ರಾಷ್ಟ್ರೀಯ ಸಾಹಿತ್ಯದಿಂದ ನೈಜ ವಿಚಾರಗಳು ಚರ್ಚೆಯ ಮುನ್ನೆಲೆಗೆ ಬರುತ್ತಿರುವುದು ಸ್ವಾಗತಾರ್ಹ: ಸಹ ಸರಕಾರ್ಯವಾಹ ಮುಕುಂದ್ ಚನ್ನಕೇಶವಪುರ.
೫ ಜೂನ್ ೨೦೨೦, ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ಹಾಗೂ ಶ್ರೀ ಜ್ಞಾನಾಕ್ಷಿ ಪ್ರಕಾಶನ ಗ್ರಂಥ ಬಿಡುಗಡೆ ಹಾಗೂ ಜಾಲತಾಣದ ಲೋಕಾರ್ಪಣೆ ಕಾರ್ಯಕ್ರಮವನ್ನು ಫೇಸ್ಬುಕ್ ಲೈವ್ ಮೂಲಕ ಆಯೋಜಿಸಿಲಾಗಿತ್ತು. ಕಾರ್ಯಕ್ರಮ, ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತಿನ ಚಾಮರಾಜಪೇಟೆಯ ಕಾರ್ಯಾಲಯದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಡಾ. ಎಸ್ ಆರ್ ಲೀಲಾ ರಚಿಸಿರುವ ‘ಆಪರೇಷನ್ ರೆಡ್ ಲೋಟಸ್ ಮತ್ತು ಇತರೆ ಬರಹಗಳು’ , ‘ಜೀವಂತ ದುರ್ಗಾಪೂಜೆ’,’ ನಡುಗುಡಿಯ ಪೂಜಾರಿಗಳು ಇತ್ಯಾದಿ ಹಾಗು ಎರಡು ತೆರನಾದ ಭಾರತೀಯರು’ ಎಂಬ ಪುಸ್ತಕಗಳು ಹಾಗೂ ಡಾ. ರೋಹಿಣಾಕ್ಷ ಶಿರ್ಲಾಲು ರಚಿಸಿರುವ ‘ನೆಲದನಿಯ ಶೋಧ’ ಬಿಡುಗಡೆಗೊಂಡವು .
ಕಾರ್ಯಕ್ರಮದ ಆಶಯ ಭಾಷಣ ಮಾಡುತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಶ್ರೀ ಮುಕುಂದ ಚನ್ನಕೇಶವಪುರ ಅವರು, ಅಂಕಣ ಬರಹಗಳು ವರ್ತಮಾನಕಾಲದ ಪ್ರತಿಫಲನವನ್ನು ತೋರಿಸುವಂತಿದ್ದರೂ ಸಮಾಜದ ಭೂತ, ಭವಿಷ್ಯಗಳನ್ನು ವರ್ತಮಾನದೊಡನೆ ಹರವಿಡುವ ವಿಶಿಷ್ಟ ಪ್ರಯತ್ನಗಳಾಗಿರುತ್ತವೆ.
ಪ್ರಸಕ್ತ ಜಾಗತಿಕ ಘಟನಾವಳಿಗಳನ್ನು ಭಾರತೀಯ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಈ ಗ್ರಂಥಗಳ ಮೂಲಕ ನಡೆದಿದೆ. ಇಬ್ಬರೂ ಲೇಖಕರು ಬೇರೆಬೇರೆ ತಲೆಮಾರಿಗೆ ಸೇರಿದವರಾದರೂ ಸಮಾಜಾನುಭವಗಳ ನೈಜತೆ, ವಿಭಿನ್ನತೆ , ತೀವ್ರತೆಗಳ ಆಧಾರದ ಮೇಲೆಯೇ ಪುಸ್ತಕಗಳನ್ನು ರಚಿಸಿರುವುದು ಅವರ ಶಬ್ದಗಳ ಮಹತ್ತನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಸಾಹಿತ್ಯದ ಆವಶ್ಯಕತೆಯ ಕುರಿತಾಗಿ ಮಾತನಾಡುತ್ತ, ದೇಶದ ಒಳಗಿನ ಮತ್ತು ಹೊರಗಿನ ಅರಾಷ್ಟ್ರೀಯ,ಅಭಾರತೀಯ ವಾದಗಳಿಂದಾಗಿ ನೈಜ ಭಾರತೀಯ ವಿಚಾರಗಳೂ ಚರ್ಚೆಯ ಮುನ್ನೆಲೆಗೆ ಬರುತ್ತಿವೆ. ನಮ್ಮ ದೇಶದಲ್ಲಿ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಯ ಕುರಿತಾದ ಮಂಥನಗಳು ನಡೆಯುತ್ತಿವೆ. ನಾಡಭಕ್ತಿಯೆಂಬ ಭಾವ ರಾಷ್ಟ್ರಭಕ್ತಿಯ ಭಾವದಲ್ಲಿಯೂ ಅಭಿವ್ಯಕ್ತಗೊಂಡಿದೆ. ರಾಷ್ಟ್ರೀಯ ಚಿಂತನೆಗಳ ಪ್ರಾಮುಖ್ಯತೆ ಮೂಲ ಭಾರತೀಯ ಚಿಂತನೆಗಳ ಮೂಲಕ ಹೊರಹೊಮ್ಮಬೇಕಾಗಿದೆ. ಭಾರತೀಯ ಜೀವನ ದೃಷ್ಟಿಯನ್ನು ಕಾಣಿಸುವ, ನಮ್ಮ ದೇಶದ ವೈವಿಧ್ಯತೆಯ ಜೊತೆಗೇ ಅದರ ಏಕಸೂತ್ರತೆಯನ್ನು ಮನಗಾಣಿಸುವ ಪ್ರಯತ್ನಗಳ ಕುರಿತಾದ ಚರ್ಚೆ, ಅಧ್ಯಯನ ಮತ್ತು ವಿಶ್ಲೇಷಣೆಗಳು ನಡೆಯಬೇಕಾಗಿದೆ.
ಭಾರತೀಯ ಪರಿವೇಶವನ್ನು ಭಾರತೀಯ ದ್ರಷ್ಟಿಯಿಂದಲೇ ನೋಡುವ ಮತ್ತು ಇಲ್ಲಿನ ಸಮಸ್ಯೆಗಳಿಗೆ ಇಲ್ಲಿನವಲ್ಲದ ಪರಿಹಾರಗಳನ್ನು ಸೂಚಿಸದೇ ಭಾರತೀಯ ಚಿಂತನೆಗಳ ನೆರಳಲ್ಲೇ ಕಾಣುವ ಅವಶ್ಯಕತೆ ಇದೆ. ಈ ಅವಶ್ಯಕತೆ ರಾಷ್ಟ್ರೀಯ ಸಾಹಿತ್ಯದ ಆಯಾಮದ ಮೂಲಕ ಪೂರ್ಣಗೊಳ್ಳುವ ಪ್ರಯತ್ನಗಳು ಹೆಚ್ಚಾಗಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ರವೀಂದ್ರ ಪೈ, ಮುಖ್ಯ ಅತಿಥಿಗಳಾಗಿ ಶ್ರೀ ಹಯಗ್ರೀವಾಚಾರ್ಯ, ಪರಿಷತ್ತಿನ ಅಖಿಲ ಭಾರತ ಉಪಾಧ್ಯಕ್ಷ ‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕ ಶ್ರೀ ಹರಿಪ್ರಕಾಶ್ ಕೋಣೆಮನೆ ಹಾಗು ಇತರ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂದವಾದ ನಿರ್ವಹಣೆ ನಡೆಸಿಕೊಟ್ಟವರು ಶ್ರೀ ಸುಚೇಂದ್ರ ಪ್ರಸಾದ್. ಪರಿಷತ್ತಿನ ಪ್ರಾಂತ ಕಾರ್ಯಕಾರಣಿ ಸದಸ್ಯೆ ಶ್ರೀಮತಿ ಪವಿತ್ರಾ ವಂದನಾರ್ಪಣೆ ಸಲ್ಲಿಸಿದರು.
ವರದಿ: ಶೈಲೇಶ್ ಕುಲಕರ್ಣಿ
ಶ್ರೀ ಮುಕುಂದರ ಪೂರ್ಣ ಭಾಷಣ