ತಾನು ಏನು ಮಾತನಾಡುತ್ತಿದ್ದೇನೆ ಎಂಬುದರ ಕುರಿತಾದ ಜಾಗೃತಿ ಇವೆಲ್ಲ ಅಚ್ಚರಿ ಮೂಡಿಸುವಂತದ್ದು. ಹಿರಿಯ ವಯಸ್ಸಿನಲ್ಲಿಯೂ ಅವರ ಹಾಸ್ಯ ಪ್ರಜ್ಞೆ, ಸಾಮಾನ್ಯರ ಮೇಲಿನ ಪ್ರೇಮಭಾವ, ಧ್ವನಿ ಮಾಧುರ್ಯ ಎಲ್ಲರಿಗೂ ಮೂಕವಿಸ್ಮಿತರನ್ನಾಗಿ ಮಾಡುತ್ತಿತ್ತು. ಹಿರಣ್ಣಯ್ಯರವರು ರಂಗಭೂಮಿಯಲ್ಲದೆ ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲೂ ಅಭಿನಯಿಸಿದ್ದರು. ಅವರ ಪ್ರಮುಖ ನಾಟಕಗಳಲ್ಲಿ ಒಂದಾದ “ದೇವದಾಸಿ” ಚಲನಚಿತ್ರವಾಯಿತು. ಅದರಲ್ಲಿ ಹಿರಣ್ಣಯ್ಯ ಒಂದು ಪಾತ್ರವನ್ನು ವಹಿಸಿದ್ದರು. ಪುಣ್ಯಕೋಟಿ, ಅಮೃತವಾಹಿನಿ ಧಾರವಾಹಿಗಳು ಸಾಂಪ್ರದಾಯ, ಆನಂದ ಸಾಗರ, ಕೇರ್ ಆಫ್ ಫುಟ್ ಪಾತ್, ಶಾಂತಿ ನಿವಾಸ, ಬೊಂಬೆಗಳು ಸರ್ ಬೊಂಬೆಗಳು, ಗಜ ಹೀಗೆ ಹಲವು ಚಲನಚಿತ್ರಗಳಲ್ಲಿಯೂ ನಟಿಸಿದ್ದರು. “ಕಲಾಗಜ ಸಿಂಹ”, “ನಟರತ್ನಾಕರ” ಎನ್ನುವ ಬಿರುದುಗಳನ್ನು ಪಡೆದಿದ್ದರು. ದೇಶ ವಿದೇಶಗಳಲ್ಲಿರುವ ಕನ್ನಡಿಗರು ಇಂದಿಗೂ ಅವರ ನಾಟಕಗಳನ್ನು ನಿರಂತರವಾಗಿ ಗೌರವಿಸುತ್ತಾರೆ. ಡಾಕ್ಟರ್ ಗುಬ್ಬಿ ವೀರಣ್ಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಈ ಕಲಾ ಕುಸುಮಕ್ಕೆ ಸಂದಿವೆ. ಮಾಸ್ಟರ್ ಹಿರಣ್ಣಯ್ಯ ರವರು ತಮ್ಮ ೮೫ನೇ ವಯಸ್ಸಿನಲ್ಲಿ ಇಹಲೋಕವನ್ನ ತ್ಯಜಿಸಿದರು. ಇಂದಿಗೂ ಮಾಸ್ಟರ್ ಹಿರಣ್ಣಯ್ಯ ಕನ್ನಡ ನಾಡಿನ ಜನಮಾನಸದಲ್ಲಿ ಅಚ್ಚಳಿಯದೆ ನೆಲೆಸಿದ್ದಾರೆ.


Leave a Reply

Your email address will not be published.

This site uses Akismet to reduce spam. Learn how your comment data is processed.