ವಿಜಯಪುರ: ಪ್ರತಿ ಮಗುವಿಗೂ ಶಿಕ್ಷಣ ಸಿಗುವಂತಾಗಬೇಕು. ಬಾಲ್ಯದಲ್ಲಿ ಉತ್ತಮ ಸಂಸ್ಕಾರ ದೊರೆತಾಗ ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದು ಲೋಕಹಿತ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಧರ ನಾಡಗೀರ ಹೇಳಿದರು.
ನಗರದ ಕುಷ್ಠ ರೋಗಿ ಬಂಧುಗಳ ಮಹಾತ್ಮ ಗಾಂಧಿ ಬಡಾವಣೆಯಲ್ಲಿ ಸೇವಾ ಭಾರತಿ ಮತ್ತು ಲೋಕಹಿತ ಟ್ರಸ್ಟ್ ನ ನೂತನ ” ನಂದಗೋಕುಲ ಶಿಶು ಮಂದಿರ ” ದ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಬುದ್ಧಿ, ಭಾವನೆ, ಶರೀರ ಮತ್ತು ಆತ್ಮ ವಿಕಾಸವಾಗಲು ಶಿಕ್ಷಣ ಅಗತ್ಯವಾಗಿದೆ. ಪ್ರತಿ ಮಗುವಿಗೂ ಉತ್ತಮ ಪರಿಸರ ದೊರೆತಾಗ ಮಗುವಿನ ವ್ಯಕ್ತಿತ್ವ ವಿಕಸನವಾಗಲು ಸಾಧ್ಯವೆಂದರು.
ಈಗ ಕುಷ್ಠ ರೋಗ ಮುಕ್ತವಾದರೂ, ಕುಷ್ಠ ರೋಗ ಪೀಡಿತ ನಿರೋಗಿ ಮಕ್ಕಳಿಗೆ ಶಿಕ್ಷಣ ನೀಡುವುದು, ಅವರನ್ನು ಸಂಸ್ಕಾರವಂತ ನಾಗರೀಕರನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು. ಅತಿಥಿ ನಿವೃತ್ತ ಅಭಿಯಂತರ ಚಂದ್ರಶೇಖರ ವಾರದ ಮಾತನಾಡಿ ಸೇವಾ ಭಾರತಿ ಮತ್ತು ಲೋಕಹಿತ ಟ್ರಸ್ಟ್ ನ ಈ ಸಮಾಜ ಸೇವಾ ಕಾರ್ಯದಲ್ಲಿ ನಾವೆಲ್ಲರೂ ತನುಮನಧನಗಳಿಂದ ಸಹಕರಿಸ ಬೇಕೆಂದರು.
ನಂದಗೋಕುಲ ಶಿಶು ಮಂದಿರದ ಅಧ್ಯಕ್ಷ ರಾಮಸಿಂಗ ಹಜೇರಿ ಮಾತನಾಡಿ ಈ ಶಿಶು ಮಂದಿರದಲ್ಲಿ ಶಿಕ್ಷಣ ದ ಜೊತೆಗೆ ಸಂಸ್ಕೃತಿ, ಸಂಸ್ಕಾರ ನೀಡುವ ಕಾರ್ಯ ಮಾಡಲಾಗುವುದು. ಬಡಾವಣೆಯ ಎಲ್ಲರೂ ಸಹಯೋಗ ನೀಡಬೇಕು ಎಂದರು. ಉಪಾಧ್ಯಕ್ಷೆ ಸುನಂದಾ ತೋಳಬಂದಿ, ಡಾ. ಜ. ಶಂ. ಹಿರೇಮಠ, ರಾವಸಾಹೇಬ, ಡಾ. ಸಂಜೀವ ಜೋಶಿ, ವಿಕಾಸ ಪದಕಿ, ಸತೀಶ್ ತೋಶ್ನಿವಾಲ, ಪ್ರೇಮಾನಂದ ಕತ್ನಳ್ಳಿ, ಶಿವಾನಂದ ನೇಕಾರ, ಶ್ರೀರಾಮ ಮಾಳಿ ಇತರರು ಉಪಸ್ಥಿತರಿದ್ದರು. ಶಿಶು ಮಂದಿರ ದ ಕಾರ್ಯದರ್ಶಿ ಸಿದ್ದು ಕರಲಗಿ ನಿರೂಪಿಸಿದರು.