ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವದ ಹತ್ತಿರದಲ್ಲಿದೆ, ವಿಕ್ರಮ ತನ್ನ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಎರಡೂ ಸಂಘಟನೆಗಳು ಹಲವು ಪೀಳಿಗೆಗಳ ನಂತರವೂ ಯೌವನಾವಸ್ಥೆಯಲ್ಲಿದೆ. ಸದಾ ಯುವಾವಸ್ಥೆಯಲ್ಲಿರುವ ಯಾವುದೇ ಸಂಸ್ಥೆಗೆ ಅಂತ್ಯವಿಲ್ಲ ಎಂದು ಜ್ಞಾನಭಾರತಿ ಪ್ರಕಾಶನದ ಅಧ್ಯಕ್ಷ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.

ಬೆಂಗಳೂರಿನ ಶಂಕರಪುರದ ರಂಗರಾವ್ ರಸ್ತೆಯಲ್ಲಿರುವ ಉತ್ತುಂಗ ಸಭಾಭವನದಲ್ಲಿ ಸೋಮವಾರ ನಡೆದ ವಿಕ್ರಮ ಕನ್ನಡ ವಾರಪತ್ರಿಕೆಯ ಅಮೃತ ಸಂಭ್ರಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ವೈಚಾರಿಕ ವಿರೋಧಿಗಳು ನಾವು ಮಾತನಾಡುವುದಿಲ್ಲ ಎನ್ನುವ ಕಾರಣಕ್ಕೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುತ್ತಾರೆ. ಆದರೆ ನಮಗೂ ಮಾತನಾಡುವುದಕ್ಕೆ ಬರುತ್ತದೆ ಎಂದು ತಿಳಿಸಿದಾಗ ಸುಮ್ಮನಾಗುತ್ತಾರೆ. ವಿಕ್ರಮ ಅಂತಹ ವೈಚಾರಿಕ ವಿರೋಧಿಗಳಿಗೆ ತಲುಪುವಂತೆ ಆಗಬೇಕು. ಅದಕ್ಕಾಗಿ ಮೊದಲು ನಮ್ಮ ಮಿತ್ರವೃಂದದಲ್ಲಿರುವ ವೈಚಾರಿಕ ವಿರೋಧಿಗಳಿಗೆ ನಾವು ವಿಕ್ರಮವನ್ನು ತಲುಪಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಷ್ಟದ ದಿನಗಳಲ್ಲೇ ಆನಂದವನ್ನು ಕಂಡವರು ನಾವು. ಹಿಂದಿನವರ ಶ್ರಮದ ನೋವಿನಿಂದ ಲಭಿಸಿದ ಪ್ರತಿಫಲದ ಆನಂದದ ಆಧಾರದ ಮೇಲೆ ಮುಂದಡಿ ಇಡಬೇಕು. ವಿಕ್ರಮ ಹಿಂದಿಗಿಂತಲೂ ವಿಕಾಸಗೊಂಡಿದೆ, ಇನ್ನೂ ವಿಕಾಸ ಆಗಬೇಕಿದೆ. ವಿರೋಧವನ್ನು ಹತ್ತಿರಗೊಳಿಸಿ ದೃಢ ಸಮಾಜವನ್ನು ಕಟ್ಟುವುದಕ್ಕೆ ಸಹಕಾರಿಯಾಗುವ ವಿಚಾರಗಳ ಸಂವಾದಕ್ಕೆ ವಿಕ್ರಮ ವೇದಿಕೆಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿಂತಕ ಹಾಗೂ ಲೇಖಕ ರೋಹಿತ್ ಚಕ್ರತೀರ್ಥ ಮಾತನಾಡಿ ಮಾಹಿತಿಯ ಜೊತೆಗೆ ಜ್ಞಾನವನ್ನು ಕೊಡುವ ಮೂಲಕ ರಾಜ್ಯದ ಸಾಕ್ಷಿಪ್ರಜ್ಞೆಯಂತೆ ವಿಕ್ರಮ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದಲೇ ವಿಕ್ರಮ ಪ್ರಾರಂಭವಾದಾಗ ಎಷ್ಟು ಪ್ರಸ್ತುತವಾಗಿತ್ತೋ ಈಗಲೂ ಅಷ್ಟೇ ಪ್ರಸ್ತುತವಾಗಿದೆ ಎಂದು ನುಡಿದರು.

ಸಂಘದ ಪತ್ರಿಕೆ ಅಥವಾ ಯಾವುದೇ ವ್ಯವಸ್ಥೆಯನ್ನು ವಿರೋಧಿಸುವವರಿಗೆ ದೊಡ್ಡ ಮಟ್ಟದಲ್ಲಿ ವಿಕ್ರಮ ನಿದ್ದೆ ಕೆಡಿಸಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕರ್ನಾಟಕದ ಪತ್ರಕರ್ತರಲ್ಲಿ ಬಂಧನಕ್ಕೊಳಗಾದ ಪ್ರಥಮ ಪತ್ರಕರ್ತರು ವಿಕ್ರಮದ ಸಂಪಾದಕರಾಗಿದ್ದ ಬೆ.ಸು.ನಾ.ಮಲ್ಯರವರು. ಅವರ ರಾಷ್ಟ್ರೀಯ ದೃಷ್ಟಿಕೋನದ ಪ್ರಖರತೆಯ ಕಾರಣದಿಂದ ಅವರಿಗೆ ಉನ್ನತ ಪ್ರಶಸ್ತಿಗಳು ಸಿಗಲಿಲ್ಲ‌ ಎಂದರು.

ವಿಕ್ರಮ ತನ್ನ ಧ್ಯೇಯವಾಕ್ಯ ‘ಸ್ವಯಮೇವ ಮೃಗೇಂದ್ರತಾ’ಕ್ಕೆ ತಕ್ಕಂತೆ ಬೆಳೆದು ಬಂದಿದೆ. ಸತ್ಯವೂ ಇಲ್ಲದೆ, ಸುದ್ದಿಯೂ ಇರದೆ, ಗ್ಲಾಮರಸ್ ಮತ್ತು ಸಮಾಜವನ್ನು ಒಡೆಯುವ ಸುದ್ದಿಗಳ ಮೂಲಕ ತನ್ನ ಪ್ರಸರಣವನ್ನು ಹೆಚ್ಚಿಸಿಕೊಳ್ಳುವ ಪತ್ರಿಕೆಗಳ ನಡುವೆ ತನ್ನ ಧ್ಯೇಯನಿಷ್ಠೆಯ ಆಧಾರದ ಮೇಲೆಯೇ ಸಮಾಜ ಜಾಗೃತಿ ಮಾಡುತ್ತಿರುವ ವಿಕ್ರಮ ವಿಭಿನ್ನವೇ ಆಗಿದೆ. ಸುಳ್ಳು‌ಸುದ್ದಿಗಳು, ಅತಿರಂಜಿತ, ಉತ್ಪ್ರೇಕ್ಷೆಗಳನ್ನೊಳಗೊಂಡ ಪತ್ರಿಕೆಗಳ ನಡುವೆ ಸಮಾಜದ ನಿಜ ನಾಡಿಮಿಡಿತ, ಜಿಹಾದ್, ವೋಕಿಸಮ್ ಮುಂತಾದ ಭವಿಷ್ಯದ ಸವಾಲುಗಳ ಕುರಿತು ಜನಸಾಮಾನ್ಯರಿಗೆ ತಿಳಿಸಬೇಕಾದ ಅನಿವಾರ್ಯತೆ ಇದೆ. ರಾಷ್ಟ್ರದ ಒಳಿತನ್ನು ವಿರೋಧಿಸುವವರ ಅಬೇಧ್ಯ ಕೋಟೆಯೊಳಗೂ ವಿಕ್ರಮ ತಲುಪುವಂತೆ ಬೆಳೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಆಶಯ ನುಡಿಯನ್ನು ಹೇಳಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತೀಯ ಸಂಘಚಾಲಕ ವಿ. ನಾಗರಾಜ್ ಮಾತನಾಡಿ ರಾಷ್ಟ್ರೀಯ ಅಜೇಯ ಶಕ್ತಿಯಿಂದ ಮಾತ್ರ ಭಾರತದ ಬೆಳವಣಿಗೆ ಸಾಧ್ಯ. ಅದರ ಕಾರ್ಯಕ್ಕಾಗಿ ಸಂಘಕಾರ್ಯದ ಒಂದು ಭಾಗವಾಗಿಯೇ ವಿಕ್ರಮ ಪ್ರಾರಂಭವಾಯಿತು. ಸಂಘ ಸ್ವಯಂಸೇವಕರು ಮತ್ತು ಕಾರ್ಯಕರ್ತರನ್ನು ಒಳಗೊಂಡಂತೆ ಜನಮಾನಸಕ್ಕೆ ಕೊಡಬೇಕಾದ ದೃಷ್ಟಿಕೋನವನ್ನು ತಲುಪಿಸುವುದಕ್ಕೆ ಕರ್ನಾಟಕದಲ್ಲಿ ಒಂದು ಮಾಧ್ಯಮದ ಅಗತ್ಯವಿದ್ದಾಗ ವಿದ್ಯಾವಂತ ಯುವಕರು ಸವಾಲಾಗಿ ಸ್ವೀಕರಿಸಿ ಪ್ರಾರಂಭಿಸಿದ ಪತ್ರಿಕೆ ವಿಕ್ರಮ ಎಂದು ನುಡಿದರು.

ರಾಷ್ಟ್ರೀಯ ದೃಷ್ಟಿಕೋನದ ಸ್ಪಷ್ಟತೆ ವಿಕ್ರಮದಲ್ಲಿತ್ತು. ಪ್ರತಿ ಸ್ವಯಂಸೇವಕ ತಿಳಿದುಕೊಳ್ಳಬೇಕಾದ ಸಂಗತಿಗಳನ್ನು, ಅವರ ಜಿಜ್ಞಾಸೆಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಸಂಘದ ಹಿರಿಯ ಕಾರ್ಯಕರ್ತರೇ ಸ್ವತಃ ಬರೆಯುತ್ತಿದ್ದರಿಂದ ದ್ವಂದ್ವಗಳು ನಿವಾರಣೆಯಾಗುತ್ತಿದ್ದವು. ಹಾಗೆಯೇ ತನ್ನ ನಿರ್ಭೀತ ವಿಶ್ಲೇಷಣೆಯಿಂದಾಗಿ ಅನೇಕ ಬಾರಿ ಸರ್ಕಾರದ ಅವಕೃಪೆಗೂ ವಿಕ್ರಮ ಪಾತ್ರವಾಗಬೇಕಾಯ್ತು. ಆದರೆ ಎಂತಹದ್ದೇ ಸವಾಲಿನ ಮಧ್ಯೆಯೂ ವಿಕ್ರಮ ಮುಂದುವರೆದಿದೆ. ಇನ್ನು ಮುಂದೆಯೂ ಅದೇ ಛಾಪಿನೊಂದಿಗೆ ಮುಂದುವರೆಯುವ ಮತ್ತು ಅಂತಹ ಧೈರ್ಯವನ್ನು ತುಂಬುವಲ್ಲಿ ಕೊಡುಗೆ ನೀಡಿದ ಹಿರಿಯರ ಸ್ಮರಣೆಯನ್ನು ಮಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿಕ್ರಮ ಕನ್ನಡ ವಾರಪತ್ರಿಕೆಯ ಗೌರವ ಸಂಪಾದಕ ನ.ನಾಗರಾಜ, ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ, ಹಿರಿಯ ಸಾಮಾಜಿಕ ಕಾರ್ಯಕರ್ತ ವೈ.ಕೆ.ರಾಘವೇಂದ್ರರಾವ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಬೌದ್ಧಿಕ್ ಪ್ರಮುಖ್ ಪ್ರೊ. ಬಿ. ವಿ. ಶ್ರೀಧರ ಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ವಿಕ್ರಮ ಓದುಕರು, ಹಿತೈಷಿಗಳು, ಚಿಂತಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಕ್ರಮ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಸು.ನಾಗರಾಜ ಪ್ರಸ್ತಾವನೆಗೈದು ಸ್ವಾಗತಿಸಿದರು, ಸಂಪಾದಕ ವೃಷಾಂಕ್ ಭಟ್ ವಂದಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.