ಲೇಖಕರು: ನಾರಾಯಣ ಶೇವಿರೆ, ಚಿಂತಕರು

ಜಗತ್ತು ವಿನಾಶದೆಡೆಗೆ ಹೆಜ್ಜೆಹಾಕುತ್ತಿದೆ ಎಂಬ ಆತಂಕ ಪರಿಸರತಜ್ಞರದು. ಜ್ಞಾನಯುಗವೆಂದೇ ಕೀರ್ತಿತವಾಗಿರುವ ಆಧುನಿಕ ಕಾಲಕ್ಕೆ ಜಗತ್ತನ್ನು ವಿನಾಶದ ಹಾದಿಯಿಂದ ತಪ್ಪಿಸಲು ಸಾಧ್ಯವಾಗುತ್ತಿಲ್ಲವೇಕೆ? ತನ್ನ ನಡೆಯು ವಿನಾಶದೆಡೆಗಿನದು ಎಂದು ಗೊತ್ತಿದ್ದೂ ಆತ್ಮಹತ್ಯೆಯ ಬಗೆಯಲ್ಲಿ ಅದು ಮುಂಬರಿಯುತ್ತಿದೆಯೇ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರಕಂಡುಕೊಳ್ಳಬೇಕಾದ ಸನ್ನಿವೇಶದಲ್ಲಿ ಜಗವಿದೆ. ಉತ್ತರಕಂಡುಕೊಳ್ಳುವುದೇನೂ ಕಠಿಣವಲ್ಲ, ಕಂಡುಕೊಂಡ ಉತ್ತರದ ಆಧಾರದಲ್ಲಿ ಮುಂದಡಿಯಿಡುವುದು ಕಷ್ಟ ಎಂಬ ಸ್ಥಿತಿಗೆ ನಾವು ತಲುಪಿದ್ದೇವೆ.

ಅಚ್ಚರಿ ಎಂದರೆ; ಹಾಗೆ ಉತ್ತರಕಂಡುಕೊಳ್ಳಲು ಸಹಾಯಕವಾದ ಆಧುನಿಕ ಜ್ಞಾನವ್ಯವಸ್ಥೆಯೇ ನಮ್ಮನ್ನು ಸಮ್ಯಕ್ ಹಾದಿಯಲ್ಲಿ ಸಾಗಲು ಅಡ್ಡಿಪಡಿಸುವಂತಿದೆ.

ಎಂದರೆ, ಸೌಕರ್ಯಗಳ ಹಿಂದೆ ಬೀಳುವಂತೆ ಮಾಡಿದ ವಾಣಿಜ್ಯ, ತಂತ್ರಜ್ಞಾನ ಇತ್ಯಾದಿ ಆಧುನಿಕ ಜ್ಞಾನವ್ಯವಸ್ಥೆಯ ಉಪಶಾಖೆಗಳು ಪರಿಸರಸಂಬಂಧಿಯಾಗಿ ಸವಾಲನ್ನು ಉಂಟುಮಾಡುವ ಬಗೆಯಲ್ಲಿ ಬೆಳೆಯುತ್ತಿರುವುದು ವೇದ್ಯವೇ ಇದೆ.

ಒಲ್ಲದ ಅಭಿವೃದ್ಧದೇಶಗಳು

ಭೂಜ್ವರದ ಬಗ್ಗೆ ಈಗ್ಗೆ ಎರಡು ದಶಕಗಳಿಂದ ಪರಿಸರತಜ್ಞರು ದೊಡ್ಡಗಂಟಲಿನಿಂದ ಎಚ್ಚರಿಸುತ್ತಲೇ ಇದ್ದಾರೆ. ಮತ್ತದಕ್ಕೆ ಕಾರಣಗಳನ್ನೂ ಪರಿಹಾರಸೂತ್ರಗಳನ್ನೂ ಸೂಚಿಸುತ್ತಲೇ ಇದ್ದಾರೆ. ಅಧಿಕಾರಸ್ಥರಿಗಾಗಲೀ ಉಳಿದ ಮಂದಿಗಾಗಲೀ ಅದಕ್ಕೆ ಗಂಭೀರವಾಗಿ ಸ್ಪಂದಿಸಬೇಕೆಂದು ಅನಿಸಿದ್ದು ಅಪರೂಪಕ್ಕೆ ಅಪರೂಪ.

ಪಳೆಯುಳಿಕೆ ಇಂಧನಗಳ (ಕಲ್ಲಿದ್ದಲು) ಬಳಕೆಯು ಭೂಜ್ವರದ ಏರಿಕೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತಿದ್ದು, ಅವುಗಳ ಬಳಕೆಯ ಮೇಲೆ ನಿಯಂತ್ರಣ ಸಾಧಿಸಬೇಕೆಂದು ತಜ್ಞರು ಆಗ್ರಹಿಸುತ್ತಲೇ ಬಂದಿದ್ದಾರೆ. ಈ ಎಚ್ಚರಿಕೆಯನ್ನು ನಿರ್ಲಕ್ಷಿಸಬೇಕು ಇಲ್ಲವೇ ಇದಕ್ಕೆ ಪ್ರತಿಕೂಲವಾಗಿ ತೊಡಗಬೇಕು ಎಂಬಂತೆ ಸರಕಾರಗಳು ಪಳೆಯುಳಿಕೆ ಇಂಧನಗಳ ಉದ್ದಿಮೆಗಳಿಗೆ ರಿಯಾಯಿತಿಯನ್ನು ಹೆಚ್ಚುಮಾಡುತ್ತಲೇ ಇವೆ!

ಪರಿಸರದ ಕುರಿತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿಬಾರಿಯೂ ಅಭಿವೃದ್ಧ ದೇಶಗಳು ತಾವು ಸೂಸುವ ಇಂಗಾಲಾಮ್ಲವನ್ನು ಕಡಮೆಗೊಳಿಸಬೇಕೆಂದು ನಿರ್ಣಯವಾಗುತ್ತದೆ. ಆಮೆರಿಕದಂಥ ಅಭಿವೃದ್ಧ ದೇಶಗಳು ತಾವು ಯಾವುದೇ ಕಾರಣಕ್ಕೂ ಇಂಗಾಲಾಮ್ಲದ ಪ್ರಮಾಣವನ್ನು ತಗ್ಗಿಸುವ ಪ್ರಶ್ನೆಯೇ ಇಲ್ಲವೆಂದು ಕಡ್ಡಿಮುರಿದಂತೆ ಹೇಳುತ್ತಲೇ ಇರುತ್ತವೆ.

ಅಭಿವೃದ್ಧ ದೇಶಗಳೆಲ್ಲ ಬಹುತೇಕ ಪ್ರಜಾಪ್ರಭುತ್ವ ದೇಶಗಳು. ಅಲ್ಲಿ ಅಧಿಕಾರಸ್ಥರು ಆಲೋಚಿಸುವುದು ಮುಂದಿನ ಚುನಾವಣೆಯನ್ನು ಕಣ್ಣಮುಂದಿಟ್ಟುಕೊಂಡು. ಅವರು ದೇಶದ ಪ್ರಜೆಗಳಲ್ಲಿ ಕಾಣುವುದು ಮತದಾರರನ್ನು. ಮತದಾರರ ಸುಖಕ್ಕೆ ಇನಿತು ಭಂಗತಂದರೂ ತಮಗೆ ಸಿಗುವ ಮತದ ಮೇಲೆ ಪರಿಣಾಮಬೀರುತ್ತದೆ. ಅದು ಹುತ್ತಕ್ಕೆ ಕೈಹಾಕಿದಂತೆ. ತಾವು ಸೂಸುವ ಇಂಗಾಲಾಮ್ಲವನ್ನು ಕಡಿತಗೊಳಿಸುವುದಕ್ಕಾಗಿ ಕಲ್ಲಿದ್ದಲ ಬಳಕೆಗೆ ನಿಯಂತ್ರಣ ಹೇರಿದರೆ ಅದು ಪರೋಕ್ಷವಾಗಿ ಮತದಾರರ ಸುಖದ ಮೇಲೆ ನಿಯಂತ್ರಣ ಹೇರಿದಂತೆ. ಪರ್ಯಾಯ ಇಂಧನಮೂಲಗಳಿದ್ದರೂ ಅವುಗಳ ಲಭ್ಯತೆಯ ಪ್ರಮಾಣವು ಎಷ್ಟೆಂಬ ಪ್ರಶ್ನೆ ಏಳುತ್ತದೆ. ಅಧಿಕಾರಸ್ಥರನ್ನು ಕಾಡುವ ಈಯೆಲ್ಲ ಪ್ರಶ್ನೆಗಳಿಗೆ ಉತ್ತರಕಂಡುಹಿಡಿಯುವುದು ದೊಡ್ಡ ಸವಾಲೇ. ಹಾಗಾಗಿ ಐಪಿಸಿಸಿ (ಹವಾಮಾನ ಬದಲಾವಣೆ ಕುರಿತು ಆಲೋಚಿಸುವ ಸರಕಾರೇತರ ಸಂಸ್ಥೆ) ತಜ್ಞರು ಸೂಚಿಸುವ ಪರಿಹಾರವನ್ನು ಅಭಿವೃದ್ಧ ದೇಶಗಳ ಅಧಿಕಾರಸ್ಥರು ಪೂರೈಸುವುದು ಕಷ್ಟಸಾಧ್ಯ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಒಂದು ಆಡ್ಡಿ ಈ ರೀತಿಯಲ್ಲಿ ಇದೆಯೆಂಬುದು ಸೂಚನೆಯಷ್ಟೆ. ಪ್ರಜಾಪ್ರಭುತ್ವರಹಿತ ವ್ಯವಸ್ಥೆಯ ದೇಶಗಳೂ ಆಧುನಿಕ ಅಭಿವೃದ್ಧಿಯ ನಾಗಾಲೋಟದಿಂದ ಹಿಂದೆಸರಿಯಲು ಸುತರಾಂ ಮನಸ್ಸು ಮಾಡವು. ಅದಕ್ಕೆ ಉದಾಹರಣೆಯಾಗಿ ಚೀನಾ ನಮ್ಮ ಮುಂದಿದೆಯಷ್ಟೆ.

ಕೊಡಬೇಕಾದ ಪ್ರಕೃತಿ

ಅಭಿವೃದ್ಧಿಗೂ ಉಪಭೋಗಕ್ಕೂ ಹತ್ತಿರದ ನಂಟು. ಅಭಿವೃದ್ಧಿಯಿಂದಾಗಿ ರಸ್ತೆ, ವಾಹನ, ವೈವಿಧ್ಯಮಯ ಉತ್ಪನ್ನಗಳು ಇತ್ಯಾದಿ ಸೌಕರ್ಯಗಳು ಅಧಿಕಗೊಳ್ಳುತ್ತವೆ. ಮನುಷ್ಯನ ಕೊಳ್ಳುವ ಸಾಮರ್ಥ್ಯವೂ ಅಧಿಕಗೊಳ್ಳುತ್ತದೆ. ಕೊಳ್ಳುವ ಸಾಮರ್ಥ್ಯ ಹೆಚ್ಚಾದಂತೆ ಉತ್ಪಾದನೆಯ ಪ್ರಮಾಣವೂ ಹೆಚ್ಚಾಗುತ್ತದೆ ಇಲ್ಲವೇ ಅಧಿಕವಾಗಿ ಉತ್ಪಾದನೆಯಾದ ಉತ್ಪನ್ನಗಳು ಸುಲಭವಾಗಿ ಬಿಕರಿಯಾಗುತ್ತವೆ. ಎಲ್ಲವೂ ಮನೆಯಂಗಳಕ್ಕೇ ಬರುವಂತೆ ಅಭಿವೃದ್ಧಿಯ ದಾಪುಗಾಲು ದಾಂಗುಡಿಯಿಡುತ್ತದೆ.

ಅಭಿವೃದ್ಧಿಗೆ, ಮನುಷ್ಯನ ಬಯಕೆಗಳನ್ನು ಈಡೇರಿಸುವ ಉತ್ಸಾಹ. ಮನಸ್ಸಿಗೆ, ಅಭಿವೃದ್ಧಿಯ ಸಾಧ್ಯತೆಗಳಿಂದ ಬೆರಗುಗೊಳ್ಳುವ ಪುಳಕ. ಆಗ ಹುಟ್ಟಿಕೊಳ್ಳುವ ಬಯಕೆಗೆ, ಅಭಿವೃದ್ಧಿಯ ಕೊಡುಗೆಗಳನ್ನೆಲ್ಲ ಅನುಭವಿಸಿಬಿಡುವ ತವಕ. ಇವೆಲ್ಲವುಗಳ ನಡುವೆ ಇರಲೇಬೇಕಾದ ಕೊಂಡಿಯೊಂದು ತಪ್ಪಿಹೋದಂತಿದೆ.

ಅಭಿವೃದ್ಧಿಯನ್ನು ಸಾಧಿಸುವುದು ಪ್ರಕೃತಿಯ ಸಂಪನ್ಮೂಲಗಳನ್ನು ಬಳಸಿ. ಸರ್ವವಿಧದಲ್ಲಿಯೂ ಪ್ರಕೃತಿಯನ್ನು ಬಳಸಿ. ಹೆಚ್ಚಿನೆಲ್ಲ ಸಂದರ್ಭಗಳಲ್ಲಿ ಪ್ರಕೃತಿಯನ್ನು ಕೆಡಿಸಿ, ವಿಕಾರಗೊಳಿಸಿ.

ಪ್ರಕೃತಿಯನ್ನು ಎಷ್ಟು ಬಳಸಬೇಕು, ಅದರ ಸಂಪನ್ಮೂಲಗಳನ್ನು ಎಷ್ಟು ತೆಗೆದುಕೊಳ್ಳಬೇಕು ಎಂಬ ವಿವೇಚನೆ ಇಲ್ಲದೆ ಹೋದರೆ ಪ್ರಕೃತಿಯು ಹೇಗೆ ಇರಬೇಕೋ ಹಾಗಿರುವುದಿಲ್ಲ. ನಾವು ಅದನ್ನು ಬಳಸದೆಯೇ ಅದು ನಮಗೆ ಕೊಡುವಂತಹ ಮಳೆ, ಚಳಿ, ಬೆಳೆ ಇತ್ಯಾದಿ ಸಂಗತಿಗಳು ಅನೇಕವಿವೆ. ಇವುಗಳನ್ನದು ಕೊಡುತ್ತಲೇ ಇರಬೇಕು. ಹಾಗೆಯೇ ಅದು ಕೊಡಬೇಕಾಗಿಲ್ಲದ ಅತಿವೃಷ್ಟಿ, ಅನಾವೃಷ್ಟಿ , ಭೂಕಂಪ ಇತ್ಯಾದಿ ಸಂಗತಿಗಳೂ ಹಲವಿವೆ. ಇವುಗಳನ್ನು ಅದು ಕೊಡಲೂ ಬಾರದು. ಕೊಡಬೇಕಾದುದನ್ನು ಕೊಡಲು ಮತ್ತು ಕೊಡಬಾರದ್ದನ್ನು ಕೊಡದಿರಲು ಪ್ರಕೃತಿ ಪೂರಕವಿರಬೇಕು. ಅದರ ಸಂಪನ್ಮೂಲಗಳನ್ನು ಹೆಚ್ಚೆಚ್ಚು ಬಳಸಿದಂತೆ ಅದು ಕೊಡುವುದರಲ್ಲಿಯೂ ಕೊಡದಿರುವುದರಲ್ಲಿಯೂ ಏರುಪೇರಾಗುವ ಸಾಧ್ಯತೆಗಳಿವೆ. ಅದರ ಮೇಲಿನ ಅಭಿವೃದ್ಧಿಯ ಏಟುಗಳೆಲ್ಲವುಗಳಿಂದಲೂ ಈ ಏರುಪೇರು ಘಟಿಸುವ ಸಾಧ್ಯತೆಗಳಿವೆ.

ಪ್ರಾಕೃತಿಕ ಏಕತೆ

ಪ್ರಕೃತಿ ಬೇರೆಯಲ್ಲ, ಪ್ರಕೃತಿಯದೇ ಅಂಗಗಳಾಗಿರುವ ಸಸ್ಯಗಳು, ಪ್ರಾಣಿಪ್ರಪಂಚ ಇತ್ಯಾದಿ ಚರಾಚರಗಳು ಬೇರೆಯಲ್ಲ. ಎಲ್ಲವೂ ಪ್ರಕೃತಿಯದೇ ಅವಿಭಾಜ್ಯ ಅಂಗಗಳು. ಪ್ರಕೃತಿಯು ಸಂಪನ್ನಗೊಂಡರೆ ಇವೆಲ್ಲವುಗಳಿಗೂ ಹಬ್ಬ. ಪ್ರಕೃತಿಗೆ ಏಟಾದರೆ ಇವುಗಳಿಗೂ ಹಾನಿ.

ಮನುಷ್ಯನೂ ಚರಾಚರಜೀವಿಗಳಲ್ಲಿ ಒಬ್ಬ. ಪ್ರಕೃತಿಯ ಮಟ್ಟಿಗೆ ಆತನೂ ಉಳಿದವುಗಳಂತೆಯೇ ತನ್ನ ಅವಿಭಾಜ್ಯ ಅಂಗ. ಆದರೆ ಆತನ ಮಟ್ಟಿಗೆ ಅದಷ್ಟೇ ಅಲ್ಲ; ತಾನು ಉಳಿದವುಗಳಂತೆಯೇ ಪ್ರಕೃತಿಯ ಅವಿಭಾಜ್ಯ ಅಂಗವೆಂಬ ಸತ್ಯವನ್ನು ಕಂಡುಕೊಳ್ಳಬಲ್ಲ ಸಾಮರ್ಥ್ಯ ಇರುವಾತ. ಈ ಸತ್ಯವನ್ನು ಉಳಿದವುಗಳು ಕಂಡುಕೊಳ್ಳಲಾರವು.

ಉಳಿದವುಗಳಿಗೆ ಪ್ರಕೃತಿ ಮತ್ತು ತಮ್ಮ ನಡುವಿನ ಸಂಬಂಧದ ಕುರಿತೂ ಗೊತ್ತಿಲ್ಲ, ಹಾಗಾಗಿಯೇ ಎಂಬಂತೆ ಈ ಸಂಬಂಧವನ್ನು ಸುಧಾರಿಸುವ ವಿಕಸಿಸುವ ಇಲ್ಲವೇ ಹಾಳುಗೆಡವಿಕೊಳ್ಳುವ ನಿಟ್ಟಿನಲ್ಲಿಯೂ ಮುಂದಡಿಯಿಡಲಾರವು. ಮನುಷ್ಯನಿಗೆ ಪ್ರಕೃತಿಯ ಜತೆಗಿನ ತನ್ನ ಸಂಬಂಧ ಗೊತ್ತಿರುವುದರಿಂದಲೇ ಈ ಸಂಬಂಧವನ್ನು ಉತ್ತುಂಗಕ್ಕೊಯ್ಯಬಲ್ಲ. ಮತ್ತು ಈ ಸಂಬಂಧವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರೆ, ವಿಕೃತವಾಗಿ ಅರ್ಥಮಾಡಿಕೊಂಡಿರೆ ಸಂಬಂಧವನ್ನು ರಸಾತಳಿಕ್ಕಿಳಿಸಬಲ್ಲ, ಅತೀವ ವಿಕಾರಕ್ಕೂ ಒಯ್ಯಬಲ್ಲ.

ಮಸ್ತಿಷ್ಕದಲ್ಲಿ ಸಿದ್ಧಾಂತ

ಪ್ರಕೃತಿಯ / ಸೃಷ್ಟಿಯ ಕಥೆಯನ್ನು ಹೇಳುತ್ತ, ಈ ಸೃಷ್ಟಿಯನ್ನು ಮಾಡಿದ ಸೃಷ್ಟಿಕರ್ತ ಕೊನೆಗೆ ತಾನೇ ಈ ಸೃಷ್ಟಿಯೊಳಗೆ ಹೊಕ್ಕು ಕುಳಿತ ಎನ್ನುವ ತಾತ್ತ್ವಿಕೋನ್ನತಿಯನ್ನು ಮೆರೆದ ಉಪನಿಷತ್ತುಗಳಿವೆ. ಈ ತಾತ್ತ್ವಿಕತೆಯ ಪ್ರಕಾರ ಸೃಷ್ಟಿಕರ್ತ / ಪರಮಾತ್ಮ ಎಲ್ಲೋ ಎತ್ತರದಲ್ಲಿ ದೂರದಲ್ಲಿ ಮಾತ್ರ ಇರದೆ ಸೃಷ್ಟಿಸಮಸ್ತದಲ್ಲಿ ಇದ್ದಾನೆ, ಎಲ್ಲೆಡೆಯೂ ಎಲ್ಲರಲ್ಲಿಯೂ ಇದ್ದಾನೆ, ಮನುಷ್ಯನಲ್ಲಿಯೂ ಇದ್ದಾನೆ.. ಪರಮಾತ್ಮನ ಇಂಥ ಸರ್ವವ್ಯಾಪಿ ಸರ್ವಸ್ಪರ್ಶಿ ಕಲ್ಪನೆಯು ಎಲ್ಲವನ್ನೂ ದೈವೀಕವಾಗಿ ನೋಡುವ ಸ್ವಭಾವವನ್ನು ಮನುಷ್ಯನಲ್ಲಿ ಉಂಟುಮಾಡಲು ಸಾಧ್ಯ. ಸೃಷ್ಟಿಸಮಸ್ತದಲ್ಲಿಯೂ ಪರಮಾತ್ಮನೇ ಇರುವುದರಿಂದ ಆತ ಅದನ್ನು ಎಂದೂ ಹಾಳುಗೆಡಹುವ ಯೋಚನೆಮಾಡಲಾರ. ಬದಲಾಗಿ ತನಗೆಷ್ಟು ಕನಿಷ್ಠ ಬೇಕೋ ಅದನ್ನು ಪ್ರಕೃತಿಯಿಂದ ಪ್ರಾರ್ಥನೆಯ ಮೂಲಕ ಬೇಡುತ್ತ ಪ್ರಸಾದರೂಪದಲ್ಲಿ ಸ್ವೀಕರಿಸಬಲ್ಲ. ಇಂಥ ಮಾನಸಿಕತೆಯನ್ನು ರೂಢಿಸಿಕೊಂಡ ಸಮಾಜದಿಂದ ಪ್ರಕೃತಿಗೆ ಇನಿತೂ ಹಾನಿಯೊದಗಲಾರದು, ಅಭಿವೃದ್ಧಿಯ ವಿನ್ಯಾಸವನ್ನು ಪ್ರಕೃತಿನಿಷ್ಠವಾಗಿ ಮಾಡುತ್ತ ಪ್ರಕೃತಿಯ ಜತೆಗಿನ ತಮ್ಮ ಸಂಬಂಧವನ್ನು ಘನಿಷ್ಠಸ್ಥಿತಿಗೊಯ್ದಾವು.

ಹಾಗೆಯೇ, ಸೃಷ್ಟಿಯ ಕಥೆಯನ್ನು ಹೇಳುತ್ತ, ಎಲ್ಲವನ್ನೂ ಸೃಷ್ಟಿಸಿದಂತೆ ಕೊನೆಗೆ ಮನುಷ್ಯನನ್ನೂ ಸೃಷ್ಟಿಸಿ ತಾನು ಸೃಷ್ಟಿಸಿದ ಈಯೆಲ್ಲವೂ ನಿನಗಾಗಿಯೇ, ಚೆನ್ನಾಗಿ ಅವನ್ನನುಭವಿಸು ಎಂದು ವಿವರಿಸುವ ರಿಲಿಜನ್ನುಗಳಿವೆ. ಇಲ್ಲಿ ಸೃಷ್ಟಿ ಬೇರೆ, ಮನುಷ್ಯ ಬೇರೆ, ದೇವರು / ಸೃಷ್ಟಿಕರ್ತ ಬೇರೆ. ಎಲ್ಲೂ ಯಾವುದೇ ರೀತಿಯ ಸಂಬಂಧವಿಲ್ಲ. ಸೃಷ್ಟಿ ಇರುವುದೇ ಮನುಷ್ಯನ ಬಳಕೆಗೆ, ಅಷ್ಟೇ ಅಲ್ಲ, ಆತನ ಸುಖಕ್ಕೆ! ಅದನ್ನು ಹೇಗೆ ಬೇಕೋ ಹಾಗೆ ಬಳಸುವುದೇ ಧರ್ಮ. ಬಳಸದಿರೆ ಅದು ಅಧರ್ಮವೇ ಆದೀತು. ಹೀಗೆ ತೊಡಗುತ್ತವೆ ರಿಲಿಜನ್ನುಗಳ ಸಿದ್ಧಾಂತಗಳು. ಮೊದಲೇ ಬಯಕೆಗಳ ಮೂಟೆಯಾಗಿರುವ ಮನುಷ್ಯನೊಳಗೆ, ಇನ್ನೊಂದನ್ನು ಇನ್ನೊಬ್ಬನನ್ನು ತನ್ನ ಉಪಯೋಗಕ್ಕಾಗಿ ಹೇಗೆ ಬಳಸಿಕೊಳ್ಳಬೇಕು ಎಂದೇ ಲೆಕ್ಕಾಚಾರಹಾಕುವ ಸ್ವಭಾವವಿರುವ ಮನುಷ್ಯನೊಳಗೆ ಇಂಥ ಸೆಮೆಟಿಕ್ ಸಿದ್ಧಾಂತವನ್ನು ತುಂಬಿದರೆ ಏನಾದೀತು!

ಅಭಿವೃದ್ಧಿಗೆ ಇಂಥ ಸಿದ್ಧಾಂತಗಳು ಹಾಲುಕುಡಿವಷ್ಟು ಇಷ್ಟವಾಗುವಂಥವು. ಹೇಳಿಕೇಳಿ ಅಭಿವೃದ್ಧಿ ಅನ್ನುವುದು ಮನುಷ್ಯನ ಬಯಕೆಗಳ ಆನುಷ್ಠಾನದ ಒಂದು ರೂಪವಲ್ಲವೆ, ಬಯಕೆಗಳನ್ನು ಆಗುಮಾಡುವ ನಿಟ್ಟಿನಲ್ಲಿ ಮನುಷ್ಯಮಸ್ತಿಷ್ಕವು ಕಂಡುಕೊಳ್ಳುವ ಸಾಧ್ಯತೆಗಳ ಒಂದು ಬಗೆಯಲ್ಲವೆ!

ನಾಟಕೀಯ ದೈವೀಕತೆ

ಮನುಷ್ಯಮನಸ್ಸನ್ನು ನಿಯಂತ್ರಿಸುವ, ಹಾಗೆ ನಿಯಂತ್ರಿಸುತ್ತ ಅದನ್ನು ದೈವೀಕವಾಗಿ ಉನ್ನತಿಗೊಯ್ಯುವ ಕಾರ್ಯವನ್ನು ಉಪನಿಷತ್ ತಾತ್ತ್ವಿಕತೆ ಮಾಡಹೊರಟರೆ; ಆತನ ಮನಸ್ಸಿಗೆ ಹಾಯೆನಿಸುವಂತೆ ಗಾಳಿಹಾಕಿ, ಹೇಗೆ ಹೇಗೋ ಹೋಗಿ ಎಲ್ಲೆಲ್ಲೋ ಹೋಗಿ ಏನೇನೋ ಆಗುವಂತೆ, ಧ್ಯೇಯರಹಿತವಾಗಿ ಲಕ್ಷ್ಯರಹಿತವಾಗಿ ಸೂತ್ರತಪ್ಪಿದ ಗಾಳಿಪಟದ ತರಹ ಆಗುವಂತೆ ಸೆಮೆಟಿಕ್ ಸಿದ್ಧಾಂತಗಳು ಮಾಡಬಲ್ಲವು.

ಆಧುನಿಕ ಅಭಿವೃದ್ಧಿಪಥಕ್ಕೆ ವಿಜ್ಞಾನ ತಂತ್ರಜ್ಞಾನಗಳ ಹಂಗಿದೆ, ಸೆಮೆಟಿಕ್ ಸಿದ್ಧಾಂತದ ದಾರಿಯಿದೆ. ಈ ಸಿದ್ಧಾಂತಗಳ ದೇವರು ಮತ್ತಿತರ ಸೃಷ್ಟಿಯ ವಿವರಗಳು ವಿಜ್ಞಾನಕ್ಕೋ ತಂತ್ರಜ್ಞಾನಕ್ಕೋ ಅಪಥ್ಯವಾದರೂ, ಸೃಷ್ಟಿಯಿರುವುದೇ ಮನುಷ್ಯನಿಗಾಗಿ ಎಂಬ ಸಿದ್ಧಾಂತವು ಅವಕ್ಕೆ ಪೂರ್ತಿ ಒಪ್ಪಿಗೆ. ಇನ್ನು ಈ ಕುರಿತು ಅಭಿವೃದ್ಧಿಯ ಮಟ್ಟಿಗಂತೂ ಕೇಳುವುದು ಬೇಡ. ಆಧುನಿಕ ಅಭಿವೃದ್ಧಿಯ ಹಿಂದೋಡಿದವರು ಉಪನಿಷತ್ ತಾತ್ತ್ವಿಕತೆಯನ್ನು ಒಪ್ಪಿಕೊಂಡರೂ ಅದು ಮಸ್ತಿಷ್ಕದ ಮಟ್ಟದಲ್ಲೇ ನಿಂತುಬಿಡುತ್ತದೆ, ವ್ಯವಹಾರಕ್ಕಿಳಿಸಲು ಅಭಿವೃದ್ಧಿಯ ಮೋಹ ತಡೆಯೊಡ್ಡುತ್ತದೆ. ಹಾಗಾಗಿಯೇ ನಾವು ಅಡಿಗಲ್ಲು ಹಾಕುತ್ತ ಭೂದೇವಿಯನ್ನು ಪ್ರಾರ್ಥಿಸುತ್ತೇವೆ ಮತ್ತು ಭೂದೇವಿಗೆ ಇನ್ನಿಲ್ಲದ ಘಾತವನ್ನು ನೀಡುತ್ತ ಬೃಹತ್ ಕಟ್ಟಡವನ್ನೋ ಕಾರ್ಖಾನೆಯನ್ನೋ ರಸ್ತೆಯನ್ನೋ ಮತ್ತೊಂದನ್ನೋ ನಿರ್ಮಿಸುತ್ತೇವೆ.

‘ಸ್ವ’ತ್ವಾಭಿವ್ಯಕ್ತಿ

ಅಭಿವೃದ್ಧಿಯನ್ನು ಸಾಧಿಸಿ ಸಾಧಿಸಿ ಜಗತ್ತು ಹತ್ತಿರವಾಗಿದೆ, ಚಿಕ್ಕದಾಗಿದೆ. ದೊಡ್ಡದನ್ನು ಚಿಕ್ಕದು ಮಾಡುವುದು ಅಭಿವೃದ್ಧಿಯ ಸ್ವಭಾವವೇನೋ! ಅದೇ ದೊಡ್ಡ ಸಾಧನೆಯೇನೋ! ಜಗತ್ತು ಹತ್ತಿರ ಬಂದಂತೆ ಎಲ್ಲರೂ ಎಲ್ಲರಿಗೂ ಸುಲಭದಲ್ಲಿ ಸಿಗಲು ಸಾಧ್ಯವಾದಂತೆ ಎಲ್ಲರ ವಿಶಿಷ್ಟತೆಯು ಹೊರಟುಹೋಗುವುದು ನಡೆಯುತ್ತದೆ. ಒಬ್ಬರಂತೆ ಮತ್ತೊಬ್ಬರೂ ಆಗಬೇಕು, ಮತ್ತೊಬ್ಬರನ್ನು ಅನುಕರಿಸಬೇಕು, ಮತ್ತೊಬ್ಬರಂತಾಗಬೇಕು ಇತ್ಯಾದಿ ಅಪಸವ್ಯಗಳಿಗೆ ಎಡೆಯಾಗುತ್ತದೆ. ಇದರಿಂದ ಪೈಪೋಟಿ, ಪೈಪೋಟಿಯಲ್ಲಿ ಗೆದ್ದವರಿಗೆ ಮೇಲರಿಮೆ, ಉಳಿದವರಿಗೆ ಕೀಳರಿಮೆ ಇತ್ಯಾದಿ ಮನೋರೋಗಗಳು ಕಾಣಿಸಿಕೊಳ್ಳುತ್ತವೆ. ಇಂಥ ಮನೋರೋಗಗಳು ಮನುಷ್ಯನನ್ನು ಕಾಡುವಂತೆ ದೇಶಗಳನ್ನೂ ಕಾಡುತ್ತವೆ.

ಇಂಥ ಮನೋರೋಗ ಬರದಿರಲು ತನ್ನ ವೈಶಿಷ್ಟ್ಯವನ್ನು ಪ್ರೀತಿಸುವ, ಹೆಮ್ಮೆಪಡುವ, ಉಳಿಸಿಕೊಳ್ಳಲು ತಪಃಗೈವ ಗುಣವಿಶೇಷ ಬೇಕಾಗುತ್ತದೆ. ಯಾವುದೇ ವೈಶಿಷ್ಟ್ಯವಿಲ್ಲದ ಏಕರೂಪತೆಯನ್ನೇ ಶ್ರೇಷ್ಠವೆಂದು ಭ್ರಮಿಸಿದ ಸೆಮೆಟಿಕ್‌ಗಳಂಥ ಮತೀಯ ಸಿದ್ಧಾಂತಗಳ ಕುರಿತು ಎಚ್ಚರವಿರಬೇಕಾಗುತ್ತದೆ. ಒಂದರಂತೆ ಸಾವಿರಾರು ವಸ್ತುಗಳನ್ನು ಮಾಡಿ ಮಾಡಿ ಬಿಸಾಕುವ ಬಗೆಯ ಅದೇ ಏಕರೂಪತೆಯ ಸ್ವಭಾವವುಳ್ಳ ಅಭಿವೃದ್ಧಿಯ ಸ್ವರೂಪವನ್ನು ಅವಲೋಕಿಸಬೇಕಾಗುತ್ತದೆ. ಇಂಥ ಮಸ್ತಿಷ್ಕಸಾಮರ್ಥ್ಯ ಒದಗಿಬಿಟ್ಟರೆ ನಾವು ಇದೀಗ ಪ್ರಪಂಚವನ್ನು ಭಯಾನಕವಾಗಿ ಕಾಡುವ ಮನೋರೋಗದಿಂದ ಮುಕ್ತರಾದೇವು. ಆಧುನಿಕ ಅಭಿವೃದ್ಧಿ ಸಾಧಿಸುತ್ತಿರುವ ಪ್ರಕೃತಿಘಾತಕ ವಿಕೃತಿಯ ಕುರಿತು ಪ್ರಪಂಚಕ್ಕೆ ಹೇಳುವಂತಾದೇವು. ಭೂಜ್ವರದಂಥ ಭವಿಷ್ಯಧ್ವಂಸಕ ಮಹಾರೋಗದ ಬಗೆಗೆ ಎಚ್ಚರಿಕೆಯನ್ನು ಮೂಡಿಸಬಲ್ಲೆವು. ಅಮೆರಿಕದಂಥ ‘ಅಭಿವೃದ್ಧ’ ದೇಶಗಳೂ ತಮ್ಮ ತಪ್ಪನ್ನು ತಿದ್ದಿಕೊಂಡು ಸರಿದಾರಿಯಲ್ಲಿ ಸಾಗುವಂತೆ ಮನವರಿಕೆಮಾಡಬಲ್ಲೆವು.

ಇವೆಲ್ಲಕ್ಕೂ ಮೊದಲು ನಾವು ನಾವಾಗಬೇಕು.

ನಾವಾಗಬಲ್ಲೆವೆ!

(“ವಿಕ್ರಮ”ದ ‘ಕಡೆಗೋಲು’ ಅಂಕಣ)

Leave a Reply

Your email address will not be published.

This site uses Akismet to reduce spam. Learn how your comment data is processed.