೧೫ ಲಕ್ಷ ಸ್ವಯಂಸೇವಕರನ್ನು ಸಮಾಜ ಕಾರ್ಯದಲ್ಲಿ ತೊಡಗಿಸಲಿರುವ ಆರೆಸ್ಸೆಸ್ : ಅರುಣ್ ಕುಮಾರ್
ರಾಷ್ಟ್ರೀಯ ಸ್ವಯಂಸೇವಕ ಸಂಘವು ಮುಂಬರುವ ದಿನಗಳಲ್ಲಿ ತನ್ನ 15 ಲಕ್ಷ ಸ್ವಯಂಸೇವಕರನ್ನು ಸಮಾಜ ಪರಿವರ್ತನೆಯ ಚಟುವಟಿಕೆಗಳಲ್ಲಿ ತೊಡಗಿಸಲಿದೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಅರುಣ್ ಕುಮಾರ್ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಮಾರ್ಚಿ 15 ರಿಂದ ಬೆಂಗಳೂರಿನಲ್ಲಿ ಆರಂಭವಾಗುವ ಆರೆಸ್ಸೆಸ್ ನ ರಾಷ್ಟ್ರೀಯ ಸಭೆ ಅಖಿಲ ಭಾರತ ಪ್ರತಿನಿಧಿ ಸಭಾದ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು. ಕಳೆದ ವರ್ಷ ಆರೆಸ್ಸೆಸ್ ನಡೆಸಿದ ಸರ್ವೇಕ್ಷಣೆಯಲ್ಲಿ 15 ಲಕ್ಷ ಸ್ವಯಂಸೇವಕರ ಮಾಹಿತಿ ಲಭ್ಯವಾಗಿದ್ದು ಅವರನ್ನು ಮುಂಬರುವ ದಿನಗಳಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವ ಯೋಜನೆಯನ್ನು ರಾಷ್ಟ್ರೀಯ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಈ ವರ್ಷದ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಪ್ರತಿನಿಧಿಗಳ ಸಭೆ ಎಂದು ಅವರು ತಿಳಿಸಿದರು.
ಈ ಸಭೆಯಲ್ಲಿ ೧೫೦೦ ಆರೆಸ್ಸೆಸ್ ನ ಚುನಾಯಿತ ಪ್ರತಿನಿಧಿಗಳು ಹಾಗೂ ವಿಶೇಷ ಆಹ್ವಾನಿತರು ಪಾಲ್ಗೊಳ್ಳುತ್ತಾರೆ. ಇದರಲ್ಲಿ ೪೪ ಪ್ರಾಂತಗಳನ್ನೊಳಗೊಂಡ ೧೧ ಕ್ಷೇತ್ರದಿಂದ ಸಂಘದ ಪ್ರತಿನಿಧಿಗಳು, ಸಂಘ ಪರಿವಾರದ ೩೫ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ರಾಷ್ಟ್ರ ಸೇವಿಕಾ ಸಮಿತಿಯ ಪ್ರತಿನಿಧಿಗಳೂ, ಈ ಸಭೆಯಲ್ಲಿ ಭಾಗವಹಿಸುತ್ತಾರೆ.
ವಿಶ್ವ ಹಿಂದು ಪರಿಷತ್ ನ ಅಧ್ಯಕ್ಷರಾದ ವಿಷ್ಣು ಸದಾಶಿವ ಕೊಕ್ಜೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷರಾದ ಸುಬ್ಬಯ್ಯ ಶಣ್ಮುಗಂ, ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಜೆ. ಪಿ. ನಡ್ಡ, ವನವಾಸಿ ಕಲ್ಯಾಣ, ವಿದ್ಯಾ ಭಾರತಿ, ಸಕ್ಷಮ ಸಂಘಟನೆಗಳ ಅಧ್ಯಕ್ಷರುಗಳು ಮತ್ತು ಇತರ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ೧೫ ಮಾರ್ಚಿ ೨೦೨೦ ರಂದು ಬೆಳಗ್ಗೆ ೮.೩೦ ಕ್ಕೆ ಸಭೆಯು ಉದ್ಘಾಟನೆಯಾಗಲಿದೆ. ಅಖಿಲ ಭಾರತೀಯ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಸೂಚಿಯನ್ನು (೧೪ ಮಾರ್ಚ್) ನಿರ್ಧರಿಸಲಾಗುತ್ತದೆ. ೧೭ ಮಾರ್ಚ್ ೨೦೨೦ ರಂದು ಮಧ್ಯಾಹ್ನ ಸಂಘದ ಸರಕಾರ್ಯವಾಹರಾದ ಶ್ರೀ ಭಯ್ಯಾಜೀ ಜೋಶಿ ಯವರು ಸಭೆಯು ತೆಗೆದುಕೊಂಡ ನಿರ್ಣಯಗಳನ್ನು ತಿಳಿಸಲಿದ್ದಾರೆ. ಕಳೆದ ವರ್ಷದ ಕಾರ್ಯದ ಅವಲೋಕನ ಹಾಗೂ ಬರುವ ವರ್ಷದ ಯೋಜನೆ ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳ ಪ್ರವಾಸ ಯೋಜನೆಯನ್ನು ಇಲ್ಲಿ ಮಾಡಲಾಗುತ್ತದೆ ಎಂದು ಅರುಣ್ ಕುಮಾರ್ ರವರು ಮಾಧ್ಯಮಗಳಿಗೆ ತಿಳಿಸಿದರು.