ಪೂಜನೀಯ ಡಾ. ಮೋಹನ್ ಜೀ ಭಾಗವತರ ವಿಜಯದಶಮಿ ಭಾಷಣ

ಪ್ರಸ್ತಾವನೆ

ಈ ವರ್ಷ ನಾವು ಶ್ರೀ ಗುರು ನಾನಕರ ೫೫೦ನೇ ಜನ್ಮ ವರ್ಷ ಆಚರಿಸುತ್ತಿದ್ದೇವೆ. ನಮ್ಮ ಪೂರ್ವಜರಿಂದ ಹರಿದು ಬಂದ ಸತ್ಯದ ಸಾಕ್ಷಾತ್ಕಾರವನ್ನು, ಸಂಸ್ಕೃತಿ, ಆಚರಣೆಗಳನ್ನು ಮರೆತು ಇಡಿಯ ಸಮಾಜವು ಕಪಟ, ಅಸತ್ಯ, ಸ್ವಾರ್ಥ, ಹಾಗೂ ಭೇದದ ಮಹಾಕೂಪದಲ್ಲಿ ಮುಳುಗಿ, ಕ್ಷೀಣರಾಗಿ, ಪರಾಭವಗೊಂಡು, ವಿಭಜಿತಗೊಂಡು, ಕ್ರೂರ, ಅಸಹಿಷ್ಣು, ಅನಾಗರಿಕ ಬಾಹ್ಯ ದುಷ್ಟ ಆಕ್ರಮಣಕಾರರ ಬರ್ಬರ ಕೃತ್ಯಗಳಿಗೆ ಬಲಿಯಾಗಿದ್ದ ಸಂದರ್ಭದಲ್ಲಿ, ಶ್ರೀ ಗುರು ನಾನಕರು ತೋರಿದ ಆಧ್ಯಾತ್ಮಿಕ ಚಿಂತನೆಯ ಜ್ಞಾನೋದಯದಿಂದಾಗಿಯೇ ಸಮಾಜಕ್ಕೆ ಹೊಸ ಜೀವ ಬಂದು, ದಾರಿತಪ್ಪಿದ ಸಂಸ್ಕೃತಿಯನ್ನು ಸುಧಾರಣಾ ಮಾರ್ಗದಲ್ಲಿ ಕರೆದೊಯ್ಯಲು ಸಹಾಯವಾಯಿತು. ಈ  ಭವ್ಯ, ವೈಭವಯುಕ್ತ ಗುರು ಪರಂಪರೆಯಲ್ಲಿ ನಮ್ಮ ದೇಶದಲ್ಲಿ ಹತ್ತು ಗುರುಗಳು ಜನ್ಮ ತಾಳಿದ್ದು, ಅವರು ತೋರಿದ ಸನ್ಮಾರ್ಗದಿಂದ ನಿರ್ಗತಿಕತನ, ಕೀಳರಿಮೆಯನ್ನು ಬಿಟ್ಟು ನಾವು ಬಾಳುವಂತಾಗಿದೆ.

ಭಾರತಕ್ಕೆ ಸತ್ಯ, ಅಹಿಂಸೆಯ ಮಾರ್ಗದ ಬುನಾದಿಯನ್ನು ಪುನರ್ಕಲ್ಪಿಸುವಲ್ಲಿ ಪ್ರಮುಖರಾದ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ವರ್ಷನ್ನೂ ಈ ವರ್ಷ ಆಚರಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಕಾಲಕಾಲಕ್ಕೆ ಜನ್ಮ ತಳೆದ ಮಹಾಪುರುಷರು ಇಲ್ಲಿಯ ’ಎಲ್ಲರನ್ನು ಒಳಗೊಳ್ಳುವ ಸಂಸ್ಕೃತಿಯ’ ಸಾರವನ್ನು ಸತ್ಯ, ಅಹಿಂಸೆಯ ಮಾರ್ಗದಲ್ಲಿ ದರ್ಶನವನ್ನಾಗಿ ತೋರಿದವರಿದ್ದಾರೆ. ಈ ದರ್ಶನಗಳ ದೆಸೆಯಿಂದಾಗಿಯೇ ದೇಶದ ಸಾಮಾನ್ಯ ಮನುಷ್ಯನೂ  ತನ್ನ ಮನೆಯಿಂದ ಹೊರ ನಡೆದು, ಆಂಗ್ಲರ ದಮನದ ವಿರುದ್ಧ ಸೆಟೆದು ನಿಲ್ಲಲು ಪ್ರೇರಣೆಯಾಗಿದೆ. ನೂರು ವರ್ಷಗಳ ಹಿಂದೆ ಜಲಿಯನ್ ವಾಲಾ ಬಾಘ್ ನಲ್ಲಿ ದಮನಕಾರಿ ರೋಲೆಟ್ ಕಾಯಿದೆಯನ್ನು ವಿರೋಧಿಸಲು ನಿರಾಯುಧರಾಗಿ ಸೇರಿದ್ದವರು, ಜನರಲ್ ಡಯರ್ ನ ಗುಂಡಿನ ದಾಳಿಗೆ ಬಲಿಯಾದವರ ಬಳಿ ಇದ್ದದ್ದು ನೈತಿಕ ಶಕ್ತಿ ಅಲ್ಲದೆ ಬೇರೇನೂ ಅಲ್ಲ.

ಇಂತಹ ನೆನಪುಗಳನ್ನು ಮೆಲಕು ಹಾಕುವ ಅಗತ್ಯ ಇಂದು ನಮ್ಮ ಮುಂದಿದೆ. ೭೧ ವರ್ಷಗಳ ಸ್ವಾತಂತ್ರ್ಯಾನಂತರದ ಭಾರತ ಹಲವು ಕ್ಷೇತ್ರಗಳಲ್ಲಿ ಬಹಳಷ್ಟನ್ನು ಸಾಧಿಸಿ ಪ್ರಗತಿಗೈದಿದೆಯಾದರೂ ರಾಷ್ಟ್ರೀಯ ಜೀವನದ ಇನ್ನೂ ಅನೇಕ ಆಯಾಮಗಳಲ್ಲಿ ನಾವು ಸುಧಾರಣೆ ಕಾಣಬೇಕಾಗಿದೆ. ಸಮೃದ್ಧ ದೇಶವಾಗಿ ಬೆಳೆಯುವ ಹಾದಿಯಲ್ಲಿ ಸ್ವಾರ್ಥ ಚಿಂತನೆಗಳುಳ್ಳ ಶಕ್ತಿಗಳು ಸೋಲನ್ನು ಅನುಭವಿಸಿವೆಯಾದರೂ ದೇಶ ಮುಂದುವರೆಯುವ ಕಾರ್ಯವನ್ನು ತಡೆಯುವ ಹುನ್ನಾರವನ್ನಂತೂ ನಡೆಸುತ್ತಲೇ ಇವೆ. ನಾವಿನ್ನೂ ಹಲವಾರು ಅಡಚಣೆಗಳನ್ನು ದಾಟಬೇಕಿದೆ. ನಮ್ಮ ಪೂರ್ವಜರು ಪಾಲಿಸುತ್ತಿದ್ದ ಸತ್ಯ, ಧರ್ಮ, ತಪಸ್ಸು, ಆತ್ಮೀಯತೆ, ತ್ಯಾಗ ಮುಂತಾದ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕುವ ಮೂಲಕ ನಮ್ಮ ಸಮಾಜದೆದುರು ಇರುವ ಅಡಚಣೆಗಳನ್ನು ದೂರವಾಗಿಸಿ ಪ್ರಗತಿಯತ್ತ ದಾಪುಗಾಲಿಡಬಹುದಾಗಿದೆ. ಪ್ರಸ್ತುತ  ರಾಷ್ಟ್ರೀಯ ಸನ್ನಿವೇಶಗಳನ್ನು ಗಮನಿಸುವಾಗ ಈ ಸಂದೇಶವೇ ನಮ್ಮೆಲ್ಲರಿಗೂ ಮನನವಾಗುತ್ತದೆ.

ರಾಷ್ಟ್ರ‍ೀಯ ಭದ್ರತೆ

ದೇಶದ ಸಮೃದ್ಧಿ ಹಾಗೂ ಪ್ರಗತಿಯು ಪ್ರಮುಖವಾಗಿರುವ ಈ ಸಂದರ್ಭದಲ್ಲಿ ಯಾವುದೇ ದೇಶಕ್ಕಾದರೂ ಗಡಿ ಸುರಕ್ಷೆ, ಹಾಗೂ ಆಂತರಿಕ ಸುರಕ್ಷೆ ಇವು ಮಹತ್ವಪೂರ್ಣ ವಿಷಯಗಳಾಗುತ್ತವೆ. ಇವುಗಳನ್ನು ಸರಿಪಡಿಸುವುದರಿಂದಲೇ ಪ್ರಗತಿ, ಸಮೃದ್ಧಿಗಳಿಗೆ ಮಾರ್ಗ ಪ್ರಶಸ್ತವಾಗುತ್ತದೆ.  ವಿಶ್ವದ ಇತರೆ ರಾಷ್ಟ್ರಗಳ ಜೊತೆ ನಮ್ಮ ದೇಶದ ಗಡಿ ಸಮಸ್ಯೆಗಳನ್ನು ಚರ್ಚಿಸಿ ಅವರೆಲ್ಲರ ಬೆಂಬಲ ಹಾಗೂ ಸಹಕಾರಗಳನ್ನು ತೆಗೆದುಕೊಳ್ಳುವ ಪ್ರಯತ್ನಗಳು ಪರಿಣಾಮಕಾರಿಯಾಗಿವೆ. ನಮ್ಮ ದೇಶದ ಸೇನೆ, ಸರಕಾರ, ಆಡಳಿತ ವರ್ಗ ನೆರೆಹೊರೆಯ ದೇಶಗಳು ಸೇರಿದಂತೆ ಎಲ್ಲಾ ರಾಷ್ಟ್ರಗಳ ಜೊತೆ ಸೌಹಾರ್ದ ಮತ್ತು ಶಾಂತಿಯ ಸಂಬಂಧ ಇರಿಸಿಕೊಳ್ಳುವುದು ಮಾತ್ರವೇ ಅಲ್ಲದೇ, ದೇಶದ ಭದ್ರತೆಯ ವಿಷಯ ಬಂದಾಗ ನಮ್ಮ ಶಕ್ತಿ-ಸಾಮರ್ಥ್ಯಾನುಸಾರ, ವಿವೇಕಯುತವಾದ, ಕೆಚ್ಚೆದೆಯ ನಿರ್ಧಾರಗಳನ್ನು ಈವರೆಗೆ ತೆಗೆದುಕೊಂಡಿವೆ. ಈ ವಿಷಯವಾಗಿ ಭಾರತೀಯ ಸೇನೆಯ ಆತ್ಮಸ್ಥೈರ್ಯವನ್ನು ಹೆಚ್ಚಿಸಲು, ಅವರನ್ನು ಬಲಗೊಳಿಸುವ ಹೊಸ ತಂತ್ರಜ್ಞಾನವನ್ನು ಪೂರೈಸುವ ಪ್ರಯತ್ನಗಳು ನಡೆದಿವೆ. ಈ ಪ್ರಮುಖ ಕಾರಣದಿಂದಾಗಿಯೇ ವಿಶ್ವದಲ್ಲಿ ಭಾರತದ ಬಗೆಗಿನ ಗೌರವ, ಪ್ರತಿಷ್ಠೆಗಳು ಏರು ಗತಿಯಲ್ಲಿವೆ.

ಇವುಗಳ ಜೊತೆಗೆ  ಸಶಸ್ತ್ರ ಹಾಗೂ ಸೇನಾ ಪಡೆಯಲ್ಲಿನ ಯೋಧರ ಹಾಗೂ ಅವರ ಕುಟುಂಬದ ಮೂಲ ಸೌಕರ್ಯಗಳ ವರ್ಧನೆಯ ಕಡೆಗೆ ಗಮನ ಹರಿಸಬೇಕಿದೆ. ಈವರೆಗೆ ಸರಕಾರವು ಶ್ಲಾಘನೀಯ ಪ್ರಯತ್ನ, ಯೋಜನೆಗಳನ್ನು ಹಾಕಿಕೊಂಡಿದೆ. ಆ ಯೋಜನೆಗಳು ಚುರುಕುಗೊಳಿಸುವ ಬಗೆಗೆ ಗಮನಹರಿಸಬೇಕಾದ ಅಗತ್ಯವಿದೆ. ಸೇನಾ ಅಧಿಕಾರಿಗಳು ಮತ್ತು ಸಿವಿಲ್ ಅಡ್ಮಿನಿಸ್ಟ್ರೇಟಿವ್ ಅಧಿಕಾರಿಗಳು, ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ, ಹಣಕಾಸು ಸಚಿವಾಲಯಗಳಂತಹ ವಿವಿಧ ಇಲಾಖೆಗಳಿಂದ ಯೋಜನೆಗಳ ಕಲ್ಪನೆ ಮತ್ತು ಅನುಷ್ಠಾನ ಅಗತ್ಯ ಹಾಗೂ ಸಾಧ್ಯ. ಸೇನೆಯ ಪ್ರಯತ್ನಗಳಿಗೆ ಹೆಚ್ಚು ಸೂಕ್ಷ್ಮ ಮತ್ತು ಗೌರವಾನ್ವಿತರಾಗಿರಬೇಕು. ಸೇನೆ ಹಾಗೂ ಯೋಧರು ತಮ್ಮ ಜೀವವನ್ನು ಪಣಕ್ಕಿಟ್ಟು ಒಂದು ಸರ್ವೋತ್ಕೃಷ್ಟ ತ್ಯಾಗಕ್ಕೆ ಸಿದ್ಧರಾಗಬೇಕಿರುವುದು ಸ್ವಾಭಾವಿಕ ಎಂಬ ಚರ್ಚೆ ಇಂದು ನಡೆಯುತ್ತಿದೆ. ಜೊತೆಗೆ ದೇಶದ ಪ್ರತಿಯೊಬ್ಬ ನಾಗರೀಕನೂ ಇಂಥಹ ನಿರೀಕ್ಷೆ ಕೇವಲ ಸೇನಿಯಿಂದಲ್ಲ, ಪ್ರತಿಯೊಬ್ಬ ನಾಗರೀಕನದ್ದೂ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ. ನಮ್ಮ ಸೈನಿಕರು ದೇಶದ ಯಾವುದೇ ಮೂಲೆಯಲ್ಲಿ, ಗಡಿಗಳಲ್ಲಿ ಹೋರಾಡುವುದು ಸಮಾಜದ ಸುರಕ್ಷತೆಗೆ.  ತಮ್ಮ ಕುಟುಂಬಗಳ ಬಗ್ಗೆಯಾಗಲಿ, ತಮ್ಮ ಆರ್ಥಿಕ, ಸಾಮಾಜಿಕ ಭದ್ರತೆಗಳನ್ನು ಲೆಕ್ಕಿಸದೆಯೇ, ಪರಿಗಣಿಸದೆಯೇ ಆ ಕೆಲಸವನ್ನು ಅವರು ನಿರ್ವಹಿಸುತ್ತಿದ್ದಾರೆ. ಆದರೆ ಅವರು ತಮ್ಮ ಪರಿವಾರದ ಚಿಂತೆ ಮಾಡದೇ ತಮ್ಮ ಕಾರ್ಯ ನಿರ್ವಹಿಸುವಲ್ಲಿ ಸಹಕಾರಿಯಾಗಬೇಕಿರುವುದು ಸಮಾಜದ ಅಗತ್ಯ. ನಾವೆಲ್ಲರೂ ಸೇನೆಯವರ ಕುಟುಂಬದವರೊಂದಿಗೆ ನಿಕಟ ಸಂಬಂಧ ಹೊಂದುತ್ತೇವಾದರೆ ಸೈನಿಕರು ಯಾವುದೇ ಚಿಂತೆಯಿಲ್ಲದೆ ತಮ್ಮ  ಕಾರ್ಯದಲ್ಲಿ ತೊಡಗಬಹುದು.

ಅದೇ ರೀತಿಯಲ್ಲಿ ಕ್ರಿಯಾತ್ಮಕ ಅಂತಾರಾಷ್ಟ್ರೀಯ ವಿದ್ಯಮಾನಗಳ ನಡುವೆ ನಮ್ಮ ಕಡಲತೀರದ ಗಡಿಗಳನ್ನು ಸುರಕ್ಷಿತಗೊಳಿಸಿಕೊಳ್ಳುವ ಮಹತ್ವದ ಅಗತ್ಯ ಇಂದು ನಮ್ಮ ಮುಂದಿದೆ. ಭಾರತದ ಭೂಭಾಗದ ಜೊತೆಗೆ ನೂರಾರು ದ್ವೀಪಗಳು ಒಂದಕ್ಕೊಂದು ತಾಕಿಕೊಂಡಂತಿವೆ. ಲಕ್ಷದ್ವೀಪ, ಅಂಡಮಾನ್ ನಿಕೋಬಾರ ದ್ವೀಪ ಸಮೂಹಗಳು ಅಂತಹ ಸಾಮರಿಕ ಸ್ಥಳಗಳು. ಇಂಥ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸುವುದು, ಅಲ್ಲಿನ ಸೌಕರ್ಯಗಳನ್ನು ವೃದ್ಧಿಸುವ ಕಾರ್ಯದಲ್ಲಿ ನೌಕಾದಳದ ಜೊತೆ ಸರಕಾರ ನಿಲ್ಲಬೇಕಿದೆ. ನಮ್ಮ ಸೇನೆ, ನೌಕಾ ದಳ ಸೇರಿದಂತೆ ಇತರೆ ಸುರಕ್ಷಾ ದಳಗಳು ಗಡಿಯಲ್ಲಿ ವಿಚಿತ್ರ ಹಾಗೂ ಪ್ರತಿಕೂಲ ಸಮಸ್ಯೆಗಳನ್ನು ಎದುರಿಸುತ್ತಿವೆ. ನುಸುಳುಕೋರರ ಸಮಸ್ಯೆ, ವಸ್ತುಗಳ ಕಳ್ಳ ಸಾಗಾಣಿಕೆ ಸೇರಿದಂತೆ ಮುಂತಾದ ಹತ್ತುಹಲವು ಸಮಸ್ಯೆಗಳನ್ನು ಸೇನೆ ಎದುರಿಸುವಲ್ಲಿ ಅಲ್ಲಿನ ಸ್ಥಳೀಯರು ಸಹಾಯಹಸ್ತ ನೀಡುವುದರಿಂದ ಸಾಧ್ಯ. ಸರಕಾರ ಹಾಗೂ ಸಮಾಜದ ದಾಯಿತ್ವ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಅಲ್ಲಿನ ಜನರಲ್ಲಿ ಧೈರ್ಯ, ಸಾಹಸ, ರಾಷ್ಟ್ರೀಯತೆ, ದೇಶಭಕ್ತಿಯನ್ನು ಹುಟ್ಟುಹಾಕುವುದರಿಂದ ಸಾಧ್ಯ.

ಭದ್ರತೆಯ ವಿಷಯವಾಗಿ ತನಗೆ ಬೇಕಾದ್ದೆಲ್ಲವನ್ನೂ ತಾನೇ ತಯಾರಿಸಿಕೊಂಡು ಸ್ವಾವಲಂಬಿಯಾಗಿ ಹೊರಹೊಮ್ಮದಿದ್ದರೆ ರಾಷ್ಟ್ರವು ಸುಭದ್ರವೆಂದು ಖಚಿತವಾಗಿ ಕರೆಸಿಕೊಳ್ಳುವುದು ಅಸಾಧ್ಯ. ರಾಷ್ಟ್ರದ ಚಿಂತನೆ ಈ ದಿಕ್ಕಿನಲ್ಲಿ ಸಾಗಬೇಕಿದೆ.

ಆಂತರಿಕ ಸುರಕ್ಷೆ

ಗಡಿ ಸುರಕ್ಷೆಯ ಜೊತೆಗೆ ಆಂತರಿಕ ಸುರಕ್ಷೆಯೂ ಪ್ರಧಾನ ಪಾತ್ರವಹಿಸುವುದು ನಿಸ್ಸಂದೇಹ. ಗಡಿಗಳಲ್ಲಿ ಹಾಗೂ ದೇಶದ ಒಳಗೂ ಕೇಂದ್ರ ಸರಕಾರ, ರಾಜ್ಯ ಸರಕಾರ, ಆಡಳಿತ ವರ್ಗ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವ, ದೇಶದ ಕಾನೂನು, ಸಂವಿಧಾನ, ಏಕತೆಯ ವಿರುದ್ಧವಾಗಿ ನಿಲ್ಲುವವರೊಂದಿಗೆ ನಿಷ್ಠುರವಾಗಿಯೇ ವ್ಯವಹರಿಸಬೇಕು. ಈ ವಿಷಯವಾಗಿ ಕೇಂದ್ರ, ರಾಜ್ಯ ಸರಕಾರಗಳು, ರಾಜ್ಯದ ಪೊಲೀಸ್ ವ್ಯವಸ್ಥೆ, ಅರೆಸೇನಾ ಪಡೆಯಂತಹ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕುವಲ್ಲಿ ತೊಡಗಿವೆ. ದುರ್ದೈವದ ಸಂಗತಿಯೆಂದರೆ ಈ ಸಮಾಜಘಾತುಕ ಶಕ್ತಿಗಳು ನಮ್ಮದೇ ಸಮಾಜದಿಂದ ಹುಟ್ಟಿ ಬರುತ್ತವೆ. ಅಜ್ಞಾನ, ನಿರ್ಲಕ್ಷೆ, ನಿರುದ್ಯೋಗ, ಅಸಮಾನತೆ, ಶೋಷಣೆ, ಭೇದ ಭಾವ, ಸೂಕ್ಷ್ಮಪ್ರಜ್ಞೆಯ ಕೊರತೆ ಮೊದಲಾಗಿ ಹಲವಾರು ಕಾರಣಗಳಿಂದ ನಮ್ಮದೇ ಸಮಾಜ ಮುಖ್ಯವಾಹಿನಿಯಿಂದ ವಿಮುಖವಾಗುತ್ತಿದೆ. ಸರಕಾರಗಳಿಗೆ ಈ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಇರುತ್ತದೆ. ಸಮಾಜದ ಓರೆಕೋರೆಗಳನ್ನು ತಿದ್ದಿ, ಎಲ್ಲರನ್ನೂ ಒಟ್ಟುಗೂಡಿಸಿ ಕರೆದೊಯ್ಯುವ ಕೆಲಸದಲ್ಲಿ ಸರಕಾರವಷ್ಟೆ ಅಲ್ಲದೇ  ಸಮಾಜವು ಭಾಗಿಯಾಗಬೇಕು. ಪ್ರತಿಯೊಬ್ಬರ ಆತ್ಮಸಾಕ್ಷಿ ಹಾಗೂ ನಡವಳಿಕೆಯ ಬದಲಾವಣೆಯಾದಾಗ ಸಮಾಜದಲ್ಲಿನ ಬದಲಾವಣೆ ಪ್ರಕಟಗೊಳ್ಳುತ್ತದೆ. ಸಮಾಜದ ಎಲ್ಲಾ ಸ್ತರಗಳೊಂದಿಗೆ ನಿಕಟ ಸಂಪರ್ಕ ಉಂಟಾದರೆ ಸಮಾಜ ಗಟ್ಟಿಗೊಳ್ಳುತ್ತದೆ. ಪೊಲೀಸ್ ಪಡೆಯು ದೇಶದ ಅಂತರಿಕ ಭದ್ರತೆಯ ವಿಷಯವಾಗಿ ನಿರ್ಧಾರ/ ಕ್ರಮ ತೆಗೆದುಕೊಳ್ಳುವವರಾಗಿದ್ದಾರೆ. ರಾಷ್ಟ್ರ‍ೀಯ  ಪೊಲೀಸ್ ಆಯೋಗ ತಮ್ಮ ಇಲಾಖೆಯ ಸುಧಾರಣೆಗಾಗಿ ಒಂದಷ್ಟು ಸಲಹೆಗಳನ್ನು ಪ್ರಸ್ತಾಪಿಸಿದೆ. ಹಲವಾರು ವರ್ಷಗಳಿಂದ ತರಬೇಕೆಂದಿರುವ ಈ ಸುಧಾರಣೆಯನ್ನು ಈಗ ಕೈಗೆತ್ತಿಕೊಳ್ಳಬಹುದಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗಾಗಿ ತಯಾರಾದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತೆಗೆದುಕೊಂಡು ಬರಲು ಮತ್ತಷ್ಟು ದಕ್ಷ, ಪ್ರಾಮಾಣಿಕ ಮತ್ತು  ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂಬ ಭಾವನೆ ದೇಶದಲ್ಲಿದೆ.

ಚಿಂತಾಜನಕ ಪ್ರವೃತ್ತಿಗಳು

ದೇಶವನ್ನು ಮುನ್ನಡೆಸುವ ವ್ಯವಸ್ಥಾತಂತ್ರವು  ದಮನಿತರ ಕಲ್ಯಾಣಕ್ಕಾಗಿ ತರುವ ಯೋಜನೆಗಳು, ಅವರ ಪ್ರಗತಿಗಾಗಿ ನೀಡುವ ಭರವಸೆ, ತೋರುವ ಸಹಾನುಭೂತಿ, ಅವರಿಗೆ ನೀಡುವ ಗೌರವಯುತ ನಡವಳಿಕೆಯಲ್ಲಿ ಹೆಚ್ಚು ಪಾರದರ್ಶಕರಾಗಬೇಕು, ಹಾಗೂ ಚುರುಕಾಗಿ ಕಾರ್ಯನಿರ್ವಹಿಸಬೇಕು. ಹೀಗಾಗದಿದ್ದಾಗ ಅನ್ಯಾಯಕ್ಕೊಳಗಾದ, ಶೋಷಿತ, ದಮನಿತ ವರ್ಗಗಳ ನಡುವೆ ಜಗಳ, ಮನಸ್ತಾಪ, ಪ್ರತ್ಯೇಕತೆ, ವೈಷಮ್ಯ, ಹಿಂಸೆ, ಗಲಭೆಯ ವಿಷಬೀಜವನ್ನು ಬಿತ್ತುವ ಶಕ್ತಿಗಳು ಸಕ್ರಿಯವಾಗುತ್ತವೆ. ಕಳೆದ ನಾಲ್ಕು ವರ್ಷಗಳಲ್ಲಿ ಇಂತಹ ಶಕ್ತಿಗಳು ಕೆಲವು ವರ್ಗಗಳ, ಹಲವಾರು ವರ್ಷಗಳಿಂದ ಇರುವ ಬೇಡಿಕೆಗಳನ್ನು, ಯಾವುದೋ ಘಟನೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳನ್ನು ನಡೆಸುತ್ತಿರುವುದನ್ನು ಗಮನಿಸಬಹುದಾಗಿದೆ. ಹೊಸತಾಗಿ ನಡೆಯುವ ಘಟನೆಯಿದ್ದರೂ ಹಳೆಯ ಘಟನೆಯೊಂದರ ಜೊತೆ ಪೋಣಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಲು ರಾಷ್ಟ್ರ ವಿರೋಧಿ ಶಕ್ತಿಗಳು ಕಾರ್ಯಪ್ರವೃತ್ತವಾಗಿವೆ. ದೇಶದ ಸಂವಿಧಾನವನ್ನು ಗೌರವಿಸದೆ,  ಸ್ವಾರ್ಥ ಮನೋಭಾವ ಹಾಗೂ ಅಧಿಕಾರ ದಾಹದ ರಾಜಕೀಯ ಮನೋಭಾವವುಳ್ಳ ಪಕ್ಷಗಳು ಮುಂದಿನ ಚುನಾವಣೆಗೆ ಮತ ಬ್ಯಾಂಕನ್ನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದಲೇ ಇಂತಹ ಕೆಲಸದಲ್ಲಿ ತೊಡಗಿವೆ ಎಂಬುದು ಸ್ಪಷ್ಟವಾಗಿದೆ. ವಿಭಜನೆ, ಪ್ರತ್ಯೇಕತಾವಾದ, ಗಲಭೆ, ವೈಷಮ್ಯ, ದ್ವೇಷಗಳನ್ನೇ ಬಳಸಿಕೊಂಡು ರಾಷ್ಟ್ರ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಲಿವೆ. ಭಾರತವು ತುಂಡಾಗಲಿ (ಭಾರತ್ ತೆರೆ ತುಕಡೆ ಹೋಂಗೆ) ಎಂದು ಊಳಿಡುತ್ತಿದ್ದ ಗುಂಪಿನ ಪ್ರಮುಖರು ಈ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ, ಅಂತಹದ್ದೇ ವೇದಿಕೆಗಳಲ್ಲಿ  ಪ್ರಚೋದನಾಕಾರಿ ಭಾಷಣಗಳನ್ನು ಆರಂಭಿಸಿದ್ದಾರೆ. ಒಂದು ಕಾಲದಲ್ಲಿ ಕಾಡುಗಳಲ್ಲಿದ್ದು  ದ್ವೇಷದ ಆಧಾರದ ಮೇಲೆ ಮಾವೋವಾದವನ್ನು ಉಪದೇಶಿಸುತ್ತಿದ್ದವರನ್ನು ದಮನ ಮಾಡಿ ಅವರ ಕೈಗಳನ್ನು ಮೊಟಕುಗೊಳಿಸಿದ್ದರ ಪರಿಣಾಮವಾಗಿ ಅವರುಗಳು ನಗರಗಳಲ್ಲಿ ಸೇರಿಕೊಂಡು ಅರ್ಬನ್ ನಕ್ಸಲರಾಗಿ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಇಂಬು ಕೊಡುತ್ತಿದ್ದಾರೆ. ವಿದ್ಯಾರ್ಥಿ ಹಾಸ್ಟೆಲ್ ಗಳಲ್ಲಿ ಅವರ ಸಿದ್ಧಾಂತಗಳನ್ನು ಒಪ್ಪುವವರ ಸಣ್ಣ ಸಣ್ಣ ಗುಂಪುಗಳನ್ನು ರಚಿಸುವ ಕೆಲಸ ನಡೆಯುತ್ತಿದೆ.  ಕ್ರಮೇಣ ಸಂವಿಧಾನದ ಬಗೆಗಿನ ಅಪನಂಬಿಕೆ, ನ್ಯಾಯ ವ್ಯವಸ್ಥೆಯ ಬಗೆಗಿನ ಭಯವನ್ನು, ನಾಗರಿಕ ಶಿಸ್ತನ್ನು ಹೋಗಲಾಡಿಸುತ್ತಾ ಅಸಹನೀಯ ಹಿಂಸೆ, ಕ್ರೌರ್ಯಗಳ ಸಹಾಯದಿಂದ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ರೂಪುಗೊಳಿಸುತ್ತಾ ಅರಾಜಕತೆಯನ್ನು ಸೃಷ್ಟಿಮಾಡುತ್ತಾ ಹೋಗುವುದೇ ಅವರುಗಳ ಕಾರ್ಯ ಪದ್ಧತಿ. ಮತ್ತೊಂದು ಕಡೆಯಲ್ಲಿ ಪ್ರಸ್ತುತ ನಾಯಕತ್ವ, ಸಮಾಜದ ವ್ಯವಸ್ಥೆಯ ಬಗ್ಗೆ ದ್ವೇಶವನ್ನು ಸಾರುತ್ತಾ ಗಲಭೆಗಳನ್ನು ಸೃಷ್ಟಿಸುತ್ತಾ ಬರುತ್ತವೆ. ಹೀಗೆ ಕುರುಡು ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುತ್ತ, ಹೊಸತೊಂದು, ಅಪರಿಚಿತ, ಅನಿಯಂತ್ರಿತ, ನೇರವಾಗಿಯೇ ಪಕ್ಷಪಾತಿ ನಾಯಕತ್ವವನ್ನು ಪ್ರತಿಷ್ಠಾಪಿಸುವುದೇ ಆಧುನಿಕ ವಾಮಪಂಥವಾದ ಅರ್ಬನ್ ನಕ್ಸಲರ ಸಿದ್ಧಾಂತವಾಗಿದೆ. ಬುದ್ಧಿಜೀವಿಗಳ ಗುಂಪುಗಳಲ್ಲಿ, ಇತರೆ ಸಂಘಟನೆಗಳಲ್ಲಿ ಇವರನ್ನು ಬೆಂಬಲಿಸುವವರು ಸಾಮಾಜಿಕ ಜಾಲತಾಣಗಳು ಹಾಗೂ ಇತರೆ ಮಾಧ್ಯಮಗಳ ಮೂಲಕ ದ್ವೇಷದ ವಿಷ ಬೀಜವನ್ನು ಬಿತ್ತುವ, ರಾಷ್ಟ್ರ ವಿರೋಧಿ ಕೆಲಸದಲ್ಲಿ ತೊಡಗುತ್ತಿದ್ದಾರೆ. ಇಂತಹ ಚಟುವಟಿಕೆಗಳ ಆದಿಯಿಂದ ಅಂತ್ಯದವರೆಗೂ ಅವರ ಪಾತ್ರವಿದ್ದೇ ಇರುತ್ತದೆ. ಇನ್ನು ಬುದ್ಧಿಜೀವಿಗಳು ಇಂತಹ ಚಟುವಟಿಕೆಗಳ ಜೊತೆಯಲ್ಲೇ ಇದ್ದುಕೊಂಡು ಸಾರ್ವಜನಿಕ ಪ್ರಚಾರ, ಪ್ರತಿಭಟನೆಯಲ್ಲಿ ಭಾಗಿಯಾಗಿ ತಮ್ಮ ಗುರುತಿಗೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸುತ್ತಿರುತ್ತಾರೆ. ದ್ವೇಷ ಹಾಗೂ ವಿಷಯುಕ್ತ ಪ್ರಚೋದನಕಾರಿ ಭಾಷಣಗಳಿಂದ ತಮ್ಮ ಪ್ರಚಾರವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಸಾಮರ್ಥ್ಯವಿರುವ ಇವರುಗಳು ಈ ಚಟುವಟಿಕೆಗಳಲ್ಲಿ ನಿಷ್ಣಾತರಾಗಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣ ಹಾಗು ಇತರೆ ಮಾಧ್ಯಮಗಳಲ್ಲಿ ಕಾಣಸಿಗುವ ಈ ಚಟುವಟಿಕೆಗಳ ಕಥಾನಕ, ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ಮೂಲವನ್ನು ಹುಡುಕಬಹುದಾಗಿದೆ. ಜಿಹಾದಿ ಶಕ್ತಿಗಳು, ಉಗ್ರವಾದಿ ಗುಂಪುಗಳು ಇಂತಹ ಕಾರ್ಯದಲ್ಲಿ ಕೈಜೋಡಿಸಿವೆ ಎಂಬುದು ಸ್ಪಷ್ಟವಾಗಿ ತೋರುತ್ತದೆ. ಆದ್ದರಿಂದ ದೇಶವನ್ನೊಡೆಯುವ ಪಿತೂರಿಯಲ್ಲಿ ದೇಶದೊಳಗಿನ ಹಾಗೂ ಹೊರಗಿನ ಶಕ್ತಿಗಳು ಸೇರಿಕೊಂಡಿವೆ. ವಿಪಕ್ಷಗಳ ಅಧಿಕಾರ ದಾಹ, ರಾಜಕೀಯ ಹಿತಾಸಕ್ತಿ ಇರುವ ಸಣ್ಣ ಗುಂಪುಗಳು, ನಾಯಕರುಗಳು, ದಮನಿತರ ಗುಂಪುಗಳು ಎಲ್ಲವನ್ನೂ ಒಗ್ಗೂಡಿಸಿ ಅವುಗಳನ್ನೇ ಅಸ್ತ್ರವನ್ನಾಗಿಸುವ ಹುನ್ನಾರ ಅಡಗಿದೆ. ಇಂತಹ ಅನೈತಿಕ, ಪ್ರತಿಕೂಲ ವಾತಾವರಣವನ್ನು ನಿರ್ಮಿಸಿ ಸಮಾಜವನ್ನು ಕ್ಷೀಣಗೊಳಿಸುವ ತನ್ಮೂಲಕ ಆಂತರಿಕ ಭದ್ರತೆಯನ್ನು  ಅಲುಗಾಡಿಸುವ ಆಂತರಿಕ ಮಾನಸಿಕ ಯುದ್ಧವನ್ನು ರಚಿಸಲಾಗುತ್ತಿದೆ. ನಮ್ಮ ಹಿಂದಿನ ರಜನೀತಿ ಶಾಸ್ತ್ರಗಳಲ್ಲಿ ಇಂತಹದ್ದೇ ಕಾರ್ಯಪದ್ಧತಿಯನ್ನು “ಮಂತ್ರಯುದ್ಧ”ವೆಂದು ಕರೆಯುತ್ತಿದ್ದುದು.

ಈ ಘಟನೆಗಳನ್ನು ನಿಯಂತ್ರಿಸಲು ಸರಕಾರ ಹಾಗೂ ಆಡಳಿತ ವರ್ಗ ಹೆಚ್ಚು ಗಮನ ಹರಿಸಬೇಕಿದೆ. ದೇಶ ವಿರೋಧಿ ಚಟುವಟಿಕೆಗಳಿಗೆ ಆಸ್ಪದ ದೊರೆಯದಂತೆ ಮಾಡಬೇಕಿದೆ. ಇಂತಹ ಚಟುವಟಿಕೆಗಳಿಗೆ ಸಮಾಜದಲ್ಲಿ ನಿಕೃಷ್ಟಭಾವ ಬೆಳೆದರೆ ತನ್ನಿಂತಾನೆ ಇವು ಶಮನಗೊಳ್ಳುವ ಸಾಧ್ಯತೆ ಇದೆ. ಈ ವಿಷಯವಾಗಿ ಆಡಳಿತ ವರ್ಗವು ಗುಪ್ತಚರ ಮಾಹಿತಿ ಸಂಗ್ರಹಣೆಯನ್ನು ಸಮಗ್ರ ಹಾಗೂ ಇನ್ನಷ್ಟು ಎಚ್ಚರಿಕೆಯಿಂದ ಮಾಡಬೇಕಿದೆ. ತಮ್ಮ ಪ್ರಾಮಾಣಿಕ ಪ್ರಯತ್ನಗಳಿಂದ, ಸರಕಾರದ ಕಲ್ಯಾಣಕರ ಕಾರ್ಯಗಳು ಸಮಾಜದ ಕಟ್ಟಕಡೆಯ  ವ್ಯಕ್ತಿಯವರೆಗೂ ತಲುಪುವ ಬಗ್ಗೆ ಗಮನ ಹರಿಸಬೇಕಿದೆ.   ಕಾನೂನು ಸುವ್ಯವಸ್ಥೆ ಸ್ಥಾಪಿಸಲು ಕಾರ್ಯತತ್ಪರತೆ, ನಿಪುಣತೆಯಿಂದ ಶ್ರಮಿಸಬೇಕಿದೆ.

ಇಂತಹ ಕೃತ್ಯಗಳ ಉಪಶಮನಕ್ಕೆ ಸಮಾಜದ ಎಲ್ಲಾ ವರ್ಗದವರೂ ಕೈಜೋಡಿಸಿ ಬುದ್ಧಿ ಹಾಗೂ ಭಾವನೆ ಸಹಿತ ಆಚರಣೆಯಲ್ಲಿ, ಸದ್ಭಾವನೆ ಹಾಗೂ ನಮ್ಮತನದ ವ್ಯವಹಾರವಿದ್ದಾಗಲಷ್ಟೇ ಸಾಧ್ಯ. ಪಂಥ, ಸಂಪ್ರದಾಯ, ಜಾತಿ, ಉಪಜಾತಿ, ಭಾಷೆ ಪ್ರಾಂತ ಇತ್ಯಾದಿ ವಿವಿಧತೆಯ ವಿಷಯವಾಗಿ ಏಕತೆಯ ದೃಷ್ಟಿಯಿಂದ ನೊಡುವ ಅಗತ್ಯವಿದೆ. ಇಡಿಯ ಸಮಾಜವು ಸವಾಲುಗಳನ್ನು ತಮ್ಮ ಜವಾಬ್ದಾರಿಯಂತೆ ಸ್ವೀಕರಿಸಿದಾಗ, ಜೊತೆಯಲ್ಲಿ ಸದ್ಭಾವನಾ ಪೂರ್ವಕ ಸಮಾಲೋಚನೆಯಿಂದ ಸಮಸ್ಯೆಗಳ ಪರಿಹಾರದಲ್ಲಿ ತೊಡಗಿಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ನಿರಂತರ ಆತ್ಮೀಯ ಸಂವಾದ ಸಂಪರ್ಕದ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಪ್ರಮುಖ ಅಂಶವೆನಿಸುತ್ತದೆ. ಕಾನೂನು ಸುವ್ಯವಸ್ಥೆಯನ್ನು, ನಾಗರಿಕ ಶಿಸ್ತನ್ನು ಪಾಲಿಸುವಲ್ಲಿ ಸಮಾಜದ ಎಲ್ಲಾ ನಾಗರೀಕರೂ ಭಾಗವಹಿಸಬೇಕು. ಈ ಸಂಬಂಧ ಎಲ್ಲಾ ನಾಗರೀಕರೂ, ಅಲ್ಲದೇ ರಾಜಕಾರಣಿಗಳೂ ಡಾ. ಬಾಬಾ ಸಾಹೇಬ್ ಅಂಬೇಡ್ಕರರ ಮಾತುಗಳನ್ನು ಸ್ಮರಿಸಿಕೊಳ್ಳುವುದು ಮತ್ತು ಅದರಂತೆ ಆಚರಿಸುವುದು ಒಳಿತು. ನ್ಯಾಯ, ಸಮಾನತೆ ಹಾಗೂ ಸ್ವಾತಂತ್ರ್ಯ ವಿಚಾರಗಳಲ್ಲಿ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ಪ್ರಜಾತಾಂತ್ರಿಕವಾಗಿ ಮುನ್ನಡೆಯಬೇಕಾದರೆ ಸಮಾಜದಲ್ಲಿ ಬಂಧು ಭಾವದದ ವ್ಯಾಪಕ ಪ್ರಸಾರವಿಲ್ಲದೆ ಅಸಂಭವವಾಗುತ್ತದೆ. ಇಲ್ಲದಿದ್ದರೆ ಈ ಪ್ರಜಾತಾಂತ್ರಿಕ ಮೌಲ್ಯಗಳು ಅಲ್ಲದೇ ನಾವು ಗಳಿಸಿರುವ ಸ್ವಾತಂತ್ರ್ಯವೂ ಸಂಕಟಮಯವೆನಿಸಬಹುದು. ಬ್ರಿಟಿಷರ ಆಳ್ವಿಕೆಯಲ್ಲಿನ ನಾಗರೀಕರಾಗಿ ನಾವು ತೆಗೆದುಕೊಂಡ ಮಾರ್ಗಗಳನ್ನು ಸ್ವಾತಂತ್ರ್ಯಾ ನಂತರದಲ್ಲಿ ಕೈಬಿಡಬೇಕು. ನಾವು ಕಾನೂನಾತ್ಮಕವಾಗಿ, ಸಾಂವಿಧಾನಿಕವಾಗಿಯಷ್ಟೇ ಪ್ರಜಾತಂತ್ರದ ಶಿಸ್ತನ್ನು ಪಾಲಿಸಬೇಕು. ಎಂದು ಡಾ. ಅಂಬೇಡ್ಕರ್ ೨೫ ನವೆಂಬರ್ ೧೯೪೯ರಲ್ಲಿ ಭಾಷಣ ಮಾಡಿದ್ದರು.

ಸೊದರಿ ನಿವೇದಿತಾ ಕೂಡ ನಾಗರಿಕ ಆತ್ಮಸಾಕ್ಷಿ, ಜಾಗೃತಿ ಸ್ವತಂತ್ರ ದೇಶದ ನಾಗರೀಕನ ದೇಶಭಕ್ತಿಯ ಪ್ರಕಟೀಕರಣರೂಪ ಎಂಬುದಾಗಿ ಪ್ರತಿಪಾದಿಸಿದ್ದರು.

ಕುಟುಂಬದಲ್ಲಿ ಸಂಸ್ಕಾರದ ಅವಶ್ಯಕತೆ

ಈ ವಿಷಯಗಳ ಬಗ್ಗೆ ರಾಜಕೀಯ, ನ್ಯಾಯಾಂಗ, ಕಾರ್ಯನಿರ್ವಾಹಕ, ಸ್ಥಳೀಯ ಆಡಳಿತ, ಸಂಘಟನೆಗಳು, ಗಣ್ಯರು ಮತ್ತು ಸಾರ್ವಜನಿಕರ ನಡುವೆ ದೃಢವಾದ, ಸಂಪೂರ್ಣ ಒಮ್ಮತ ಮತ್ತು ಸಮಾಜದಲ್ಲಿ ನಿಕಟ ಏಕತೆಯ ಭಾವನೆಗಳು ದೇಶದ ಸ್ಥಿರತೆ, ಅಭಿವೃದ್ಧಿ ಮತ್ತು ಭದ್ರತೆಯ ಏಕೈಕ ಭರವಸೆಯಾಗಿದೆ. ಈ ಸದ್ಗುಣಗಳನ್ನು ಶಾಲೆಗಳಲ್ಲಿ ಸಾಮಾಜಿಕ ಚಟುವಟಿಕೆಗಳ ಮೂಲಕ ಬಾಲ್ಯದಿಂದಲೇ ಹೊಸ ಪೀಳಿಗೆಯಲ್ಲಿ ತುಂಬಬೇಕು. ಇಂದು ಯುವ ಪೀಳಿಗೆಯು ಜೀವನದಲ್ಲಿ ಸದ್ಗುಣಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಈ ದಿನಗಳಲ್ಲಿ, ಶಿಕ್ಷಣದ ಪಠ್ಯಕ್ರಮದಲ್ಲಿ ಮತ್ತು ಸಮಾಜದ ಸಾಮಾನ್ಯ ವಾತಾವರಣದಲ್ಲಿ ಈ ಮೌಲ್ಯಗಳು ಹೊಂದಿಲ್ಲ. ಹೊಸ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ತೆಗೆದುಕೊಳ್ಳುತ್ತಿರುವ ಸಮಯವೂ ಅನವಶ್ಯವಾಗಿ ವ್ಯಯವಾಗುತ್ತಿದೆ. ಸಾಮಾಜಿಕ ಮತ್ತು ಸರ್ಕಾರಿ ಮಟ್ಟಗಳಲ್ಲಿ ಈ ಬದಲಾವಣೆಗಳಿಗೆ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ಪ್ರಯತ್ನಪಡುತ್ತಿದ್ದರೂ ಸಹ, ನಮ್ಮ ಮನೆ ಮತ್ತು ಕುಟುಂಬಗಳಲ್ಲಿ ಯಾವಾಗಲೂ ಇಂತಹ ಪ್ರಯತ್ನಗಳನ್ನು ಮಾಡಲು ಆಸ್ಪದ ಇದ್ದೇ ಇದೆ. ಹೊಸ ಪೀಳಿಗೆಯ ಕಡೆಗೆ ಧಾರ್ಮಿಕ ಪರಿಸರದಲ್ಲಿ ಸ್ವಾಭಾವಿಕ ಪ್ರೀತಿ, ಸ್ವಯಂ ವಿವೇಚನೆ, ಕುಟುಂಬ ಮತ್ತು ಸಾಮಾಜಿಕ ಜವಾಬ್ದಾರಿಯ ಗುಣಗಳಿಂದ ನಮ್ಮ ಜವಾಬ್ದಾರಿಯನ್ನು ಪೂರೈಸುತ್ತಿದ್ದೇವೆಯೇ ಎಂಬುದನ್ನು ನಾವು ನೋಡಬೇಕು. ಬದಲಾಗುತ್ತಿರುವ ಕಾಲದಲ್ಲಿ ಹೆಚ್ಚುವರಿ ಗಮನವನ್ನು ಈ ನಿಟ್ಟಿನಲ್ಲಿ ನೀಡಬೇಕಿದೆ. ಮಾಧ್ಯಮದ ಹೆಚ್ಚುತ್ತಿರುವ ಪ್ರಭಾವದಿಂದಾಗಿ, ಹೊಸ ತಂತ್ರಜ್ಞಾನ, ಹೊಂದುವ ಗ್ಯಾಜೆಟ್ಗಳಿಂದಾಗಿ ವ್ಯಕ್ತಿಗಳು ಸ್ವಕೇಂದ್ರಿತರಾಗಿ ತಮ್ಮ ವಿವೇಚನಾ ಸಾಮರ್ಥ್ಯಗಳನ್ನು ಅರಿತುಕೊಳ್ಳದೆಯೇ ಸರಿ-ತಪ್ಪು ಮಾಹಿತಿ ಮತ್ತು ಪ್ರಪಂಚದ ಜ್ಞಾನವನ್ನು ಪಡೆಯುತ್ತಿರುವ ಯುವಪೀಳಿಗೆಗೆ ಕುಟುಂಬ, ಸಂಪ್ರದಾಯದ ಮೌಲ್ಯಗಳ ಬೋಧನೆ ಅತ್ಯಗತ್ಯ. ನಮ್ಮದೇ ಆದ ಉದಾಹರಣೆಯನ್ನು ರಚಿಸುತ್ತಾ, ಪ್ರಪಂಚದ ದುಷ್ಟ ಶಕ್ತಿಗಳನ್ನು ಎದುರಿಸುವ ಸಾಮರ್ಥ್ಯವನ್ನು, ವಿವೇಚನಾಶೀಲ ಮನಸ್ಥಿತಿಯನ್ನು ಯುವಕರಲ್ಲಿ ಇಂದು ಬೆಳೆಸಬೇಕಿದೆ.

ಕುಟುಂಬಗಳಲ್ಲಿನ ನೋವು, ಋಣಭಾರ, ಅನೈತಿಕ ನಡವಳಿಕೆ, ಅತ್ಯಾಚಾರ, ಆತ್ಮಹತ್ಯೆ, ಜಾತಿ ಘರ್ಷಣೆಗಳು ಮತ್ತು ದೇಶದಲ್ಲಿನ ಭೇದಭಾವದ ತಾರತಮ್ಯದ ಘಟನೆಗಳ ಕುರಿತಾದ ಸುದ್ದಿ ವರದಿಗಳು ಖಂಡಿತವಾಗಿಯೂ ಕಾಳಜಿ ಮತ್ತು ನೋವಿನ ವಿಷಯವಾಗಿವೆ. ಅಂತಿಮವಾಗಿ, ಈ ಸಮಸ್ಯೆಗಳಿಗೆ ಪರಿಹಾರಗಳು ಪ್ರೀತಿ ಮತ್ತು ಸರಿಯಾದ ಕುಟುಂಬದ ವಾತಾವರಣ ಮತ್ತು ಸಾಮಾಜಿಕ ಸಾಮರಸ್ಯದಿಂದ ಸಾಧ್ಯ. ಈ ದೃಷ್ಟಿಕೋನದಲ್ಲಿ ಹಿರಿಯರು ಮತ್ತು ಪ್ರಮುಖ ಬುದ್ಧಿಜೀವಿಗಳು ಸೇರಿದಂತೆ ಇಡೀ ಸಮಾಜವು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ.

ಚಿಂತನೆಯಲ್ಲಿ ಸಮಗ್ರತೆ

ವಿವಿಧ ಆಯಾಮಗಳಲ್ಲಿ ಸಮಾಜವನ್ನು ಮುನ್ನಡೆಸುವ ನಾಯಕರುಗಳು ತಮ್ಮ ಮಾತು, ಚಿಂತನೆ, ದೃಷ್ಟಿ, ಕಾರ್ಯ ಎಲ್ಲವೂ ಸ್ವಂತಕ್ಕೆ, ಪರಿವಾರಕ್ಕೆ, ಸಮಾಜಕ್ಕೆ, ಇಡಿಯ ಮನುಕುಲಕ್ಕೆ, ಹಾಗೂ ಪರಿಸರಕ್ಕೆ ಪೂರಕವಾಗಿ, ಸಹಾಯಕವಾಗಬೇಕಾಗುತ್ತದೆ. ಕಾನೂನು ಹಾಗೂ ದಂಡನೆಯ ಭಯಗಳಿಂದಾಗಿಯಷ್ಟೇ ಯಾವುದೇ ದೇಶದಲ್ಲಿ ಶಾಂತಿಯುತ, ಆರೋಗ್ಯಯುತ ಬಾಳು ಕಲ್ಪಿಸಲು ಆಗಿಲ್ಲ.

ನಮ್ಮ ಅದರಲ್ಲೂ ವಿಶೇಷವಾಗಿ ವಿವಿಧ ರೀತಿಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡುವವರು ಪ್ರತಿಯೊಂದು ಕಾರ್ಯ, ಮಾತು ಮತ್ತು ವಿಚಾರದಿಂದಲೂ ವ್ಯಕ್ತಿ, ಪರಿವಾರ, ಸಮಾಜ, ಮಾನವ ಜನಾಂಗ ಮತ್ತು ಸಮಸ್ತ ಸೃಷ್ಟಿಯ ಪೋಷಣೆಯಾಗಲಿ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ವಿಶ್ವದಲ್ಲಿ ಎಲ್ಲಿಯೂ ಸಮಾಜದ ಸ್ವಾಸ್ಥ್ಯ ಮತ್ತು ಶಾಂತಿಯುತ ಜೀವನ ಕೇವಲ ಕಾನೂನು ವ್ಯವಸ್ಥೆ ಮತ್ತು ಶಿಕ್ಷೆಯ ಭಯದಿಂದ ನಡೆಯಬಾರದು ಮತ್ತು ನಡೆಯುವುದೂ ಸಾಧ್ಯವಿಲ್ಲ. ಸಮಾಜ ಕಾನೂನನ್ನು ಪರಿಪಾಲಿಸುತ್ತಿದ್ದರೆ ಅದಕ್ಕೆ ಕಾರಣ ಸಮಾಜದ ಆಚಾರದ  ಪರಿಣಾಮದಿಂದಲೇ ಆಗಿದೆ. ಮತ್ತು ಸಮಾಜದ ಆಚಾರ, ಸಂಸ್ಕಾರ ಅದರ ಪರಂಪರೆಯಿಂದ ಬಂದ ಮೌಲ್ಯಗಳಿಂದ ಬರುತ್ತದೆ.  ಸಮಾಜದ ಆಚರಣೆಯ ಕಾರಣದಿಂದ ಉಂಟಾಗುವ ನಿಸರ್ಗಸಹಜ ಕಾಮನೆ ಅಥವಾ ಅರ್ಥ ಕೇಂದ್ರಿತ ನಡವಳಿಕೆಗಳು, ಅದನ್ನು ಗೌರವಯುತವಾಗಿ ಮಾಡಿ, ಸುಖದದೊಂದಿಗೆ ಸಂತೋಷ ಅಥವಾ ಆನಂದ ನೀಡುವಂತಾಗುವಂತೆ ಮಾಡುವಲ್ಲಿ ಯಶಸ್ವಿಯಾಗಬೇಕು.

ನೀತಿನಿಯಮಗಳ ಮಾರ್ಗದಲ್ಲಿ ಸಮಾಜ ಮತ್ತು ಪರಿವಾರ ಏಕಾತ್ಮತೆಯಿಂದ ನಡೆಯುವಂತೆ ನೋಡಿಕೊಳ್ಳುವ ನಿಯಮಗಳು ಇವೆಲ್ಲವುಗಳನ್ನು ನಿರ್ಣಯಿಸುವ ಮೌಲ್ಯಗಳು, ಇವೆಲ್ಲವೂ ಪರಸ್ಪರ ಪೂರಕವಾಗಿ ಸುಸಂಗತವಾಗಿ ನಡೆದರೆ ಆಗ ವಾಸ್ತವದಲ್ಲಿ ಸಂಪೂರ್ಣ ನ್ಯಾಯ ಒದಗಿಸಿದಂತೆ ಆಗುತ್ತದೆ. ಸಮಗ್ರವಾದ ವಿಚಾರ ಮತ್ತು ಧೈರ್ಯಪೂರ್ವಕ ಮನಸ್ಸನ್ನು ತಯಾರುಮಾಡದ ಹೊರತು ಸಮಾಜದ ಆಚರಣೆಯಲ್ಲಿ ನಿರ್ಣಯಗಳ ಸ್ವೀಕಾರ ಮತ್ತು ಅದರಿಂದ ದೇಶಕಾಲ ಪರಿಸ್ಥಿತಿಗಳಿಗೆ ಅನುಸಾರವಾಗಿ ಸಮಾಜದ ನವನಿರ್ಮಾಣ ಸಾಧ್ಯವಾಗುವುದಿಲ್ಲ.

ಶಬರಿಮಲೆ ದೇವಾಲಯದ ಇತ್ತೀಚಿನ ತೀರ್ಪಿನಿಂದ ಉದ್ಭವವಾಗಿರುವ ಪರಿಸ್ಥಿತಿಯು ಇದೇ ರೀತಿಯ ಸಂಕಟವನ್ನು ತೋರಿಸುತ್ತದೆ. ಸಮಾಜದಿಂದ ಅಂಗೀಕರಿಸಲ್ಪಟ್ಟ ಸಂಪ್ರದಾಯದ ಸ್ವರೂಪ ಮತ್ತು ಪ್ರಮೇಯ ಮತ್ತು ನಿರಂತರವಾಗಿ ವರ್ಷಗಳ ಕಾಲದ ಆಚರಣೆಯನ್ನು ಪರಿಗಣಿಸಲಾಗಿಲ್ಲ. ಧಾರ್ಮಿಕ ಪಂಥಗಳ ಮುಖ್ಯಸ್ಥರು ಮತ್ತು ಕೋಟಿಗಟ್ಟಲೆ ಭಕ್ತರ ನಂಬಿಕೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಸಂಪ್ರದಾಯವನ್ನು ಶ್ರದ್ಧೆಯಿಂದ ಅನುಸರಿಸುವ ಮಹಿಳೆಯರನ್ನು ಗಣನೆಗೆ ತೆಗೆದುಕೊಂಡಿಲ್ಲ. ಕಾನೂನಿನ ತೀರ್ಪು ಶಾಂತಿ, ಸ್ಥಿರತೆ ಮತ್ತು ಸಮಾನತೆಯನ್ನು ತೋರಬೇಕಿತ್ತಾದರೂ ಸಮಾಜದಲ್ಲಿ ಅಶಾಂತಿ, ಪ್ರಕ್ಷುಬ್ಧತೆ ಮತ್ತು ವಿಭಜನೆಗೆ ಕಾರಣವಾಗಿದೆ. ಕೇವಲ ಹಿಂದೂ ಸಮಾಜದ ನಂಬಿಕೆಗಳ ಮೇಲೆ ದಾಳಿ ಏಕಾಗುತ್ತಿದೆ ಎಂಬ ಪ್ರಶ್ನೆ, ಸಾರ್ವಜನಿಕ ಮನಸ್ಸಿನಲ್ಲಿ ನಿಧಾನವಾಗಿ ಇಳಿಯುತ್ತಿದೆ ಹಾಗೂ ಆ ಕಾರಣದಿಂದಾಗಿಯೇ ಅಶಾಂತಿಗೆ ಕಾರಣವಾಗುತ್ತದೆ. ಈ ಪರಿಸ್ಥಿತಿಯು ಸಮಾಜದ ಶಾಂತಿ ಮತ್ತು ಸ್ವಾಸ್ಥ್ಯಕ್ಕೆ ಅನುಕೂಲಕರವಾಗಿಲ್ಲ.

ಸ್ವತಂತ್ರ ದೇಶಕ್ಕಾಗಿ “ಸ್ವ” ಆಧಾರಿತ ತಂತ್ರ

ಸನಾತನ ಮೌಲ್ಯ, ಗುಣ ಲಕ್ಷಣಗಳ ಆಧಾರದ ಮೇಲೆ      ನಿಂತಿರುವ ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯಬೇಕಾದರೆ ಕೆಲವನ್ನು ನವೀಕರಿಸಬೇಕಾಗುತ್ತದೆ. ಕೆಲವನ್ನು ಕೈಬಿಡಬೇಕಾಗುತ್ತದೆ, ಕೆಲವನ್ನು ಬದಲಾಯಿಸಬೇಕಾಗುತ್ತದೆ. ಹೊರದೇಶದಿಂದ ಬಂದದ್ದನ್ನು ಪರಿಗಣಿಸಿ, ನಮ್ಮ ದೇಶದ ಅವಶ್ಯತೆಗಳಿಗನುಸಾರವಾಗಿ ಅವುಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಗುಣ ನಮ್ಮ ದೇಶದಲ್ಲಿರುವುದು ವಿಶೇಷ. ಅದನ್ನೇ ಹಿಂದುತ್ವ ಎಂದು ಕರೆಯಲಾಗಿದೆ. ಯಾವುದೇ ರಾಷ್ಟ್ರ ಪ್ರಗತಿಯನ್ನು ಸಾಧಿಸಲು ತನ್ನ ಮೂಲ ಪಾತ್ರದ ಜೊತೆಗೆ ದೃಢ ನಿಶ್ಚಯದ ಗುಣದಿಂದಲೇ ಸಾಧ್ಯ. ಕಣ್ಣುಮುಚ್ಚಿ ಯಾವುದನ್ನೇ ಒಪ್ಪಿಕೊಳ್ಳುವುದು ಅಸಾಧ್ಯ. ಆಡಳಿತಾತ್ಮಕ ಸೂಕ್ಷ್ಮತೆ, ಪಾರದರ್ಶಕತೆ, ಲವಲವಿಕೆಯಿಂದ ಸರಕಾರದ ಉನ್ನತ  ರೀತಿನೀತಿಗಳ ಅನುಷ್ಠಾನದಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ಸಮಾಜದ ಕಟ್ಟಕಡೆಯ ಮನುಷ್ಯನು ಸರಕಾರದ ನೀತಿಯ ಫಲಾನುಭವಿಯಾಗಿಲ್ಲ. ಆಂಗ್ಲರ ಕಾಲದ ಆಡಳಿತಕ್ಕಿಂತ ಸ್ವತಂತ್ರ ಭಾರತದ ಆಡಳಿತ ಪ್ರಜೆಗಳ ಒಳಿತಿಗಾಗಿರಬೇಕಿದೆ.

ರಾಜಕೀಯ ಸ್ವಾತಂತ್ರ್ಯ ಎಂದೂ ಪೂರ್ಣವಾಗಿಲ್ಲ. ರಾಷ್ಟ್ರೀಯ ಜೀವನದ ನಾನಾ ಆಯಾಮಗಳನ್ನು ಗುರುತಿಸುವುದು ಸ್ವ ಹಾಗೂ ಆತ್ಮ ಗೌರವಗಳ ಆಧಾರದ ಮೇಲೆಯೇ. ಈ ಮೂಲಮಂತ್ರದಿಂದ ಸ್ವಾತಂತ್ರದ ದಿನಗಳಲ್ಲಿ “ನಾವು ಒಂದು” ಎಂಬ ಭಾವನೆ ಮೂಡಲು ಸಹಾಯಕ. ಸ್ವತಂತ್ರ ಭಾರತದ ನಾಗರೀಕರ ಆಶಾಭಾವನೆಯನ್ನು ಸಂವಿಧಾನ ೪ ರೀತಿಯಲ್ಲಿ  ನೀಡುತ್ತದೆ-  ಪ್ರಸ್ತಾವನೆ, ಮೂಲಭೂತ ಹಕ್ಕುಗಳು, ಮಾರ್ಗದರ್ಶಕ ತತ್ವ (ಡೈರೆಕ್ಟಿವ್ ಪ್ರಿನ್ಸಿಪಲ್ಸ್), ಮೂಲಭೂತ ಕರ್ತವ್ಯ. ಇವುಗಳ ಜೊತೆಗೆ, ಹಾಗೂ ಇವುಗಳಿಗೆ ಪೂರಕವಾಗಿಯೇ ನಾವು ನಮ್ಮ ಮಾದರಿಯನ್ನು ಕಂಡುಕೊಂಡು ಮುನ್ನಡೆಯಬೇಕು. ಇದೇ ಆಧಾರದ ಮೇಲೆ, ರಾಷ್ಟ್ರ‍ೀಯ ಜೀವನದ ನಾನಾ ಆಯಮಗಳನ್ನು, ಆರ್ಥಿಕ ವಿಷಯಗಳನ್ನು  ಮುನ್ನಡೆಸಬೇಕು. ಹೊರಗಿನ ಒಳ್ಳೆಯ ತಂತ್ರಗಳನ್ನು ನಮ್ಮ ದೇಶದೊಳಕ್ಕೆ ಸೇರಿಸಿಕೊಂಡು ನಮ್ಮ ಮಾದರಿಯನ್ನು ನಮ್ಮದೇ ದೇಶದ ಸನಾತನ  ಚಿಂತನೆಯ ಬುನಾದಿಯನ್ನು ಆಧರಿಸಿದ್ದಾಗಿರಬೇಕು.

ಶ್ರೀ ರಾಮಜನ್ಮಭೂಮಿ

ರಾಷ್ಟ್ರದ ’ಸ್ವ’ ತ್ವವನ್ನು ಗೌರವಿಸುವ ಸನ್ನಿವೇಶದಲ್ಲಿ, ಕೋಟ್ಯಂತರ ಜನರ ಭಾವನೆಯಾದ ಪ್ರಭು ಶ್ರೀರಾಮನ ಜನ್ಮ ಸ್ಥಳದಲ್ಲಿ ಬೃಹತ್ ರಾಮ ಮಂದಿರ ನಿರ್ಮಾಣದ ಭಾವನೆಯ ಜೊತೆ ಸಂಘ ನಿಲ್ಲುತ್ತದೆ. ಪ್ರಭು ಶ್ರೀರಾಮ ಧರ್ಮವನ್ನು ಆಚರಿಸುತ್ತಿದ್ದ, ಸಮಸ್ತ ದೇಶದವರು ಅನುಕರಿಸಬಹುದಾದ ಆದರ್ಶ ವ್ಯಕ್ತಿಯಾಗಿದ್ದ. ಹಲವು ಪುರಾವೆಗಳ ಹೊರತಾಗಿಯೂ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಸ್ಥಳ ನಿಗದಿಯಾಗಬೇಕಿದೆ. ಅದೇ ಸ್ಥಳದಲ್ಲಿ ಮುಂಚೆ ಮಂದಿರವಿತ್ತು ಎಂಬ ಸಾಕ್ಷಿಗಳು ಲಭ್ಯವಿವೆ. ಆದರೆ ಸಮಾಜದ ಕೆಲ ಶಕ್ತಿಗಳಿಗೆ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವ ಇರಾದೆ ಎದ್ದುತೊರುತ್ತಿದೆ. ಹಲವು ವರ್ಷಗಳಿಂದ ಸಮಾಜದಲ್ಲಿ ತೀರ್ಪಿಗಾಗಿ ತಾಳ್ಮೆಯಿಂದ ಕಾಯುತ್ತಿರುವವರನ್ನು ದಾರಿತಪ್ಪಿಸುವ, ಇನ್ನಷ್ಟು ಕಾಯಿಸುವ ಅಧಿಕಾರ ಯಾರಿಗೂ ಇಲ್ಲ. ಆತ್ಮ ಗೌರವದ ದೃಷ್ಟಿಯಿಂದ ಮಂದಿರದ ನಿರ್ಮಾಣ ಅಗತ್ಯ. ಅಲ್ಲದೇ ಮಂದಿರದ ನಿರ್ಮಾಣದಿಂದ ದೇಶದಲ್ಲಿ ಸದ್ಭಾವನೆ ಹಾಗೂ ಒಮ್ಮತದ ವಾತಾವರಣ ಸೃಷ್ಟಿಮಾಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಸ್ವಹಿತಾಸಕ್ತಿ, ರಾಜಕೀಯ ಹಿತಾಸಕ್ತಿ, ಕೋಮುವಾದ, ಮೂಲಭೂತವಾದದ ದೃಷ್ಟಿಯನ್ನಿಟ್ಟುಕೊಂಡು ಮಂದಿರದ ನಿರ್ಮಾಣವನ್ನು ತಡೆಯುವ ಪ್ರಯತ್ನಗಳು ನಡೆಯುತ್ತಲಿವೆ. ಕಾನೂನು ರೀತಿಯಲ್ಲಿ ತ್ವರಿತಗತಿಯಲ್ಲಿ ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರದ ನಿರ್ಮಾಣಕ್ಕೆ ಬೇಕಾದ ಎಲ್ಲಾ ನಿರ್ಧಾರಗಳನ್ನು ಸರಕಾರ ತೆಗೆದುಕೊಳ್ಳಬೇಕಾಗುತ್ತದೆ.

ಮತದಾನ

ರಾಷ್ಟ್ರವನ್ನು ಯಾರು ಮುನ್ನಡೆಸಬೇಕು? ಪ್ರಸ್ತುತ ರೀತಿ ನೀತಿಗಳು ಸರಿಯೇ ತಪ್ಪೇ? ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ  ಸಾಮಾನ್ಯ ಮತದಾರನೇ ಐದು ವರ್ಷಕ್ಕೊಮ್ಮೆ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕು. ಅದು ಪ್ರತಿ ಮತದಾರನಿಗೆ ನೀಡಲಾಗಿರುವ ಜವಾಬ್ದಾರಿ ಹಾಗೂ ಕರ್ತವ್ಯ. ಅಂತಹ ಪಂಚವಾರ್ಷಿಕ ಚುನಾವಾಣೆ ಹತ್ತಿರದಲ್ಲಿದೆ. ಭಾರತೀಯರಾಗಿ ರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ತೀರ್ಮಾನ, ನಿರ್ಣಯ ಮಾಡುವ ಮಹತ್ತರ ಜವಾಬ್ದಾರಿ ನಮ್ಮದೇ ಆಗಿದೆ. ಮತದಾನದ ದಿನದಂದು ಇಂತಹ ನಿರ್ಣಯ ಮಾಡುವುದು ಒಂದು ದಿನದಲ್ಲಿ ಮುಗಿದು ಹೋಗಿ ಅದರ ಶುಭ ಅಶುಭ ಪರಿಣಾಮವನ್ನು ತಾತ್ಕಾಲಿಕವಾಗಿ ಕೆಲವೊಮ್ಮೆ ದೀರ್ಘಕಾಲಿಕವಾಗಿ ಮತ್ತೂ ಕೆಲವೊಮ್ಮೆ ಜೀವನಪರ್ಯಂತ ಲಾಭ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಆ ಒಂದು ದಿನದ ಮತದಾನದ ಅಧಿಕಾರದ ನಂತರ ನಮ್ಮ ಕೈಯಲ್ಲಿ ಏನೂ ಇರುವುದಿಲ್ಲ. ಆ ದಿನ ನಾವು ನೀಡುವ ತೀರ್ಪಿನಿಂದಾಗಿ ಪಶ್ಚಾತ್ತಾಪ ಪಡುವುದು ಬೇಡವೆಂದಾದರೆ ಮತದಾರರಾಗಿ ನಾವು ಸ್ವಾರ್ಥವನ್ನು ಮೀರಿ, ಸಂಕುಚಿತ ಭಾವನೆ, ಕ್ಷುಲ್ಲಕ ಜಾತಿ ಅಹಂಭಾವ, ಭಾಷೆ ಪ್ರಾಂತದ ಲೆಕ್ಕಾಚಾರ ಇವುಗಳೆಲ್ಲವನ್ನು ಬದಿಗೊತ್ತಿ  ರಾಷ್ಟೀಯ ಹಿತಚಿಂತನೆಯೇ ಪ್ರಮುಖವೆಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಪ್ರತಿಯೊಬ್ಬ ಮತದಾರನೂ ಅಭ್ಯರ್ಥಿಯ ಸಾಮರ್ಥ್ಯ, ನಿಯತ್ತು, ರಾಷ್ಟ್ರ‍ೀಯ ವಿಚಾರಗಳ ಕುರಿತಾಗಿ ಆತನ ನಿಷ್ಠೆ, ಆತ ಪ್ರತಿನಿಧಿಸುವ ಪಕ್ಷದ ನಿಷ್ಠೆ, ರಾಷ್ಟ್ರೀಯ ಏಕತೆಯ ಕುರಿತಾಗಿ ಅಭ್ಯರ್ಥಿ, ಪಕ್ಷದ ಬದ್ಧತೆ, ಪಕ್ಷ ಹಾಗೂ ಅಭ್ಯರ್ಥಿ ಪೂರ್ವದಲ್ಲಿ ತೆಗೆದುಕೊಂಡ ನಿರ್ಧಾರಗಳು, ಪ್ರಸ್ತುತದಲ್ಲಿನ ನಿಲುವುಗಳು ಎಲ್ಲವನ್ನೂ ಕೂಲಂಕಷವಾಗಿ ಯೋಚಿಸಿ ಮತದಾನದ ಸಮಯದಲ್ಲಿ ಪರಿಗಣಿಸಬೇಕು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರನ್ನೂ ಸಂಪೂರ್ಣವಾಗಿ ಸರಿ ಅಥವಾ ತಪ್ಪು ಎಂದು ನಿರ್ಧರಿಸಲು ಬರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಮತ ಚಲಾಯಿಸದೇ ಇರುವುದು ಅಥವಾ ನೋಟಾ (None of the Above) ಬಳಕೆ ಆಯ್ಕೆಯಲ್ಲಿರುವ ಅಭ್ಯರ್ಥಿಗಳ ಪೈಕಿ ಪರಿಣಾಮಕಾರಿಯಲ್ಲದವನಿಗೇ ಸಹಾಯಕವಾಗುತ್ತದೆ. ರಾಷ್ಟ್ರೀಯ ಹಿತಚಿಂತನೆಯನ್ನಷ್ಟೇ ಮನದಲ್ಲಿರಿಸಿಕೊಂಡು ಶೇಕಡಾ ೧೦೦ರಷ್ಟು ಮತದಾನದ ಅವಶ್ಯಕತೆ ಇಂದು ನಮ್ಮ ಮುಂದಿದೆ. ಭಾರತದ ಚುನಾವಣಾ ಆಯೋಗವೂ ಶೇಕಡಾ ನೂರರ ಮತದಾನವನ್ನಷ್ಟೇ ಅಲ್ಲದೇ ನೈತಿಕ ಮತದಾನವನ್ನು ಅಪೇಕ್ಷಿಸುತ್ತದೆ ಹಾಗೂ ಆ ನಿಟ್ಟಿನಲ್ಲಿ ನಾಗರೀಕರಿಗೆ ಮನವಿ ಮಾಡಿಕೊಳ್ಳುತ್ತದೆ. ಆರೆಸ್ಸೆಸ್ ನ ಸ್ವಯಂಸೇವಕರು ಎಂದಿಗೂ ನಾಗರೀಕರಾಗಿ ನೈತಿಕ ಮತದಾನದ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ ಹಾಗೂ ಈ ಬಾರಿಯೂ ಅಂತಹದ್ದೇ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ.

ಆರೆಸ್ಸೆಸ್ಸಿನ ಸ್ಥಾಪನೆಯಾದಾಗಿನಿಂದಲೂ ಸಂಘ ಪಕ್ಷ ರಾಜಕೀಯದಿಂದ ಹಾಗೂ ಜಾತಿ,ಪಂಗಡಗಳ ರಾಜಕಾರಣದಿಂದ ದೂರವೇ ಉಳಿದುಕೊಂಡಿದೆ. ಮುಂದೆಯೂ ಆ ಸಂಕಲ್ಪವನ್ನು ಹಾಗೆಯೇ ಇರಿಸಿಕೊಳ್ಳುತ್ತದೆ. ಆದರೆ ಇದರ ಜೊತೆ ದೇಶದ ಮೂಲೆ ಮೂಲೆಯಲ್ಲಿರುವ ನಮ್ಮೆಲ್ಲಾ ಸ್ವಯಂಸೇವಕರಿಗೆ ಕರೆ ನೀಡುವುದೇನೆಂದರೆ ಎಲ್ಲರೂ ರಾಷ್ಟ್ರದ ಚಿಂತನೆಯ ಪ್ರಮುಖ ಗುರಿಯನ್ನು ಮನದಲ್ಲಿರಿಸಿಕೊಂಡು ನೈತಿಕ ಮತದಾನ ಹಾಗೂ ಕಡ್ಡಾಯ ಮತದಾನ ಮಾಡಿ ತಮ್ಮ ಶಕ್ತಿಯನ್ನು ರಾಷ್ಟ್ರಹಿತಕ್ಕಾಗಿ ವಿನಿಯೋಗಿಸಬೇಕು.

ಮನವಿ

ದೇಶದ ’ಸ್ವ’ ಎಂಬ ವಿಶಿಷ್ಟ ಸಂಗತಿಯ ಆಧಾರದ ಮೇಲೆ ಪ್ರಬಲ, ಸಾತ್ವಿಕ, ಸಂಘಟಿತ ಸಮಾಜದ ಉಳಿವು ರಾಷ್ಟ್ರದ ಒಳಿತಿಗೆ ಪೂರ್ವಾಪೇಕ್ಷಿತ ಮತ್ತು ಮೂಲಭೂತ ಧಾತು. ಈ ಅಸ್ಮಿತೆಯನ್ನೇ ಹಿಂದೂ ಅಸ್ಮಿತೆ ಎಂದು ಕರೆಯಲಾಗಿದೆ ಹಾಗೂ ಅದು ಬೋಧಿಸುವುದು ಎಲ್ಲರನ್ನೂ ಗೌರವಿಸುವುದು, ಎಲ್ಲರನ್ನೂ ಸ್ವೀಕರಿಸುವುದು, ಎಲ್ಲರನ್ನೂ ಒಗ್ಗೂಡಿಸುವುದು ಹಾಗೂ ಎಲ್ಲರಿಗೂ ಒಳಿತನ್ನೇ ಬಯಸುವುದು. ಸಂಘ ಬಯಸುವುದೂ ಅಂತಹದ್ದೇ ಸಶಕ್ತ, ಅಜೇಯ ಸಂಘಟಿತ ಹಿಂದು ಸಮಾಜ ಹಾಗೂ ಆ ಗುರಿಯನ್ನು ಸಂಪೂರ್ಣವಾಗಿ ಸಾಧಿಸುತ್ತದೆಂಬ ಅಚಲ ವಿಶ್ವಾಸವಿದೆ. ಸಮಾಜದ ವರ್ಗಗಳಲ್ಲಿ ಕೆಲವು ತಮ್ಮನ್ನು ತಾವು ಜಾತಿ, ಆಚಾರ, ಜೀವನ ಪದ್ಧತಿಯಿಂದ ಪ್ರತ್ಯೇಕಗೊಳಿಸಿಕೊಂಡು ಹಿಂದೂ ಎಂದು ಕರೆದುಕೊಳ್ಳಲು ಅಳುಕು ತೋರುವವರು ಅರ್ಥಮಾಡಿಕೊಳ್ಳಬೇಕಾದ ಸತ್ಯವೇನೆಂದರೆ ಹಿಂದುತ್ವವೆಂಬುದು ನಮ್ಮ ದೇಶದಲ್ಲಿರುವ ಸನಾತನ ಲಕ್ಷಣ. ಹಿಂದುತ್ವದ  ಮೂಲ ಸತ್ತ್ವವನ್ನು ಕಾಪಾಡಿಕೊಂಡು ಸನಾತನ ಮೌಲ್ಯಗಳನ್ನು ಉಳಿಸಿಕೊಂಡು ಕಾಲಕಾಲಕ್ಕೆ ಬದಲಾಗುತ್ತಾ, ತಕ್ಕುದಾದ ನಿರ್ಧಾರಗಳನ್ನು ತೆಗೆದುಕೊಂಡಿದೆ ಹಾಗೂ ಮುಂದೆಯೂ ತೆಗೆದುಕೊಳ್ಳುತ್ತದೆ. ಹಿಮಾಲಯದಿಂದ ಹಿಡಿದು ದಕ್ಷಿಣದ ಸಮುದ್ರದವರೆಗೆ ಹಿಂದುತ್ವವೆಂಬುದೊಂದು ಸ್ವಾಭಾವಿಕ ಅಸ್ಮಿತೆ. ಭಾರತದ ಶ್ರೀಮಂತ ಸಂಸ್ಕೃತಿಯಲ್ಲಿ ಭಾರತೀಯರೆಲ್ಲರೂ ಮಿಂದೇಳಬೇಕು ಎಂಬುದು ಸಂಘದ ಪ್ರಾಮಾಣಿಕ ಮನವಿ. ನಮ್ಮಲ್ಲಿ ಬಂದಿರುವ ಪರಂಪರೆಗಳ, ದರ್ಶನಗಳ ಮೂಲವಿರುವುದು ಸನಾತನ ಗುಣಲಕ್ಷಣಗಳಿಂದಲೇ. ನಮ್ಮ ಪೂರ್ವಜರು ಹಾಗೂ ಜನ್ಮ ತಳೆದ ಮಹಾನ್ ಪುರುಷರು ಸಮಾಜವನ್ನು ಪೋಷಿಸುತ್ತ ಬಂದಿದ್ದಾರೆ. ಭಾರತ ವಿಶ್ವದ ಎಲ್ಲ ವಿಭಿನ್ನ ವಿವಿಧತೆಗಳನ್ನು ಸ್ವೀಕರಿಸುತ್ತಿರುವುದು ಹಿಂದುತ್ವದ ಅಸ್ಮಿತಿಯಿಂದಾಗಿಯೇ. ಆದ್ದರಿಂದಲೇ ಭಾರತ ಹಿಂದೂ ರಾಷ್ಟ್ರವೆನಿಸಿಕೊಳ್ಳುತ್ತದೆ.  ನಮ್ಮ ದೇಶದ ಏಕತೆ, ಏಕಾತ್ಮತೆಯ ತಳಪಾಯವೇ ಸಂಘಟಿತ ಹಿಂದೂ ಸಮಾಜ. ನಮ್ಮ ನಡುವೆ ಕಾಣುವ ಮೂಲಭೂತವಾದ, ಕ್ಷುಲ್ಲಕ ಸ್ವರ್ಥ, ಉಪಭೋಗ, ಭೌತಿಕತೆಗಳೆಂಬ ಪಿಡುಗುಗಳಿಗೆ ಮದ್ದಾಗಿರುವುದು ಸನಾತನ ಹಿಂದೂ ಧರ್ಮದ ಗುಣ ಲಕ್ಷಣಗಳು. ಆದ್ದರಿಂದ ಹಿಂದೂಗಳನ್ನು ಸಂಘಟಿಸುವ ಕಾರ್ಯ ವಿಶ್ವಕ್ಕೆ ಒಳಿತನ್ನಷ್ಟೇ ಮಾಡಬಲ್ಲುದು. ಭಾರತದ ಕಲ್ಯಾಣ, ಮಾನವೀಯತೆಯ ಕಲ್ಯಾಣವೂ ಈ ಸಂಘಟಿತ ಕಾರ್ಯದಿಂದ ಸಾಧ್ಯ.

ಸಂಘದ ಹಾಗೂ ಸ್ವಯಂಸೇವಕರ  ಈ ಪವಿತ್ರ ಕೆಲಸದಲ್ಲಿ ಕೈ ಜೋಡಿಸಿ ಸಹಯೋಗವಷ್ಟೇ ಅಲ್ಲದೇ ಸಹಭಾಗಿಗಳೂ ಆಗಿ ಭಾರತವನ್ನು ವಿಶ್ವಗುರುವನ್ನಾಗಿಸುವ ಕಾರ್ಯದಲ್ಲಿ ನಿಸ್ವಾರ್ಥರಾಗಿ ತೊಡಗಿಸಿಕೊಳ್ಳೋಣವೆಂಬುದು ಸಂಘದ ಮನವಿ.

 

Leave a Reply

Your email address will not be published.

This site uses Akismet to reduce spam. Learn how your comment data is processed.