ಡಾ॥ ಶ್ರೀಧರ.ವಿ, ವಿಶ್ವಸ್ಥರು, ವಿಶ್ವ ಸಂವಾದ ಕೇಂದ್ರ

“ಶ್ರೀಧರ್, ನಾಳೆ ಬೆಳಿಗ್ಗೆ ಬಿಡುವು ಮಾಡಿಕೊಂಡು ಬರಬಹುದೆ? ಟ್ರಸ್ಟ್ ರೆಜಿಸ್ಟ್ರೇಶನ್ ಆಗಬೇಕಿದೆ.” ಶ್ರೀ ಚಂದ್ರು ಅವರು ತಮ್ಮ ಎಂದಿನಂತಿನ ಸ್ನೇಹಪೂರ್ವಕ ಮಾತಿನಲ್ಲಿ ಹೇಳಿದರು. ಅದು 2001ರ ಆಗಸ್ಟ್. ಮಾರನೇ ದಿನ ವಿಶ್ವ ಸಂವಾದ ಕೇಂದ್ರವನ್ನು ಟ್ರಸ್ಟ್ ಆಗಿ ನೋಂದಣಿ ಮಾಡಿದ್ದಷ್ಟೇ. ಆದರೆ, ಅದಕ್ಕೆ ಪೂರ್ವಭಾವಿಯಾಗಿ ಅವರೇ ಸಾಕಷ್ಟು ಕಾರ್ಯಗಳನ್ನು ಮಾಡಿ ಮುಗಿಸಿದ್ದರು – ವಿಶ್ವ ಸಂವಾದ ಕೇಂದ್ರದ ಕಾರ್ಯಗಳೇನಿರಬಹುದು, ಅದನ್ನು ಕಾರ್ಯಗತಗೊಳಿಸಲು ಏನೇನು ಮಾಡಬೇಕು, ಇತ್ಯಾದಿ.

ಶ್ರೀ ಚಂದ್ರಶೇಖರ ಭಂಡಾರಿಯವರು (ನಮಗೆಲ್ಲ ‘ಶ್ರೀ ಚಂದ್ರು’) ಸಾಹಿತ್ಯ ಕ್ಷೇತ್ರದಲ್ಲಿ ತಪಸ್ವಿಯೇ ಹೌದು. ಸಂಘದ ಯೋಜನೆಯಂತೆ ನಮ್ಮ ಪ್ರಾಂತದ (ಈಗಿನ ಕರ್ನಾಟಕ ದಕ್ಷಿಣ ಮತ್ತು ಉತ್ತರ) ಪ್ರಚಾರ ವಿಭಾಗದ ಜವಾಬ್ದಾರಿ ಮತ್ತು ಅದರಿಂದಾಗಿ ವಿಶ್ವ ಸಂವಾದ ಕೇಂದ್ರವನ್ನು ಕಟ್ಟಿ ಬೆಳೆಸುವ ಹೊಣೆಯೂ ಅವರ ಹೆಗಲಿಗೆ ಬಂತು. ಆಗ ಜಯನಗರ ನಗರದ ಮಾನ್ಯ ಸಂಘಚಾಲಕರೂ, ಪ್ರತಿಷ್ಠಿತ ಸಂಸ್ಥೆಯ ಹಣಕಾಸು ನಿರ್ದೇಶಕರೂ ಆಗಿದ್ದ ಶ್ರೀ ಬಿ. ಎಸ್. ಮಂಜುನಾಥ್ ಮತ್ತು ನಾನು ಶ್ರೀ ಚಂದ್ರು ಅವರೊಂದಿಗೆ ‘ಸ್ಥಾಪಕ ವಿಶ್ವಸ್ಥ’ರಾದೆವು. ಈ ರೀತಿಯಲ್ಲಿ ಸ್ಥಾಪನೆಯಾದ ಕರ್ನಾಟಕದ ವಿಶ್ವ ಸಂವಾದ ಕೇಂದ್ರ ಇಂದಿನ ಮಟ್ಟಕ್ಕೆ ಬೆಳೆದು ನಿಲ್ಲಲು ಶ್ರೀ ಚಂದ್ರುರವರ ಶ್ರಮವೇ ಅಡಿಪಾಯ.

‘ರಾಷ್ಟ್ರೀಯತೆಯನ್ನು ಬಿಂಬಿಸುವ ಸುದ್ದಿಗಳು ನಗರದಲ್ಲಷ್ಟೇ ಅಲ್ಲ, ಚಿಕ್ಕ ಊರುಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೂಡ ಪಸರಿಸಬೇಕು. ಅಲ್ಲಲ್ಲಿ ಪ್ರಕಟವಾಗುವ ಸ್ಥಳೀಯ ಪತ್ರಿಕೆಗಳಿಗೆ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಮುದ್ರಿತವಾಗದ ರಾಷ್ಟ್ರೀಯ ವಿಚಾರಗಳುಳ್ಳ ಸುದ್ದಿ ತಲುಪಿಸಲು ಸೂಕ್ತ ಪ್ರಯತ್ನವನ್ನು ವಿಶ್ವ ಸಂವಾದ ಕೇಂದ್ರ ಮಾಡಬೇಕು.’ ಎಂಬುದು ಅವರ ಕನಸಾಗಿತ್ತು. ಇದನ್ನು ಸಾಕಾರ ಮಾಡಲು ಅವರು ಹುಟ್ಟುಹಾಕಿದ ಪ್ರಯೋಗ ‘ಆಪ್ತಸಂವಾದ’ ಎಂಬ ಮಾಹಿತಿ ಪತ್ರಕ. ದೇಶದ ವಿವಿಧ ಪತ್ರಿಕೆಗಳಲ್ಲಿ ಬರುತ್ತಿದ್ದ ಮಾಹಿತಿಯಲ್ಲಿ ಆಯ್ದ ಕೆಲವನ್ನು ಮುದ್ರಿಸಿ ಕರ್ನಾಟಕದ ಅನೇಕ ಸ್ಥಳೀಯ ಪತ್ರಿಕೆಗಳಿಗೆ ‘ಆಪ್ತಸಂವಾದ’ದ ಮೂಲಕ ತಲುಪಿಸಲಾಗುತ್ತಿತ್ತು. ‘ಆಪ್ತಸಂವಾದ’ಕ್ಕೆ ವಿಷಯ ಕಲೆ ಹಾಕುವುದರಿಂದ ಹಿಡಿದು, ವಿಷಯಗಳ ಕರಡನ್ನು ಸಿದ್ಧ ಮಾಡುವವರೆಗಿನ ಎಲ್ಲ ಕಾರ್ಯಗಳನ್ನು ಶ್ರೀ ಚಂದ್ರುರವರೇ ಮಾಡುತ್ತಿದ್ದರು. ದೇಶದ ಮೂಲೆ ಮೂಲೆಗಳಲ್ಲಿನ ಸಾಮಾನ್ಯ ಜನರು ಮಾಡುತ್ತಿದ್ದ ಅಸಾಮಾನ್ಯ ಕಾರ್ಯಗಳನ್ನು ಪ್ರಸ್ತುತ ಪಡಿಸುವ ‘ಅಸಾಮಾನ್ಯ ಸಾಮಾನ್ಯರು’ ಎಂಬ ಅಂಕಣವೂ ‘ಆಪ್ತಸಂವಾದ’ದ ಪ್ರಮುಖ ಭಾಗವಾಗಿತ್ತು.

ಕರ್ನಾಟಕದ ಪ್ರಮುಖ ಸುದ್ದಿಗಳನ್ನು ರಾಷ್ಟ್ರದ ಇತರೆಡೆ ತಲುಪಿಸಲು ಅವನ್ನು ಹಿಂದಿ ಅಥವಾ ಇಂಗ್ಲಿಷ್‌ಗೆ ಭಾಷಾಂತರ ಮಾಡಿ ‘ಹಿಂದ್ ಸಮಾಚಾರ್’ ಸುದ್ದಿ ಸಂಸ್ಥೆಗೆ ತಲುಪಿಸುವ ಕಾರ್ಯದಲ್ಲೂ ಶ್ರೀ ಚಂದ್ರುರವರೇ ಮುಂದಾಳತ್ವ ವಹಿಸಿದರು.

ಭಾರತದಲ್ಲಿ ಶ್ರೀ ನಾರದ ಮಹರ್ಷಿಯನ್ನು ಮೂಲ ‘ವಾರ್ತಾ ಸಂವಾಹಕ’ ಎಂದೇ ಪರಿಗಣಿಸಲಾಗುತ್ತದೆ. ಅವರ ಜನ್ಮದಿನವನ್ನು (ವೈಶಾಖ ಕೃಷ್ಣ ದ್ವಿತೀಯಾ) ‘ನಾರದ ಜಯಂತಿ’ಯೆಂದು ಎಲ್ಲ ‘ವಿಶ್ವ ಸಂವಾದ ಕೇಂದ್ರ’ಗಳೂ ಆಚರಿಸಿ, ಪ್ರಸಿದ್ಧಿಗೆ ಬಾರದ ಆದರೆ ರಾಷ್ಟ್ರೀಯ ವಿಚಾರವನ್ನು ನಿರ್ಭಯವಾಗಿ ಪ್ರತಿಪಾದಿಸುವ ಪತ್ರಕರ್ತರನ್ನು ಅಂದು ಸನ್ಮಾನಿಸಬೇಕು ಎಂಬುದು ಕೇಂದ್ರ ಪ್ರಚಾರ ವಿಭಾಗದ ಸಲಹೆ. ಕರ್ನಾಟಕದ ವಿಶ್ವ ಸಂವಾದ ಕೇಂದ್ರವೂ ತನ್ನ ಮೊದಲ ‘ನಾರದ ಜಯಂತಿ’ಯನ್ನು ಆಚರಿಸಿದ್ದೂ ಶ್ರೀ ಚಂದ್ರುರವರ ಯೋಜನೆ ಮತ್ತು ಪರಿಶ್ರಮದ ಆಧಾರದ ಮೇಲೆಯೇ.

ವಿಷಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅದರ ತಥ್ಯವನ್ನು ಕಿರಿಯರಾದ ನಮಗೆ ಅವರು ವಿಷದೀಕರಿಸುತ್ತಿದ್ದ ರೀತಿಯೇ ಅವಿಸ್ಮರಣೀಯ. ಇಂದು ವಿಶ್ವ ಸಂವಾದ ಕೇಂದ್ರದಲ್ಲಿ ಇರುವ ಅನೇಕ ಸತ್ಸಂಪ್ರದಾಯಗಳಿಗೆ ಬುನಾದಿ ಹಾಕಿರುವವರು ಅವರೇ. 2019ರ ಡಿಸೆಂಬರ್‌ನಲ್ಲಿ ಕಿರಿಯರು ಜವಾಬ್ದಾರಿ ನಿರ್ವಹಿಸಬೇಕೆಂಬ ಅವರ ಇಂಗಿತದಿಂದ ಅವರು ವಿಶ್ವಸ್ಥರಾಗಿ ನಿವೃತ್ತರಾದರು. ಆದರೆ, ಅದರ ನಂತರವೂ ಅಗತ್ಯ ಬಿದ್ದಾಗ ನಮಗೆ ಅವರ ಸಲಹೆ, ಮಾರ್ಗದರ್ಶನ ದೊರೆಯುತ್ತಿತ್ತು.

ಇಂತಹ ಒಬ್ಬ ಮೇರುವ್ಯಕ್ತಿಯು ಇಂದು (30-10-2022) ತಮ್ಮ 88ನೇ ವರ್ಷದಲ್ಲಿ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಅವರ ಅಗಲಿಕೆಯಿಂದ ವಿಶ್ವ ಸಂವಾದ ಕೇಂದ್ರದ ಕಾರ್ಯಕರ್ತರಿಗೆ ಒಬ್ಬ ಹಿರಿಯ ಮಾರ್ಗದರ್ಶಕರನ್ನು ಕಳೆದುಕೊಂಡ ಅನಾಥಭಾವ. ಅವರಿಗೆ ನಮ್ಮ ಶತ ನಮನಗಳು.

(ಡಾ.ಶ್ರೀಧರ ಅವರು ಪ್ರತಿಷ್ಠಿತ ಐಐಟಿ ಮದ್ರಾಸಿನಲ್ಲಿ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದು ಮತ್ತು ಪಿ‌ಎಚ್‌ಡಿ ಪಡೆದಿದ್ದಾರೆ. ಅನೇಕ ದಶಕಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು. ಜಯನಗರ ಭಾಗ ಮತ್ತು ಬೆಂಗಳೂರು ಮಹಾನಗರ ಸ್ತರದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿರುವರು. ವಿಶ್ವ ಸಂವಾದ ಕೇಂದ್ರದ ಸ್ಥಾಪಕರಲ್ಲೊಬ್ಬರು ಮತ್ತು ಅದರ ಸ್ಥಾಪಕ ವಿಶ್ವಸ್ಥರು. ಜಯನಗರ ಭಾಗದ ರಾ.ಸ್ವ.ಸಂಘದ ಸಹ-ಸಂಘಚಾಲಕರಾಗಿ ಮಾರ್ಗದರ್ಶನ ಮಾಡುತ್ತಿರುವರು.)

Leave a Reply

Your email address will not be published.

This site uses Akismet to reduce spam. Learn how your comment data is processed.