ಲೇಖಕರು: ನಾರಾಯಣ ಶೇವಿರೆ
ಸಮಾಜವನ್ನು ತನ್ಮೂಲಕ ರಾಷ್ಟ್ರವನ್ನು ಬಗೆಬಗೆಯಲ್ಲಿ ಕಂಡುಕೊಂಡ, ಸುಧಾರಿಸಲೆತ್ನಿಸಿದ ಒಂದು ದೊಡ್ಡ ಮಹಾಪುರುಷಗಡಣವೇ ನಮ್ಮ ಮುಂದಿದೆ.
ಮಹಾಪುರುಷರು ಭಾರೀ ಪ್ರಮಾಣದಲ್ಲಿ ಆಗಿಹೋದರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಒಂದು ಸ್ಥಿತಿ ಉತ್ತಮಸ್ಥಿತಿ ಎಂದುಕೊಳ್ಳುವುದು ಸರಿಯಾಗದು. ಮಹಾಪುರುಷರು ಹುಟ್ಟಿಕೊಳ್ಳುವ ಸ್ಥಿತಿ ಇಲ್ಲದಿರುವುದು ನಿಜಕ್ಕಾದರೆ ಉತ್ತಮಸ್ಥಿತಿಯಾದೀತು. ಹಾಗೆಂದು ಇದನ್ನೂ ಉತ್ತಮಸ್ಥಿತಿ ಎಂದು ಕಣ್ಮುಚ್ಚಿ ಷರಾಬರೆದುಬಿಡುವುದು ಸರಿಯಾಗದು. ಅನ್ಯರನ್ನು ಅನ್ಯಸಭ್ಯತೆಗಳನ್ನು ಇನಿತೂ ಸಹಿಸದ ಕೊಲ್ಲಿಯಂಥ ದೇಶಗಳಲ್ಲಿ ಮಹಾಪುರುಷರು ಹುಟ್ಟುವುದೇ ಇಲ್ಲವೇನೋ ಎಂಬಂತೆ ಪರಿಸ್ಥಿತಿ ಇದೆಯಷ್ಟೆ. ‘ಬಡಿ ಕೊಲ್ಲು..’ ಸಿದ್ಧಾಂತದ ರಿಲಿಜನ್ನನ್ನು ಸುಧಾರಿಸಲು ಈತನಕ ಯಾರೂ ಹುಟ್ಟಿಬಂದಿಲ್ಲ ಮತ್ತು ಅದರ ಕ್ರೂರ ನಡೆಯನ್ನು ಅವಲೋಕಿಸಿದರೆ ಭವಿಷ್ಯದಲ್ಲಿಯೂ ಅಂಥವರಾರೂ ಅಲ್ಲಿ ಹುಟ್ಟಿಬರುವುದು ಅಶಕ್ಯವೇ ಇದೆ.
ಇದೆಂತು ಉತ್ತಮಸ್ಥಿತಿಯಾದೀತು?
ಈ ನಿಟ್ಟಿನಲ್ಲಿ ಭಾರತದ ಸಂದರ್ಭವೇ ಭಿನ್ನವಿದೆ.
ಇಲ್ಲಿದ್ದಷ್ಟು ಮತಸಂಪ್ರದಾಯಗಳೂ ಬೇರೆಲ್ಲೂ ಇರಲಾರದು, ಮತಭೇದಗಳೂ ಬೇರೆಲ್ಲೂ ಇರಲಾರದು. ಮೂಢ-ಆಚರಣೆಗಳಿಗೆ ಹಾಗೂ ನಂಬಿಕೆಗಳಿಗೆ ಸಂಬಂಧಿಸಿಯೂ ಈ ಮಾತು ಅನ್ವಯವಾಗುವುದೇ ಸೈ.
ಇವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಒಂದು ಪರಿಣಾಮಕಾರಿ ಪ್ರಯತ್ನ ಸಾಧ್ಯವಾಗಬೇಕು. ಮತ್ತದನ್ನು ಪ್ರಭಾವೀ ವ್ಯಕ್ತಿಗಳು ಮಾಡಿದಾಗಷ್ಟೆ ಪರಿಣಾಮಕಾರಿ ಆಗುವುದು!
ಇಲ್ಲಿ ಈ ನಿಟ್ಟಿನಲ್ಲಿ ಪ್ರಭಾವೀ ವ್ಯಕ್ತಿಗಳೂ ಸಾಕಷ್ಟು ಆಗಿಹೋಗಿದ್ದಾರೆ, ಸಮಾಜಪರಿವರ್ತನೆಯ ಕಾರ್ಯವನ್ನು ಪ್ರಭಾವಿಸಿಯೂ ಹೋಗಿದ್ದಾರೆ.
ಉತ್ತಮಸ್ಥಿತಿ
ಸಮಾಜದಲ್ಲಿ ಪರಿವರ್ತನೆಯ ಕಾರ್ಯವೊಂದು ಆಗಬೇಕಾಗಿದೆ ಎನ್ನುವುದು ಹೇಗೆ ಉತ್ತಮಸ್ಥಿತಿಯಲ್ಲವೋ ಆಗಬೇಕಾದ ಈ ಕಾರ್ಯವನ್ನು ಮಾಡುವವರಿಲ್ಲವೆನ್ನುವುದೂ ಉತ್ತಮಸ್ಥಿತಿಯಲ್ಲ. ಹಾಗೆಯೇ ಮಾಡುವವರಿದ್ದೂ ಅವರು ಪ್ರಭಾವಿಗಳಲ್ಲವೆನ್ನುವುದೂ ಆನುತ್ತಮಸ್ಥಿತಿಯೇ. ಅದೇ ವೇಳೆ ಸಮಾಜವು ಪ್ರಭಾವಿಗಳನ್ನಷ್ಟೆ ಅನುಸರಿಸುತ್ತದೆ ಅನ್ನುವುದೂ ಉತ್ತಮಸ್ಥಿತಿಯೆನಿಸದು.
ಬಿಡಿ; ಉತ್ತಮಸ್ಥಿತಿಯಲ್ಲಿ ಪರಿವರ್ತನೆಯ ಕಾರ್ಯದ ಅನಿವಾರ್ಯತೆಯೇ ಹುಟ್ಟದು. ಅದು ಕೃತಗಾಲದ ಸತ್ಯವಿದ್ದೀತು ಇಲ್ಲವೇ ಕಲಿಗಾಲದ ಕಲ್ಪನೆಯಾದೀತು.
ಈಗ ನಮ್ಮನ್ನು ಪ್ರಭಾವಿಸುತ್ತಿರುವ ಕಲಿಗಾಲಕ್ಕೇ ಬರೋಣವಂತೆ.
ಕಲಿಗಾಲದ ಪ್ರಭಾವ ಹೇಗಿದೆಯೆಂದರೆ ಪ್ರಭಾವಿಸುವವರಿಲ್ಲದೆ ಇಲ್ಲಿ ಕಾರ್ಯವೇ ಸಾಗದು.
ಮತ್ತೆ ನೋಡಿದರೆ; ಪ್ರಭಾವಿಸುವವರಲ್ಲಿ ಎದ್ದುತೋರುವ ಕೊರತೆ-ದೋಷಗಳು! ಕೊರತೆಯೋ ದೋಷವೋ ಕನಿಷ್ಠತಮವಿರುವವರಲ್ಲಿ ಅಭಾವವಿರುವ ಪ್ರಭಾವ!
ಸಮಾಜವನ್ನು ಪ್ರಭಾವಿಸುವ ವ್ಯಕ್ತಿಗಳಿದ್ದಾರೆ, ಅವರನ್ನು ಸುಧಾರಿಸುವವರು ಬೇಕಾಗುತ್ತಾರೆ! ಸುಧಾರಿತ ವ್ಯಕ್ತಿಗಳಿದ್ದಾರು, ಅವರಿಗೆ ಒಂದೋ ಸಮಾಜವನ್ನು ಪ್ರಭಾವಿಸುವ ಇಚ್ಛೆಯೇ ಇಲ್ಲ ಇಲ್ಲವೇ ಸಾಮರ್ಥ್ಯ ಸಾಲದು.
ಇಂಥ ದುರ್ಭರ ಸನ್ನಿವೇಶವನ್ನು ಮೆಟ್ಟಿನಿಂತು ದಾರ್ಢ್ಯವನ್ನು ತೋರಿದ ಸಮಾಜವಿದು.
ಇಂಥಲ್ಲಿ ಮೂಡುವ ಇನ್ನೊಂದು ಪ್ರಶ್ನೆಯೆಂದರೆ; ಬೇಕಾಗಿದ್ದು ಸಮಾಜಸುಧಾರಕರೋ, ಜೀವಸುಧಾರಕರೋ?
ಅಂದರೆ; ಆಗಬೇಕಾದುದು ಸಮಾಜಪರಿವರ್ತನೆಯೋ, ವ್ಯಕ್ತಿಪರಿವರ್ತನೆಯೋ?
ಸಮೂಹ ಸಮಾಜವಾಗಲು
ವ್ಯಕ್ತಿಗಳು ಸುದೀರ್ಘಕಾಲ ಸಮೂಹಜೀವನವನ್ನು ಮಾಡುತ್ತ ಮಾಡುತ್ತ ಒಂದು ಸಾಂಸ್ಕೃತಿಕ ಸನ್ನಿವೇಶವನ್ನೂ ಕಟ್ಟಿಕೊಡಲು ಸಾಧ್ಯ, ವಿಕೃತ ಜೀವನಶೈಲಿಯನ್ನೂ ರೂಢಿಸಿಕೊಳ್ಳಲು ಸಾಧ್ಯ. ಸಾಂಸ್ಕೃತಿಕ ಬದುಕೇ ತನ್ನ ಮೂಲಸ್ಫೂರ್ತಿಯನ್ನು ಕಾಲಕ್ರಮೇಣ ಕಳಕೊಳ್ಳುತ್ತ ವಿಕಾರಕ್ಕೆಳೆಸಲೂ ಸಾಧ್ಯ. ವಿಕಾಸಗೊಂಡ ಈಯೆರಡೂ ಸಂದರ್ಭಗಳಲ್ಲಿ ಬೇಕಾದುದು ಸುಧಾರಣೆಯ ಇಲ್ಲವೇ ಪರಿವರ್ತನೆಯ ದೃಢಹೆಜ್ಜೆಗಳು. ಅದಕ್ಕೆ ಮಾದರಿಯಾಗಿ ಇಲ್ಲವೇ ಲಕ್ಷ್ಯವಾಗಿ ಒದಗಬಲ್ಲುದು ಸಮಾಜವು ಕಟ್ಟಿಕೊಂಡು ಬಂದಿದ್ದ ಸಾಂಸ್ಕೃತಿಕ ಜೀವನಕ್ರಮ.
ಸಂಸ್ಕೃತಿ ಎಂಬ ಪದ ಬಂತು. ಅದಕ್ಕೆ ಹತ್ತಿರವಿರುವ ಸಮಾನಾರ್ಥಕವಾದ ಪ್ರಾಚೀನಪದ ಸಂಸ್ಕಾರ. ಹದಿನಾರು ಸಂಸ್ಕಾರಗಳು ಪ್ರಸಿದ್ಧವಿವೆ. ಅವುಗಳೀಗ ಬರಿಯ ಮತಾಚರಣೆಯ ಮಿತಿಗೆ ಸೀಮಿತಗೊಂಡಿವೆ. ಅದರಿಂದಾಚೆ ಹೋಗಿ, ಮೂಲಸ್ಫೂರ್ತಿಯಿಂದ ಒಮ್ಮೆ ಸಂಸ್ಕಾರವನ್ನು ನೋಡಿದೆವಾದಲ್ಲಿ, ಆಗ ಹುಟ್ಟಿನಿಂದ ಜಂತುವಿನಂತಿದ್ದ ಮನುಷ್ಯಜೀವಿ ಸಂಸ್ಕಾರದ ಬಲದಿಂದ ಸುಸಂಸ್ಕೃತ ಎನಿಸಬಲ್ಲ. ಸಂಸ್ಕಾರಗೊಂಡ ವ್ಯಕ್ತಿತ್ವಗಳಿಂದ ಸಮಾಜವೊಂದು ಸಾಂಸ್ಕೃತಿಕ ಬದುಕನ್ನು ಬಾಳೀತು.
ವ್ಯಕ್ತಿವ್ಯಕ್ತಿಗಳು ಸೇರಿ ಸಮಾಜ ಎಂಬುದೊಂದು ಒಕ್ಕಣೆ. ಬಹುಶಃ ಇದೊಂದು ಸುಧಾರಿಸಬೇಕಾದ ಒಕ್ಕಣೆ. ಯಾಕೆಂದರೆ; ವ್ಯಕ್ತಿವ್ಯಕ್ತಿಗಳು ಸೇರಿದಾಗ ಸಮೂಹವಾಗುವುದಂತೂ ಹೌದು. ಅದನ್ನೇ ಸಮಾಜ ಎನ್ನಲು ಸಾಧ್ಯವೇ, ಅಷ್ಟೇ ಸಾಕೇ ಅಥವಾ ಇನ್ನೇನಾದರೂ ಬೇಕೇ ಎಂಬ ಪ್ರಶ್ನೆ ಕಾಡುತ್ತದೆ. ಸಮೂಹಜೀವನವನ್ನು ಸುರಕ್ಷೆಯ ನೆಲೆಯಲ್ಲಿ ಮಾಡುವುದಾಗುತ್ತದೆ, ನೋಡುವುದಾಗುತ್ತದೆ. ಸುರಕ್ಷೆಯನ್ನು ಪಾರಸ್ಪರಿಕತೆಯ ಭಾವದಲ್ಲಿ ಸಾಧಿಸಲು ಬರುತ್ತದೆ. ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡಲು ಇದರ ಜತೆಗೆ ಪರಸ್ಪರ ಸಂಬಂಧ, ಉನ್ನತ ಜೀವನಲಕ್ಷ್ಯ ಇತ್ಯಾದಿಗಳು ಬೇಕಾಗುತ್ತವೆ. ಇವು ಆಗಗೊಡುವಂತೆ ಮಾಡುವ ಭಾವದ್ರವ್ಯವೇ ಸಂಸ್ಕಾರ. ಇವುಗಳನ್ನು ಹೊಂದಿರುವ ಸಮೂಹವೊಂದು ಲೋಕಮುಖದಲ್ಲಿ ಬರಿಯ ಸುರಕ್ಷೆಯ ಮಿತಿಯುಳ್ಳ ಸಮೂಹವೆನ್ನಿಸಿಕೊಳ್ಳದೆ ಸಮಾಜವಾಗಿ ತೆರೆದುಕೊಳ್ಳಲು ಸಾಧ್ಯ.
ಸಮಗ್ರನೋಟ
ಜೀವಸುಧಾರಣೆ ಮತ್ತು ಸಮಾಜಸುಧಾರಣೆ ಎಂಬ ಸುಧಾರಣೆಯ ಎರಡು ಆಯಾಮಗಳನ್ನು ಕಂಡೆವು; ಎರಡೂ ಬೇರೆ ಬೇರೆ ಅಲ್ಲ ಎಂಬಂತೆ ಅಥವಾ ಒಂದರಿಂದ ಮತ್ತೊಂದು ಎಂಬಂತೆ.
ಎರಡನ್ನೂ ಮಾಡಹೊರಟ ಮಹಾಪುರುಷರಿದ್ದಾರೆ. ಒಂದಕ್ಕೆ ಒತ್ತುನೀಡಿದವರೂ ಹಲವರಿದ್ದಾರೆ.
ಜೀವವು ತನ್ನ ಸಾಂಸ್ಕೃತಿಕ ಅಥವಾ ಮತ್ತಾವುದೇ ಆಯಾಮದಲ್ಲಿ ಪ್ರಕಟಗೊಂಡ ಸ್ಥಿತಿಯಲ್ಲಿ ಅದನ್ನು ಗುರುತಿಸುವ ಪದ – ವ್ಯಕ್ತಿ. ವ್ಯಕ್ತಗೊಂಡವ ವ್ಯಕ್ತಿ.
ವ್ಯಕ್ತಗೊಳ್ಳಬೇಕಾದ ಬಗೆಯಲ್ಲಿ ವ್ಯಕ್ತಗೊಂಡಾಗ ಸುಸಂಸ್ಕೃತ ವ್ಯಕ್ತಿ. ಭಿನ್ನ ಬಗೆಯಲ್ಲಿ ವ್ಯಕ್ತಗೊಂಡಾಗ ಪರಿವರ್ತನೆಯನ್ನು ಕಾಣಬೇಕಾದ ವ್ಯಕ್ತಿ.
ಸಮಾಜಕ್ಕೂ ಪ್ರಕಟಗೊಳ್ಳುವ ಒಂದು ಸ್ಥಿತಿ ಇದೆ. ಅಂದರೆ, ಸಮಾಜಕ್ಕೂ ಒಂದು ವ್ಯಕ್ತಿತ್ವ ಇದೆ. ಅನುತ್ತಮ ಬಗೆಯಲ್ಲಿ ಈ ಸ್ಥಿತಿ ಇದ್ದಾಗ ಸಮಾಜಪರಿವರ್ತನೆಯ ಆವಶ್ಯಕತೆ ಬೀಳುತ್ತದೆ.
ಒಂದಷ್ಟು ಚೆನ್ನಾಗಿದೆ, ಮತ್ತೊಂದಿಷ್ಟು ಚೆನ್ನಾಗಿ ಆಗಬೇಕಿದೆ ಎಂದಾಗ ಸುಧಾರಣೆಯ ಮಾತು. ಯಾವುದೂ ಚೆನ್ನಾಗಿಲ್ಲ ಎಂದಾಗ ಪೂರ್ತಿ ಬದಲಾಯಿಸಬೇಕು. ಆಗ ಪರಿವರ್ತನೆ. ಹೀಗೆ ವ್ಯಕ್ತಗೊಂಡದ್ದನ್ನು ರೂಪುಗೊಳಿಸುವಲ್ಲಿ ಎರಡು ಭಿನ್ನ ಆಯಾಮಗಳು.
ಈಯೆಲ್ಲ ಅಂಶಗಳನ್ನು ಗ್ರಹಿಸುವವರು ಸಮಗ್ರನೋಟಕರಾಗುತ್ತಾರೆ. ಅಂಥ ನೋಟದಿಂದ ತೊಡಗುವವರ ಕಾರ್ಯವು ಸಮಾಜವನ್ನು ಉತ್ತಮಸ್ಥಿತಿಗೆ ಒಯ್ಯುವಲ್ಲಿ ಶ್ರಮಿಸುತ್ತದೆ.
ಅಂಗಾಂಗೀಸಂಬಂಧ
ಸಮಾಜಕ್ಕೊಂದು ವ್ಯಕ್ತಿತ್ವವಿದೆ ಎಂಬ ಅಂಶ ಬಂತು ನೋಡಿ.
ವ್ಯಕ್ತಿವ್ಯಕ್ತಿಗಳಿಂದ ಸಮಾಜ ಎಂಬ ನೋಟಕ್ಕೂ ಸಮಾಜಕ್ಕೊಂದು ವ್ಯಕ್ತಿತ್ವವಿದೆ ಎಂಬ ನೋಟಕ್ಕೂ ಒಂದು ಅಂತಃಸಂಬಂಧವಿದೆ.
ವ್ಯಕ್ತಿಯನ್ನು ಬಿಟ್ಟು ಸಮಾಜವಿಲ್ಲ. ಸಮಾಜವನ್ನು ಬಿಟ್ಟು ವ್ಯಕ್ತಿಯಿಲ್ಲ. ಸಮಾಜವು ಶರೀರವಾದರೆ ವ್ಯಕ್ತಿಗಳು ಶರೀರದ ಅಂಗಗಳು. ಹೀಗೆ ಇಲ್ಲೊಂದು ಅಂಗಾಂಗೀ ಸಂಬಂಧವಿದೆ. ಮತ್ತು ಶರೀರದ ಲಕ್ಷಣವು ಅದರೆಲ್ಲ ಅಂಗಗಳಲ್ಲಿ ಸೂಕ್ಷ್ಮವಾಗಿ ಅಭಿವ್ಯಕ್ತಿಗೊಂಡಿರುತ್ತದೆ ಎಂಬ ಪರಂಪರೆಯ ಮಾತಿನಲ್ಲಿ ವ್ಯಕ್ತಿ-ಸಮಾಜಗಳ ಅಂಗಾಂಗೀಸಂಬಂಧವನ್ನು ಕಾಣಬೇಕೆನಿಸುತ್ತದೆ.
ವ್ಯಕ್ತಿಯ ತನ್ನತನವೇ ವ್ಯಕ್ತಿತ್ವ. ವ್ಯಕ್ತಿಯಿಂದ ವ್ಯಕ್ತಿತ್ವ. ಇಂಥ ವ್ಯಕ್ತಿತ್ವಗಳು ಸಮಷ್ಟಿಗೊಂಡು ಒಂದು ವ್ಯಕ್ತಿತ್ವವಾಗಿ ರೂಪಿತವಾದಾಗ ಸಮಾಜದ ವ್ಯಕ್ತಿತ್ವವೆನಿಸೀತು. ಚೆನ್ನಾಗಿ ಹಾಡಲು ಬಾರದ ಹತ್ತು ಮಂದಿ ಒಟ್ಟಾಗಿ ಹಾಡಿದಾಗ ಒಂದು ಕೇಳಬಹುದಾದ ಹಾಡು ಸರ್ಜನೆಯಾಗುತ್ತದೆ ನೋಡಿ! ಈ ಸಾಮೂಹಿಕ ಹಾಡು ಆ ಹತ್ತು ಮಂದಿಯಲ್ಲಿ ಯಾರೊಬ್ಬರದೂ ಅಲ್ಲ, ಆದರೆ ಅವರಲ್ಲಿ ಯಾರೊಬ್ಬರನ್ನೂ ಬಿಟ್ಟು ಆ ಹಾಡಿಲ್ಲ.
ಸಮಾಜದ ವ್ಯಕ್ತಿತ್ವವು ಸಮಾಜದಲ್ಲಿರುವ ಯಾವುದೇ ಒಬ್ಬ ವ್ಯಕ್ತಿಯದಲ್ಲ. ಆದರೆ ಎಲ್ಲರ ಸ್ವಭಾವಗಳ ಪ್ರಭಾವ ಅದರಲ್ಲಿದೆ. ಒಬ್ಬೊಬ್ಬರ ಸ್ವಭಾವವನ್ನು ಚೆಂದಗೊಳಿಸಿದಷ್ಟೂ ಸಮಾಜದ ವ್ಯಕ್ತಿತ್ವವು ಸುಸಂಸ್ಕೃತವಾಗುತ್ತ ಹೋಗುತ್ತದೆ.
ಜೀವಸುಧಾರಣೆಯ ಮೂಲಕ ಸಮಾಜಸುಧಾರಣೆ ಅಥವಾ ಒಂದರ ಪರಿವರ್ತನೆಯ ಮೂಲಕ ಮತ್ತೊಂದರ ಪರಿವರ್ತನೆ ಎಂಬ ಮಾತಿಗೆ ಇಲ್ಲಿ ತೂಕ ಬರುವುದು ಈ ಹಿನ್ನೆಲೆಯಲ್ಲಿ.
ಸಮರ್ಥಸುಧಾರಣೆ
ಸಮಾಜದ ವ್ಯಕ್ತಿತ್ವವನ್ನು ಕ್ಷಾತ್ರಸಂಪನ್ನವಾಗಿಸಲು ಸಮರ್ಥ ರಾಮದಾಸರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಎಲ್ಲೆಡೆ ವ್ಯಾಯಾಮಶಾಲೆಗಳನ್ನು ಪ್ರಾರಂಭಿಸಿದರು. ಯುವಕರು ದೊಡ್ಡ ಪ್ರಮಾಣದಲ್ಲಿ ಶರೀರದಾರ್ಢ್ಯವನ್ನು ಆಗುಮಾಡಿಕೊಂಡರು.
ತನ್ನ ಶರೀರವನ್ನು ದೃಢಪಡಿಸಿಕೊಳ್ಳಲು ಈ ವ್ಯಾಯಾಮಶಾಲೆಗೆ ಶಿವಾಜಿಯೇನೂ ಬಂದಿರಲಿಲ್ಲ. ಆದರೆ ರಾಷ್ಟ್ರಕ್ಕೆ ಗಟ್ಟಿ ನೇತೃತ್ವ ನೀಡುವಲ್ಲಿ ಆತ ತಯಾರಾದುದಕ್ಕೂ ಆತನ ಜತೆಗಾರರನ್ನು ಆತ ತಯಾರು ಮಾಡಿದುದಕ್ಕೂ ಸಮರ್ಥರ ವ್ಯಾಯಾಮಶಾಲೆಗೂ ಒಂದು ಅಂತಃಸಂಬಂಧವಿದೆ. ದುರುಳ ಪರಕೀಯರಿಗೆ ಇಡಿಯ ಸಮಾಜ ಅತೀವ ಕೀಳರಿಮೆಯಿಂದ ಕುರ್ನಿಸಾತ್ ಮಾಡುತ್ತಿದ್ದ ಸಂದರ್ಭದಲ್ಲಿ ಸಮರ್ಥರ ಧ್ಯೇಯವಿದ್ದುದು ಅದರಿಂದ ಸಮಾಜವನ್ನು ಮುಕ್ತವಾಗಿಸಿ ಸರಿ ವಿರುದ್ಧ ದಿಕ್ಕಿನಲ್ಲಿ ಸಮಾಜವನ್ನು ಸಿದ್ಧಗೊಳಿಸಬೇಕೆಂದು. ಸಮಾಜ ಹಾಗೆ ತಯಾರಾಗುವ ಪ್ರಕ್ರಿಯೆಯಲ್ಲಿ ಶಿವಾಜಿ ತಯಾರಾಗುತ್ತಿದ್ದ. ತನ್ನವರನ್ನು ತಯಾರುಮಾಡುತ್ತಿದ್ದ.
ಇವೆರಡರ ನಡುವೆ ತೋರುನೋಟಕ್ಕೆ ಕಾಣದ ಸಂಬಂಧವು ರೂಪುಗೊಂಡದ್ದು ಸಮಾಜದ ಒಂದು ಸಂಕಲ್ಪವಾಗಿ. ಗಾಳಿಯಲ್ಲಿದೆ ಇಲ್ಲವೇ ಆಕಾಶದಲ್ಲಿದೆ ಎಂದು ಲಘುಧಾಟಿಯಲ್ಲಿ ಹೇಳಬಹುದಾದ ಈ ಸಂಬಂಧವು ಇರುವುದು ಅಮೂರ್ತವಾಗಿ. ಪರಿಣಾಮವಾಗಿ ಶಿವಾಜಿ ಸಮರ್ಥರ ಶಿಷ್ಯನಾದ. ದುರುಳ ಪರಕೀಯರ ಹೆಡೆಮುರಿಕಟ್ಟಿ ತಾನು ನಿರ್ಮಿಸಿದ ಸ್ವರಾಜ್ಯವನ್ನು ಸಮರ್ಥರ ಮಡಿಲಿಗರ್ಪಿಸಿದ.
ತೋರುನೋಟಕ್ಕೆ ಸಮರ್ಥರು ಸುಧಾರಿಸಿದ್ದು ತರುಣರ ಶರೀರದೃಢತೆಯನ್ನು. ಆತ್ಯಂತಿಕವಾಗಿ ಸಾಧ್ಯಗೊಂಡದ್ದು ಘನಗಟ್ಟಿಯಾದ ಸಮಾಜದ ವ್ಯಕ್ತಿತ್ವ. ತನ್ಮೂಲಕ ಸಿದ್ಧಿಸಿದ್ದು ಸ್ವರಾಜ್ಯ.
ವ್ಯಕ್ತಿ ಮತ್ತು ಸಮಾಜ ಬಿಟ್ಟಿರಲಾರದ ಪರಸ್ಪರ ಮತ್ತು ಒಂದರ ಸುಧಾರಣೆ / ಪರಿವರ್ತನೆಯಿಂದ ಮತ್ತೊಂದರ ಸುಧಾರಣೆ / ಪರಿವರ್ತನೆಯೂ ಸಾಧ್ಯಗೊಳ್ಳುವುದು ಎಂಬ ಒಂದು ಚಿತ್ರಣ ನಮಗೀ ಸ್ವರಾಜ್ಯಾಂದೋಲನದ ಪ್ರಸಂಗದಲ್ಲಿ ದೃಢಗೊಂಡೀತು.
("ವಿಕ್ರಮ"ದ 'ಕಡೆಗೋಲು' ಅಂಕಣ)