ಧರ್ಮ ಸಂರಕ್ಷಣೆಯೇ ಮೈಸೂರು ಅರಮನೆಯ ಮೂಲ ಕರ್ತವ್ಯವಾಗಿದ್ದು, ಈ ಕಾರ್ಯದಲ್ಲಿ ಎಂದೆಂದಿಗೂ ತೊಡಗಿಸಿಕೊಳ್ಳುತ್ತೇವೆ ಎಂದು ಮೈಸೂರು ರಾಜಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅವರು ಶೇಷಾದ್ರಿಪುರದ ಯಾದವ ಸ್ಮತಿಯಲ್ಲಿ ‘ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ’ ಬೆಂಗಳೂರು ಉತ್ತರ ವಿಭಾಗ ಕಚೇರಿ ಉದ್ಘಾಟಿಸಿ ಮಾತನಾಡಿದರು.
ನನ್ನೆಲ್ಲ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಈ ಕಾರ್ಯಕ್ರಮಕ್ಕೆ ಆಗಮಿಸಿರುವುದಾಗಿ ಆಯೋಜಕರು ತಿಳಿಸಿದರು. ಆದರೆ ಈ ಕಾರ್ಯಕ ಮೈಸೂರು ಅರಮನೆಯ ಆದ್ಯ ಕರ್ತವ್ಯ. ಪರಂಪರಾನುಗತವಾಗಿ ಧರ್ಮ ಸಂರಕ್ಷಣೆಯಲ್ಲಿ ಅರಮನೆ ನಿರತವಾಗಿದೆ. ಉತ್ತರ ಭಾರತದ ಪೂರ್ಣಗಿರಿ ಪರ್ವತದಲ್ಲಿ ಭಗವತಿ ದೇವಸ್ಥಾನಕ್ಕೆ ತೆರಳಲು ಭಕ್ತರು ಸಂಕಷ್ಟ ಪಡುತ್ತಿದ್ದಾಗ 1941ರಲ್ಲಿ ಮೈಸೂರು ಮಹಾರಾಜರು ಧನಸಹಾಯ ನೀಡಿ ಅನುಕೂಲ ಕಲ್ಪಿಸಿಕೊಟ್ಟಿದ್ದರು ಎಂದು ಬ್ರಿಟಿಷ್ ಲೇಖಕ ಜಿಮ್ ಕಾರ್ಬೆಟ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಮೈಸೂರು ಅರಮನೆ ಎಂದಿಗೂ ಧರ್ಮ ಕಾರ್ಯಕ್ಕೆ ಬದ್ಧವಾಗಿದೆ. ಶ್ರೀರಾಮ ಜನ್ಮಭೂಮಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ನಮ್ಮ ಪೂರ್ವಜನರು ಪಟ್ಟ ಶ್ರಮವೇ ಕಾರಣವಾಗಿದ್ದು, ಅವರಿಂದ ಪ್ರೇರಣೆ ಪಡೆದು ನಾವು ಮುಂದುವರಿಯಬೇಕು. ನಿಧಿ ಸಮರ್ಪಣಾ ಅಭಿಯಾನ ಯಶಸ್ವಿಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಆರೆಸ್ಸೆಸ್ನ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ಮಾತನಾಡಿ, 490 ವರ್ಷಗಳಿಂದ ಹಿಂದು ಸಮಾಜ ನಡೆಸುತ್ತಿದ್ದ ಹೋರಾಟ ನಿರ್ಣಾಯಕ ಘಟ್ಟಕ್ಕೆ ಬಂದಿದೆ. ಭಾರತದ ಅಸ್ಮಿತೆಗೆ ಹಿಂದು ಸಮಾಜ ಹೋರಾಟ ನಡೆಸಿತ್ತು. ಪ್ರತಿ ಪೀಳಿಗೆಯೂ ಹೋರಾಟವನ್ನು ಜೀವಂತವಾಗಿಟ್ಟುಕೊಂಡಿತ್ತು. ಅಂತಿಮವಾಗಿ, ಭಾರತಕ್ಕೆ ಕಳಂಕವಾಗಿದ್ದ ಕಟ್ಟಡ 1992ರ ಡಿ.6ರಂದು ಉರುಳಿಬಿದ್ದವು. 2021ರ ಜನವರಿ 15ರಿಂದ ಫೆಬ್ರವರಿ 5ರವರೆಗೆ ಅಭಿಯಾನ ನಡೆಯಲಿದೆ. ರಾಮ ಮಂದಿರ ನಿರ್ಮಾಣಕ್ಕೆ ಪ್ರತಿ ಮನೆಯಿಂದ ಪಡೆದ ನಿಧಿಯನ್ನು ಸಮರ್ಪಣೆ ಮಾಡಲಾಗುತ್ತದೆ. ರಾಮನ ದೇವಾಲಯ ಇಡೀ ದೇಶದ ಜನರಿಂದ ನಿರ್ಮಾಣವಾಗುತ್ತಿದೆ ಎಂದರು.
ಜಗತ್ತಿನಲ್ಲಿ ಸೇವೆಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಆದಿಚುಂಚನಗಿರಿ ಸಂಸ್ಥಾನದ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ತಿಳಿಸಿದರು. ಆಚಾರ, ವಿಚಾರ, ಸೇವೆಗೆ ಶ್ರೀರಾಮ ಮಹತ್ವ ನೀಡಿದ. ತ್ರೇತಾಯುಗದಲ್ಲಿದ್ದ ಶ್ರೀರಾಮನನನ್ನು ಕಲಿಯುಗದಲ್ಲೂ ನೆನೆಯುತ್ತೇವೆ ಎಂದರೆ ಅವನ ಜೀವನ ಯಾವ ಮಟ್ಟದಲ್ಲಿತ್ತು ಎಂಬುದನ್ನು ನಾವು ಅರಿಯಬೇಕು. ರಾಮನಿಗಿಂತಲೂ ಹೆಚ್ಚು ದೇವಸ್ಥಾನಗಳು ಅವನ ಸೇವಕ ಆಂಜನೇಯನಿಗೆ ಇರುವುದು, ಸೇವೆಯ ಮಹತ್ವವನ್ನು ತಿಳಿಸುತ್ತದೆ. ಸೇನೆಯ ಭದ್ರತೆ, ಕಬ್ಬಿಣದ ಬೇಲಿಗಳ ಮೂಲಕ ಹಾದುಹೋಗಬೇಕಿದ್ದ ಶ್ರೀರಾಮ ಮಂದಿರಕ್ಕೆ ಮುಂದಿನ ದಿನಗಳಲ್ಲಿ ಯಾವುದೇ ದಿಗ್ಬಂಧನವಿಲ್ಲದೆ ತೆರಳುವಂತಹ ಸಮಯ ಬಂದಿರುವುದು ಸಂತಸ ಎಂದರು.