“ಬ್ಯಾಂಕಾಕ್: ವಿಶ್ವ ಹಿಂದೂ ಸಮ್ಮೇಳನ (ವರ್ಲ್ಡ್ ಹಿಂದೂ ಕಾಂಗ್ರೆಸ್), 2023 ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ನವೆಂಬರ್ 24 ರಿಂದ 26ರವರೆಗೆ ನಡೆಯಿತು. ಈ ಸಮ್ಮೇಳನದಲ್ಲಿ ಹಿಂದೂ, ಹಿಂದುತ್ವ ಮತ್ತು ಸನಾತನ ಧರ್ಮದ ಕುರಿತು ಘೋಷಣೆಯನ್ನು ಹೊರಡಿಸಿದೆ.”

“ಘೋಷಣೆಯಲ್ಲಿ ‘ಹಿಂದೂ ಧರ್ಮ’ ಎಂಬ ಪದದಲ್ಲಿ ಮೊದಲ ಪದ ಹಿಂದೂ ಎನ್ನುವುದಕ್ಕೆ ಯಾವುದೇ ಮಿತಿಯಿಲ್ಲ. ಅದು ಸನಾತನ ಅಥವಾ ಶಾಶ್ವತವಾದದ್ದು ಎನ್ನುವುದನ್ನು ಸೂಚಿಸುತ್ತದೆ. ನಂತರದಲ್ಲಿ ಧರ್ಮ ಎಂಬ ಪದವಿದೆ. ಧರ್ಮ ಎಂದರೆ ‘ಯಾವುದು ಉಳಿಯುತ್ತದೆ’ ಎಂಬ ಅರ್ಥವನ್ನು ಸೂಚಿಸುತ್ತದೆ. ಹಾಗಾಗಿ ಹಿಂದೂ ಧರ್ಮವೆನ್ನುವಂತಹದ್ದು ಶಾಶ್ವತವಾಗಿ ವ್ಯಕ್ತಿ, ಕುಟುಂಬ, ಸಮುದಾಯ, ಸಮಾಜ, ಜೀವ – ನಿರ್ಜೀವವನ್ನೊಳಗೊಂಡ ಪ್ರಕೃತಿ ಎಲ್ಲವನ್ನೂ ಎತ್ತಿಹಿಡಿಯುತ್ತದೆ.”

“ಇದಕ್ಕೆ ವಿರುದ್ಧವಾಗಿ, ಹಿಂದೂಯಿಸಂ ಎನ್ನುವುದು ಸಂಪೂರ್ಣವಾಗಿ ಭಿನ್ನವಾದದ್ದು. ಏಕೆಂದರೆ ಇಸಂ ಎನ್ನುವುದು ಪದದ ಉತ್ತರಾರ್ಧದ ಪ್ರತ್ಯಯವಾಗಿ ಜೊತೆಸೇರಿದೆ. ಇಸಂ ಎಂಬ ಪದ ದಬ್ಬಾಳಿಕೆ ಮತ್ತು ತಾರತಮ್ಯದ ನಡವಳಿಕೆ ಅಥವಾ ನಂಬಿಕೆ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. 19ನೇ ಶತಮಾನದ ಮಧ್ಯಭಾಗದಲ್ಲಿ ಅಮೇರಿಕಾದಲ್ಲಿ ‘ದಿ ಇಸಂಸ್’ ಎನ್ನುವ ನುಡಿಗಟ್ಟು ತೀವ್ರಗಾಮಿ ಸಾಮಾಜಿಕ ಸುಧಾರಣಾ ಚಳವಳಿಗಳು ಮತ್ತು ಮುಖ್ಯಭೂಮಿಕೆಯಲ್ಲಿ ಕಾಣಸಿಗದ ಆಧ್ಯಾತ್ಮಿಕ ಅಥವಾ ಮತೀಯ ಚಳವಳಿಗಳನ್ನು ಉದ್ದೇಶಿಸಿ ಅವಹೇಳನಕಾರಿಯಾದ ರೀತಿಯಲ್ಲಿ ಬಳಕೆಯಾಯಿತು. ‘ಹಿಂದೂಯಿಸಂ’ ಎಂಬ ಶಬ್ದವನ್ನು ಈ ಹಿನ್ನಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ.”

“ಖ್ಯಾತ ಶಬ್ದಕೋಶವೆಂದು ಗುರುತಿಸಿಕೊಂಡಿರುವ ಸರ್ ಮನಿಯರ್ – ಮನಿಯರ್ ವಿಲಿಯಮ್ಸ್ ಅವರ ಕೈಪಿಡಿ ‘ಹಿಂದೂಯಿಸಂ’ ಮೂಲಕ ‘ಹಿಂದೂಯಿಸಂ’ ಎಂಬ ಪದವನ್ನು ಮೊದಲು ಪರಿಚಯಿಸಲ್ಪಟ್ಟಿತು. ಆ ಕೈಪಿಡಿಯನ್ನು ಸೊಸೈಟಿ ಫಾರ್ ಪ್ರೊಮೋಟಿಂಗ್ ಕ್ರಿಶ್ಚಿಯನ್ ನಾಲೆಡ್ಜ್ ವತಿಯಿಂದ 1877ರಲ್ಲಿ ಪ್ರಕಟಣೆಗೊಂಡಿತು. ಈ ವೈಚಾರಿಕ ಅಪ್ರಾಮಾಣಿಕ ಪರಿಭಾಷೆಯೇ ಕಳೆದ 150 ವರ್ಷಗಳಿಂದಿರುವ ಕೆಟ್ಟ ಹಿಂದೂ ವಿರೋಧಿ ಕಥನಗಳಿಗೆ ಬೀಜಾರ್ಪಣೆ ಮಾಡಿದೆ.”

“ಈ ಕಾರಣದಿಂದಾಗಿ ನಮ್ಮ ಅನೇಕ ಹಿರಿಯರು ಹಿಂದೂಯಿಸಂನ ಬದಲು ಹಿಂದು ಪದವು ಸೂಚಿಸುವ ಎಲ್ಲ ಹರವನ್ನು ಒಳಗೊಂಡ ಹೆಚ್ಚು ಸೂಕ್ತವಾದ ಹಿಂದುತ್ವ ಶಬ್ದಕ್ಕೆ ಆದ್ಯತೆ ನೀಡಿದರು. ನಾವು ಅದನ್ನು ಒಪ್ಪಿಕೊಳ್ಳುತ್ತೇವೆ ಮತ್ತು ಅದನ್ನೇ ಪಾಲಿಸುತ್ತೇವೆ. ಹಿಂದುತ್ವ ಎನ್ನುವುದು ಸಂಕೀರ್ಣವಾದ ಪದವಲ್ಲ. ಸುಲಭವಾಗಿ ಹೇಳಬೇಕೆಂದರೆ ಅದು ಹಿಂದೂತನ ಎಂದಾಗಿದೆ. ಬೇರೆ ಅನೇಕರು ಇದಕ್ಕೆ ಪರ್ಯಾಯವಾಗಿ ಸನಾತನ ಧರ್ಮವೆಂದು ಬಳಸುತ್ತಾರೆ. ಅದುವೇ ಸಂಕ್ಷೇಪಣಗೊಂಡು ಸನಾತನ ಎಂದಾಗಿದೆ. ಇಲ್ಲಿ ಸನಾತನ ಎನ್ನುವುದು ಹಿಂದೂ ಧರ್ಮದ ಶಾಶ್ವತವಾದ ಸ್ವಭಾವವನ್ನು ಸೂಚಿಸುವ ವಿಶೇಷಣವಾಗಿದೆ.”

“ಹಾಗಿದ್ದರೂ ಸಮಾಜದ ಅನೇಕ ಸಾರ್ವಜನಿಕ ವೇದಿಕೆಗಳಲ್ಲಿ ಅನೇಕ ಶಿಕ್ಷಣ ತಜ್ಞರು ಮತ್ತು ಚಿಂತಕರು ನಿರಂತರವಾಗಿ ಅತ್ಯಂತ ಋಣಾತ್ಮಕವಾಗಿ ಹಿಂದುತ್ವವನ್ನು ಹಿಂದೂ ಧರ್ಮದ ವಿರೋಧಿ ಪದವಾಗಿ ಪ್ರಸ್ತುತ ಪಡಿಸುತ್ತಾರೆ. ಕೆಲವರಿಗೆ ಹೀಗೆ ಮಾಡುವುದಕ್ಕೆ ಅವರ ಅಜ್ಞಾನವೇ ಕಾರಣವಾಗಿದ್ದರೆ ಇನ್ನೂ ಕೆಲವರಿಗೆ ಹಿಂದೂ ಧರ್ಮದ ಕುರಿತಾದ ತಮ್ಮ ದ್ವೇಷ ಮತ್ತು ಪಕ್ಷಾಪಾತವೇ ಕಾರಣವಾಗಿದೆ. ಅನೇಕ ರಾಜಕೀಯ ನಾಯಕರುಗಳು ಕೂಡ ತಮ್ಮ ರಾಜಕೀಯ ಅಜೆಂಡಾಗಳು ಮತ್ತು ವೈಯಕ್ತಿಕ ಪೂರ್ವಗ್ರಹ ಪೀಡಿತರಾಗಿ ಸನಾತನ ಧರ್ಮವನ್ನು, ಸನಾತನವನ್ನು ಟೀಕಿಸುವ ತಂಡದ ಜೊತೆಗೆ ಸೇರಿಕೊಂಡಿದ್ದಾರೆ ಮತ್ತು ನಿರಂತರವಾಗಿ ಕಟುಟೀಕೆಯನ್ನು ಮಾಡುತ್ತಿದ್ದಾರೆ.”

“ಹೀಗೆ ದುರುದ್ದೇಶಪೂರಕವಾಗಿ ಹಿಂದುತ್ವ ಅಥವಾ ಸನಾತನ ಧರ್ಮ ಅಥವಾ ಸನಾತನವನ್ನು ಟೀಕಿಸುವ ಮೂಲಕ ಹಿಂದೂ ಧರ್ಮವನ್ನು ಗುರಿಯಾಗಿಸುತ್ತಿರುವ ವರ್ತನೆಯನ್ನು ವಿಶ್ವದ ಹಿಂದೂ ಜನಾಂಗದ ಪರವಾಗಿ ವಿಶ್ವ ಹಿಂದೂ ಕಾಂಗ್ರಸ್ ಖಂಡಿಸುತ್ತದೆ.”

“ಈ ಎಲ್ಲಾ ಪರಿಭಾಷೆಗಳೂ ಕೂಡ ಸುಂದರ, ಒಳ್ಳೆಯ ಮತ್ತು ಉದಾತ್ತವಾದ ಅರ್ಥವನ್ನೇ ಒಳಗೊಂಡಿದೆ. ವಾಸ್ತವವಾಗಿ ಇದು ಒಳ್ಳೆಯದರ ಮೇಲಿನ ದಾಳಿಯೇ ಆಗಿದೆ. ವಿಶ್ವ ಹಿಂದೂ ಕಾಂಗ್ರೆಸ್ ಸಮರ್ಥವಾಗಿ ಇಂತಹ ದಾಳಿಗಳನ್ನು ಖಂಡಿಸುತ್ತದೆ ಮತ್ತು ವಿಶ್ವ ವ್ಯಾಪಿಯಾಗಿರುವ ಹಿಂದುಗಳಿಗೆ ಸಾಂಘಿಕ ಜಾಗತಿಕ ಪ್ರಯತ್ನಗಳ ಮೂಲಕ ಹಿಂದುತ್ವವನ್ನು ಅಭಿವ್ಯಕ್ತಿಸುವುದಕ್ಕೆ ತಿಳಿಸುತ್ತದೆ. ಆ ಮೂಲಕ ಹಿಂದೂ ವಿರೋಧಿ ದಾಳಿಗಳು, ಮತಾಂಧತೆಗಳಲ್ಲಿ ಒಳಗೊಂಡಿರುವವರು ವಿಜಯಶಾಲಿಗಳಾಗುವುದರಿಂದ ತಪ್ಪಿಸಬೇಕಾಗಿದೆ” ಎಂದು ತಿಳಿಸಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.