ಕೊಡಗಿನ ವನವಾಸಿ ಯುವಕರ ತಂಡಕ್ಕೆ ಅಂತಾರಾಷ್ಟ್ರೀಯ ಮ್ಯಾರಥಾನ್ ಪ್ರಶಸ್ತಿ
ಬೆಂಗಳೂರು : ಪ್ರತಿಷ್ಠಿತ ಬೆಂಗಳೂರು ಇಂಟರ್ನ್ಯಾಷನಲ್ ಮಿಡ್ನೈಟ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಕೊಡಗಿನ ವನವಾಸಿ ಯುವಕರ ತಂಡಕ್ಕೆ ದ್ವಿತೀಯ ಪ್ರಶಸ್ತಿ ಲಭಿಸಿದೆ.
ಅಂತಾರಾಷ್ಟ್ರೀಯ ಹಾಗೂ ವಿವಿಧ ರಾಜ್ಯಗಳಿಂದ ಬಂದಿದ್ದ ಸುಮಾರು 8500 ಓಟಗಾರರು ಭಾಗವಹಿಸಿದ್ದ ಈ ಅಂತಾರಾಷ್ಟ್ರೀಯ ಮ್ಯಾರಥಾನ್ ಕೂಟದಲ್ಲಿ ಬರಿಗಾಲಲ್ಲೇ ಓಡಿ ಪ್ರಶಸ್ತಿ ಗೆದ್ದ ವನವಾಸಿ ಯುವಕರು ಇದೀಗ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ರೋಟರಿ ಬೆಂಗಳೂರು ಐ.ಟಿ. ಕಾರಿಡಾರ್ ಸಂಸ್ಥೆ “ರನ್ ಫಾರ್ ಎ ಚೈಲ್ಡ್ ” ಎಂಬ ಸಾಮಾಜಿಕ ಆಶಯದೊಂದಿಗೆ ಈ ಮ್ಯಾರಥಾನ್‌ನ್ನು ಡಿಸೆಂಬರ್ 10ರಂದು ಆಯೋಜಿಸಿತ್ತು. ಪುರುಷರ 35ಕಿಲೋಮೀಟರು ವಿಭಾಗದಲ್ಲಿ ಭಾಗವಹಿಸಿದ್ದ 29 ತಂಡಗಳ ಪೈಕಿ ವನವಾಸಿ ಯುವಕರ ತಂಡವು ಕೇವಲ ಒಂದೂವರೆ ನಿಮಿಷ ತಡವಾಗಿ ತಲುಪುವುದರೊಂದಿಗೆ ದ್ವಿತೀಯ ಸ್ಥಾನಿಯಾಗಬೇಕಾಯಿತು. ಮೊದಲ ಹಾಗೂ ತೃತೀಯ ಸ್ಥಾನವನ್ನು ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಗಳಾದ ಟೆಸ್ಕೋ ಮತ್ತು ಹೆಚ್.ಪಿ. ಪ್ರಾಯೋಜಿತ ತಂಡಗಳು ಪಡೆದುವು.
ಕೊಡಗಿನ ವಿರಾಜಪೇಟೆ ತಾಲೂಕಿನ ತಿತಿಮತಿ ಅರಣ್ಯ ಪ್ರದೇಶದ ಈ ಯುವಕರು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸ್ಪರ್ಧೆಯೊಂದರಲ್ಲಿ ಭಾಗವಹಿಸುತ್ತಿದ್ದಾರೆ. ದ್ವಿತೀಯ ಪಿಯುಸಿ ಓದುತ್ತಿರುವ ಮಾದ, ಕೂಲಿ ಕೆಲಸ ಮಾಡುತ್ತಿರುವ ವಿಶ್ವನಾಥ, ಹರೀಶ ಪಿ ಎಸ್, ಪಾಪು, ವೆಂಕಟೇಶ ಪಿ.ಎಂ., ಸುರೇಶ, ತಿಮ್ಮಯ್ಯ, ರಾಜು ಪಿ.ಎನ್. – ಈ ೮ ಯುವಕರು. ಸರಾಸರಿ 20 ವಯಸ್ಸಿನ ಈ ಯುವಕರು ತಮ್ಮೂರಿನ ಅಧ್ಯಾಪಕ ರಮೇಶ್ ಎಸ್ ಚವನ್‌ರ ಪ್ರೋತ್ಸಾಹದೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಈ ವನವಾಸಿ ಯುವಕರನ್ನು ಅಂತಾರಾಷ್ಟ್ರೀಯ ವೇದಿಕೆಗೆ ಪರಿಚಯಿಸಿದವರು ರೋಟರಿ ಬೆಂಗಳೂರು ಐ.ಟಿ. ಕಾರಿಡಾರ್ ಸಂಸ್ಥೆ ಯ ಸದಸ್ಯೆ ಹಾಗೂ ಖ್ಯಾತ ವೈದ್ಯೆ ಡಾ.ರೇಖಾ ಎಸ್ ನೀಲ ಹಾಗೂ ಅವರ ಪತಿ, ಉದ್ಯಮಿ ಶ್ರೀನಿವಾಸ್ ಆರ್ ನೀಲ. ವನವಾಸಿ ಕಲ್ಯಾಣ ಆಶ್ರಮದ ಸಂಚಾಲಕ ವೆಂಕಟೇಶ್ ನಾಯಕ್ ಈ ತಂಡವನ್ನು ಸಜ್ಜುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಯಾವುದೇ ಉನ್ನತ ವಿದ್ಯಾಭ್ಯಾಸವಿಲ್ಲದ ಈ ಯುವಕರು ಬರಿಗಾಲಿನಲ್ಲೇ 35 ಕಿಮಿ ಓಡಿ ಪ್ರಶಸ್ತಿ ಗೆದ್ದಿರುವುದು ಮ್ಯಾರಥಾನ್ ತಜ್ನರಲೂ ಅಚ್ಚರಿ ಮೂಡಿಸಿದೆ. ಹುಟ್ಟಿ ಬೆಳೆದ ಗುಡ್ಡಗಾಡು ಪ್ರದೇಶದಲ್ಲಿ ಓಡಾಡಿದ ಅನುಭವ ಮಾತ್ರ ಹೊಂದಿರುವ ಈ ಪ್ರತಿಭೆಗಳು ಯಾವುದೇ ತರಬೇತಿ, ಪೂರ್ವಾಭ್ಯಾಸ ಇಲ್ಲದೆ ಈ ಸಾಧನೆ ಮಾಡಿದ್ದಾರೆ. ವನವಾಸಿ ಮಕ್ಕಳಲ್ಲಿನ ಪ್ರತಿಭೆಗಳಿಗೆ ಸೂಕ್ತ ಕ್ರೀಡಾ ತರಬೇತಿ ಒದಗಿಸಿದರೆ ಒಲಿಂಪಿಕ್ಸ್‌ನಲ್ಲಿ ಭಾರತ ಶ್ರೇಷ್ಠ ಸಾಧನೆ ತೋರುವುದರಲ್ಲಿ ಸಂಶಯವಿಲ್ಲ ಎಂದು ಶನಿವಾರ ಬೆಂಗಳೂರಿನ ಹೋಟೆಲ್ ರಾಯಲ್ ಅರ್ಚಿಡ್‌ನಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.