Bangalore: 1965 ರಲ್ಲಿ ಪ್ರಾರಂಭವಾದ ‘ರಾಷ್ಟ್ರೋತ್ಥಾನ ಸಾಹಿತ್ಯ’ ಕನ್ನಡದ ಮುಂಚೂಣಿ ಪುಸ್ತಕ ಪ್ರಕಾಶನ ಸಂಸ್ಥೆಗಳಲ್ಲಿ ಒಂದು. ಇದುವರೆಗೆ ನೂರಕ್ಕೂ ಹೆಚ್ಚು ಮೌಲಿಕ ಪುಸ್ತಕಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿದೆ. ಇದರಲ್ಲಿ, ಇತಿಹಾಸ, ಸಂಸ್ಕೃತಿ, ಸಾಹಿತ್ಯ, ವ್ಯಕ್ತಿತ್ವವಿಕಾಸ, ವ್ಯಕ್ತಿಚಿತ್ರ, ಪರಿಸರ – ಆರ್ಥಿಕ ಚಿಂತನೆ, ವಿಜ್ಞಾನ, ಗಣಿತ, ಆರೋಗ್ಯ – ಹೀಗೆ ಅನೇಕ ವಿಷಯ-ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳಿವೆ. ನಮ್ಮ ಕೆಲವು ಪ್ರಕಟಣೆಗಳಿಗೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ-ಪುರಸ್ಕಾರಗಳೂ ಸಂದಿವೆ. ‘ಭಾರತ-ಭಾರತಿ ಪುಸ್ತಕ ಸಂಪದ’ ಮಾಲಿಕೆಯ 510೦ ಮಹಾಪುರುಷರ ಕುರಿತಾದ ಮಕ್ಕಳ ಪುಸ್ತಕಗಳು ನಾಡಿನ ಒಂದು ಪೀಳಿಗೆಯನ್ನು ಪ್ರಭಾವಿಸಿದ್ದು ಇತಿಹಾಸ. ಇಂದಿಗೂ ಅವು ವ್ಯಾಪಕ ಬೇಡಿಕೆಯನ್ನು ಉಳಿಸಿಕೊಂಡಿವೆ.
ಪ್ರಸ್ತುತ ರಾಷ್ಟ್ರೋತ್ಥಾನ ಸಾಹಿತ್ಯ, ವ್ಯಕ್ತಿತ್ವವಿಕಾಸಕ್ಕೆ ಸಂಬಂಧಿಸಿದಂತೆ ‘ಉತ್ಕರ್ಷಪಥ’ ಎಂಬ ಪುಸ್ತಕವೊಂದನ್ನು ಪ್ರಕಟಿಸುತ್ತಿದ್ದು, ಅಕ್ಟೋಬರ್ 1ನೇ ತಾರೀಖು ಶನಿವಾರ ಈ ಪುಸ್ತಕ ಲೋಕಾರ್ಪಣಗೊಳ್ಳಲಿದೆ. ಅರ್ಥಕೇಂದ್ರಿತ ವ್ಯಕ್ತಿತ್ವವಿಕಾಸದ ಅನೇಕ ಕಲ್ಪನೆ-ಸಿದ್ಧಾಂತಗಳು ಜನಪ್ರಿಯಗೊಂಡಿರುವ ಇಂದಿನ ಸಮಯದಲ್ಲಿ ಸಮಷ್ಟಿಕೇಂದ್ರಿತ ವಿಕಾಸದ ಮತ್ತು ಆ ಮೂಲಕ ವ್ಯಕ್ತಿಯೊಬ್ಬನ ಸಮಗ್ರವಿಕಾಸದ ಕಲ್ಪನೆಯನ್ನು ಈ ಪುಸ್ತಕ ಮುಂದಿಡುತ್ತದೆ – ಎನ್ನುವುದು ಈ ಪುಸ್ತಕದ ವಿಶೇಷ. ಡಾ|| ಕೆ. ಜಗದೀಶ ಪೈ ಈ ಪುಸ್ತಕದ ಲೇಖಕರು.

ಅಕ್ಟೋಬರ್ 1, ಶನಿವಾರ ಸಂಜೆ 6 ಗಂಟೆಗೆ ಈ ಎರಡೂ ಪುಸ್ತಕಗಳ ಲೋಕಾರ್ಪಣ ಕಾರ್ಯಕ್ರಮ, ಕೆಂಪೇಗೌಡನಗರದ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ|| ಎಂ.ಎಚ್. ಕೃಷ್ಣಯ್ಯನವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪುಸ್ತಕಗಳ ಲೋಕಾರ್ಪಣೆ ಮಾಡುವರು. ಶಿಕ್ಷಣತಜ್ಞರೂ ವ್ಯಕ್ತಿತ್ವವಿಕಸನ ತರಬೇತುದಾರರೂ ಖ್ಯಾತ ವಾಗ್ಮಿಗಳೂ ಆದ  ಡಾ|| ಗುರುರಾಜ ಕರಜಗಿಯವರು ಮುಖ್ಯ ಅಭ್ಯಾಗತರಾಗಿ ಆಗಮಿಸುವರು. ಹಿರಿಯರೂ ನಿಘಂಟು ತಜ್ಞರೂ  77ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರೂ ಆದ ಪ್ರೊ|| ಜಿ. ವೆಂಕಟಸುಬ್ಬಯ್ಯನವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಿಶಿಷ್ಟ ಬಾಲಪ್ರತಿಭೆ ಕುಮಾರಿ ಬಿ.ಪಿ. ಅದಿತಿ ಸುಗಮಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾಳೆ.
‘ಉತ್ಕರ್ಷಪಥ’ ಪುಸ್ತಕದ ಜೊತೆಯಲ್ಲೇ ‘ರಾಷ್ಟ್ರೋತ್ಥಾನ ಸಾಹಿತ್ಯ’ದ ಸೋದರ ಸಂಸ್ಥೆಯಾದ ‘ಸಾಹಿತ್ಯ ಸಿಂಧು ಪ್ರಕಾಶನ’ದಿಂದ ‘ದೀಪ್ತಿಮಂತರು’ ಎಂಬ ಪುಸ್ತಕವೂ ಲೋಕಾರ್ಪಣಗೊಳ್ಳಲಿದೆ. ಉತ್ಥಾನ ಮಾಸಪತ್ರಿಕೆ, ಮತ್ತು ರಾಷ್ಟ್ರೋತ್ಥಾನ ಸಾಹಿತ್ಯಗಳ ಗೌರವ ಪ್ರಧಾನ ಸಂಪಾದಕರಾದ  ಎಸ್.ಆರ್. ರಾಮಸ್ವಾಮಿಯವರು ಬರೆದ ಆರು ಜನ ಮಹನೀಯರುಗಳ ವ್ಯಕ್ತಿಚಿತ್ರಣವಿದು. ಈ ಹಿಂದೆ ‘ದೀವಟಿಗೆಗಳು’ ಎನ್ನುವ ಹೆಸರಿನಲ್ಲಿ ಆರು ಜನ ಮಹನೀಯರನ್ನು ಚಿತ್ರಿಸಿದ್ದ ರಾಮಸ್ವಾಮಿಯವರು,  ಅದರ ಮುಂದುವರಿದ ಭಾಗವಾಗಿ ಮತ್ತೆ ಆರು ಜನ ಧಿಮಂತರನ್ನು ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ.

ಈ ಪತ್ರದೊಂದಿಗೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಲಗತ್ತಿಸಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.