– ಡಾ. ರೋಹಿಣಾಕ್ಷ ಶಿರ್ಲಾಲು
ಕುವೆಂಪು ಅವರ ಸಾಹಿತ್ಯದಲ್ಲಿ ಕರ್ನಾಟಕ ಮತ್ತು ಭಾರತದ ಕಲ್ಪನೆಗಳಲ್ಲಿ ಕಾಣುವ ಐಕ್ಯದ ಭಾವ ಬಹು ವಿಶಿಷ್ಟವಾದುದು. ಅವರಿಗೆ ಕರ್ನಾಟಕವಾಗಲೀ, ಭಾರತವೇ ಆಗಲೀ ಬರಿಯ ಮಣ್ಣಾಗುವುದಿಲ್ಲ. ಕೇವಲ ರಾಜಕೀಯ ಒಕ್ಕೂಟವಾಗುವುದಿಲ್ಲ. ಬದಲಾಗಿ ಅವುಗಳೊಂದು ಸಾಂಸ್ಕೃತಿಕ ಪ್ರತಿಬಿಂಬವಾಗುತ್ತದೆ.
ಭೌಗೋಳಿಕ ಕರ್ನಾಟಕ, ಭೌಗೋಳಿಕ ಭಾರತದ ಕಲ್ಪನೆಗಿಂತಲೂ ಸಾಂಸ್ಕೃತಿಕ ಕರ್ನಾಟಕ, ಸಾಂಸ್ಕೃತಿಕ ಭಾರತವೇ ಪ್ರಧಾನವಾಗಿ ಪ್ರಕಟವಾಗುತ್ತದೆ. ಅವರೇ ಹೇಳುವಂತೆ “ಅಖಿಲ ಭಾರತೀಯವಾದ ಸಮಗ್ರತೆ, ಐಕ್ಯತೆಗಳು ರಾಜಕೀಯವಾಗಿ ಅರ್ವಾಚೀನವಾದುದಾದರು. ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಪ್ರಾಚೀನವಾದವುಗಳಾಗಿವೆ. ವೇದೋಪನಿಷತ್ ದರ್ಶನಾದಿಗಳಿಂದ ಪರಿಪುಷ್ಟಗೊಂಡ ಆ ಐಕ್ಯತೆ ಅತ್ಯಂತ ಛಿದ್ರವಿಚ್ಛಿದ್ರಕವಾದ ರಾಜಕೀಯ ಪರಿಸ್ಥಿತಿಯಲ್ಲಿಯೂ ಒಂದಿನಿತೂ ಚ್ಯುತಿಗೊಳ್ಳದ ರೀತಿಯಲ್ಲಿ ರಕ್ಷಿತವಾಗಿತ್ತು”.
ಅಂದರೆ, ಈ ಬಗೆಯ ಐಕ್ಯತೆಯು ಭಾರತೀಯ ಪರಂಪರೆಯ ಮೂಲ ಗುಣ. ಅದು ಯಾವುದೇ ರಾಜಕೀಯ ಆಡಳಿತದ ಉದ್ದೇಶಕ್ಕಾಗಿ ರೂಪುಗೊಳಿಸಿದ್ದಲ್ಲ. ಅಥವಾ ರಾಜಕೀಯ ಆಳ್ವಿಕೆಯು ವ್ಯತ್ಯಾಸವಾದಾಗಲೂ ಈ ಐಕ್ಯತೆಯು ದುರ್ಬಲಗೊಳ್ಳಲಿಲ್ಲ.
ಕುವೆಂಪು ತನ್ನನ್ನು ತಾನು ಕನ್ನಡಿಗ ಮತ್ತು ಭಾರತೀಯ ಎನ್ನುವಾಗ ಯಾವ ದ್ವಂದ್ವಕ್ಕೂ ಅವಕಾಶವಿಲ್ಲದಂತೆ ಗುರುತಿಸಿಕೊಂಡಿದ್ದರು. ಅವರು ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸಿದ ಸಮಾರಂಭದಲ್ಲಿ ಮಾಡಿದ ಉಪನ್ಯಾಸದಲ್ಲಿ ಭಾರತೀಯ ಭಾಷೆ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಬಹುಜಿಹ್ವೆಯಾಗಿ ಗುರುತಿಸುತ್ತಾ, ಅವೆಲ್ಲವೂ ಸೇರಿ ಬೆಳಗಿದ ಆರತಿ ಐಕ್ಯತೆಯದ್ದು ಎನ್ನುತ್ತಾರೆ.
“ಕೊಳಲಿಗೆ ಅನೇಕ ಕಣ್ಣುಗಳಿರುವಂತೆ ಭಾರತಿಗೆ ಬಹು ಜಿಹ್ವೆಗಳಿವೆ. ಪೀಪಿ ಊದುವ ಹುಡುಗನಿಗೆ ಕೊಳಲಿಗೆ ಅನೇಕ ರಂದ್ರಗಳಿರುವುದು ತೊಂದರೆಯ ವಿಷಯವಾಗುತ್ತದೆ; ಆದರೆ ವೇಣುವಾದನ ನಿಪುಣನಿಗೆ ಆ ರಂದ್ರಗಳ ಅನೇಕತೆಯೇ ಸಂಗೀತದ ಸ್ವರಮೇಲ ಮಾದುರ್ಯಕ್ಕೆ ಅವಶ್ಯ ಸಾಧನವಾಗುತ್ತದೆ” ಎನ್ನುತ್ತಾ ಭಾರತೀಯ ಭಾಷೆಗಳೆಲ್ಲ ಸೇರಿ ಐಕ್ಯತೆಯ ಆರತಿಯನ್ನೆತ್ತಿ ಭರತಮಾತೆಗೆ ಪೂಜೆ ಸಲ್ಲಿಸುತ್ತಿವೆ ಎಂದು ಸಂಭ್ರಮಿಸುತ್ತಾರೆ. ತನ್ನನ್ನು ತಾನು “ನಾನು ರಾಜ್ಯ ದೃಷ್ಟಿಯಿಂದ ಕರ್ನಾಟಕದವನು; ಭಾಷಾ ದೃಷ್ಟಿಯಿಂದ ಕನ್ನಡಿಗನು; ಆದರೆ ಸಂಸ್ಕೃತಿಯ ದೃಷ್ಟಿಯಿಂದ ಮತ್ತು ರಾಷ್ಟ್ರದ ದೃಷ್ಟಿಯಿಂದ ಭಾರತೀಯನು. ತನ್ನ ಕರ್ನಾಟಕತ್ವ ಭಾರತೀಯತ್ವಕ್ಕೆ ಎಂದಿಗೂ ಎದುರು ನಿಲ್ಲುವುದಿಲ್ಲ. ಕರ್ನಾಟಕತ್ವ ಭಾರತೀಯತ್ವಕ್ಕೆ ಎಂದೆಂದಿಗೂ ಅವಿರೋಧಿಯಾಗಿ ಸೇವೆ ಸಲ್ಲಿಸುವುದರಿಂದಲೇ ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳುತ್ತದೆ. ಭಾರತಿ ತಾಯಿ; ಕರ್ನಾಟಕ ಮಗಳು. ಭಾರತಕ್ಕೆ ಧಕ್ಕೆ ಒದಗಿದರೆ ಕರ್ನಾಟಕ ಉಳಿಯುವುದಿಲ್ಲ; ಮಗಳು ಕರ್ನಾಟಕಕ್ಕೆ ಕೇಡಾದರೆ ತಾಯಿ ಭಾರತಮಾತೆ ಸಹಿಸುವುದಿಲ್ಲ. ಪರಸ್ಪರ ಕ್ಷೇಮ ರಕ್ಷಣೆಯಿಂದಲೇ ಸರ್ವರ ಕ್ಷೇಮವೂ ರಕ್ಷಿತವಾಗುತ್ತದೆ” ಎನ್ನುತ್ತಾರೆ.
ಕರ್ನಾಟಕತ್ವ – ಭಾರತೀಯತ್ವಗಳು ಪರಸ್ಪರ ಒಂದಕ್ಕೊಂದು ವಿರುದ್ಧವಲ್ಲದ ಕಲ್ಪನೆ. ಜೈ ಭಾರತ ಜನನಿಯ ತನುಜಾತೆ ಎಂಬ ತಾಯಿ-ಮಗಳು ಎನ್ನುವ ಕಲ್ಪನೆಯೇ ವಿಶ್ವಪ್ರಜ್ಞೆಯ ದಾರ್ಶನಿಕತೆಯಾಗುತ್ತದೆ. ‘ತನು’ ‘ಜಾತೆ’ ಎಂಬ ಪದಗಳ ಪೂರ್ಣಾರ್ಥವನ್ನು ಗ್ರಹಿಸಬೇಕು ಎಂದೇ ಕುವೆಂಪು ಹೇಳಿದ್ದರು. “ಪ್ರತ್ಯೇಕತೆಗಾಗಲೀ, ವಿರೋಧಕ್ಕಾಗಲೀ ಸ್ವಲ್ಪವೂ ಅವಕಾಶ ಇರಬಾರದು. ಭರತಖಂಡ ಮರದ ಬುಡ; ಪ್ರಾಂತಗಳೇ ಅದರ ಕೊಂಬೆಗಳು. ಬುಡ ಕಡಿದ ಮೇಲೆ ಕೊಂಬೆಗಳು ಅಲ್ಲೇ ಇರುತ್ತವೆಯೇ? ನಾವು ಭಾರತೀಯರಾದುದರಿಂದ ಕನ್ನಡಿಗರಾಗಿದ್ದೇವೆ; ಭಾರತೀಯರಲ್ಲದವರು ಕನ್ನಡಿಗರೇ ಅಲ್ಲ.
ಈ ಭಾವನೆಯನ್ನೆಂದೂ ಮರೆಯಬಾರದು. ಅದು ನಮ್ಮ ಜೀವನದ ಮೂಲ ಮಂತ್ರವಾಗಬೇಕು; ನಮ್ಮೆಲ್ಲ ವ್ಯವಹಾರಗಳ ಸೂತ್ರವಾಗಬೇಕು” ಎನ್ನುವುದು ಕುವೆಂಪು ಅವರ ಮಾತು.
ಒಂದೆಡೆ ಕನ್ನಡದ ಅಭಿಮಾನ , ಕನ್ನಡ ನಾಡಿನ ಬಗೆಗಿನ ಅಭಿಮಾನವನ್ನು ಉತ್ಕಟವಾಗಿ ವ್ಯಕ್ತಪಡಿಸುವ ಕವಿ ಅದೇ ಉತ್ಕಟತೆಯನ್ನು ಭಾರತೀಯ ರಾಷ್ಟ್ರೀಯತೆಯ ಕುರಿತೂ ವ್ಯಕ್ತಪಡಿಸುತ್ತಾರೆ. ಅವುಗಳ ನಡುವೆ ಯಾವುದೇ ಸಂಘರ್ಷವಿಲ್ಲ. ಕನ್ನಡ ಮತ್ತು ಭಾರತ ಇವುಗಳು ಪರಸ್ಪರ ಒಂದಾಗಿಯೇ ಕಾಣಿಸಿಕೊಳ್ಳುತ್ತದೆ. ಸ್ಥಳೀಯತೆ ರಾಷ್ಟ್ರಕ್ಕೆ ವಿರೋಧಿಯಲ್ಲದ, ಆ ಮೂಲಕ ರಾಷ್ಟ್ರ ವಿಶ್ವಕ್ಕೆ ವಿರುದ್ಧವಲ್ಲದ ಒಂದು ಕಲ್ಪನೆ ಅವರ ಸಾಹಿತ್ಯದಲ್ಲಿದೆ. ಕನ್ನಡದ ಮೂಲಕ ಭಾರತವನ್ನೂ, ವಿಶ್ವವನ್ನೂ ನೋಡುವ ಸಾಧ್ಯತೆಯನ್ನು ಕುವೆಂಪು ತೋರಿಸಿಕೊಟ್ಟಿದ್ದಾರೆ. ಕನ್ನಡ ಪ್ರಜ್ಞೆ ಹೇಗೆ ಭಾರತ ಪ್ರಜ್ಞೆಗೆ ವಿರುದ್ಧವಾಗಿರಲಿಲ್ಲವೋ ಹಾಗೆಯೇ ಭಾರತಪ್ರಜ್ಞೆ ವಿಶ್ವಪ್ರಜ್ಞೆಗೆ ವಿರುದ್ಧವಾಗಿರಲಿಲ್ಲ.ಭಾರತಾಂತರ್ಗತ ಕರ್ನಾಟಕ ಪ್ರಜ್ಞೆಯಂತೆ ವಿಶ್ವ ಅಂತರ್ಗತವಾದ ಭಾರತ ಪ್ರಜ್ಞೆಗೆ ಇದು ಅತ್ಯುತ್ತಮ ನಿದರ್ಶನವಾಗುತ್ತದೆ. ಅವರ ಈ ಚಿಂತನೆ ಕನ್ನಡ ನಾಡು ಅದು ಅಖಂಡ ಭಾರತದ ಒಂದು ಭಾಗ ಎಂದು ಭಾವಿಸುವುದು. ಇಲ್ಲಿ ಸಂಬಂಧದ ಸ್ವರೂಪದಲ್ಲಿ ಸಂಘರ್ಷವಿಲ್ಲ, ಹೊಂದಾಣಿಕೆ ಇದೆ.
ಕನ್ನಡ, ಕನ್ನಡನಾಡು ಎರಡೂ ಪ್ರಾಧಾನ್ಯತೆಯನ್ನು ಪಡೆದರೂ ಅದು ಭಾರತವನ್ನು ಬಿಟ್ಟು ಅಲ್ಲ ಎಂಬ ಪ್ರಜ್ಞೆ ಇಲ್ಲಿ ಸದಾ ಎಚ್ಚರವಾಗಿದೆ. ಈ ಬಗೆಯ ಕಲ್ಪನೆ ವೈವಿಧ್ಯತೆಯನ್ನು ಒಪ್ಪಿಕೊಂಡ ಸ್ವರೂಪದ್ದು. ಕರ್ನಾಟಕ ಭಾರತೀಯತೆಯಲ್ಲಿ ಅಂತರ್ಗತಗೊಂಡ ‘ಐಕ್ಯ’ವನ್ನು ಪ್ರತಿಪಾದಿಸುತ್ತಾರೆ. ಈ ಐಕ್ಯ ತತ್ವದ ಹಿಂದೆ ಆಳವಾದ ದಾರ್ಶನಿಕತೆಯೊಂದಿದೆ. ವೈಚಾರಿಕ ಸ್ಪಷ್ಟತೆಯೂ ಇದೆ. ಇದು ಕೇವಲ ಭಾವುಕವಾದ ನಿರೂಪಣೆಯಲ್ಲ. ಒಂದರಿಂದ ಇನ್ನೊಂದು ಕಳಚಿಕೊಳ್ಳದ ಮಾದರಿಯ ಬೆಸುಗೆಯಾಗಿದೆ. ಕುವೆಂಪು ಪ್ರತಿಪಾದಿಸಿದ ಕರ್ನಾಟಕ ಪ್ರಜ್ಞೆ ಭಾರತಪ್ರಜ್ಞೆಯೊಳಗೆ ಸೇರಿಕೊಂಡದ್ದೇ ಆಗಿದೆ. ಅಲ್ಲಿನ ವೈರುಧ್ಯಗಳು ಹೆಚ್ಚಲ್ಲ. ಸಾಮ್ಯತೆಗಳ ಕಡೆಗೇ ಕವಿಯ ಒಲವು. ಕನ್ನಡ ಪ್ರಜ್ಞೆಯು ಭಾರತ ಪ್ರಜ್ಞೆಯಿಂದ ಬೇರೆಯಾಗುವುದಿಲ್ಲ. ಅವುಗಳ ನಡುವೆ ಒಂದು ಬಗೆಯ ಐಕ್ಯ ಭಾವ ಇದೆ. ಅದನ್ನು ಕುವೆಂಪು ಅವರೇ ಹೇಳುವಂತೆ, “ ಈ ಕರ್ನಾಟಕ ಭೌಗೋಳಿಕವಾಗಿ ಭಾರತದ ಇತರ ಪ್ರದೇಶಗಳಿಂದ ಭಿನ್ನವಾಗಿ ಕಂಡರೂ ಸಾಂಸ್ಕೃತಿಕವಾಗಿ ಅಷ್ಟೇನೂ ಭಿನ್ನವಲ್ಲ. ಅಧ್ಯಾತ್ಮಿಕವಾಗಿ ನೋಡಿದರಂತೂ ಸಂಪೂರ್ಣವಾಗಿ ಅಭಿನ್ನ. ಉಡುಗೆ-ತೊಡುಗೆ, ಉಣಿಸು, ನಡೆ-ನುಡಿಗಳಲ್ಲಿ ಪ್ರಾಂತದಿಂದ ಪ್ರಾಂತಕ್ಕೆ ಸ್ವಲ್ಪ ವ್ಯತ್ಯಾಸ ತೋರಿದರೂ ನಮ್ಮೆಲ್ಲರ ಕನಸು ಒಂದೇ, ನಮ್ಮೆಲ್ಲರ ಮನಸ್ಸು ಒಂದೇ, ನಮ್ಮೆಲ್ಲರ ಗುರಿಯೂ ಒಂದೇ. ನಾವೆಲ್ಲ ಭಾರತೀಯರು” ಎನ್ನುತ್ತಾರೆ. ಇಲ್ಲಿ ಒಡಕಿಲ್ಲ. ಕರ್ನಾಟಕ ಆಂಧ್ರಾದಿ ಪ್ರದೇಶಗಳೆಲ್ಲ ಆ ಭಾರತಿಯ ಅಂಗರೂಪಗಳು, ಅಂಶರೂಪಗಳೆಂದೇ ಗುರುತಿಸುತ್ತಾರೆ. ಯಾವ ಸ್ವರೂಪದಲ್ಲೂ ಒಡಕಿಲ್ಲದ ಐಕ್ಯ ಭಾವ ಕವಿಯಲ್ಲಿತ್ತು. ಬದುಕಿನ ವಿವಿಧ ನೆಲೆಗಳಲ್ಲಿ ಕಾಣುವ ಸಂಗತಿಗಳು ಕೂಡ ಹೇಗೆ ಐಕ್ಯ ಕಾರಣವೆಂದು ಅವರು ಹೇಳುತ್ತಾರೆ. “ ಈ ಪ್ರಾದೇಶಿಕ ವೈಶಿಷ್ಟ್ಯದ ರಕ್ಷಣೆಯಿಂದ ಅಖಿಲ ಭಾರತೀಯ ಐಕ್ಯತೆಗೆ ಒಂದಿನಿತೂ ವ್ಯಾಘಾತ ಒದಗುವುದಿಲ್ಲ ಎಂಬುದು ವಿಧಿತವಾಗುತ್ತದೆ. ಏಕೆಂದರೆ ಭಾಷೆಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದ್ದರೂ ಬೇರೆ ಬೇರೆಯ ಪ್ರದೇಶ ಮತ್ತು ರಾಜ್ಯಗಳ ಕಲಾ ಮತ್ತು ಸಾಹಿತ್ಯಾದಿಗಳ ವಸ್ತು ಮತ್ತು ದೃಷ್ಟಿಗಳಲ್ಲಿ ಅಖಿಲ ಭಾರತೀಯವಾದ ಏಕೈಕ ಮೂಲ ಸಂಸ್ಕೃತಿಯೇ ಶೇಕಡಾ ತೊಂಬತ್ತೈದಕ್ಕಿಂತಲೂ ಹೆಚ್ಚಾಗಿ ಸರ್ವಸಾಧಾರಣವಾಗಿದೆ. ಆ ಮೂಲ ಸಂಸ್ಕೃತಿಯ ವಜ್ರ ಬೆಸುಗೆ ನಮ್ಮ ಒಗ್ಗಟ್ಟನ್ನು ಎಂದೆಂದಿಗೂ ಒಡೆಯಲು ಬಿಡುವುದಿಲ್ಲ. ಅಷ್ಟೇ ಅಲ್ಲ, ನಮಗೀಗ ಒದಗಿರುವ ರಾಜಕೀಯ ಅಖಂಡತೆಗೂ ಐಕ್ಯತೆಗೂ ಮೂಲ ಕಾರಣವೂ ಆ ಅಖಿಲ ಭಾರತೀಯವಾಗಿರುವ ಸಂಸ್ಕೃತಿಯ ಮೂಲದಲ್ಲಿಯೇ ಇದೆ” ಎನ್ನುತ್ತಾರೆ. ಕನ್ನಡದ ಪರವಾದ ಚಿಂತನೆಯನ್ನು ಕುವೆಂಪು ಪ್ರಾದೇಶಿಕತೆಯಾಗಿ ಕಾಣುವುದಿಲ್ಲ, ಬದಲಾಗಿ ಅದು ರಾಷ್ಟ್ರೀಯತೆಯ ಚಿಂತನೆಯೇ ಆಗುತ್ತದೆ. ಕನ್ನಡ ಭಾಷೆ, ಸಂಸ್ಕೃತಿಯನ್ನು ಕುರಿತು ಚಿಂತಿಸುವುದೆಂದರೆ ಅದು ವಿಶಾಲ ನೆಲೆಯಲ್ಲಿ ಭಾರತೀಯವಾದುದರ ಚಿಂತನೆಯೇ ಆಗಿರುತ್ತದೆ. ಹಾಗಾಗಿ ಕನ್ನಡ ಪ್ರಜ್ಞೆ ಭಾರತ ಪ್ರಜ್ಞೆಯ ಪ್ರತೀಕವೇ ಹೊರತು ಪರಸ್ಪರ ವಿರುದ್ಧ ಅಲ್ಲ. ಕರ್ನಾಟಕತ್ವ , ಮಹಾರಾಷ್ಟ್ರತ್ವ, ಆಂಧ್ರತ್ವಗಳನ್ನು ಭಾರತೀಯತ್ವ ಬೆಸೆದಿರುವುದರಿಂದ ಬೇರೆ ಬೇರೆಯಾಗಿ ಒಡೆಯಲು ಬಿಡುವುದಿಲ್ಲ ಎನ್ನುತ್ತಾರೆ. ಹೀಗಾಗಿ ಕನ್ನಡ ಪರವಾದ ಚಿಂತನೆಯೊಳಗೆ ಭಾರತೀಯತೆಯ ಧ್ವನಿ ಇದೆ. ಅವರು ಬಹುತ್ವದ ಕಲ್ಪನೆಯನ್ನು ಒಪ್ಪಿಕೊಂಡೆ ಕರ್ನಾಟಕದ ಹಾಗೂ ಭಾರತದ ಕಲ್ಪನೆಯನ್ನು ಮುಂದಿಡುತ್ತಾರೆ.
ಡಾ. ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ,ಕಲಬುರ್ಗಿ