‘ಒಲವೆಂಬ ಹೊತ್ತಿಗೆಯ ಓದ ಬಯಸುವ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ ಹುಚ್ಚ;
ಹಗಲಿರುಳು ದುಡಿದರೂ ಹಲ ಜನುಮ
ಕಳೆದರೂ ನೀ ತೆತ್ತಲಾರೆ ಬರೀ ಅಂಚೆ ವೆಚ್ಚ’


ಎಂಬ ಅಂಬಿಕಾತನಯದತ್ತರ ವಾಣಿ ನಮಗೆಲ್ಲ ಅರಿವೇ ಇದೆ. ಮೇಲ್ನೋಟದಲ್ಲಿ ಓದಿದಾಕ್ಷಣ ಇದೇನೋ ಓಲವಿನ ಬಗ್ಗೆ ಹೇಳುತ್ತಿದ್ದಾರೇನೋ ಎಂಬ ಭಾವ ಮೂಡಿದರೂ ಆಳಕ್ಕೆ ಇಳಿದಾಗ ಅರಿವಿಗೆ ಬರುವುದು ಇಲ್ಲಿ ನಡೆಯುತ್ತಿರುವುದು ಸು‘ಕೃತಿ’ಯ ಪರಿಚಯ ಎಂದು. ‘ಸುಕೃತಿ’ – ಈಗಾಗಲೇ ಸಾವಿರಾರು ಮಂದಿಯ ಮೆಚ್ಚುಗೆ ಪಡೆದು ಮುನ್ನಡೆಯುತ್ತಿರುವ ಫೇಸ್‍ಬುಕ್ ಪೇಜ್ ಹಾಗೂ ಯೂಟ್ಯೂಬ್ ಚಾನೆಲ್. ಹೆಸರೇ ಸೂಚಿಸುವಂತೆ ಇದರ ಮುಖ್ಯ ಕಾರ್ಯೋದ್ದೇಶವೇ ಉತ್ತಮ ಪುಸ್ತಕ ಪರಿಚಯಮಾಡಿಕೊಡುವುದು.

ಒಂದೂವರೆ ವರ್ಷಗಳ ಹಿಂದೆ ಗೆಳೆಯರೊಬ್ಬರು ಮಾತಿನ ಭರದಲ್ಲಿ ನಾನು ಓದಿದ ಯಾವುದಾದರೂ ಒಳ್ಳೆಯ ಕೃತಿಯ ಪರಿಚಯ ಮಾಡಿ ಈ ‘ಸುಕೃತಿ’
ಮೇಲ್ ಐಡಿಗೆ ಕಳುಹಿಸಿ ಎಂದು ಹೇಳಿದಾಗ ಕೊಂಚವೇ ಒಳಗೆ ನಡುಗಿದ್ದೆ. ಜನರ ಪರಿಚಯ ಕೇಳಿದ್ದೆ, ಇದೆಂಥ ‘ಪುಸ್ತಕ ಪರಿಚಯ’ !! ಎಂಬುದು ಸೋಜಿಗ ಹುಟ್ಟಿಸಿತ್ತು. ಹೊಸತನದೆಡೆಗೆ ಮುಖಹೊರಳಿಸಲು ಅಂಜಿಕೆ ಏಕೆ ? ನೋಡೇಬಿಡುವ ಎಂದು ಕಳುಹಿಸಿದ ವಿಡಿಯೋ ಮುಂದಿನ ಸರಣಿಯಲ್ಲಿಪರದೆಯಲ್ಲಿ ಹೊರಳಿದಾಗ ಆದ ಆನಂದ ಅಷ್ಟಿಷ್ಟಲ್ಲ. ಹೀಗೇ ದಿನಗಳೆದಂತೆ ಸುಕೃತಿಯಲ್ಲಿ ಬರುತ್ತಿದ್ದ ಹೊಸ-ಹಳೆಯ ಪುಸ್ತಕಗಳ ಸಾಲು ಸಾಲು ಪರಿಚಯಾತ್ಮಕ ವಿಡಿಯೋಗಳು, ಅದರ ಕರಾರುವಾಕ್ಕು ಮಾಹಿತಿ, ಸ್ಪಷ್ಟನಡೆ, ಸಮಗ್ರ ವಿಷಯ – ಕನಿಷ್ಟ ಸಮಯ, ವಿಶ್ವದಾದ್ಯಂತ ಇರುವ ಕನ್ನಡಿಗರ ಮಾತುಗಳು, ಸಾಮಾನ್ಯರೆನಿಸಿದರೂ ಅಸಮಾನ್ಯವಾಗಿ ಪರಿಚಯಿಸುವ ಜನರ ವಾಕ್‍ಚಾತುರ್ಯ, ದಿಗ್ಗಜ ವಾಗ್ಮಿಗಳು, ವಿವಿಧ ಕ್ಷೇತ್ರದ ಸಾಧಕರು, ವಿವಿಧ ವಯೋಮಾನದವರು ಮಾತನಾಡಿದ್ದು ; ಇವೆಲ್ಲವೂ ನನ್ನನ್ನು ಮತ್ತಷ್ಟು ಕುತೂಹಲಕ್ಕೆ ತಳ್ಳುತ್ತಾ ಸಾಗಿತು.

ನೋಡ ನೋಡುತ್ತಿದ್ದಂತೆ ವೀರಸಾವರ್ಕರ್ ಸರಣಿ, ಎಸ್.ಎಲ್.ಭೈರಪ್ಪರ ಸರಣಿ, ಸ್ವಾಮಿ ವಿವೇಕಾನಂದರ ಸರಣಿ, ಕನ್ನಡ ರಾಜ್ಯೋತ್ಸವದ ಸರಣಿಗಳಲ್ಲಿ ಉಚ್ಚನೀಚವೆಂಬ ಭೇದವಿಲ್ಲದೆ ಸರ್ವರಿಗೂ ‘ಸುಕೃತಿ’ ಅವಕಾಶ ಕಲ್ಪಿಸಿತ್ತು. ಕಳೆದ ವಿಶ್ವ ಪುಸ್ತಕ ದಿನದಂದು 10 ವರ್ಷದ ಪುಟ್ಟ ಬಾಲಕಿಯಿಂದ ಹಿಡಿದು 80ರ ವಯೋಮಾನದವರೆಗಿನ ಜನರನ್ನು ಸಂದರ್ಶಿಸಿ, ಅವರಿಗೆ ಪುಸ್ತಕಗಳಲ್ಲಿ ಕುತೂಹಲ ಹುಟ್ಟಿಸುವ ಸಂಗತಿಗಳಾವುವು ಎಂಬ ಪ್ರಶ್ನೋತ್ತರ ಸರಣಿ ಎಲ್ಲರನ್ನು ಆಕರ್ಷಿಸಿತ್ತು. ಪ್ರತಿವಾರ ಒಂದೋ ಎರಡು ವಿಡಿಯೋ ಬರುತ್ತದಾದರೂ ‘ಯಾವ ಪುಸ್ತಕ ಪರಿಚಯದ ವಿಡಿಯೋ ಇಂದು ಬರುತ್ತದೆ?!’ ಎಂಬುದು ಯಾರ್ಯಾರಿಗೂ ಸುಳಿವೇ ಇಲ್ಲದೆ ದುತ್ತೆಂದು ಬಂದು ನಮ್ಮನ್ನು ದಿಗ್ಬ್ರಾಂತರನ್ನಾಗಿ ಮಾಡುವುದರ ಜೊತೆಗೆ ಸಂತೋಷವನ್ನೂ ನೀಡುತ್ತದೆ.

ಏಪ್ರಿಲ್ 14, 2020ರ ಅಂಬೇಡ್ಕರ್ ಜಯಂತಿ ದಿನದಂದು ಈ ಶ್ರೇಷ್ಠ ಕಾರ್ಯಕ್ಕೆ ಅಡಿ ಇಟ್ಟು ಇಂದಿಗೆ ಒಂದೂವರೆ ವರ್ಷ ಸಾರ್ಥಕವಾಗಿ ಸಾಗಿ ಬಂದಿದೆ. ಈಗಾಗಲೇ 178 ಪುಸ್ತಕಗಳನ್ನು 139 ಮಂದಿ ಪರಿಚಯಿಸಿಕೊಟ್ಟಿದ್ದಾರೆ. ಅದರಲ್ಲೂ ಬಹಳಷ್ಟು ಮಂದಿ ಸ್ವಪ್ರೇರಣೆಯಿಂದಲೇ ಪುಸ್ತಕ ಪರಿಚಯ ಮಾಡಿದ್ದಾರೆ. ಈ ಕೆಲಸದಲ್ಲೂ ಮಹಿಳೆಯರದ್ದೇ ಮೇಲುಗೈ ಎನ್ನಲು ಹೆಮ್ಮೆಯೆನಿಸುತ್ತಿದೆ. ಬರೋಬ್ಬರಿ 69 ಮಹಿಳೆಯರು ಈ ಕೆಲಸದಲ್ಲಿ ಸೈ ಎನಿಸಿಕೊಂಡಿದ್ದಾರೆ. ಇಷ್ಟೆಲ್ಲ ಸಾಧನೆಯ ಹಾದಿಯಲ್ಲಿರುವ ಈ ಸುಕೃತಿಯನ್ನು ತಮ್ಮ ಹೆಗಲಿಗೆ ಪೇರಿಸಿಕೊಂಡು ಸಾಗುತ್ತಿರುವವರು ಬೆಂಗಳೂರಿನ ಐಟಿ ಉದ್ಯೋಗಿ ಪ್ರಮೋದ್ ನವರತ್ನ ಹಾಗು ಸ್ನೇಹಿತರು. ಇವರ ಪ್ರಕಾರ ಕನ್ನಡ ಸಾಹಿತ್ಯವಿರುವ ಕನ್ನಡವನ್ನು ಟೀಕಿಸದ, ಕೀಳೆಂದು ತೋರದ, ಹಾಸ್ಯಾಸ್ಪದವಲ್ಲದ ಯಾವುದೇ ಕನ್ನಡ ಪುಸ್ತಕವಿದ್ದರೂ ಅದು ಪರಿಚಯಕ್ಕೆ ಯೋಗ್ಯ ಎನ್ನುತ್ತಾರೆ. ಎಷ್ಟೋ ಪುಸ್ತಕಗಳು ಶ್ರೇಷ್ಠ ಚಿಂತನೆಗಳಿಂದ ಕೂಡಿದ್ದರೂ ಅದು ಜನರಿಗೆ ತಲುಪುವ ನಿಟ್ಟಿನಲ್ಲಿ ಯಾವುದೋ ಕಾರಣದಿಂದ ಹೊರಗುಳಿದಿರುತ್ತದೆ. ಇನ್ನು ಬಹಳಷ್ಟು ಪುಸ್ತಕಗಳು ಹೆಸರು ಮಾಡಿದ್ದರೂ ಅದರೊಳಗೆ ಯಾವ ಅಂಶವಿದೆ ಎಂಬುದನ್ನು ಸಂಪೂರ್ಣ ಅರಿವಿಗೆ ಬರದ ಹೊರತು ಜನರು ಅದನ್ನು ಖರೀದಿಸಲು ಅಭಿರುಚಿ ತೋರಿಸುವುದಿಲ್ಲ. ಇನ್ನು ಎಷ್ಟೋ ಹಳೆಯ ಪುಸ್ತಕಗಳು ಹೊಸ ತಲೆಮಾರಿಗೆ ಪರಿಚಯವಿರುವುದೇ ಇಲ್ಲ. ಈ ಎಲ್ಲ ಅಂಶಗಳನ್ನು ಮನನ ಮಾಡಿ ಈ ‘ಸುಕೃತಿ’ ಪುಸ್ತಕ ಪರಿಚಯವನ್ನು ಹೆಣೆಯಲಾಗಿದೆ ಎನ್ನುತ್ತಾರೆ.

ಭಾಷೆ ಮಾತನಾಡುವುದರಿಂದ ಉಳಿಯುವುದಲ್ಲ, ಓದುವುದರಿಂದ ಉಳಿಯುವಂಥದ್ದು. ಮುದ್ರಿಸಿಟ್ಟ ಪುಸ್ತಕಗಳು ತಲತಲಾಂತರದ ಆಸ್ತಿಯಾಗಿ ಮುಂಬರುವ ಪೀಳಿಗೆಗೆ ನೈಜ ಉಡುಗೊರೆಗಳಾಗಿ ಸ್ವೀಕಾರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬರೆಯುವವರ ಸಂಖ್ಯೆ ಓದುವವರ ಸಂಖ್ಯೆಗಿಂತಲೂ ಹೆಚ್ಚಾಗಿರುವುದು ಒಂದು ಅಸಮತೋಲನವನ್ನು ಉಂಟುಮಾಡಿದೆ. ಇದನ್ನು ಸಮತೋಲನ ಮಾಡುವುದಕ್ಕಿರುವ ಒಂದೇ ಮಾರ್ಗ ಓದು. ಕೇವಲ ಮಾಹಿತಿಗಾಗಿ ಹಾತೊರೆಯುವವರು ಯಾವುದೋ ಆ್ಯಪ್‍ಗಳ ಮೊರೆ ಹೋಗುತ್ತಾರೆಯೇ ಹೊರತು ನೈಜ ಜ್ಞಾನದಾಹವಿರುವ ವ್ಯಕ್ತಿ ಓದಿ ಓದಿ ವಿಕಾಸವಾಗುತ್ತಾನೆ . ಅಂತಹವರಿಗೆ ಸುಕೃತಿಯ ಪುಸ್ತಕ ಪರಿಚಯ ಮಾಲಿಕೆಗಳು ಬಿಚ್ಚಿಟ್ಟ ಖಜಾನೆಯಂತೆ ಭಾಸವಾಗುತ್ತದೆ. ಕನ್ನಡದ ಉಳಿವಿಗೆ ಹಾಗೂ ಏಳಿಗೆಗೆ ಅಣುರೇಣು ತೃಣಕಾಷ್ಠದಂತಹ ಕಾರ್ಯ ಮಾಡಿದರೂ ಕೂಡ ಅದೊಂದು ಶ್ರೇಷ್ಠತಮ ಕೆಲಸವಾಗಿ ಹೊರಹೊಮ್ಮುತ್ತದೆ. ಈಗ ಮುಂಬರುವ ನವೆಂಬರ್‍ನಲ್ಲೂ ಕೂಡ 1 ರಿಂದ 30 ರವರೆಗೆ ಮತ್ತಷ್ಟು ಪುಸ್ತಕಗಳ ಪರಿಚಯ ಮಾಲಿಕೆಗೆ ನವವಧುವಿನಂತೆ ಸುಕೃತಿ ಸಜ್ಜಾಗಿ ನಿಂತಿರುವುದು ಎಲ್ಲರ ಕುತೂಹಲ ಗರಿಗೆದರಿದಂತೆ ಭಾಸವಾಗಿದೆ. “ಕನ್ನಡ ಕೃತಿಗಳ ತಿಳಿಯೋಣ ಕನ್ನಡ ಕಂಪನು ಸವಿಯೋಣ”ಎಂಬ ಧ್ಯೇಯದೊಂದಿಗೆ ಕನ್ನಡ ಕೃತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ತಲುಪಿಸುತ್ತಿರುವ ಸುಕೃತಿಯ ಕಾರ್ಯ ಸ್ತುತ್ಯಾರ್ಹ. ಪುಸ್ತಕ ಪರಿಚಯ ಮಾಲಿಕೆಯನ್ನು ನೋಡಿ, ನೀವು ಪುಸ್ತಕಕ್ಕೆ
ಪರಿಚಿತರಾಗಿ.


ಕೃಪೆ : ವಿಜಯವಾಣಿ

Leave a Reply

Your email address will not be published.

This site uses Akismet to reduce spam. Learn how your comment data is processed.