ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಇಡೀ ದೇಶದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುವ ಈ ಹೊತ್ತಿನಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ಬೃಹತ್ತಾದ ಅಪಪ್ರಚಾರ ಮಾಡುತ್ತಿರುವುದು ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಕೋಮು ಗಲಭೆಗಳಿಗೆ ಪ್ರಚೋದಿಸುವ ಕೆಲಸಗಳು ನಡೆಯುತ್ತಿದೆ.
ಅಷ್ಟಕ್ಕೂ ಶಿವಮೊಗ್ಗದಲ್ಲಿ ಮುಸಲ್ಮಾನ ಬಾಹ್ಯುಳ ಪ್ರದೇಶದಲ್ಲಿ ಸಾವರ್ಕರ್ ಅವರ ಚಿತ್ರವಿರುವ ಬ್ಯಾನರ್ಅನ್ನು ತೆಗೆಯಲು ಮುಂದಾಗಿ ಶಿವಮೊಗ್ಗ ನಗರವೇ ಉದ್ವಿಗ್ನ ಪರಿಸ್ಥಿತಿಗೆ ಬಂದು ಇಬ್ಬರು ಹಿಂದೂ ಕಾರ್ಯಕರ್ತರ ಮೇಲೆ ಚಾಕೂ ಇರಿತದಂತಹ ಪ್ರಕರಣಗಳೂ ನಡೆದಿವು. ಇನ್ನು ಸಿದ್ಧರಾಮಯ್ಯನವರು ಒಂದು ಹೆಜ್ಜೆ ಮುಂದೆ ಹೋಗಿ ಬ್ರಿಟೀಷರಿಗೆ ಕ್ಷಮಾಪಣೆ ಕೇಳಿ ಜೈಲಿನಿಂದ ಹೊರಬಂದಿದ್ದ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕೊಟ್ಟಿರುವ ಕೊಡುಗೆ ಏನೇನೂ ಅಲ್ಲ ಎಂದು ಮಾತನಾಡಿದ್ದಾರೆ.
ಅಷ್ಟಕ್ಕೂ ಸಾವರ್ಕರ್ ಅವರು ಸಮಾಜದಲ್ಲಿ ಮನೆ ಮಾಡಿದ್ದ ಜಾತೀಯತೆಯನ್ನು ಹೋಗಲಾಡಿಸಲು ಸಹ ಪಂಕ್ತಿಭೋಜನವನ್ನು ಆರಂಭಿಸಿದ್ದರು.ದಲಿತರಿಗೂ ಮಂದಿರ ಪ್ರವೇಶದ ಸಲುವಾಗಿ ಪತಿತ ಪಾವನ ಮಂದಿರವನ್ನು ನಿರ್ಮಾಣ ಮಾಡಿದರು. ಹೀಗೆ ದಲಿತರ ಉದ್ಧಾರಕ್ಕಾಗಿ ದುಡಿದ ಸಾವರ್ಕರ್ ಅವರನ್ನು ಅವಮಾನಿಸಿದರೆ ದಲಿತರಿಗೆ ಅವಮಾನಿಸಿದ ಹಾಗೆ, ಅಷ್ಟಕ್ಕೂ ದಲಿತರ ಉದ್ಧಾರಕ್ಕಾಗಿ ದುಡಿದ ಸಾವರ್ಕರರ ಫೋಟೋ ದೇಶದ ಎಲ್ಲ ಮೂಲೆಯಲ್ಲಿ ಹಾಕುವುದಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವೇ ಆಗಬೇಕು, ಹೀಗಿರುವಾಗ ಮುಸಲ್ಮಾನರ ಜಾಗದಲ್ಲಿ ಎಂಬ ಭೇದ ಯಾಕೆ ಬೇಕು?
ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ನಡೆದ ಐತಿಹಾಸಿಕ ಘಟನೆಗಳನ್ನು ಅದರಲ್ಲೂ ವೈಯಕ್ತಿಕ ದಾಳಿ ಮಾಡಿ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಕಾಂಗ್ರೆಸ್ ಬೇಕಂತಲೇ ಮಾಡುತ್ತಾ ಬಂದಿದೆ. ಸಾವರ್ಕರ್ ಅವರ ಮೇಲಿನ ದಾಳಿ ಇಂದು ನಿನ್ನೆಯದಲ್ಲ, ಬದಲಾಗಿ ಗಾಂಧೀಜಿ ಹತ್ಯೆಯಲ್ಲೂ ಸುಖಾಸುಮ್ಮನೆ ಕಾಂಗ್ರೆಸ್ ಸಾವರ್ಕರ್ ಅವರ,ಸಂಘದ, ಇನ್ನಿತರ ಹಿಂದೂ ಮುಖಂಡರನ್ನು ಗುರಿ ಮಾಡಿ ಸೇಡು ಸಾಧಿಸಿತ್ತು. ಇನ್ನು ಅವರ ಕ್ಷಮಾಪಣೆಯ ವಿಚಾರ ಬಂದಾಗ ಅಂದಿನ ದೇಶ ಕಾಲ ಪರಿಧಿಯಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರೂ ಕ್ಷಮೆ ಕೇಳುವ ಪತ್ರಗಳನ್ನು ಬರೆದಿದ್ದರು.ಅಷ್ಟಕ್ಕೂ ವರ್ಷಾನುಗಟ್ಟಲೆ ಜೈಲಿನಲ್ಲಿ ಕೊಳೆಯುವುದರಿಂದ ಹೋರಾಟಕ್ಕೆ ಹಿನ್ನಡೆಯಾಗುತ್ತಿತ್ತೇ ಹೊರತು ಯಾವುದೇ ಪ್ರಯೋಜನವಿರಲಿಲ್ಲ. ಸಾವರ್ಕರರು ಮಾತ್ರವೇ ಅಲ್ಲ ಶ್ರೀ ಅರವಿಂದ ಘೋಷರ ತಮ್ಮ ಬಾರಿಂದ್ರ ಕುಮಾರ್ ಘೋಷ್,ಸಚಿನ್ ಸನ್ಯಾಲ್ ಹೀಗೆ ಅನೇಕ ಮಂದಿ ಸಹ ಪತ್ರ ಬರೆದಿದ್ದರು.ಹಾಗಾದರೆ ಇವರೆಲ್ಲರ ಕೊಡುಗೆಯನ್ನೂ ಸಿದ್ಧರಾಮಯ್ಯನವರು ಅಲ್ಲಗಳೆಯಲು ಸಾಧ್ಯವೆ?
ಅಷ್ಟಕ್ಕೂ ನಾಲ್ಕು ಬಾರಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ಪಂಡಿತ್ ಮದನ್ ಮೋಹನ್ ಮಾಲವೀಯರು ಕಾಕೋರಿ ಮೊಕದ್ದಮೆಯಲ್ಲಿ ರಾಮ ಪ್ರಸಾದ ಬಿಸ್ಮಿಲ್ಲಾ,ಠಾಕುರ್ ರೋಷನ್ ಸಿಂಗ್,ರಾಜೇಂದ್ರ ಲಾಹಿರಿ,ಅಶ್ವಾಕ್ ಉಲ್ಲಾ ಖಾನ್ರಿಗೆ ಮರಣದಂಡನೆಯಾದಾಗ ಸ್ವತಃ ತಾವೇ ಮೊಮೊರಾಂಡಂ ಒಂದನ್ನು ಸಿದ್ಧಪಡಿಸಿ ಅಂದಿನ ವೈಸ್ರಾಯ್ ಮತ್ತು ಗೌವರ್ನರ್ ಜನರಲ್ ಎಡ್ವರ್ಡ್ ಫೆಡ್ರಿಕ್ ಲಿಂಡ್ಲೇ ವುಡ್ ಅವರಿಗೆ ಸಲ್ಲಿಸಿದ್ದರು. ಅದರಲ್ಲಿ ಅಂದಿನ ಕಾಂಗ್ರೆಸ್ಸಿನ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ 78 ಸದಸ್ಯರ ಸಹಿ ಕೂಡ ಇತ್ತು.ಹಾಗಾದರೆ ಕ್ರಾಂತಿಕಾರಿಗಳು, ಮದನ್ ಮೋಹನ ಮಾಲವೀಯರೂ ಸೇರಿದಂತೆ 78 ಮಂದಿ ಕಾಂಗ್ರೆಸ್ಸಿನ ಚುನಾಯಿತ ಸದಸ್ಯರೂ ಹೇಡಿಗಳೆ? ಅವರೂ ಸ್ವಾತಂತ್ರ್ಯ ಹೋರಾಟಕ್ಕೆ ಕೊಟ್ಟ ಕೊಡುಗೆ ಕಡಿಮೆಯೇ?
ಸಿದ್ಧರಾಮಯ್ಯನವರು ಮಾತನಾಡುತ್ತಾ ಮುಸ್ಲಿಂ ಸಮುದಾಯ ಇರುವ ಜಾಗದಲ್ಲಿ ಸಾವರ್ಕರ್ ಫೋಟೋ ಯಾಕೆ ಹಾಕಬೇಕು ಎನ್ನುವಂತೆ ಮಾತನಾಡುತ್ತಾರೆ,ಅಷ್ಟಕ್ಕೂ ಸ್ವಾತಂತ್ರ್ಯ ಹೋರಾಟ ನಡೆದದ್ದು ಭಾರತವನ್ನು ದಾಸ್ಯಮುಕ್ತವಾಗಿಸಲು, ಹಿಂದೂಗಳಿಗೆ ಸ್ವಾತಂತ್ರ್ಯ ಹೊರಾಟ,ಮುಸಲ್ಮಾನರಿಗೆ ಸ್ವಾತಂತ್ರ್ಯ ಹೋರಾಟ ಅಂತಲ್ಲವಲ್ಲ! ಅಶ್ವಾಕ್ ಉಲ್ಲಾ ಖಾನ್ರ ಭಾವಚಿತ್ರವನ್ನು ಹಿಂದೂ ಮೆಜಾರಿಟಿ ಜಾಗಗಳಲ್ಲಿ ಹಾಕಿದಾಗ ಯಾಕೆ ಈ ಮಾತು ನಿಮ್ಮಿಂದ ಬರಲಿಲ್ಲ, ಸಾಮರಸ್ಯ ಎನ್ನುವುದು ಏಕಮುಖದ ರಸ್ತೆಯಲ್ಲ!
ಟಿಪ್ಪು ಜಯಂತಿಯನ್ನು ಆಚರಿಸಿ ಸ್ವಾತಂತ್ರ್ಯ ಹೋರಾಟಗಾರ ಎಂಬ ಭ್ರಮೆಯಲ್ಲಿ ಬದುಕುತ್ತಿರುವ ಸಿದ್ಧರಾಮಯ್ಯನವರಿಗೆ ಕೊಡಗಿನಲ್ಲಿ ಹಿಂದೂಗಳು ಮೊಟ್ಟೆ ಒಡೆಯುವುದರ ಮೂಲಕ ತಕ್ಕದಾದ ಸ್ವಾಗತವನ್ನೇ ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಬಗೆಗೆ ರಾಜಕೀಯ ಮಾಡುವ ಕೀಳು ಮಟ್ಟಕ್ಕೆ ಇಳಿಯುವುದು ಯಾವುದೇ ದೇಶದ ಆರೋಗ್ಯಕರ ಸಮಾಜದ ಲಕ್ಷಣವಲ್ಲ. ನಿಜಕ್ಕೂ ಸಮಾಜ ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಬೇಕಾದ ಮಹನೀಯರನ್ನ ಹೀಗೆ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವುದು ಖೇದಕರ.