ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಕೋದ್ಯಮವು ಒಂದು ಅವಿಭಾಜ್ಯ ಅಂಗ. ಜಗತ್ತಿನಾದ್ಯಂತ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ’ವನ್ನು ಪ್ರತಿವರ್ಷ ಮೇ 3 ರಂದು ಆಚರಿಸಲಾಗುತ್ತದೆ. ಈ ದಿನವು ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡ ಪತ್ರಕರ್ತರನ್ನು ಗೌರವಿಸುತ್ತದೆ. ಒಂದು ಮಹತ್ವದ ಘಟನೆಯ ಹಿಂದಿನ ಸತ್ಯವನ್ನು ತಿಳಿದುಕೊಳ್ಳಲು ಪತ್ರಕರ್ತರು ತಮ್ಮ ಜೀವನವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಅವರ ಶ್ರಮವನ್ನು ಗುರುತಿಸುವ ಕಾರಣಕ್ಕಾಗಿ ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಥೀಮ್‌ A Press for the Planet: Journalism in the Face of the Environmental Crisis.

ಮೊದಲ ಪತ್ರಿಕೆ ವರ್ಷ

1556 ರಲ್ಲಿ ಮೊದಲ ನಿಯತಕಾಲಿಕ ಹಾಗೂ ಮಾಸಿಕ ಪತ್ರಿಕೆ ನೋಟಿಜಿ ಸ್ಕ್ರೈಟ್ ಎಂಬುದು ವೆನಿಸ್‌ ನಲ್ಲಿ ಪ್ರಕಟಗೊಂಡಿತ್ತು. ನಂತರ 18- 19ನೇ ಶತಮಾನದಲ್ಲಿ ಮುದ್ರಣ ಯಂತ್ರೋಪಕರಣಗಳು ಮತ್ತು ಅಗ್ಗದ ಕಾಗದ ತಯಾರಿಕೆ ತಂತ್ರಜ್ಞಾನಗಳು ಹಂತ ಹಂತವಾಗಿ ಬೆಳವಣಿಗೆಗೆ ಕಾರಣವಾಯಿತು. 20ನೇ ಶತಮಾನದ ಮಧ್ಯಭಾಗದಲ್ಲಿ ಪತ್ರಿಕೋದ್ಯಮವು ವೇಗವಾಗಿ ಬೆಳೆಯಲು ಶುರುವಾಯಿತು. ಜಗತ್ತಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಸೇರಿದಂತೆ ಅನೇಕ ಕೃತ್ಯಗಳನ್ನು ಪತ್ರಿಕೆಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಯಶಸ್ವಿಯಾಯಿತು.

ಇತಿಹಾಸ
1991 ರಲ್ಲಿ ಆಫ್ರಿಕನ್‌ ಪತ್ರಕರ್ತರ ಗುಂಪೊಂದು ನಮೀಬಿಯಾದಲ್ಲಿ ಮುಕ್ತವಾಗಿ ಸಭೆ ಸೇರಿ ಸ್ವತಂತ್ರ ಪತ್ರಿಕೋದ್ಯಮವನ್ನು ಬೆಂಬಲಿಸುವ ಸಲುವಾಗಿ ವಿಂಡ್‌ಹೋಕ್ ಘೋಷಣೆಯನ್ನು ರಚಿಸಿತು. ಯುನೆಸ್ಕೋದ 26ನೇ ಸಾಮಾನ್ಯ ಸಮ್ಮೇಳನದಲ್ಲಿ ಮಾಡಿದ ಶಿಫಾರಸಿನ ನಂತರ ಈ ಘೋಷಣೆ ಹೊರಹೊಮ್ಮಿತು. ಈ ಪರಿಣಾಮವಾಗಿ 1993 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೇ 3 ಅನ್ನು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವೆಂದು ಘೋಷಿಸಲಾಯಿತು. ಈ ವೇಳೆ ಆಫ್ರಿಕನ್ ಅಂತರ್ಯುದ್ಧಗಳ ಸಮಯದಲ್ಲಿ ಪತ್ರಕರ್ತರ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಿನವನ್ನು ವಿಶ್ವಸಂಸ್ಥೆ ಆರಂಭಿಸಿತು. ಅಂದಿನಿಂದ ಪತ್ರಿಕಾ ಸ್ವಾತಂತ್ರ್ಯದ ಮಹತ್ವ ಮತ್ತು ಮಾಧ್ಯಮದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಶುರುವಾದಗಿಂದಲೂ ಡಿಸೆಂಬರ್‌ 17, 1986 ರಂದು ಕೊಲಂಬಿಯಾದ ಬೊಗೊಟಾದ ಎಲ್‌ ಎಸ್ಪೆಕ್ಟಡಾರ್‌ ಎಂಬ ಪತ್ರಿಕಾ ಕಚೇರಿಯ ಮುಂದೆ ಹತ್ಯೆಗೀಡಾದ ಕೊಲಂಬಿಯಾ ಪತ್ರಕರ್ತ ಗಿಲ್ಲೆರ್ಮೊ ಕ್ಯಾನೊ ಇಸಾಜಾ ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ಮಹತ್ವ

ಸೆನ್ಸಾರ್‌ ಮೂಲಕ ಪತ್ರಿಕೆಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮತ್ತು ಕಿರುಕುಳ ನೀಡುವ ದೇಶಗಳ ವ್ಯವಸ್ಥೆಯ ಮೇಲೆ ಒತ್ತಡ ಹೇರಿ ಸುವ್ಯವಸ್ಥೆಗೆ ಮರಳಲು ಸಹಾಯ ಮಾಡುತ್ತದೆ.

ಸತ್ಯಕ್ಕೆ ಬದ್ಧರಾಗಿರುವ ಪತ್ರಿಕೋದ್ಯಮದ ಮೌಲ್ಯವನ್ನು, ಪ್ರಾಮಾಣಿಕ ಪತ್ರಕರ್ತರು ಒದಗಿಸುವ ಸಾರ್ವಜನಿಕ ಸೇವೆಯನ್ನು ಗುರುತಿಸಲಾಗಿದೆ.

ಜನರಿಗೆ ಮಾಹಿತಿ ನೀಡಲು ತಮ್ಮ ಪ್ರಾಣವನ್ನು ಅರ್ಪಿಸಿದವರನ್ನು ನೆನಪಿಸಲು ಈ ದಿನ ಸಹಕಾರಿಯಾಗಿದೆ.

ಮಾಧ್ಯಮಗಳನ್ನು ಅವರ ಸ್ವಾತಂತ್ರ್ಯದ ಮೇಲಿನ ದಾಳಿಗಳಿಂದ ರಕ್ಷಿಸುವುದನ್ನು ಆಗ್ರಹಿಸುತ್ತದೆ.

ಪ್ರಪಂಚದಾದ್ಯಂತ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿಯನ್ನು ನಿರ್ಣಯಿಸುವುದಕ್ಕೆ ಈ ದಿನ ಪೂರಕವಾಗಿದೆ.

ಪತ್ರಕರ್ತರು ತಮ್ಮ ಕೆಲಸಗಳನ್ನು ಮಾಡಲು ಸುರಕ್ಷಿತ ಸ್ಥಳವನ್ನು ರಚಿಸುವಲ್ಲಿ ಸರ್ಕಾರ ಬೆಂಬಲಿಸಬೇಕೆಂದು ಪುನರುಚ್ಚರಿಸಲು ಈ ದಿನ ಸಹಾಯ ಮಾಡುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.