“ಚೈತನ್ಯಮಯೀ” ಪುಸ್ತಕದ ಮುನ್ನುಡಿಯಿಂದ

ಇಪ್ಪತ್ತನೆಯ ಶತಮಾನದ ಮಧ್ಯಭಾಗದ ಸುಮಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆಗಳು ಮತ್ತು ಕಾರ್ಯ ಕರ್ನಾಟಕದಲ್ಲಿ ಬೇರೂರುತ್ತಿದ್ದವು. ಸಂಘದ ಕಾರ್ಯ ಬೆಳೆಯುತ್ತಿತ್ತು. ಇದರ ಜೊತೆಗೆ ಸಂಘದ ವಿಚಾರ, ಕಾರ್ಯಗಳಿಗೆ ವಿರೋಧವೂ ವ್ಯಕ್ತವಾಗುತ್ತಿತ್ತು. ಮಹಾತ್ಮ ಗಾಂಧಿಯವರ ಹತ್ಯೆ ಮಿಥ್ಯಾರೋಪವೂ ಸಂಘಕ್ಕೆ ಅಂಟಿಕೊಂಡಾಗ ವಿರೋಧ ವ್ಯಾಪಕವಾಗಿತ್ತು. ಸರಕಾರಗಳ ನಿರ್ಬಂಧಕ್ಕೂ ಒಳಗಾಗಿತ್ತು. ಇಂತಹ ಸಾಮಾಜಿಕ-ರಾಜಕೀಯ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಂಘದ ಕಾರ್ಯವನ್ನು ಬೆಳಸುವುದರಲ್ಲಿ ಅನುಪಮ ಕೊಡುಗೆ ನೀಡಿದ್ದು ಮಾ. ರುಕ್ಮಿಣಕ್ಕನವರ ಮನೆ – ಅವರ ತಂದೆ-ತಾಯಿ, ಅಣ್ಣ, ತಮ್ಮಂದಿರು.

ರಾಷ್ಟ್ರೀಯ ಆದರ್ಶಗಳ ಬಗ್ಗೆ ಬದ್ಧತೆ, ಅಚಲ ಶ್ರದ್ಧೆ, ಪ್ರತಿಕೂಲ ಪ್ರವಾಹದ ವಿರುದ್ಧ ಈಜುವ ಗಟ್ಟಿತನವನ್ನು ಬೆಳಸಿಕೊಂಡು ಬೆಳೆದವರು ಮಾ. ರುಕ್ಮಿಣಕ್ಕನವರು ತಮ್ಮ ವೈಯಕ್ತಿಕ ದುಃಖ, ಸಂಕಟಗಳನ್ನು ಮೀರಿ, ರಾಷ್ಟ್ರೀಯ ವಿಚಾರಗಳನ್ನು ತಮ್ಮ ಮೈಮನಗಳಲ್ಲಿ ತುಂಬಿಕೊಂಡದ್ದಲ್ಲದೆ, ಅವನ್ನು ಸಮಾಜದಲ್ಲಿ ತರಲು ಕಾರ್ಯ ಪ್ರವೃತ್ತರಾದವರು.

ಮಾ ಕೃ. ರುಕ್ಮಿಣಿ ಅಕ್ಕ, ಅಧ್ಯಕ್ಷರು,ಸುಕೃಪ ಟ್ರಸ್ಟ್, ಅವರ ಕುರಿತು “ಚೈತನ್ಯ ಮಯಿ” ಎನ್ನುವ ವಿವಿಧ ಲೇಖಕರು ಬರೆದಿರುವ ಪುಸ್ತಕವನ್ನು “ಸುಕೃಪ ಟ್ರಸ್ಟ್” ವತಿಯಿಂದ ನವೆಂಬರ್ 27ನೆ ತಾರೀಖು, ಶನಿವಾರ ಸಂಜೆ ೪ ಗಂಟೆಗೆ ಮಿಥಿಕ್ ಸೊಸೈಟಿ, ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕರ್ತೆಯಾಗಿ ಸಮಿತಿಯ ಕಾರ್ಯವನ್ನು ಮಹಿಳೆಯರ ಮಧ್ಯೆ ಬೆಳೆಸಲು ಉದ್ಯುಕ್ತರಾದರು. ಈ ಕಾರ್ಯ ಸುಲಭಸಾಧ್ಯವಾಗಿರಲಿಲ್ಲ. ಹೆಚ್ಚು ಸಂಪ್ರದಾಯಬದ್ಧರಾದ ಕರ್ನಾಟಕದ ಮಹಿಳೆಯರಲ್ಲಿ ಸಂಘಟನೆಯ ಕಾರ್ಯ ಕಠಿಣವಾಗಿತ್ತು. ಆದರೆ ಮಾ. ರುಕ್ಮಿಣಕ್ಕನವರು ತಮ್ಮ ವೈಚಾರಿಕ ಪ್ರಬುದ್ಧತೆ, ತಾಳ್ಮೆ, ಸಂಘಟನಾ ಕೌಶಲ್ಯಗಳಿಂದ ಸಮಿತಿಯ ಕಾರ್ಯ ಬೆಳಸಿದ ಪ್ರಮುಖರಲ್ಲಿ ಒಬ್ಬರಾದರು.

ಮಾ. ರುಕ್ಮಿಣಕ್ಕನವರು ಗಣಿತದ ಪ್ರಾಧ್ಯಾಪಕರು. ಗಣಿತದ ನಿಖರತೆ, ಖಚಿತತೆ, ಅಚ್ಚುಕಟ್ಟು, ಶಿಸ್ತುಗಳನ್ನು ತಮ್ಮ ಜೀವನದಲ್ಲಿ, ವಿಚಾರದಲ್ಲಿ, ಕಾರ್ಯದಲ್ಲಿ ಅಳವಡಿಸಿಕೊಂಡವರು. ಇದೇ ಗುಣಗಳನ್ನು ಕಾರ್ಯಕರ್ತೆಯರಲ್ಲಿ, ಮತ್ತು ಇತರರಲ್ಲಿ ಹಿರಿಯಕ್ಕನ ಅಕ್ಕರೆ, ವಾತ್ಸಲ್ಯ ತುಂಬಿ ಬೆಳೆಸಿದರು.

ಅವರದು ಬಹುಮುಖ ಪ್ರತಿಭೆ, ವಿದ್ಯಾರ್ಥಿ ಮೆಚ್ಚಿನ ಅಧ್ಯಾಪಕಿಯಾಗಿ, ದಕ್ಷ ಪ್ರಾಂಶುಪಾಲರಾಗಿ, ಅನೇಕ ಸಾಮಾಜಿಕ ಸಂಸ್ಥೆಗಳ ಸಹೃದಯ ಮಾರ್ಗದರ್ಶಕರಾಗಿ, ಅವರು ನಡೆಸಿದ ಸಾರ್ಥಕ ಜೀವನದ, ವ್ಯಕ್ತಿತ್ವದ ಚಿತ್ರಣವನ್ನು, ಸಮಿತಿಯ ಕಾರ್ಯಕರ್ತೆಯರು, ರಾ.ಸ್ವ.ಸಂಘದ ಹಿರಿಯರು, ಆತ್ಮೀಯರು, ಒಡನಾಡಿಗಳು ಈ ಪುಸ್ತಕ ಚೈತನ್ಯಮಯ ರುಕ್ಮಿಣಿಯಲ್ಲಿ ನಿರೂಪಿಸಿದ್ದಾರೆ.
ಮಾ. ರುಕ್ಮಿಣಕ್ಕನವರು ನನಗೆ ಪ್ರೇರಣಾಸೋತ್ರರು, ಆದರ್ಶಪ್ರಾಯರು ಮತ್ತು ಬಂಧುಗಳು. ಅವರ ವ್ಯಕ್ತಿತ್ವ ಚಿತ್ರಣದ ಪುಸ್ತಕಕ್ಕೆ ಮುನ್ನುಡಿ ಬರೆಯುವಷ್ಟು ಸಮರ್ಥ ನಾನಲ್ಲ. ಆದರೂ ಅವರ ಮೇಲಿನ ಶ್ರದ್ಧೆಯಿಂದ, ಸಮಿತಿಯ ಸೋದರಿಯರ ವಾತ್ಸಲ್ಯದ ಆಗ್ರಹದಿಂದ ನಾಲ್ಕು ಮಾತುಗಳನ್ನು ಬರೆದಿದ್ದೇನೆ.

ಮಾ. ರುಕ್ಮಿಣಕ್ಕ ಅವರ ವ್ಯಕ್ತಿತ್ವ ಚಿತ್ರಣದ ಈ ಪುಸ್ತಕ ಸಾಮಾಜಿಕ ಕಾರ್ಯ ಮಾಡುವ ಎಲ್ಲ ಕಾರ್ಯಕರ್ತರಿಗೆ ಪ್ರೇರಣಾದಾಯಿ.

Leave a Reply

Your email address will not be published.

This site uses Akismet to reduce spam. Learn how your comment data is processed.