ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕ ಗುರೂಜಿ ಗೋಳ್ವಾಲ್ಕರ್ ಅವರ ಕುರಿತು ಮಧ್ಯಪ್ರದೇಶದ ಮಾಜಿ ಮುಖ್ಯ ಮಂತ್ರಿ ದಿಗ್ವಿಜಯ್ ಸಿಂಗ್ ಅವರು ದಿನಾಂಕ 07-07-2023ರಂದು ಸುಳ್ಳು ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.

ದಿಗ್ವಿಜಯ್ ಸಿಂಗ್ ಅವರು, ‘ದಲಿತರು, ಹಿಂದುಳಿದವರು ಮತ್ತು ಮುಸ್ಲಿಮರು ಮತ್ತು ರಾಷ್ಟ್ರೀಯ ನೀರು, ಅರಣ್ಯ ಮತ್ತು ನೆಲದ ಮೇಲಿನ ಗುರೂಜಿ ಗೋಳ್ವಾಲ್ಕರ್ ಅವರ ಚಿಂತನೆಗಳು ಹೀಗಿದ್ದವು’ ಎಂಬ ಶೀರ್ಷಿಕೆ ಅಡಿಯಲ್ಲಿ ಪೋಸ್ಟರ್ ಒಂದನ್ನು ಟ್ವೀಟ್ ಮಾಡಿದ್ದು ಅದರಲ್ಲಿ “ದಲಿತರು, ಹಿಂದುಳಿದವರು ಮತ್ತು ಮುಸ್ಲಿಮರಿಗೆ ಸಮಾನವಾದ ಹಕ್ಕುಗಳನ್ನು ನೀಡುವುದಕ್ಕಿಂತ ಬ್ರಿಟಿಷ್ ಆಳ್ವಿಕೆಯಲ್ಲಿ ಗುಲಾಮನಾಗಿ ನಾನು ಬದುಕಲು ಬಯಸುತ್ತೇನೆ” ಎಂಬ ವಾಕ್ಯಗಳನ್ನು ಗುರೂಜಿ ಅವರ ಭಾವಚಿತ್ರದೊಂದಿಗಿರಿಸಿ ಇದು ಗುರೂಜಿ ಅವರ ಚಿಂತನೆಗಳು ಎಂದು ಸುಳ್ಳು ಮಾಹಿತಿಯನ್ನು ಟ್ವೀಟ್ ಮಾಡಿದ್ದರು.

ದಿಗ್ವಿಜಯ್ ಸಿಂಗ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್, “ಶ್ರೀ ಗೋಳ್ವಾಲ್ಕರ್ ಗುರೂಜಿಯವರ ವಿಚಾರವಾಗಿರುವ ಈ ಟ್ವೀಟ್ ವಾಸ್ತವವಲ್ಲ ಮತ್ತು ಸಮಾಜದಲ್ಲಿ ಸಾಮಾಜಿಕ ದ್ವೇಷ ಮೂಡಿಸುವಂತದ್ದು. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಕಳಂಕ ತರುವ ಉದ್ದೇಶದಿಂದ ಈ ಸುಳ್ಳು ಫೋಟೋಶಾಪ್ ಚಿತ್ರವನ್ನು ಹಾಕಲಾಗಿದೆ. ಶ್ರೀ ಗುರೂಜಿ ಅವರು ಅಂತಹ ಮಾತನ್ನು ಹೇಳಿಲ್ಲ. ಅವರ ಇಡೀ ಜೀವನ ಸಾಮಾಜಿಕ ತಾರತಮ್ಯವನ್ನು ಕೊನೆಗೊಳಿಸುವುದರಲ್ಲಿ ತೊಡಗಿತ್ತು‌.” ಎಂದು ತಿಳಿಸಿದ್ದಾರೆ.

ಟ್ವೀಟ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಇಂದೋರ್‌ನ ತುಕೋಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ದಿಗ್ವಿಜಯ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ, 469, 500 ಮತ್ತು 505 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ವಕೀಲ ರಾಜೇಶ್ ಜೋಶಿ ಅವರು ಎಫ್‌ಐಆರ್ ದಾಖಲಿಸಿದ್ದು, ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಲು ಸಿಂಗ್ ಉದ್ದೇಶಪೂರ್ವಕವಾಗಿ ಗೋಳ್ವಾಲ್ಕರ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಹೇಳಿಕೆಯಿಂದ ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.