V Nagaraj, RSS Kshetreeya Sanghachalak

ಬೆಂಗಳೂರು  ನವೆಂಬರ್ 6 : ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ ನಾಗರಾಜ್ ಇಂದು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ನೀಡಿದ ಪತ್ರಿಕಾ ಹೇಳಿಕೆ ಇಲ್ಲಿ ನೀಡಲಾಗಿದೆ.

V Nagaraj, RSS Kshetreeya Sanghachalak
V Nagaraj, RSS Kshetreeya Sanghachalak

ರಾಷ್ಟ್ರೀಯ ಸ್ವಯಂಸೇವಕ ಸಂಘ
ನಂ. 74, ’ಕೇಶವ ಕೃಪ’, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು -560004
ಪತ್ರಿಕಾ ಪ್ರಕಟಣೆ
ನವೆಂಬರ್ 6, 2015 ಬೆಂಗಳೂರು
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ-ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ವಾರ್ಷಿಕ ಸಭೆ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿ ಬೈಠಕ್ ದಿನಾಂಕ ಅಕ್ಟೋಬರ್ 30ರಿಂದ ನವೆಂಬರ್1, 2015ರವರೆಗೆ ಜಾರ್ಖಂಡ್‌ನ ರಾಂಚಿ ನಗರದಲ್ಲಿ ನಡೆಯಿತು. ಎಲ್ಲಾ ಪ್ರಾಂತಗಳಿಂದ ಸಂಘದ ಪ್ರಾಂತ ಸಂಘಚಾಲಕರು, ಕಾರ್ಯವಾಹರು, ಪ್ರಚಾರಕರು ಮತ್ತು ಸಂಘಪರಿವಾರದ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಪ್ರಮುಖರು ಸೇರಿದಂತೆ 400 ಪದಾಧಿಕಾರಿಗಳು ಭಾಗವಹಿಸಿದ್ದರು.

ಸಂಘದ ಕಾರ್ಯ ಕಳೆದ ಅಕ್ಟೋಬರ್‌ನಿಂದ ಈ ಒಂದು ವರ್ಷದಲ್ಲಿ ಎಲ್ಲಾ ಪ್ರಾಂತಗಳಲ್ಲಿ ಬೆಳೆದಿದೆ. ಒಂದು ವರ್ಷದ ಅವಧಿಯಲ್ಲಿ ಶಾಖೆಗಳ ಸಂಖ್ಯೆ 6684 ದಷ್ಟು ಹೆಚ್ಚಾಗಿ ಈಗ 50432 ಶಾಖೆಗಳಿವೆ. ಅದೇ ರೀತಿ 13720ಮಿಲನ್‌ಗಳು ಮತ್ತು 7940 ಮಂಡಳಿಗಳಿಗೆ. ಅಂದರೆ 70 ಸಾವಿರಕ್ಕೂ ಹೆಚ್ಚು ಸ್ಥಾನಗಳಲ್ಲಿ ನೇರ ಶಾಖೆ ಚಟುವಟಿಕೆಗಳಿವೆ.

ಇದಲ್ಲದೆ 1ಲಕ್ಷ 60ಸಾವಿರ ಸೇವಾ ಚಟುವಟಿಕೆಗಳು ನಡೆದಿವೆ. ಸಂಘದ ಶಾಖೆಗಳಲ್ಲಿ ಶೇ.60ರಷ್ಟು ಜನರು 18ರಿಂದ 40 ವರ್ಷದ ಒಳಗಿನ ಯುವಕರಿದ್ದಾರೆ.
ದೇಶದ ಎಲ್ಲಾ ತಾಲ್ಲೂಕುಗಳಲ್ಲಿ ಸಂಘದ ಚಟುವಟಿಕೆ ಇದೆ. ಈಗ ಇದನ್ನು ಮಂಡಲ – ಗ್ರಾಮ ಪಂಚಾಯ್ತಿಗಳಿಗೆ ವಿಸ್ತರಿಸುವ ಯೋಜನೆ ಪ್ರಾರಂಭವಾಗಿದೆ. ಈ ದೃಷ್ಟಿಯಿಂದ ಮುಂದಿನ ಮೂರು ವರ್ಷಗಳ (2018ರ ವರೆಗೆ) ಯೋಜನೆ ಸಿದ್ಧವಾಗಿದೆ. ನಮ್ಮ ವೆಬ್‌ಸೈಟ್ ಮೂಲಕ ಸಂಘಕ್ಕೆ ಸೇರಲು Join RSS ಗೆ ನೋಂದಾವಣೆ ಮಾಡುವವರ ಸಂಖ್ಯೆಯು ಪ್ರತಿ ತಿಂಗಳು1000 ರಷ್ಟಿದೆ. ನಮ್ಮ ವಿಚಾರಕ್ಕೆ ಸಮಾಜದಲ್ಲಿ ಸ್ವೀಕೃತಿ ಬಹಳಷ್ಟು ಹೆಚ್ಚಿದೆ.
ಸಂಘ ಪರಿವಾರದ ವಿವಿಧ ಸಂಘಟನೆಗಳ ಕಾರ್ಯವೂ ಬೆಳೆದಿದೆ. ಜಲಸಂರಕ್ಷಣೆ, ಪರಿಸರ ಸಂರಕ್ಷಣೆ ಕುರಿತು ಅನೇಕ ಚಟುವಟಿಕೆಗಳನ್ನು ದೇಶಾದ್ಯಂತ ಸಂಘ ಕಾರ್ಯಕರ್ತರು ಮಾಡುತ್ತಿದ್ದಾರೆ. ನಮ್ಮ ಕರ್ನಾಟಕದಲ್ಲಿ ಕುಮದ್ವತಿ ಮತ್ತು ವೇದಾವತಿ ನದಿಗಳ ಪುನಶ್ಚೇತನ ಕಾರ್ಯಕ್ರಮವೂ ಸೇರಿದಂತೆ ಬಹುಮುಖದ ಸಮಾಜೋಪಯೋಗಿ ಚಟುವಟಿಕೆಗಳಲ್ಲಿ ಸಂಘದ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ.
ಜನಸಂಖ್ಯಾ ಏರಿಕೆ ದರದಲ್ಲಿ ಅಸಮತೋಲನ: ಆರೆಸ್ಸೆಸ್ ಕಳವಳ

ಜನಸಂಖ್ಯಾ ಏರಿಕೆ ದರದಲ್ಲಿ ಅಸಮತೋಲನ ಕಂಡುಬಂದಿರುವುದು ದೇಶಕ್ಕೊಂದು ಸವಾಲು ಎಂದು ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿ ಬೈಠಕ್ ನಿರ್ಣಯ ಕೈಗೊಂಡಿದೆ.
ಕಳೆದ ದಶಕದಲ್ಲಿ ಜನಸಂಖ್ಯಾ ನಿಯಂತ್ರಣ ಕ್ರಮ ಪರ್ಯಾಪ್ತ ಫಲಿತಾಂಶಗಳನ್ನು ನೀಡಿದೆ. ಆದರೆ ಈ ವಿಷಯದಲ್ಲಿ ಸಂಘದ ಅಭಿಪ್ರಾಯ ಬೇರೆಯಾಗಿದೆ. 2011 ರ ಜನಗಣತಿಯು ಜನಸಂಖ್ಯಾ ನೀತಿಯನ್ನು ಪುನರ್ ವಿಮರ್ಶಿಸಬೇಕಾದ ಅಗತ್ಯತೆಯನ್ನು ಸಾರಿದೆ. ವಿವಿಧ ಮತಗಳ ಜನಸಂಖ್ಯಾ ಏರಿಕೆಯ ಪ್ರಮಾಣದಲ್ಲಿರುವ ಭಾರೀ ವ್ಯತ್ಯಾಸ, ಒಳನುಸುಳುವಿಕೆ ಹಾಗೂ ಮತಾಂತರದ ಪರಿಣಾಮವಾಗಿ ಜನಸಂಖ್ಯಾ ಪ್ರಮಾಣದಲ್ಲಿ ಧಾರ್ಮಿಕ ಅಸಮತೋಲನ ಕಂಡುಬಂದಿದೆ. ವಿಶೇಷವಾಗಿ ದೇಶದ ಗಡಿ ಪ್ರದೇಶಗಳಲ್ಲಿ ಇಂತಹ ಪರಿಣಾಮ ಕಂಡುಬಂದಿದ್ದು, ಅದು ದೇಶದ ಏಕತೆ, ಸಮಗ್ರತೆ ಹಾಗೂ ಸಾಂಸ್ಕೃತಿಕ ಅಸ್ಮಿತೆಗೆ ಒಡ್ಡಿದ ಬೆದರಿಕೆಯಾಗಿದೆ ಎಂದು ನಿರ್ಣಯ ತಿಳಿಸಿದೆ.
ಮುಸ್ಲಿಮರ ಜನಸಂಖ್ಯಾ ಪ್ರಮಾಣ ಏರುಗತಿಯಲ್ಲಿದ್ದು, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಗಡಿ ರಾಜ್ಯಗಳಲ್ಲಿ ಇದು ರಾಷ್ಟ್ರೀಯ ಸರಾಸರಿಗಿಂತ ಅತೀ ಹೆಚ್ಚಿನದಾಗಿದೆ. ಮುಖ್ಯವಾಗಿ ಬಾಂಗ್ಲಾದೇಶದಿಂದ ತಡೆಯಿಲ್ಲದ ಒಳನುಸುಳುವಿಕೆಯನ್ನು ಇದು ಸಂಕೇತಿಸುತ್ತದೆ. ಈ ಸಂಬಂಧವಾಗಿ ಸುಪ್ರೀಂಕೋರ್ಟ್ ನೇಮಿಸಿದ ಉಪಮನ್ಯು ಹಝಾರಿಕ ಆಯೋಗದ ವರದಿ ಹಾಗೂ ಇತರ ಅನೇಕ ನ್ಯಾಯಾಂಗದ ವರದಿಗಳು ಕೂಡ ಈ ಅಂಶವನ್ನು ಎತ್ತಿ ಹಿಡಿದಿವೆ. ಗಡಿ ಪ್ರದೇಶದ ಜಿಲ್ಲೆಗಳಲ್ಲಿ ನುಸುಳುಕೋರರು ನಾಗರಿಕ ಹಕ್ಕುಗಳನ್ನು ಪಡೆಯಲು ಹುನ್ನಾರ ನಡೆಸುತ್ತಿರುವುದು ಕಳವಳಕಾರಿಯಾಗಿದೆ ಎಂದು ನಿರ್ಣಯ ತಿಳಿಸಿದೆ.
ಈಶಾನ್ಯ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆಯ ಧಾರ್ಮಿಕ ಅಸಮತೋಲನ ಗಂಭೀರವೆನ್ನುವಷ್ಟು ಪ್ರಮಾಣದಲ್ಲಿ ಹೆಚ್ಚಿದೆ. ಅರುಣಾಚಲ ಪ್ರದೇಶದಲ್ಲಿ ಭಾರತೀಯ ಮೂಲದ ವಿವಿಧ ಜಾತಿಯ ಜನಸಂಖ್ಯಾ ಪ್ರಮಾಣ ೧೯೫೧ರಲ್ಲಿ ಶೇ. ೯೯.೨೧ ಇತ್ತು. ೨೦೦೧ರಲ್ಲಿ ಇದು ಶೇ. ೮೧.೩ಕ್ಕೆ ಕುಸಿಯಿತು. ೨೦೧೧ರಲ್ಲಿ ಈ ಪ್ರಮಾಣ ಶೇ. ೬೭ಕ್ಕೆ ಇನ್ನಷ್ಟು ಕುಸಿದಿದೆ. ಕೇವಲ ಒಂದು ದಶಕದಲ್ಲಿ ಅರುಣಾಚಲ ಪ್ರದೇಶದ ಕ್ರೈಸ್ತರ ಜನಸಂಖ್ಯೆ ಶೇ. ೧೩ರಷ್ಟು ಏರಿಕೆಯಾಗಿದೆ. ಅದೇ ರೀತಿ ಮಣಿಪುರದ ಜನಸಂಖ್ಯೆಯಲ್ಲಿ ಭಾರತೀಯ ಮೂಲದ ಜನಸಂಖ್ಯಾ ಪ್ರಮಾಣ ೧೯೫೧ರಲ್ಲಿ ಶೇ. ೮೦ ಇದ್ದದ್ದು, ೨೦೧೧ರಲ್ಲಿ ಶೇ. ೫೦ಕ್ಕೆ ಕುಸಿದಿದೆ. ಈ ನಿದರ್ಶನಗಳು ಹಾಗೂ ಅಂಶಗಳು ಸ್ಥಾಪಿತ ಹಿತಾಸಕ್ತಿಗಳಿಂದ ಧಾರ್ಮಿಕ ಮತಾಂತರ ಚಟುವಟಿಕೆ ಅವ್ಯಾಹತವಾಗಿ ನಡೆದಿರುವುದನ್ನು ಸಂಕೇತಿಸುತ್ತವೆ.
ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಜನಸಂಖ್ಯಾ ನೀತಿಯಲ್ಲಿ ಸುಧಾರಣೆ ತರಲು ಆಗ್ರಹಿಸಿದೆ. ಧಾರ್ಮಿಕ ಜನಸಂಖ್ಯಾ ಅಸಮತೋಲನವನ್ನು ನಿಯಂತ್ರಿಸಲು ಒತ್ತಾಯಿಸಿದೆ. ಗಡಿಪ್ರದೇಶದಲ್ಲಿ ಕಾನೂನುಬಾಹಿರ ಒಳನುಸುಳುವಿಕೆಯನ್ನು ಸಂಪೂರ್ಣ ತಡೆಗಟ್ಟಬೇಕೆಂದೂ ಎಬಿಕೆಎಂ ಆಗ್ರಹಿಸಿದೆ. ದೇಶದ ನಾಗರಿಕರ ರಾಷ್ಟ್ರೀಯ ದಾಖಲಾತಿ ಸಿದ್ಧಪಡಿಸಲು ಅದು ಕರೆ ಕೊಟ್ಟಿದೆ. ನುಸುಳುಕೋರರು ಅಕ್ರಮವಾಗಿ ನಾಗರಿಕ ಹಕ್ಕುಗಳನ್ನು ಪಡೆಯದಂತೆ ಹಾಗೂ ಭೂಮಿಯನ್ನು ಖರೀದಿಸದಂತೆ ತಡೆಗಟ್ಟಬೇಕೆಂದು ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸರ್ಕಾರಕ್ಕೆ ಕರೆ ನೀಡಿದೆ.
ವಿ. ನಾಗರಾಜ್,
ಕ್ಷೇತ್ರೀಯ ಸಂಘಚಾಲಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ

Leave a Reply

Your email address will not be published.

This site uses Akismet to reduce spam. Learn how your comment data is processed.