ಬೆಂಗಳೂರು: ವಿಶ್ವ ಹಿಂದೂ ಪರಿಷತ್ ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಕೇಶವ ಹೆಗಡೆ (63 ವರ್ಷ) ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

1960ರ ಮಾರ್ಚ್ 15 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಿಸಿಯ ಮಣ್ಣಿಮನೆಯಲ್ಲಿ ಜನಿಸಿದ ಕೇಶವ ಹೆಗಡೆಯವರು ತಮ್ಮ ಬಿಎ ಪದವಿ ವ್ಯಾಸಂಗದ ನಂತರ 1982ರಿಂದ ವಿಶ್ವ ಹಿಂದೂ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾಗಿ ಸಾಮಾಜಿಕ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕದಲ್ಲಿ ವಿಶ್ವ ಹಿಂದೂ ಪರಿಷತ್ ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಶ್ರೀ ಕೇಶವ ಹೆಗಡೆ ಅವರು ಮಹತ್ತರವಾದ ಕೊಡುಗೆ ನೀಡಿದವರು.
ಅಯೋಧ್ಯೆ ರಾಮಮಂದಿರ ಆಂದೋಲನ, ದತ್ತಪೀಠ ಹೋರಾಟ, ಲವ್ ಜಿಹಾದ್ ವಿರುದ್ಧ ಜಾಗೃತಿ, ಹಿಂದೂ ದೇವಾಲಯಗಳ ರಕ್ಷಣೆ ಮುಂತಾದ ಹಿಂದೂ ಜಾಗೃತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಮೃತರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್, ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ವಿಶ್ವ ಹಿಂದೂ ಪರಿಷತ್ ನ ಪ್ರೊ.ಎಂ.ಬಿ. ಪುರಾಣಿಕ್ ಸೇರಿದಂತೆ ಅನೇಕ ಪ್ರಮುಖರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ನಾಳೆ ಗುರುವಾರ ಬೆಳಗ್ಗೆ 11.00 ಗಂಟೆಗೆ ಮೃತರ ಹುಟ್ಟೂರು ಶಿರಸಿ ನಗರದ ನೆಮ್ಮದಿ ಕೇಂದ್ರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅಂತಿಮ ದರ್ಶನ: ಚಾಮರಾಜಪೇಟೆಯ ಕೇಶವ ಶಿಲ್ಪದಲ್ಲಿ ಅಂತಿಮ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬೇಲಿ ಮಠದ ಪೂಜ್ಯ ಶಿವರುದ್ರ ಮಹಾಸ್ವಾಮಿಗಳು, ಪೂಜ್ಯ ಅಭಿನವ ಆಲಶ್ರೀ ಮಹಾಸ್ವಾಮಿಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಸಿ ಆರ್ ಮುಕುಂದ, ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ ತಿಪ್ಪೇಸ್ವಾಮಿ, ಹಿರಿಯ ಕಾರ್ಯಕರ್ತರಾದ ವೈ.ಕೆ.ರಾಘವೇಂದ್ರ ರಾವ್, ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷರಾದ ಎಂ.ಪಿ.ಕುಮಾರ್, ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಬೆಂಗಳೂರು ಮಹಾನಗರದ ಸಂಘಚಾಲಕ ಎಂ.ಕೆ.ಶ್ರೀಧರ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಬಿ.ಸಿ.ನಾಗೇಶ್, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಂತಿಮ ದರ್ಶನವನ್ನು ಪಡೆದರು.
ಶ್ರೀ ಕೇಶವ ಹೆಗಡೆ ಅವರ ನಿಧನಕ್ಕೆ ಸ್ವರ್ಣವಲ್ಲಿ ಶ್ರೀ ಸಂತಾಪ
ವಿಶ್ವ ಹಿಂದೂ ಪರಿಷತ್ ಕ್ಷೇತ್ರ ಸಂಘಟನಾ ಕಾರ್ಯದರ್ಶಿಯಾಗಿದ್ದ ಶ್ರೀ ಕೇಶವ ಹೆಗಡೆ ಅವರ ಅಗಲಿಕೆಗೆ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
“ವಿಶ್ವ ಹಿಂದೂ ಪರಿಷತ್ ಪ್ರಮುಖರಾಗಿದ್ದ ಕೇಶವ ಹೆಗಡೆ ನಮಗೆ ತುಂಬಾ ಆತ್ಮೀಯರಾಗಿದ್ದರು. ಅವರ ಅಗಲಿಕೆ ದುಃಖವನ್ನುಂಟು ಮಾಡಿದೆ. ತನ್ನ ಜೀವನವನ್ನೇ ಹಿಂದೂ ಸಂಘಟನೆಗಾಗಿ ಮುಡಿಪಾಗಿಟ್ಟು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ ಒಬ್ಬ ದೃಢವಾದ ಕಾರ್ಯಕರ್ತರು ಅವರು. ನಮಗೆ ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರದಲ್ಲಿಯೂ ಎತ್ತರದ ಮಟ್ಟದ ಪ್ರಮುಖರ ಸಂಪರ್ಕ ಆಗಲು ಕೇಶವ ಹೆಗಡೆ ಪ್ರಮುಖ ಕಾರಣವಾಗಿದ್ದರು. ಸಮರ್ಪಣಾ ಭಾವದ ಕೆಲಸಗಾರರಾದ ಅವರಿಗೆ ಸದ್ಗತಿ ದೊರೆಯಲಿ. ಅವರ ಸಮರ್ಪಣಾ ಭಾವ ನಮಗೆಲ್ಲಾ ಪ್ರೇರಣೆ ನೀಡಲಿ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.




ನೇತ್ರದಾನ: ಶ್ರೀ ಕೇಶವ ಹೆಗಡೆ ಅವರ ಇಚ್ಛೆಯಂತೆ ಅವರ ಮನೆಯವರ ಅನುಮತಿಯ ಮೇರೆಗೆ ಕೇಶವ ಹೆಗಡೆಯವರ ನೇತ್ರದಾನ ಮಾಡಲಾಯಿತು.
ಸಾರ್ವಜನಿಕ ಶ್ರದ್ಧಾಂಜಲಿ ಸಭೆ: ಜುಲೈ 10ರಂದು ಸಂಜೆ 6.00ಕ್ಕೆ ಶ್ರದ್ಧಾಂಜಲಿ ಕಾರ್ಯಕ್ರಮ ಬೆಂಗಳೂರಿನ ಚಾಮರಾಜಪೇಟೆಯ ಕೇಶವಶಿಲ್ಪಾ ಸಭಾಂಗಣದಲ್ಲಿ ನಡೆಯಲಿದೆ.