‘ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು’ ಪುಸ್ತಕದ ಕುರಿತಾದ ಸಂವಾದ.
ಹುಬ್ಬಳ್ಳಿ, 24 ಜನವರಿ 2020: ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಇಂದು ಸಂಜೆ 5 ಗಂಟೆಗೆ ನಿರಾಮಯಾ ಫೌಂಡೇಶನ್ ವತಿಯಿಂದ ಹಮ್ಮಿಕೊಂದಿದ್ದ “ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು” ಪುಸ್ತಕದ ಕುರಿತಾದ ಸಂವಾದ ಕಾರ್ಯಕ್ರಮ ಜರುಗಿತು. ಹೊಸದಿಗಂತ ಪತ್ರಿಕೆಯ ಸಂಪಾದಕರಾದ ವಿನಾಯಕ ಭಟ್, ಅಂಕಣಕಾರರು, ಲೇಖಕರಾದ ರೋಹಿತ್ ಚಕ್ರತೀರ್ಥ, ಪತ್ರಕರ್ತರು, ಅಂಕಣಕಾರರಾದ ಗೀರ್ವಾಣಿ ಭಟ್, ವಿಕ್ರಮ ಪತ್ರಿಕೆಯ ಸಂಪಾದಕರಾದ ವೃಷಾಂಕ ಭಟ್ ಸೇರಿ ಬರೆದಿರುವ ಈ ಪುಸ್ತಕ ಬಾಂಗ್ಲಾ ಹಿಂದುಗಳು ತಮ್ಮ ನೆಲದಲ್ಲಿ ದೌರ್ಜನ್ಯ ಅನುಭವಿಸಿ ನಿರಾಶ್ರಿತರಾಗಿ ಭಾರತಕ್ಕೆ ಬಂದ ಕತೆಗಳನ್ನು ರೋಚಕವಾಗಿ ಬರೆದಿದ್ದಾರೆ.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯರೂ ಹಾಗೂ ಕಿಮ್ಸ್ ನ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ರಾಜಶೇಖರ್ ಕಂಪ್ಲಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ವಕ್ತಾರರಾಗಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಜ್ಞಾ ಪ್ರವಾಹದ ಸಂಯೋಜಕರಾದ ಶ್ರೀ ರಘುನಂದನ ಅವರು ರಾಷ್ಟ್ರೀಯ ಪೌರತ್ವ ಕಾಯ್ದೆಯ ಕುರಿತಾಗಿ ಅನೇಕ ವಿಚಾರಗಳನ್ನು ತಿಳಿಸಿದರು ಮತ್ತು CAA ಭಾರತಕ್ಕೆ ಎಷ್ಟು ಅವಶ್ಯಕವಾಗಿದೆ ಹಾಗೂ ಹೊರ ದೇಶದ ಅಲ್ಪಸಂಖ್ಯಾತ ಹಿಂದೂಗಳ ಜೀವನ ಎಷ್ಟು ಕಷ್ಟಕರವಾಗಿದೆ ಎಂಬುದನ್ನು ಮಾರ್ಮಿಕವಾಗಿ ನುಡಿದರು.
ಪುಸ್ತಕ ಪರಿಚಯದಲ್ಲಿ ಲೇಖಕರಲ್ಲೊಬ್ಬರಾದ ಶ್ರೀ ವೃಷಾಂಕ ಭಟ್ ರವರು ಮಾತನಾಡುತ್ತ ಪುಸ್ತಕವನ್ನು ಹೊರತರಲು ಸಾಕ್ಷಿಯಾದ ಸಿಂಧನೂರಿನ ನಿರಾಶ್ರಿತ ಹಿಂದೂಗಳ ಜೀವನದ ಘಟನೆಗಳೇ ಕಾರಣ ಎಂದರು. ಮತ್ತೋರ್ವ ಲೇಖಕರು ಹಾಗೂ ಹೊಸ ದಿಗಂತ ಪತ್ರಿಕೆಯ ಸಂಪಾದಕರೂ ಆದ ಶ್ರೀ ವಿನಾಯಕ ಭಟ್ ಮೂರೂರು ಅವರು ಕಾರ್ಯಕ್ರಮವನ್ನುದ್ದೇಶಿಸಿ ಬಾಂಗ್ಲಾ ನಿರಾಶ್ರಿತರು ಅನುಭವಿಸಿದ ದೌರ್ಜನ್ಯ, ಇಸ್ಲಾಮಿಕ್ ಕ್ರೌರ್ಯದ ಬಗ್ಗೆ ಮಾತನಾಡಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಬಾಂಗ್ಲಾದೇಶದ ನಿರಾಶ್ರಿತರೂ ಪ್ರಸ್ತುತ ಸಿಂಧನೂರಿನ ನಿವಾಸಿಗಳಾದ ಶ್ರೀ ಪ್ರಸೇನ್ ರಫ್ತಾನ್ ರವರು ತಾವು ಮತ್ತು ತಮ್ಮ ಪೂರ್ವಜರು ದೇಶ ವಿಭಜನೆಯಿಂದ ತಮ್ಮದೇ ದೇಶದಲ್ಲಿ ಪರದೇಶಿಗಳಾಗಿ ಪ್ರತಿನಿತ್ಯ ನರಕಯಾತನೆಯ ಜೀವನ ಕಳೆದಿದ್ದನ್ನು ನೆನಪಿಸಿಕೊಂಡರು ಹಾಗೂ ತಮಗೆ ಮತ್ತೆ ಭಾರತೀಯ ಪೌರತ್ವ ನೀಡಿದ ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ನಿರಾಮಯಾ ಫೌಂಡೇಶನ್ ಅಧ್ಯಕ್ಷರಾದ ಡಾ. ಶ್ರೀ ಮಲ್ಲಿಕಾರ್ಜುನ ಬಾಳಿಕಾಯಿಯವರು ಪ್ರಾಸ್ತಾವಿಕವಾಗಿ ಮಾತನಾಡಿ,ಅತಿಥಿಗಳನ್ನು ಮತ್ತು ಗಣ್ಯರನ್ನು ಸ್ವಾಗತಿಸಿದರು.ಗುರು ಬನ್ನಿಕೊಪ್ಪ ನಿರೂಪಿಸಿದರು, ಕಲ್ಲಪ್ಪ ಮೊರಬದ ವಂದಿಸಿದರು. ವಿವಿಧ ಸಂಘ ಸಂಸ್ಥೆಗಳ ಹಿರಿಯರು, ನಾಗರಿಕರು ಭಾಗವಹಿಸಿದರು.
ಈ ಪುಸ್ತಕವು ಈಗ ಆಂಗ್ಲ ಭಾಷೆಯಲ್ಲಿಯೂ ಅನುವಾದಗೊಂಡಿದೆ. ಪುಸ್ತಕವನ್ನು ಕೊಳ್ಳಲು ಕೆಳಗಿನ ಮಾಹಿತಿ ನೀಡಲಾಗಿದೆ.
ವರದಿ: ಪ್ರಭು ಉಮದಿ
ಚಿತ್ರಗಳು: ನಿರಾಮಯ