ಜನವರಿ ೧೫ರಿಂದ ಆರಂಭಗೊಂಡು ಫೆಬ್ರವರಿ ೫ ರ ವರೆಗೆ ನಡೆಯುವ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಇಂದು ಬಿಳಿಗ್ಗೆಯಿಂದ ದೇಶದೆಲ್ಲೆಡೆ ಆರಂಭಗೊಂಡಿದೆ. ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ್ ಕೂಡ ನಿಧಿಗೆ ಧನಸಹಾಯ ಮಾಡಿದ್ದಾರೆ. ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ದೆಹಲಿಯಲ್ಲಿ ಪೂಜ್ಯ ಮಹಾಮಂಡಲೇಶ್ವರ ಕೃಷ್ಣ ಷಾ ವಿದ್ಯಾರ್ಥಿ ಜಿ ಅವರನ್ನು ಭೇಟಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಆರೆಸ್ಸೆಸ್ ಸರಕಾರ್ಯವಾಹರಾದ ಶ್ರೀ ಭೈಯ್ಯಾಜಿ ಜೋಶಿಯವರು ಜಮ್ಮು ಕಾಶ್ಮೀರದಲ್ಲಿ ಅಭಿಯಾನದಲ್ಲಿ ಭಾಗವಹಿಸಿದರು. ಆರೆಸ್ಸೆಸ್ ನ ಅಖಿಲ ಭಾರತ ಸಹ ಪ್ರಚಾರ ಪ್ರಮುಖರಾದ ಶ್ರೀ ನರೇಂದ್ರ ಠಾಕೂರ್ ಬಿಹಾರದ ಉಪಮುಖ್ಯಮಂತ್ರಿಗಳಾದ ತಾರ್ ಕಿಶೋರ್ ಪ್ರಸಾದ್ ಅವರ ಜೊತೆ ಅಭಿಯಾನದಲ್ಲಿ ಭಾಗಿಯಾದರು.
ಇನ್ನು ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಅಭಿಯಾನ ಆರಂಭಗೊಂಡಿದ್ದು ಜನರು ತಮ್ಮ ಕೈಲಾದ ಹಣವನ್ನು ಭವ್ಯ ರಾಮಮಂದಿರದ ನಿರ್ಮಾಣಕ್ಕೆ ಅರ್ಪಣೆ ಮಾಡತೊಡಗಿದ್ದಾರೆ.
ಬೆಂಗಳೂರಿನಲ್ಲಿ, ಇಸ್ಕಾನ್ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಮಧುಪಂಡಿತ್ ದಾಸ್ ಜೀ ಅವರಿಂದ ಇಸ್ಕಾನ್ ಮಂದಿರದಲ್ಲಿ ಅಭಿಯಾನದ ಉದ್ಘಾಟನೆ ನಡೆಯಿತು. ಸ್ಥಳೀಯ ಮನೆಗಳ ಸಂಪರ್ಕ ಹಾಗೂ ಅಂಬೇಡ್ಕರ್ ಕಾಲೋನಿಗೆ ( ಸೇವಾಬಸ್ತಿಗೆ ) ಅವರು ಭೇಟಿ ನೀಡಿದರು. ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಶ್ರೀಮತಿ ತಾರಾ ಅನುರಾಧಾ ,ನಟ,ನಿರ್ದೇಶಕ ಸುನಿಲ್ ಪುರಾಣಿಕ, ಭಾಗವಹಿಸಿದರು. ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ಬಸವರಾಜು ಮತ್ತು ವಿಹಿಂಪ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಾಯಿ ವೆಂಕಟೇಶ್ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಂಗಳೂರು ಉತ್ತರ ವಿಭಾಗದ ಹೆಬ್ಬಾಳದಲ್ಲಿ ದಲಿತ ಸಂಘರ್ಷ ಸಮಿತಿಯ ಲಕ್ಷ್ಮೀನಾರಾಯಣ ನಾಗವಾರ ಅವರನ್ನು ಅಭಿಯಾನದ ಅಂಗವಾಗಿ ಆರೆಸ್ಸೆಸ್ ಸಹ ಸರಕಾರ್ಯವಾಹರಾದ ಶ್ರೀ ಮುಕುಂದ ಭೇಟಿ ಮಾಡಿದರು. ಅಲ್ಲದೆ ಹೆಬ್ಬಾಳದ ದೊಡ್ಡಣ್ಣನಗರದಲ್ಲಿಯೂ ಶ್ರೀ ಮುಕುಂದರು ಹೆಜ್ಜೆ ಹಾಕಿದರು ಹಾಗೂ ಅಭಿಯಾನದ ದೃಷ್ಟಿಯಿಂದ ಮನೆಮನೆಗೆ ತೆರಳಿದರು.
ಇನ್ನು ಮೈಸೂರು ಮಹಾನಗರದಲ್ಲಿ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಿತ್ರನಟ ಅಭಿಷೇಕ್ ಅಂಬರೀಶ್ ಚಾಲನೆ ನೀಡಿದರು. ಮಂಡ್ಯದ ಸಂಸದರಾದ ಸುಮಲತಾ ಅಂಬರೀಷ್ ನಿಧಿಗೆ ತಮ್ಮ ಸಮರ್ಪಣೆಯನ್ನು ಮಾಡಿದ್ದಾರೆ. ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಶ್ರೀ ಪಟ್ಟಾಭಿರಾಮ್ ಅವರು ಅಭಿಯಾನದ ಕುರಿತಾಗಿ ಶಿವಮೊಗ್ಗದಲ್ಲಿ ಮಾತನಾಡಿದರು.
ತುಮಕೂರಿನಲ್ಲಿ ಸಿದ್ದಗಂಗಾ ಮಠದ ಪೂಜ್ಯ ಸ್ವಾಮೀಜಿಯವರಿಂದ ರಾಮ ಮಂದಿರ ನಿಧಿ ಸಂಗ್ರಹ ಅಭಿಯಾನ ಉದ್ಘಾಟನೆ ಜರುಗಿತು. ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ಬರಿಯ ಮಂದಿರವಷ್ಟೇ ಅಲ್ಲ ಭವ್ಯ ದಿವ್ಯ ರಾಷ್ಟ್ರ ಮಂದಿರ. ಅದಕ್ಕೆ ಪ್ರತಿಯೊಬ್ಬರೂ ತಮ್ಮ ತನು-ಮನ-ಧನಗಳನ್ನು ಅರ್ಪಿಸುವುದರ ಮುಖಾಂತರ ಆದಷ್ಟು ಶೀಘ್ರ ಮಂದಿರ ನಿರ್ಮಾಣ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವುದಕ್ಕೆ ಸರ್ವರು ಪ್ರಯತ್ನಿಸಬೇಕು ಎಂದು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಕರೆ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ತುಮಕೂರು ಜಿಲ್ಲಾ ಸಂಘಚಾಲಕರಾದ ಶ್ರೀ ನಾಗೇಂದ್ರ ಪ್ರಸಾದ್, ಜಿಲ್ಲಾ ಕಾರ್ಯವಾಹರಾದ ಶ್ರೀ ನವೀನ್ ಹಿಂದೂ ಜಾಗರಣ ವೇದಿಕೆಯ ಶ್ರೀ ಬಸವರಾಜು, ವಿನೀತ್ ನರಸಿಂಹರಾಜು ಮತ್ತಿತರರು ಹಾಜರಿದ್ದರು.
ಉಡುಪಿಯ ಶ್ರೀ ಕೃಷ್ಣಮಠದಲ್ಲಿ,ಚೂರ್ಣೋತ್ಸವದ ಬಳಿಕ ಮಧ್ವ ಮಂಟಪದಲ್ಲಿ, ಅಯೋಧ್ಯ ಶ್ರೀ ರಾಮಚಂದ್ರ ದೇವರ ಮಂದಿರ ನಿರ್ಮಾಣಕ್ಕಾಗಿ ವಿಶ್ವಹಿಂದೂ ಪರಿಷತ್ತಿನವರು ರಾಷ್ಟ್ರವ್ಯಾಪಿ ನಿಧಿ ಸಮರ್ಪಣಾ ಅಭಿಯಾನವನ್ನು ಹಮ್ಮಿಕೊಂಡ ಪ್ರಯುಕ್ತ ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ತರಾದ ಶ್ರೀ ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಹಾಗೂ ಅಷ್ಟ ಮಠಾಧೀಶರಾದ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಮತ್ತು ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಿಧಿ ಸಮರ್ಪಣೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ವಿ.ಹಿ.ಪ ದ ಜಿಲ್ಲಾಧ್ಯಕ್ಷರಾದ ವಿಷ್ಣುಮೂರ್ತಿ ಆಚಾರ್ಯ,ಬಿ.ಜೆ.ಪಿ.ಯ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ,ಸಂಘ ಪರಿವಾರದ ರಾಮಚಂದ್ರ ಸನಿಲ್,ಸುರೇಶ ಹೆಜಮಾಡಿ ,ಗಣಪತಿ ನಾಯಕ್,ಕಿಶೋರ್ ಮೊದಲಾದವರು ಉಪಸ್ಥಿತರಿದ್ದರು.
ಮಡಿಕೇರಿಯ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಮಡಿಕೇರಿಯ ಅಭಿಮನ್ಯು ವಸತಿ ವತಿಯಿಂದ ವಿಶೇಷ ಪೂಜೆ, ಪ್ರಾಥ೯ನೆ ಸಲ್ಲಿಸುವ ಮೂಲಕ ಅಯೋಧ್ಯೆಯಲ್ಲಿನ ಶ್ರೀ ರಾಮಮಂದಿರ ನಿಮಾ೯ಣಕಾಯ೯ಕ್ಕೆ ನಿಧಿ ಸಮಪ೯ಣಾ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಪ್ರಮುಖರಾದ ಬಿ.ಕೆ. ಅರುಣ್ ಕುಮಾರ್, ಜೀವನ್ , ಅನಿತಾಪೂವಯ್ಯ, ಚಂದ್ರಶೇಖರ್, ಆರ್.ಬಿ.ರವಿ, ನವೀನ್ ಪೂಜಾರಿ, ಶಿವಕುಮಾರ್, ಭಾರತಿ ರಮೇಶ್ , ಪ್ರೇಮಾ, ಶ್ವೇತಾ, ಮಿನಾ ಕುಮಾರಿ, ರುಕ್ಮಿಣಿ, ಭವಾನಿ ಸೇರಿದಂತೆ ಇತರ ಮುಖಂಡರು ಪಾಲ್ಗೊಂಡಿದ್ದರು.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಶ್ರೀದೇಗುಲ ಮಠದ ಹಿರಿಯ ಸ್ವಾಮಿ ಶ್ರೀಶ್ರೀಶ್ರೀ ಡಾ|| ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ ಮಾಡಿದರು.
ಬೆಂಗಳೂರಿನ ಹಲಸೂರಿನಲ್ಲಿ ೨೫ ವರ್ಷಗಳಿಂದ ಶ್ರೀ ರಾಮನ ಭಜನೆಯನ್ನು ಆಯೋಜಿಸುತ್ತಿದ್ದ ಅಮ್ಮಾಯಿ ಅವರು ತಾವು ಭಜನೆಯಿಂದ ಸಂಗ್ರಹಿಸಿದ್ದ ಅಷ್ಟೂ ಹಣವನ್ನು ಶ್ರೀ ರಾಮ ಮಂದಿರ ನಿರ್ಮಾಣದ ನಿಧಿಗೆ ಅರ್ಪಣೆ ಮಾಡಿದ್ದಾರೆ.