ಬೆಂಗಳೂರು: ಭಾರತ ಜಗತ್ತನ್ನು ಕಾಪಾಡಬಲ್ಲದು ಎಂಬ ಮನೋಭಾವವನ್ನು ರಷ್ಯಾ-ಯುಕ್ರೇನ್ ಯುದ್ಧ ಸನ್ನಿವೇಷಗಳು, ಕೊರೋನಾ ಕಾಲಘಟ್ಟ ವಿಶ್ವದ ಜನತೆಯಲ್ಲಿ ಮೂಡಿಸಿದೆ. ಭಾರತ ಸಮರ್ಥ, ಶಕ್ತಿಶಾಲಿ, ಸ್ವಾಭಿಮಾನಿಯಾಗುವ ಹೊತ್ತಿನಲ್ಲಿ ರಾಷ್ಟ್ರಕ್ಕಾಗಿ ಕಾರ್ಯಪ್ರವೃತ್ತರಾಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಮರ್ಥ ಭಾರತದ ‘BE GOOD DO GOOD – 2023’ ಅಭಿಯಾನವನ್ನು ಉದ್ಘಾಟಿಸಿ ಅವರು ಗುರುವಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಮರ್ಥ ಭಾರತದ ಪ್ರಧಾನ ಮಾರ್ಗದರ್ಶಕ ನಾ ತಿಪ್ಪೇಸ್ವಾಮಿ ಮಾತನಾಡಿ ಭಾರತ ದೇಶ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಗುಲಾಮಗಿರಿಯಲ್ಲಿದ್ದಾಗ ರಾಷ್ಟ್ರದ ಉದ್ದಗಲವನ್ನು ಸಂಚರಿಸಿ ನಾಡಿನ ಜನತೆಯಲ್ಲಿ ಜಾಗೃತಿ ಮೂಡಿಸಿದವರು ಸ್ವಾಮಿ ವಿವೇಕಾನಂದರು. ಈ ರಾಷ್ಟ್ರದ ಯುವಕರ ಮೇಲೆ ವಿಶ್ವಾಸವನ್ನಿಟ್ಟು ಅವರಲ್ಲಿ ನಾಡಿಗಾಗಿ ದುಡಿಯುವ ಮನಸ್ಥಿತಿಯನ್ನು ಬೆಳೆಸಿದರು. ಭಾರತದ ಮಣ್ಣಿನ ಕಣಕಣವೂ ಪವಿತ್ರ ಎಂದು ಪೂಜಿಸಿ ರಾಷ್ಟ್ರಭಕ್ತಿಯಲ್ಲಿ ಯುವಜನತೆಗೆ ಮಾದರಿಯಾದರು ಎಂದು ನುಡಿದರು.

ವಿವೇಕಾನಂದರು ಸಾರ್ವಕಾಲಿಕ ಯುಥ್ ಐಕನ್. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಅಂದೊಮ್ಮೆ ಜಗತ್ತಿಗೆ ವಿಶ್ವಗುರುವಾಗಿದ್ದ ಭಾರತ ಇಂದು ಮತ್ತೆ ಆ ಸ್ಥಾನವನ್ನು ತಲುಪಿ, ಸಮರ್ಥ ಭಾರತದ ರಚನೆಯಾಗಬೇಕಾದರೆ ಸ್ವಾಮಿ ವಿವೇಕಾನಂದರ ಚಿಂತನೆಗಳ ಅನುಷ್ಠಾನವನ್ನು ಮಾಡಬೇಕು. ಯಾರು ತನಗೋಸ್ಕರ ಬದುಕುತ್ತಾರೋ ಅವರು ಬದುಕಿದ್ದೂ ಸತ್ತಂತೆ. ಯಾರು ಇತರರಿಗಾಗಿ ಬದುಕುತ್ತಾರೋ ಅವರದು ನಿಜವಾದ ಬದುಕು ಎಂಬುದನ್ನು ವಿವೇಕಾನಂದರು ಸಾರಿ ಹೇಳಿದ್ದರು. ತ್ಯಾಗ ಮತ್ತು ಸೇವೆ ಈ ರಾಷ್ಟ್ರದ ಆದರ್ಶಗಳು ಎನ್ನುವುದನ್ನೂ ತಿಳಿಸಿದ್ದರು. ಅಂತಹ ಆದರ್ಶಗಳನ್ನು ನಾವು ಅಳವಡಿಸಿಕೊಂಡಾಗ ಭಾರತ ಮತ್ತೊಮ್ಮೆ ವಿಶ್ವಗುರುವಾಗುತ್ತದೆ ಎಂದು ನುಡಿದರು.

ಜಗತ್ತು ಅಚ್ಚರಿ ಪಡುವ ರೀತಿಯಲ್ಲಿ ಭಾರತದ ಪ್ರತಿಭಾನ್ವಿತ ಯುವಕರು ಗುರುತಿಸಿಕೊಳ್ಳುತ್ತಿದ್ದಾರೆ. ಅಂತಹ ಯುವಕರನ್ನು ಸಮಾಜಮುಖಿಯಾಗಿ ಚಿಂತಿಸುವಂತೆ ತಯಾರು ಮಾಡಿದಾಗ ರಾಷ್ಟ್ರ ಸದೃಢವಾಗುತ್ತದೆ. ಈ ದೃಷ್ಟಿಯಿಂದ ಸಮರ್ಥ ಭಾರತದ ‘BE GOOD DO GOOD’ ಅಭಿಯಾನ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಯುವಕನೂ ಅಸಮಾನ್ಯ ಇಚ್ಛಾಶಕ್ತಿಯೊಂದಿಗೆ ಉತ್ತಮನಾಗಬೇಕು. ಸಂಕಷ್ಟದಲ್ಲಿರುವವರ ದನಿಯಾಗುವ ಮೂಲಕ ಉಪಕಾರಿಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ನಿರಂಜನ ವಾನಳ್ಳಿ ಮಾತನಾಡಿ ವಿವೇಕಾನಂದರು ಅಂದು ವಿಶ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಕೆಲವು ನಿಮಿಷಗಳಷ್ಟೇಯಾದರೂ ಇಂದಿಗೂ ಪ್ರತಿಯೊಬ್ಬರ ಹೃದಯದಲ್ಲಿದ್ದಾರೆ. ಅವರ ಮಾತಿನಂತೆ ಎಲ್ಲಾ ಶಿಕ್ಷಣದ ಉದ್ದೇಶವೇ ಉತ್ತಮ, ಉಪಕಾರಿ ನಾಗರಿಕರನ್ನು ಸೃಷ್ಟಿಸುವುದೇ ಆಗಿದೆ ಎಂದು ಹೇಳಿದರು.

ಈ ದೇಶದ ಬಡತನ ನೀಗುವವರೆಗೂ ಇಲ್ಲಿನ ವಿದ್ಯಾವಂತರನ್ನು ನಾನು ವಿದ್ಯಾವಂತರೆಂದು ಪರಿಗಣಿಸುವುದಿಲ್ಲ ಎಂದು ವಿವೇಕಾನಂದರು ಹೇಳುತ್ತಾರೆ. ಆದರೆ ಇಂದು ವಿದ್ಯಾವಂತರೇ ಬಡತನದಲ್ಲಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕಾದರೆ ಇಂಡಿಯಾ ‘ಭಾರತ’ವಾಗಬೇಕು. ನಮ್ಮ ಮಣ್ಣಿನ ಸಂಸ್ಕೃತಿಯನ್ನು ಗೌರವಿಸುವುದು ನಿಜವಾದ ಶ್ರೀಮಂತಿಕೆಯಾದ್ದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸುವ ಮೂಲಕ ಸಮರ್ಥ, ಸಶಕ್ತ ಬಹುತ್ವ ಭಾರತವನ್ನು ನಿರ್ಮಿಸಿ ವಿವೇಕಾನಂದರಿಗೆ ಗೌರವ ಸಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಯಕ್ಷಾ ಪ್ರಾರ್ಥಿಸಿದರು. ಸಮರ್ಥ ಭಾರತದ ವಿಶ್ವಸ್ಥ ರಾಜೇಶ್ ಪದ್ಮಾರ್ ಸ್ವಾಗತಿಸಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ನರಸಿಂಹ ಮೂರ್ತಿ ವಂದಿಸಿದರು. ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಉಪನ್ಯಾಸಕಿ ಡಾ.ಮಾಲಿನಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.