– ರಾಜೇಶ್ ಪದ್ಮಾರ್

ರಾಷ್ಟ್ರೀಯ ವಿಚಾರಗಳ ಪ್ರಸರಣದೊಂದಿಗೆ ಲಕ್ಷಾಂತರ ಓದುಗರಲ್ಲಿ ಸಾಮಾಜಿಕ ಹಾಗೂ ವೈಚಾರಿಕ ಜಾಗೃತಿ ಮೂಡಿಸುತ್ತಿರುವ ಕನ್ನಡ ವಾರಪತ್ರಿಕೆ ‘ವಿಕ್ರಮ’ಕ್ಕೆ ಇಂದು 2023ರ ಗುರುಪೂರ್ಣಿಮೆಯ ಶುಭದಿನದಂದು 75 ವರ್ಷಗಳನ್ನು ಪೂರೈಸಿದ ಅಮೃತ ಸಂಭ್ರಮ.

1948ರ ಜುಲೈ 22ರ ಗುರುಪೂರ್ಣಿಮೆಯಂದು ಪ್ರಾರಂಭಗೊಂಡ ವಿಕ್ರಮ ವಾರಪತ್ರಿಕೆಯು ಕಳೆದ 75 ವರ್ಷಗಳ ನಿರಂತರ ಅಕ್ಷರ ಸೇವೆಯಲ್ಲಿ ತಲ್ಲೀನವಾಗಿದ್ದು, ತನ್ನದೇ ಆದ ವಿಶಿಷ್ಟ ಓದುಗ ಬಳಗವನ್ನು ಹೊಂದಿದೆ. ರಾಷ್ಟ್ರೀಯ ವಿಚಾರದ ಲೇಖನಗಳು, ವಿವಿಧ ಅಂಕಣಗಳು, ವಿಶ್ಲೇಷಣೆಗಳು, ವಿಶೇಷ ಸಂಚಿಕೆಗಳು ಸೇರಿದಂತೆ ಬಹುಮುಖದ ವೈಚಾರಿಕ ಮಾಹಿತಿಗಳನ್ನು ಓದುಗರಿಗೆ ತಲುಪಿಸುತ್ತಿದೆ. ಪ್ರತಿವರ್ಷದ ವಿಜಯದಶಮಿ ವಿಶೇಷಾಂಕ ವೈಶಿಷ್ಟ್ಯಪೂರ್ಣ ಸಂಚಿಕೆಗಳಲ್ಲೊಂದು, ಓದುಗರ ಮನೆಮಾತು.

ದೃಷ್ಟಿ – ಧ್ಯೇಯ:
1948 ರ ತನ್ನ ಚೊಚ್ಚಲ ಸಂಚಿಕೆಯಲ್ಲೇ ವಿಕ್ರಮ ಪತ್ರಿಕೆಯು ತನ್ನ ಉದ್ದೇಶವನ್ನು ಸ್ಪಷ್ಟ ಪಡಿಸಿತ್ತು. “ನಿಜವಾದ ರಾಷ್ಟ್ರಜಾಗೃತಿ ಉಂಟು ಮಾಡುವುದು ಹಾಗೂ ದೇಶದ ಇಂದಿನ ವಾಸ್ತವಿಕ ಸ್ಥಿತಿಯ ಅರಿವು ಉಂಟುಮಾಡಿ ಹಾಗೂ ಜನರಲ್ಲಿ ಕರ್ತವ್ಯಜ್ಞಾನ ಉಂಟು ಮಾಡುವುದೇ ನಮ್ಮ ಪವಿತ್ರ ಕರ್ತವ್ಯವೆಂದು ಭಾವಿಸುತ್ತೇವೆ. ನಮ್ಮ ರಾಷ್ಟ್ರವನ್ನು ಅಮರವಾಗಿ ವಿಶ್ವದಲ್ಲಿ ತಲೆಯೆತ್ತಿ ಮೆರೆಯುವಂತೆ ಮಾಡಬಲ್ಲ ಏಕಮಾತ್ರ ಸಂಜೀವಿನಿ ಎಂದರೆ ಅಜೇಯ ರಾಷ್ಟ್ರಶಕ್ತಿ.”

“ವಿಕ್ರಮವು ತನ್ನ ಜನ್ಮದ ಉದ್ದೇಶವಾಗಿಯೇ ಭಾವಿಸಿ ಯಾವ ಧ್ಯೇಯವನ್ನು ಹೊತ್ತು ಹೊರಟಿತೋ, ಅದು ಸಾಕಾರಗೊಳ್ಳುವ ಸಂಕೇತವಾಗಿ ಒಂದೆರಡು ಹೊಂಗಿರಣಗಳು ಭಾರತದ ಮೂಡಣದಲ್ಲಿ ತನ್ನ ಸ್ವರ್ಣ ಜಯಂತಿಯ ಸಂದರ್ಭದಲ್ಲಿ ಕಾಣಲು ಸಾಧ್ಯವಾಗಿರುವುದು ಅದರ ಸೌಭಾಗ್ಯ” ಎಂದು ಜ್ಯೇಷ್ಠ ಪ್ರಚಾರಕರಾಗಿದ್ದ ಹೊ.ವೆ.ಶೇಷಾದ್ರಿಯವರು 1998 ರ ಸಂದರ್ಭದಲ್ಲಿ ವಿಕ್ರಮ ಪ್ರಕಟಿಸಿದ ಸ್ವರ್ಣ ಜಯಂತಿ ವಿಶೇಷ ಸಂಚಿಕೆಯಲ್ಲಿ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದರು.

ಮೊತ್ತಮೊದಲ ಸಂಪಾದಕೀಯದಲ್ಲಿಯೇ ತನ್ನ ದೃಷ್ಟಿ – ಧ್ಯೇಯವನ್ನು ಉದ್ಘೋಷಿಸಿದ ವಿಕ್ರಮವು “ಯಾವುದೇ ಘೋಷಣೆ ಪ್ರಚಾರಗಳಿಂದಲೂ ಪ್ರಭಾವಿತರಾಗದೆ ಎಂತಹ ಪ್ರಕ್ಷುಬ್ಧ ವಾತಾವರಣದಲ್ಲೂ ಅವಿಚಲರಾಗಿ ನಿಂತು, ಪ್ರಕಾಶ ನೀಡಬಲ್ಲ, ನಂದಾದೀಪದಂತೆ ಇರಬೇಕೆಂದೇ ನಮ್ಮ ನಿಶ್ಚಯ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು.

‘ಸ್ವಯಮೇವ ಮೃಗೇಂದ್ರತಾ’ ಎನ್ನುವ ಲಾಂಛನ ವಾಕ್ಯವನ್ನು ಹೊತ್ತಿರುವ ವಿಕ್ರಮ ವಾರ ಪತ್ರಿಕೆಯು ‘ಉಜ್ವಲ ರಾಷ್ಟ್ರೀಯ ಕನ್ನಡ ವಾರಪತ್ರಿಕೆ’ ಎಂಬ ಅಡಿ ಶೀರ್ಷಿಕೆಯನ್ನು ಹೊಂದಿದೆ. ವಿಕ್ರಮ ಪ್ರಕಾಶನದಿಂದ ದೀರ್ಘಕಾಲ ಪ್ರಕಟಗೊಳ್ಳುತ್ತಿದ್ದ ವಿಕ್ರಮ ಇದೀಗ ಜ್ಞಾನಭಾರತಿ ಪ್ರಕಾಶನದ ವತಿಯಿಂದ ಮುದ್ರಿತವಾಗುತ್ತಿದೆ.

ವಿಕ್ರಮದ ಮೈಲಿಗಲ್ಲುಗಳು:
1948ರ ಜುಲೈ22ರಂದು ವಿಕ್ರಮ ವಾರಪತ್ರಿಕೆ ಪ್ರಾರಂಭಗೊಂಡಾಗ ಎಂಟು ಪುಟಗಳ ಪತ್ರಿಕೆಯ ಬೆಲೆ ಎರಡಾಣೆ. ಬೆಂಗಳೂರಿನ ಸುಲ್ತಾನಪೇಟೆಯಲ್ಲಿ ವಿಕ್ರಮ ಕಾರ್ಯಾಲಯ ಪ್ರಾರಂಭ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಅದಾಗಲೇ ಗಾಂಧೀ ಹತ್ಯೆಯ ಮಿಥ್ಯಾರೋಪದ ಹಿನ್ನೆಲೆಯಲ್ಲಿ ನಿಷೇಧಿಸಲ್ಪಟಿತ್ತು. ಅಹಿಂಸಾತ್ಮಕ ಸತ್ಯಾಗ್ರಹ ಹೋರಾಟಕ್ಕೆ ಕರೆ ನೀಡಲಾಗಿತ್ತು. ಈ ಸತ್ಯಾಗ್ರಹದ ಸುದ್ದಿ ಹೊಂದಿರುವ ಒಂದು ಹಾಳೆಯ ಪುರವಣಿ ಪ್ರಕಟವಾಯಿತು. ಇದನ್ನೇ ನೆಪವನ್ನಾಗಿಸಿ ವಿಕ್ರಮ ಪತ್ರಿಕೆಯ ಪ್ರಕಟಣೆಯನ್ನು ನಿಷೇಧಿಸಲಾಯಿತು. ನಂತರ ನಿಷೇಧ ಹಿಂತೆಗೆದ ಮೇಲೆ 1948 ಅಕ್ಟೋಬರ್ 25ರಂದು ಅಶ್ವಯುಜ ಶುದ್ಧ ತದಿಗೆಯ ದಿನ ಮತ್ತೆ ವಿಕ್ರಮ ಪುನರಾರಂಭಗೊಂಡಿತು. ಅದೇ ಸಂದರ್ಭದಲ್ಲಿ ವಿಕ್ರಮದ ಕಚೇರಿಯು ಚಾಮರಾಜಪೇಟೆಯ ಎರಡನೇ ಮುಖ್ಯರಸ್ತೆಯಲ್ಲಿನ ಬಾಡಿಗೆ ಕಟ್ಟಡವೊಂದರಲ್ಲಿ ಕಾರ್ಯ ನಿರ್ವಹಿಸಲಾರಂಭಿಸಿತು. 1948ರ ಡಿಸೆಂಬರ್ 9 ರಂದು ವಿಕ್ರಮದ ಮುಖಪುಟದಲ್ಲಿ ಗೀತೋಪದೇಶದ ಚಿತ್ರ.

ಆರಂಭದಿಂದಲೂ ಪ್ರೇರಕ ಶಕ್ತಿ ಆಗಿನ ಕರ್ನಾಟಕ ಪ್ರಾಂತ ಪ್ರಚಾರಕರಾಗಿದ್ದ ಯಾದವ್ ರಾವ್ ಜೋಷಿ. 1953ರ ಸಂದರ್ಭದಲ್ಲಿ ಸಂಘದ ಯೋಜನೆಯಂತೆ ವಿಕ್ರಮದ ಸಂಪಾದಕರಾಗಿ ಬಂದವರು ಬೆಳುವಾಯಿ ಸುಬ್ರಾಯ ನಾರಾಯಣ ಮಲ್ಯರು, ಸುದೀರ್ಘಕಾಲ ಪತ್ರಿಕೆಯ ಸಾರಥ್ಯವಹಿಸಿದರು. ಬ್ಯಾಂಕ್‌ನ ನೌಕರಿಗೆ ರಾಜೀನಾಮೆ ಕೊಟ್ಟು ವಿಕ್ರಮಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟ ಬೆ. ಸು. ನಾ ಎಂದೇ ಪ್ರಖ್ಯಾತರಾದ ಬೆಳುವಾಯಿ ಸುಬ್ರಾಯ ನಾರಾಯಣ ಮಲ್ಯರು 1953ರಿಂದಲೇ, ರಾಜ್ಯಾದ್ಯಂತ ಸಂಚರಿಸಿ ವಿಕ್ರಮ ವಾರಪತ್ರಿಕೆಯು ಕರ್ನಾಟಕದಾದ್ಯಂತ ವಿಸ್ತರಿಸುವ ಯೋಜನೆ ಕೈಗೊಂಡು ತಮ್ಮ ಕೌಶಲ್ಯ, ಕಾರ್ಯಶೀಲತೆ, ದಕ್ಷತೆಯಿಂದ ವಿಕ್ರಮದ ಬೇರುಗಳನ್ನು ಗಟ್ಟಿಗೊಳಿಸಿದರು.

1955ರಲ್ಲಿ ವಿಕ್ರಮ ಪ್ರಕಾಶನ ಟ್ರಸ್ಟ್ ಪ್ರಾರಂಭಗೊಂಡಿತು. ವಿಕ್ರಮ ಕಚೇರಿ, ಪತ್ರಿಕೆಯ ಮುದ್ರಣ, ಪ್ರಸರಣ, ನಿರ್ವಹಣೆ ಇತ್ಯಾದಿ ಚಟುವಟಿಕೆಗಳನ್ನು ವಿಕ್ರಮ ಪ್ರಕಾಶನ ಟ್ರಸ್ಟ್ ವಹಿಸಿಕೊಂಡಿತು. ಪ್ರಸ್ತುತ ಜ್ಞಾನಭಾರತಿ ಪ್ರಕಾಶನ ಲಿಮಿಟೆಡ್ ವತಿಯಿಂದ ವಿಕ್ರಮ ಪ್ರಕಾಶಿತಗೊಳ್ಳುತ್ತಿದೆ.

1963ರ ಯುಗಾದಿಯಂದು ವಿಕ್ರಮ ಕಚೇರಿ ಹಾಗೂ ಮುದ್ರಣಾಲಯವನ್ನು ಬೆಂಗಳೂರಿನ ಚಾಮರಾಜಪೇಟೆಯ 5ನೇ ಮುಖ್ಯ ರಸ್ತೆಯಲ್ಲಿರುವ ಈಗಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಹೊಸತನದೊಂದಿಗೆ ಮುದ್ರಣಾಲಯವು ದೊಡ್ಡದಾಯಿತು. ಪತ್ರಿಕೆ ವಿಸ್ತೃತವಾಗಿ ಬೆಳೆಯಲಾರಂಭಿಸಿತು.

ವಿಕ್ರಮದ ರಜತ ಮಹೋತ್ಸವ: 1973ರಲ್ಲಿ ವಿಕ್ರಮಕ್ಕೆ 25 ತುಂಬಿದ ರಜತ ಮಹೋತ್ಸವದ ಸಂಭ್ರಮದ ವರ್ಷ. 1973ರ ಸೆಪ್ಟೆಂಬರ್ 30ರಂದು ಬೆಂಗಳೂರಿನ ಗಾಯನ ಸಮಾಜದ ಸಭಾಂಗಣದಲ್ಲಿ ನಡೆದ ರಜತ ಮಹೋತ್ಸವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್, ತಿ ತಾ ಶರ್ಮಾ, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಾ. ನಾಡಿಗ್ ಕೃಷ್ಣಮೂರ್ತಿ ಸೇರಿದಂತೆ ನಾಡಿನ ಹಿರಿಯ ಚಿಂತಕರು, ಸಾಮಾಜಿಕ ಮುಖಂಡರು, ಅಪಾರ ಸಂಖ್ಯೆ ಅಭಿಮಾನಿ ಓದುಗರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿಕ್ರಮ ಏಜೆಂಟರ ಸಮ್ಮೇಳನವು ಮೊತ್ತ ಮೊದಲ ಬಾರಿಗೆ ನಡೆಯಿತು. ರಜತ ಜಯಂತಿ ವಿಜಯ ದಶಮಿ ವಿಶೇಷಾಂಕವು ಅತ್ಯಾಕರ್ಷಕವಾಗಿ ಮೂಡಿಬಂತು. ಆಗಷ್ಟೇ ನೂತನ ಸರಸಂಘಚಾಲಕರಾಗಿದ್ದ ಬಾಳಾ ಸಾಹೇಬ್ ದೇವರಸ್ ರ ಕುರಿತು, ಆ ವರ್ಷವೇ ನಿಧನರಾದ ಗುರೂಜಿ ಗೋಳ್ವಲ್ಕರ್‌ರ ಕುರಿತ ಲೇಖನ, ಜನಸಂಘದ ನೂತನ ಅಧಕ್ಷರಾದ ಲಾಲ್‌ಕೃಷ್ಣ ಅಡ್ವಾಣಿ ಸೇರಿದಂತೆ ಅನೇಕರ ಲೇಖನಗಳನ್ನೊಳಗೊಂಡ 400 ಪುಟದ ರಜತಜಯಂತಿ-ವಿಜಯದಶಮಿ ವಿಶೇಷಾಂಕವು ಚಂದಾದಾರ ಓದುಗರಿಗೆ ವಿಶೇಷ ರಿಯಾಯಿತಿ ದರ ಎರಡು ರೂಪಾಯಿ ಐವತ್ತು ಪೈಸೆಗೆ ತಲುಪಿತು. ದೀರ್ಘಕಾಲ ನೆನಪಿನಲ್ಲಿ ಉಳಿಯುವ ಸಂಗ್ರಹಯೋಗ್ಯ ಸಂಚಿಕೆಯಾಗಿ ಆ ಕಾಲಘಟ್ಟದಲ್ಲಿ ಆ ಸಂಚಿಕೆ ಮೂಡಿಬಂದಿದ್ದನ್ನು ಹಿರಿಯ ಓದುಗರೊಬ್ಬರು ಸ್ಮರಿಸಿಕೊಳ್ಳುತ್ತಾರೆ.

1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ‍್ಯವೂ ನಿರ್ಬಂಧಕ್ಕೊಳಗಾಗಿತ್ತು. ನಿರ್ಭೀತಿಯಿಂದ ರಾಷ್ಟ್ರೀಯ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದ ವಿಕ್ರಮ ವಾರಪತ್ರಿಕೆಯ ಮೇಲೂ ನಿರ್ಬಂಧದ ಕರಿಛಾಯೆ ಆವರಿಸಿತು, ವಿಕ್ರಮ ಕಚೇರಿಗೆ ಬೀಗ. ಸಂಪಾದಕರಿಗೆ ಜೈಲು. 18 ತಿಂಗಳುಗಳ ನಂತರ ವಿಕ್ರಮ ಮತ್ತೆ ಹೊಸ ಹುರಪಿನೊಂದಿಗೆ ಪ್ರಾರಂಭಗೊಂಡಿತು.

ಗಾಂಧೀ ಹತ್ಯೆಯ ಮಿಥ್ಯಾರೋಪದ ನಿಷೇಧದ ಬಳಿಕ 1949ರ ಸೆಪ್ಟೆಂಬರ್ 25ರ ಸಂಚಿಕೆಯಲ್ಲಿ ಅಗ್ನಿಯಲ್ಲಿ ಮಿಂದು ತೇಜಸ್ವಿಯಾಗಿ ಮಿಂದು ಹೊರಬಿದ್ದಿರುವ ವಿಕ್ರಮವು ರಾಷ್ಟ್ರಹಿತಕ್ಕಾಗಿ ಸಮಾಜದ ಮನೋವಿಕಾಸಕ್ಕಾಗಿ ಕಂಕಣಬದ್ಧವಾಗಿರುವುದಾಗಿ ಘೋಷಿಸಿ ಜನರ ಸಹಕಾರ ಹಸ್ತಕ್ಕಾಗಿ ಕರೆ ಕೊಟ್ಟಿದ್ದನ್ನು ಹೊ. ವೆ. ಶೇಷಾದ್ರಿಯವರು ವಿಕ್ರಮ ಸ್ವರ್ಣಜಯಂತಿ ಲೇಖನವೊಂದರಲ್ಲಿ ಉಲ್ಲೇಖಿಸಿದ್ದರು.

ಸ್ವರ್ಣಮಹೋತ್ಸವ ಸಂಚಿಕೆ: 1998ನೇ ಇಸವಿ ವಿಕ್ರಮ ಪತ್ರಿಕೆಗೆ 50 ವರ್ಷ ತುಂಬಿದ ಸ್ವರ್ಣಜಯಂತಿಯ ಸಂತಸದ ವರ್ಷ. ಸೆಪ್ಟಂಬರ್ 27, 1998ರಂದು ವರ್ಣರಂಜಿತ ವಿಶೇಷ ಸಂಚಿಕೆಯನ್ನು ತರಲಾಯಿತು. ಹೊ.ವೆ.ಶೇಷಾದ್ರಿಯವರು, ಕೃ.ಸೂರ್ಯನಾರಾಯಣ ರಾವ್ ಸೇರಿದಂತೆ ಅನೇಕ ಮಹನೀಯರ ಲೇಖನಗಳು ಈ ಸಂಚಿಕೆಯಲ್ಲಿ ಒಳಗೊಂಡಿತ್ತು. 2008ರಲ್ಲಿ ವಿಕ್ರಮಕ್ಕೆ 60 ವರ್ಷ ತುಂಬಿದ ಸಂದರ್ಭದಲ್ಲಿ ಕರ್ನಾಟಕವನ್ನು ಪ್ರಭಾವಿಸಿದ 60 ಸಂಗತಿಗಳ ಕುರಿತು ವಿಶೇಷ ಸಂಚಿಕೆಯನ್ನು ಹೊರತರಲಾಗಿತ್ತು. 2018ರಲ್ಲಿ 70 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಕ್ರಮದ ವಿಶೇಷ ಸಂಚಿಕೆ ಅತ್ಯಾಕರ್ಷಕವಾಗಿ ಮೂಡಿಬಂದಿತ್ತು. ಇದೀಗ 74 ವಸಂತಗಳನ್ನು ಪೂರೈಸಿ ಲೇಖನ ವೈವಿಧ್ಯ ಹಾಗೂ ವಿನ್ಯಾಸದ ನಾವೀನ್ಯತೆಯೊಂದಿಗೆ ಉತ್ಸಾಹದ ದೃಢ ಹೆಜ್ಜೆಯಿರಿಸುತ್ತಾ ಯುವತಂಡದ ಸಾರಥ್ಯದೊಂದಿಗೆ ಅತ್ಯುತ್ತಮವಾಗಿ ಮೂಡಿಬರುತ್ತಿದೆ.

ಯುಗಾದಿ-ವಿಜಯದಶಮಿ ವಿಶೇಷಾಂಕಗಳು: ಅತ್ಯಂತ ಜನಪ್ರಿಯವಾದ ಸಂಗ್ರಹಯೋಗ್ಯ ವಿಶೇಷಾಂಕಗಳು ವಿಜಯದಶಮಿಯ ಹಾಗೂ ಯುಗಾದಿಯ ಸಂದರ್ಭದಲ್ಲಿ ಮೂಡಿಬರುತ್ತವೆ. ಓದುಗರು ಸದಾ ಕಾತರದಿಂದ ಕಾಯುತ್ತಿರುವ ಈ ವಿಕ್ರಮದ ವಿಶೇಷಾಂಕಗಳಲ್ಲಿ ನಾಡಿನ ಖ್ಯಾತನಾಮ ಲೇಖಕರ ಲೇಖನಗಳು ಪ್ರಕಟವಾಗಿದೆ. ಕೋಟ ಶಿವರಾಮ ಕಾರಂತ, ಕೋ.ಚನ್ನಬಸಪ್ಪ, ತಿ.ತಾ.ಶರ್ಮ, ಹಾ.ಮಾ.ನಾಯಕ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಗೋಪಾಲಕೃಷ್ಣ ಅಡಿಗರು, ಸಾ.ಶಿ.ಮರುಳಯ್ಯ, ಎಚ್.ಎಸ್.ಲಕ್ಷ್ಮೀನಾರಾಯಣ, ವ್ಯಾಸರಾವ್, ಈಶ್ವರಚಂದ್ರ, ಎಂ.ಎಸ್. ನರಸಿಂಹಮೂರ್ತಿ, ಸುಬ್ರಾಯ ಚೊಕ್ಕಾಡಿ, ಹೆಚ್.ಎಸ್.ವೆಂಕಟೇಶ ಮೂರ್ತಿ, ಸುಬ್ಬು ಹೊಲೆಯಾರ್, ಡಾ.ಸಿದ್ಧಲಿಂಗಯ್ಯ, ನಿಸಾರ್ ಅಹಮದ್, ನಾ.ಡಿಸೋಜ, ಹೊ.ವೆ.ಶೇಷಾದ್ರಿ, ಚಂದ್ರಶೇಖರ ಭಂಡಾರಿ, ದು.ಗು.ಲಕ್ಷ್ಮಣ್, ವಿದ್ಯಾನಂದ ಶೆಣೈ, ಡಾ.ಉಪೇಂದ್ರ ಶೆಣೈ, ಚಕ್ರವರ್ತಿ ಸೂಲಿಬೆಲೆ, ರಾಮಾಜೋಯಿಸ್, ಬಾಬು ಕೃಷ್ಣಮೂರ್ತಿ, ನಾರಾಯಣ ಶೇವಿರೆ ಸೇರಿದಂತೆ ಅನೇಕರ ಲೇಖನಗಳು, ಕವಿತೆ-ಕಥೆಗಳು ಪ್ರಕಟವಾಗಿವೆ. ಸ್ವಾಮಿ ಹರ್ಷಾನಂದರು, ಪೇಜಾವರ ಶ್ರೀ ವಿಶ್ವೇಶತೀರ್ಥರು ಸೇರಿದಂತೆ ಅನೇಕರ ಸಂದರ್ಶನಗಳು ಪ್ರಕಟವಾಗಿವೆ.
2021ರ ವಿಕ್ರಮ ವಿಜಯದಶಮಿ ವಿಶೇಷಾಂಕವು ಅತ್ಯುತ್ತಮವಾಗಿ ಮೂಡಿಬಂದಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ವಿಕ್ರಮ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.

ನೂತನ ಕಟ್ಟಡ-ಹೊಸ ಸ್ವರೂಪ: ವಿಕ್ರಮಕ್ಕೆ ಹೊಸಕಟ್ಟಡ ಹಾಗೂ ವಿಸ್ತೃತ ಕಚೇರಿಯ ಅಗತ್ಯ ಮನಗಂಡು ಹಳೇಕಟ್ಟಡದ ಜಾಗದಲ್ಲೇ ನೂತನ ಕಟ್ಟಡದ ನಿರ್ಮಾಣದ ಯೋಜನೆ ರೂಪಿಸಲಾಯಿತು. ಆಗಸ್ಟ್ 24, 2011ರಂದು ನಡೆದ ನೂತನ ಕಟ್ಟಡದ ಭೂಮಿಪೂಜನ ಕಾರ್ಯಕ್ರಮದಲ್ಲಿ ಜ್ಯೇಷ್ಠ ಪ್ರಚಾರಕರಾದ ನ.ಕೃಷ್ಣಪ್ಪನವರು ಹಾಗೂ ಮೈ.ಚ.ಜಯದೇವರು ಪಾಲ್ಗೊಂಡಿದ್ದರು.
ಜುಲೈ 7, 2013ರಂದು ಚಾಮರಾಜಪೇಟೆಯ 5ನೇ ಮುಖ್ಯರಸ್ತೆಯಲ್ಲಿ ಹೊಸ ಕಟ್ಟಡವು ಉದ್ಘಾಟನೆಗೊಂಡಿತು. ಹೆಚ್ಚು ಸೌಲಭ್ಯ, ಅತ್ಯುತ್ತಮ ಕಚೇರಿ ಹೊಂದಿರುವ ನೂತನ ಕಟ್ಟಡವನ್ನು ನಿವೃತ್ತ ನ್ಯಾಯಮೂರ್ತಿ ರಾಮಾಜೋಯಿಸ್ ಉದ್ಘಾಟಿಸಿದ್ದರು. 2015ರಿಂದ ಅದುವರೆಗೆ ಟ್ಯಾಬ್ಲಾಯ್ಡ್ ಸ್ವರೂಪದಲ್ಲಿ ಬರುತ್ತಿದ್ದ ವಿಕ್ರಮ ವಾರಪತ್ರಿಕೆಯು ಇದೀಗ ಮ್ಯಾಗಜಿನ್ ಸ್ವರೂಪದಲ್ಲಿ ಪ್ರಕಟವಾಗುತ್ತಿದೆ. ಆಕರ್ಷಕ ಪುಟವಿನ್ಯಾಸ, ನವೀನ ತಂತ್ರಜ್ಞಾನ, ಸುಸಜ್ಜಿತ ಕಚೇರಿ, ಯುವ ಪ್ರತಿಭಾವಂತ ತಂಡದೊಂದಿಗೆ ಅಮೃತಮಹೋತ್ಸವ ಸಂಭ್ರಮದ ವರ್ಷಲ್ಲಿ ‘ವಿಕ್ರಮ’ ಕಾರ‍್ಯನಿರ್ವಹಿಸುತ್ತಿದೆ.

ಇತರೆ ಚಟುವಟಿಕೆಗಳು: ಕಾಲೇಜು ವಿದ್ಯಾರ್ಥಿಗಳಿಗೆ ಪತ್ರಲೇಖನ ಕಾರ್ಯಾಗಾರ, ಯುವ ಬರಹಗಾರರಿಗೆ ಮಾಧ್ಯಮ ಕಾರ್ಯಾಗಾರ, ಹಿರಿಯ ಸಾಧಕರು ಹಾಗೂ ಗಣ್ಯವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಓದುಗರ ಸಮಾವೇಶ ಕಾರ್ಯಕ್ರಮಗಳು ಸೇರಿದಂತೆ ಅನೇಕ ಚಟುವಟಿಕೆಗಳ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿಜಯನಗರ ಸಾಮ್ರಾಜ್ಯ, ಸಾಂಸ್ಕೃತಿಕ ನಗರಿ ಮೈಸೂರು, ಮಲೆನಾಡಿನ ರಾಜಪರಂಪರೆ, ಡಾ. ಬಿ.ಆರ್. ಅಂಬೇಡ್ಕರ್ ವಿಚಾರಗಳು, ಕಿತ್ತೂರು ಕರ್ನಾಟಕ ಸೇರಿದಂತೆ ವಿವಿಧ ವಿಷಯ-ಪ್ರದೇಶಗಳ ಐತಿಹಾಸಿಕ-ಸಾಮಾಜಿಕ ಮಹತ್ವಗಳ ಕುರಿತು ಕಾಫಿ ಟೇಬಲ್ ಪುಸ್ತಕಗಳನ್ನು ಹೊರತರಲಾಗಿದ್ದು ಅಪಾರ ಪ್ರಶಂಸೆಗೆ ಪಾತ್ರವಾಗಿದೆ.

ಜುಲೈ 11, 2022ರಂದು ಬೆಂಗಳೂರಿನ ಕೇಶವ ಕೃಪಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ| ಮೋಹನ್ ಭಾಗವತ್ ಅವರು ‘ವಿಕ್ರಮ-75’ ವಿಶೇಷ ಲಾಂಛನವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದ್ದರು.

ಇಂದು 75ನೇ ವಸಂತ ಪೂರೈಸಿರುವ ವಿಕ್ರಮ ಪತ್ರಿಕೆಗೆ ರಾಜ್ಯದ ನಾಡಿನ ಗಣ್ಯರು, ಚಿಂತಕರು, ಸಾಹಿತಿಗಳು, ಲೇಖಕರು ಶುಭ ಹಾರೈಸಿದ್ದಾರೆ.

ವಿಳಾಸ: ವಿಕ್ರಮ ವಾರಪತ್ರಿಕೆ 106, 5ನೇ ಮುಖ್ಯರಸ್ತೆ, ಚಾಮರಾಜಪೇಟೆ ಬೆಂಗಳೂರು – 560018
www.Vikrama.in
ವಾರ್ಷಿಕ ಚಂದಾ – ರೂ.750/- ಮಾಹಿತಿಗಾಗಿ 9900992210

(ಲೇಖಕರು ಪ್ರಾಂತ ಪ್ರಚಾರ ಪ್ರಮುಖರು, ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣ)

Leave a Reply

Your email address will not be published.

This site uses Akismet to reduce spam. Learn how your comment data is processed.