ಆಗಸ್ಟ್ 17 ಭಾರತ ದೇಶಕ್ಕೋಸ್ಕರ ಹೋರಾಡಿದ ಮಹಾನ್ ವ್ಯಕ್ತಿ ಮದನ್ ಲಾಲ ಧಿಂಗ್ರ ತಮ್ಮ ಪ್ರಾಣವನ್ನು ಅರ್ಪಿಸಿಕೊಂಡ ದಿನ. ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ  ಮರಣ ದಂಡನೆಗೆ ಒಳಗಾದ ಮೊದಲ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮದನ್ ಲಾಲ್ ಧಿಂಗ್ರ.  ಅವರು ತಮ್ಮನ್ನು ನೇಣಿಗೆ ಒಡ್ಡಿಕೊಂಡ ದಿನ ಆಗಸ್ಟ್ 17, 1909.

ಮದನ್ ಲಾಲ್ ಧಿಂಗ್ರರು ಮನಸ್ಸು ಮಾಡಿದ್ದರೆ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಜೀವಿಸಬಹುದಾಗಿತ್ತು.  ಫೆಬ್ರುವರಿ 18, 1883ರಂದು ಅಮೃತಸರದಲ್ಲಿ ಜನಿಸಿದ ಅವರದ್ದು  ಅತ್ಯಂತ  ಶ್ರೀಮಂತ ಕುಟುಂಬ.  ಅವರ ತಂದೆ ದಿತ್ತ ಮಲ್ ಅವರು ಸರ್ಕಾರಿ ಹಿರಿಯ ವೈದ್ಯರಾಗಿ ನಿವೃತ್ತಿ ಪಡೆದಿದ್ದವರು.   ಅಮೃತಸರದಲ್ಲಿ ಅವರ ಅಧಿಪತ್ಯದಲ್ಲಿ 21 ದೊಡ್ಡ ಮನೆಗಳು, 6 ಶ್ರೀಮಂತ ಬಂಗಲೆಗಳಿದ್ದುವಂತೆ.

 ಮುಂದೆ ದತ್ತ ಮಲ್ ಅವರು ಈಗಿನ ಪಾಕಿಸ್ತಾನದಲ್ಲಿರುವ ಸಹಿವಾಲ್ ಎಂಬ ಗ್ರಾಮಕ್ಕೆ 1850ರಲ್ಲಿ ವಲಸೆ ಬಂದರು.  ಅಲ್ಲಿಯೂ ಅವರಿಗೆ ಪೂರ್ವಾರ್ಜಿತವಾಗಿ ಬಂದ ಅಪಾರ ಭೂಮಿ  ಶ್ರೀಮಂತ ಬಂಗಲೆಗಳಿದ್ದವು.  ಅಂದಿನ ದಿನಗಳಲ್ಲಿ ರಾಜರುಗಳ ಬಳಿಯೂ ಇಲ್ಲದಿದ್ದಂತಹ  ಶ್ರೀಮಂತ ಕಾರು ಮತ್ತಿತರ ಭವ್ಯ  ಶ್ರೀಮಂತಿಕೆ ಅವರ ಬಳಿ ಇತ್ತು. ಬ್ರಿಟಿಷ್ ಸರ್ಕಾರ ಅವರನ್ನು  ರಾಜ್ ಸಾಹೇಬ ಎಂದೇ ಗೌರವಿಸುತ್ತಿತ್ತು.  ಅವರಿಗೆ ಏಳು ಗಂಡು ಮಕ್ಕಳು ಮತ್ತು ಒಬ್ಬ ಪುತ್ರಿ ಇದ್ದರು.  ಮೂರು ಗಂಡು ಮಕ್ಕಳು ವೈದ್ಯರಾದರೆ, ಮೂರು ಮಕ್ಕಳು ಬ್ಯಾರಿಸ್ಟರ್ ಪದವಿ ಪಡೆದವರು. ಇನ್ನೊಬ್ಬ ಪುತ್ರ ಮಾತ್ರ ಅಪವಾದ.ಆತನೇ ಕ್ರಾಂತಿಕಾರಿಯಾದ ಮದನ್ ಲಾಲ್ ಧಿಂಗ್ರ.  ತನ್ನ ಓದಿನ ದಿನಗಳಲ್ಲಿ ಮದನ್ ಲಾಲ್ ಧಿಂಗ್ರ,  ಲಾಲಾ ಲಜಪತ್ ರಾಯ್ ಮತ್ತು ಭಗತ್ ಸಿಂಗ್ ಅವರ ಚಿಕ್ಕಪ್ಪ ಅಜಿತ್ ಸಿಂಗ್ ಅವರುಗಳು  ಸಂಘಟಿಸಿದ್ದ ‘ಪಗ್ಡಿ ಸಂಬಾಲ್ ಜತ್ತ’ ಎಂಬ ಚಳವಳಿಯಲ್ಲಿ ಪಾಲ್ಗೊಂಡು ಅದಕ್ಕಾಗಿ ದೈಹಿಕವಾಗಿ ಶ್ರಮಿಸಿದ.  ಭಾರತೀಯ ಬಡತನ ಮತ್ತು ಕ್ಷಾಮದ ಪರಿಸ್ಥಿತಿಯ ಕುರಿತಾಗಿನ ತೀವ್ರವಾದ ಅಧ್ಯಯನವನ್ನು ಧಿಂಗ್ರ ಕೈಗೊಂಡ.  ಸ್ವದೇಶಿ ಚಳುವಳಿಗೆ ಬದ್ಧನಾಗಿ ಲಾಹೋರಿನ ಕಾಲೇಜಿನ ದಿನಗಳಲ್ಲಿ  ವಿಧಿಸಿದ್ದ ಶಿಸ್ತನ್ನು ವಿರೋಧಿಸಿ ಕಾಲೇಜಿನಿಂದಲೂ ಹೊರಹಾಕಲ್ಪಟ್ಟ.  ಬ್ರಿಟಿಷರು ಕಾಲ್ಕಾ ಎಂಬಲ್ಲಿ ನಡೆಸುತ್ತಿದ್ದ ಕುದುರೆಗಾಡಿ ವ್ಯವಸ್ಥೆಯ  ‘ಟಾಂಗಾ ಸರ್ವಿಸ್’ ಸಂಸ್ಥೆಯಲ್ಲಿ ಗುಮಾಸ್ತನಾದ.  ಅಲ್ಲಿಯೂ  ಕಾರ್ಮಿಕರ ಸಂಘಟನೆ ಮಾಡಲು ಹೋಗಿ ಕೆಲಸ ಕೆಲಸ ಕಳೆದುಕೊಂಡ.  ಕೆಲವೊಂದು ಕಾಲ ಮುಂಬೈನಲ್ಲಿ ಅಲ್ಲಿ ಇಲ್ಲಿ ಕೆಲಸ ಮಾಡಿ ತನ್ನ ಹಿರಿಯ ಸೋದರ ಡಾಕ್ಟರ್ ಬಿಹಾರಿ ಲಾಲ್ ಅವರ ಮಾತಿಗೆ ಗೌರವ ಕೊಟ್ಟು ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೊರಟ. 

ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿಗೆ ಬಂದ ಧಿಂಗ್ರ ಮದನ್ ಲಾಲ್ ಧಿಂಗ್ರಾ ಮತ್ತೆ ತನ್ನ ಮೂಲ ಶೋಕಿಲಾಲತನಕ್ಕೆ ಹಿಂದಿರುಗಿ ಇಂಗ್ಲೆಂಡ್ ನ ವಿಲಾಸೀ ಸಂಸ್ಕೃತಿಗೆ ತಕ್ಕಂತೆ ಬೆಲೆಬಾಳುವ ಸೂಟು ಬೂಟುಗಳನ್ನು ಹಾಕಿಕೊಂಡು ಕಣ್ಣಿಗೆ ಕಪ್ಪನೆಯ ಕನ್ನಡಕವನ್ನು ಹಾಕಿಕೊಂಡ ಶೋಕಿಲಾಲನಾಗಿ ಇಂಗ್ಲೆಂಡಿನ ಗಲ್ಲಿ ಗಲ್ಲಿಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತಾ ಪಬ್ ಮತ್ತು ಬಾರುಗಳಲ್ಲಿಯೇ ಮೋಜು ಮಾಡುತ್ತಿದ್ದರೂ, ಪರೀಕ್ಷೆಯ ಸಮಯಕ್ಕೆ ಸರಿಯಾಗಿ ಪಟ್ಟಾಗಿ ಕುಳಿತು ಓದಿ ಮೊದಲ ಸ್ಥಾನವನ್ನೇ ಗಳಿಸುತ್ತಿದ್ದ ಕಾರಣ ಮನೆಯಲ್ಲಿ ಯಾರಿಗೂ ಬೇಸರವಿರಲಿಲ್ಲ.

ಇದೇ ಸಮಯದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರು ಇಂಗ್ಲೆಂಡಿನಲ್ಲಿ ಈ ರೀತಿಯ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ಹುಡುಗರು ಕಾಲೇಜಿನ ಮುಂಭಾಗದಲ್ಲಿ ನಿಂತು ಅವರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದ್ದಾಗ ಅದೊಮ್ಮೆ ಮದನ್ ಲಾಲ್ ಧಿಂಗ್ರ ಸಾವರ್ಕರ್ ಅವರ ಮಾತುಗಳಿಂದ ಪ್ರೇರಿತನಾಗಿ ಅವರನ್ನು ಖುದ್ದಾಗಿ ಭೇಟಿಮಾಡಿದ. ಮೊದಲ ಭೇಟಿಯಲ್ಲಿಯೇ ಒಬ್ಬರಿಗೊಬ್ಬರು ಇಷ್ಟವಾಗುತ್ತಾರೆ.

ಭಾರತವನ್ನು ಬ್ರಿಟಿಷರ ದಾಸ್ಯದಿಂದ ಕಿತ್ತೊಗೆಯಲು ನಿಮ್ಮಂತಹ ಯುವಕರ ಸಹಕಾರ ಅತ್ಯಗತ್ಯ ಹಾಗಾಗಿ ಇದರ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ವಾರಾಂತ್ಯದಲ್ಲಿ ಭಾರತ ಭವನಕ್ಕೆ ಹೆಚ್ಚಿನ ಹುಡುಗರನ್ನು ಕರೆತರಲು ತಿಳಿಸುತ್ತಾರೆ. ಅದರಂತೆಯೇ ಇಂಗ್ಲೆಂಡಿನಲ್ಲಿದ್ದ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಭಾರತ ಭವನಕ್ಕೆ ಕರೆತರುವುದರಲ್ಲಿ ಧಿಂಗ್ರ ಸಫಲರಾಗುತ್ತಾರೆ. ಸಾವರ್ಕರ್ ಅವರ ಧೀಮಂತ ವ್ಯಕ್ತಿತ್ವ, ದೇಶಾಭಿಮಾನದ ಮಾತುಗಳನ್ನು ವಾರ ವಾರಕ್ಕೆ ಕೇಳುತ್ತಲೇ ಮದನ್ ಲಾಲ್ ಧಿಂಗ್ರಾ ಗೆ ಸಾವರ್ಕರ್ ಮೇಲೆ ಅಭಿಮಾನ ಹೆಚ್ಚಾಗುತ್ತಾಲೇ ಹೋಗುತ್ತದೆ. ಅವನಲ್ಲಿ ದೇಶಭಕ್ತಿಯ ಹೊಸ ವಿದ್ಯುತ್ ಪ್ರವಹಿಸಿ ಶೋಕಿಲಾಲನಾಗಿದ್ದ ಮದನ್ ಮಹಾನ್ ದೇಶಪ್ರೇಮಿಯಾಗಿ ಬದಲಾಗಿ ಹೋಗುತ್ತಾನೆ.

ಒಮ್ಮೆ ಲಂಡನ್ನಿನಲ್ಲಿ ಒಂದು ರಸ್ತೆ. ಅದರ ಹೆಸರು ಕ್ರಾಮ್‌ವೆಲ್‌ರಸ್ತೆ. ಅಲ್ಲೊಂದು ಮನೆ. ಮನೆಯ ಹೆಸರು “ಭಾರತ ಭವನ”. ಭವನದ ಮಹಡಿಯ ಮೇಲೆ ಒಂದು ಕೋಣೆ. ಕೋಣೆಯಲ್ಲಿ ಒಂದು ಕಡೆ ಮೇಜಿನ ಮೇಲೆ ಒಂದು ಒಲೆ ಧಗಧಗ ಉರಿಯುತ್ತಿತ್ತು. ಒಲೆಯ ಮೇಲೆ ಒಂದು ಗಾಜಿನ ಪಾತ್ರೆ. ಅದರಲ್ಲಿ ಏನೇನೋ ರಾಸಾಯನಿಕ ವಸ್ತುಗಳು. ಮೇಜಿನ ಅಕ್ಕಪಕ್ಕದಲ್ಲೇ ಕೆಲವು ಕಪಾಟುಗಳು. ಅವುಗಳಲ್ಲಿ ರಾಸಾಯನಿಕ ವಸ್ತುಗಳು, ಆಮ್ಲಗಳು ತುಂಬಿದ್ದ ಸೀಸೆಗಳಿದ್ದವು. ಅವುಗಳಲ್ಲಿ ರಾಸಾಯನಿಕ ವಸ್ತುಗಳು, ಆಮ್ಲಗಳು ತುಂಬಿದ್ದ ಸೀಸೆಗಳಿದ್ದವು.

ಧಗಧಗ ಉರಿಯುತ್ತಿದ್ದ ಒಲೆಯ ಹತ್ತಿರ ಸಾವರ್ಕರ್, ಧೀಂಗ್ರ ಇಬ್ಬರು ನಿಂತಿದ್ದರು. ಅವರು ಯಾವುದೋ ಮುಖ್ಯ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಅವರ ಗಮನ ಎಲ್ಲೋ ಇತ್ತು. ಒಲೆ ಮಾತ್ರ ಧಗಧಗ ಉರಿಯುತ್ತಲೇ ಇತ್ತು. ಅದರ ಕಾವು ಕ್ಷಣಕ್ಷಣಕ್ಕೂ ಹೆಚ್ಚುತ್ತಾ ಹೋಯಿತು. ಇನ್ನೂ ಸ್ವಲ್ಪವೇ ಸಮಯ ಬಿಟ್ಟಿದ್ದರೆ ಅದರಲ್ಲಿದ್ದ ರಾಸಾಯನಿಕ ವಸ್ತುಗಳು ಹಾರಿ ಆ ಗಾಜಿನ ಪಾತ್ರೆ ಢಮಾರನೆ ಸಿಡಿದು ಚೂರುಚೂರಾಗುತ್ತಿತ್ತು. ಆ ಶಬ್ದಕ್ಕೆ ಆ ರಸ್ತೆಯವರೆಲ್ಲರೂ ಅಲ್ಲಿಗೆ ಓಡಿಬರುತ್ತಿದ್ದರು. ಪೊಲೀಸರು ಬರುತ್ತಿದ್ದರು. ದೊಡ್ಡ ಅನಾಹುತವಾಗುತ್ತಿತ್ತು.

ಅಷ್ಟರಲ್ಲಿ ಸಾವರಕರ್ ಅವರ ಗಮನ ಅತ್ತ ಹೋಯಿತು. ಅಯ್ಯಯ್ಯೋ! ಅನಾಹುತವಾಗುವುದಲ್ಲ!! ಇನ್ನೇನು ಗತಿ!!! ಕೂಡಲೆ ಏನು ಮಾಡಲು ತೋಚದೆ ಅವರು ಪಾತ್ರೆಯನ್ನು ಕೆಳಗಿಳಿಸಲು ಇಕ್ಕಳ ಹುಡುಕಲಾರಂಭಿಸಿದರು. ಆದರೆ ಗಾಜಿನ ಪಾತ್ರೆಯಲ್ಲಿನ ರಾಸಾಯನಿಕ ವಸ್ತುಗಳು ಕೊತಕೊತ ಕುದಿಯುವುದು ಬಹಳ ಹೆಚ್ಚಾಯಿತು.

ಅಷ್ಟರಲ್ಲಿ ಅಲ್ಲಿದ್ದ ಮದನ್ ಸರಕ್ಕನೆ ಎರಡೂ ಕೈಗಳಲ್ಲಿ ಆ ಗಾಜಿನ ಪಾತ್ರೆಯನ್ನು ಬಿಗಿಯಾಗಿ ಹಿಡಿದು, ಒಲೆಯ ಮೇಲಿನಿಂದ ಎತ್ತಿ ಕೆಳಕ್ಕೆ ಇಳಿಸಿಬಿಟ್ಟ. ಚುರ್‌ ಅಂತ ಕೈ ಚರ್ಮ ಸುಟ್ಟುಹೋಯಿತು. ಮಾಂಸ ಸುಟ್ಟ ವಾಸನೆ ಬಂತು ಬುರಬುರ ಬೊಬ್ಬೆಗಳು ಹುಟ್ಟಿಕೊಂಡವು. ಆ ಕೆಲಸ ಮಾಡುವುದು ಅಷ್ಟ ಸುಲಭವಿರಲಿಲ್ಲ. ಕೆಂಪಗೆ ಚೆನ್ನಾಗಿ ಕಾದಿದ್ದ ಅದನ್ನು ಇಳಿಸುವುದಕ್ಕೆ ಚುರುಕುಬುದ್ಧಿ ಧೈರ್ಯ ಬೇಕಿತ್ತು. ಅವೆಲ್ಲ ಗುಣಗಳಿದ್ದ ಆ ವ್ಯಕ್ತಿ ಆ ಕೆಲಸ ಮಾಡಿದ್ದು ಕಂಡು ಮೊದಲನೆಯವರಿಗೆ ಆನಂದವಾಯಿತು ಆಶ್ಚರ್ಯವಾಯಿತು. “ಶಹಬ್ಬಾಷ್‌ ಮದನ್‌ಬಾಯ್‌ ಶಹಬ್ಬಾಷ್‌!” ಎಂದು ಮೆಚ್ಚಿಕೊಂಡರು.

ಅಲ್ಲಿಂದ ಮುಂದೆ ಲಾರ್ಡ್ ಕರ್ಜನ್ ವೈಯಲಿಯನ್ನು ಗುರಿ ಮಾಡಿ ಲಂಡನ್ನಿನಲ್ಲಿಯೇ ಕೊಲ್ಲುವ ಶಪಥ ಮಾಡಿ ಅವನ ಸ್ನೇಹವನ್ನೂ ಸಂಪಾದಿಸುತ್ತಾನೆ. ಜೊತೆಗೆ ಒಬ್ಬ ಾಂಗ್ಲ ಗೆಳತಿಯನ್ನೂ ಸಂಪಾದಿಸುತ್ತಾನೆ. ಅಲ್ಲಿಂದ ಮುಂದೆ ಆಂಗ್ಲರೊಡನೆ ಒಳ್ಳೆಯ ಸಂಪರ್ಕ ಸಾಧಿಸಿ ತೀರಾ ಖಾಸಗಿಯಾದ ಕಾರ್ಯಕ್ರಮಗಳಿಗೂ ಆಹ್ವಾನ ತೆಗೆದುಕೊಳ್ಳುವ ಮಟ್ಟಿಗೆ ಹತ್ತಿರವಾಗುತ್ತಾನೆ.

ಹಾಗೆ ಒಮ್ಮೆ ಕಾಕ್ಸ್ಟನ್ ಹಾಲ್ನಲ್ಲಿ ಲಾರ್ಡ್ ಕರ್ಜನ್ ವಯಲಿಯ ಕಾರ್ಯ ಕ್ರಮಕ್ಕೆ ಆಹ್ವಾನ ದೊರಕಿತು. ಅಲ್ಲಿಗೆ ಸಂಪೂರ್ಣ ಸಿದ್ದವಾಗಿ ಹೋಗಿದ್ದ ಧೀಂಗ್ರ ಬಲಿದಾನ ಮಾಡಲು ತಯಾರಾಗಿ ನಿಂತಿದ್ದ. ಕರ್ಜನ್ನ ತೀರಾ ಹತ್ತಿರಕ್ಕೆ ಹೋಗಿ ಗುಂಡು ಹಾರಿಸಿ ನಿಂತ ಧೀಂಗ್ರ, ೊಂದಿಷ್ಟೂ ವಿಚಲಿತನಾಗದೆ, ಪೋಲಿಸರಿಗೆ ಬಂಧಿಸುವಂತೆ ಸೂಚಿಸಿದ.

ಹೀಗೆ ಜಗತ್ತಿನ ಎದುರೇ ಭೀಕರವಾಗಿ ಆಕ್ರಮಣ ಮಾಡಿದ್ದ ಬ್ರಿಟೀಷರನ್ನು ಅವರ ಜಾಗದಲ್ಲಿಯೇ ಕೊಂದು ಇತಿಹಾಸ ನಿರ್ಮಾಣ ಮಾಡಿದವನು ಮದನ್ ಲಾಲ್ ಧೀಂಗ್ರ, ಆನಂತರ ಲಂಡನ್ನಿನ ಕೋರ್ಟಿನಲ್ಲಿ ವಿಚಾರಣೆ ನಡೆದು ಗಲ್ಲುಶಿಕ್ಷೆಯನ್ನು ವಿಧಿಸಲಾಯಿತು. ನಗುನಗುತ್ತಾ ನೇಣುಗಂಬಕ್ಕೇರಿದ ಅವನು ಕೊನೆಯದಾಗಿ, ಹೇಳಿಕೆ ನೀಡಿದ, “ನಿನ್ನಂಥ ದೊಡ್ಡ ತಾಯಿಗೆ,ನನ್ನಂಥ ದಡ್ಡ ಮಗ ರಕ್ತಾನಲ್ದೆ ಮತ್ತೇನು ತಾನೆ ನೀಡಲು ಸಾಧ್ಯ?” ಎಂದ ಮಾತು ಇವತ್ತಿಗೂ ಭಾರತದ ಯುವಕರಿಗೆ ಪ್ರೇರಣೆ

Leave a Reply

Your email address will not be published.

This site uses Akismet to reduce spam. Learn how your comment data is processed.