ಬೆಂಗಳೂರು : “ಜಗತ್ತು ಪರ್ಯಾಯ ಮಾದರಿಗಳನ್ನು ಹುಡುಕುತ್ತಿದೆ- ಅದು ಭಾರತದಲ್ಲಿದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ ಅವರು ಹೇಳಿದರು‌. ಅವರು ಕರ್ನಾಟಕ ಹೈಯರ್ ಎಜುಕೇಶನ್ ಕೌನ್ಸಿಲ್‌ನ ಸಭಾಂಗಣದಲ್ಲಿ ಐಸಿಸಿಆರ್, ಪ್ರಜ್ಞಾ ಪ್ರವಾಹ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಕರ್ನಾಟಕ ಹಾಗು ಕೇಂದ್ರ ಸರಕಾರದ ಸಹಯೋಗದಲ್ಲಿ ನಡೆಯುತ್ತಿರುವ ‘ಸ್ವರಾಜ್ – ನೇಟಿವ್ ಮಾಡಲ್ಸ್ ಫಾರ್ ಸೆಲ್ಫ್ ಗೌವರ್ನೆನ್ಸ್’‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಅವರು ಮಾತನಾಡುತ್ತಾ ” ಸ್ವರಾಜ್ಯ ಎನ್ನುವುದು ವೇದ ಕಾಲದಿಂದಲೂ ನಡೆಯುತ್ತಾ ಬಂದಿದೆ. ಇನ್ನು ಶಿವಾಜಿ ಮಹಾರಾಜರು ಇದನ್ನು ಉಪಯೋಗಿಸುತ್ತಾ ‘ಹಿಂದವಿ ಸ್ವರಾಜ್ಯ’ ಎಂದರು. ಮಹಾತ್ಮ ಗಾಂಧಿಯವರು, ಯೋಗಿ ಅರವಿಂದರೂ ಸಹ ಈ ಬಗೆಗೆ ಅತ್ಯಂತ ಗಹನವಾಗಿ ಚರ್ಚೆ ನಡೆಸಿದ್ದರು. ಸ್ವರಾಜ್ಯ ಎನ್ನುವುದರ ಕುರಿತು ಮಾತನಾಡುವಾಗ ಪಾಶ್ಚಿಮಾತ್ಯ ಮಾದರಿಯಲ್ಲೇ ಯೋಚನೆಗಳಲ್ಲೇ ಮಾತನಾಡುತ್ತಿದ್ದೆವೆ. ಈ ಪಾಶ್ಚಿಮಾತ್ಯ ಮಾದರಿಗಳು ‘anthropocentric’ ಆಗಿದೆ, ಅಂದರೆ ಮಾನವಕೇಂದ್ರಿತವಾದ ಯೋಚನೆಯಾಗಿದೆ, ಇಲ್ಲಿ ಜೀವ ಕೇಂದ್ರಿತವಾದ ಯೋಚನೆಗಳಿಲ್ಲ.  ಆದರೆ ಭಾರತದ್ದು ಜೀವಕೇಂದ್ರಿತವಾದ ವಿಚಾರ. ಆದರೆ ಇತ್ತೀಚೆಗೆ ನಾವು ಜೀವಕೇಂದ್ರಿತ ಚಿಂತನೆಯಿಂದ ನಿಧಾನವಾಗಿ ಅದರಿಂದ ದೂರವಾಗಿ ಬಂದಿದ್ದೇವೆ. ಹಾಗಾಗಿಯೇ ಈ ಎಲ್ಲ ತೊಂದರೆಗಳಲ್ಲಿ ಸಿಲುಕಿಕೊಂಡಿದ್ದೇವೆ. ಜಗತ್ತು ಕೂಡ ಹೀಗೇ ಸಿಲುಕಿ ಹಾಕಿಕೊಂಡಿದೆ. ಜಗತ್ತು ಪರ್ಯಾಯ ಮಾದರಿಗಳನ್ನು ಹುಡುಕುತ್ತಿದೆ – ಅದು ಭಾರತದಲ್ಲಿದೆ. ಭಾರತಕ್ಕೆ ಈಗಾಗಲೇ ಇದಕ್ಕೊಂದು ಹಳೆಯ ಸಿದ್ಧ ಮಾದರಿಯಿದೆ, ಅದನ್ನು ಅಳವಡಿಸಿಕೊಳ್ಳಬೇಕಾಗಿದೆ” ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ.ನಾಗರಾಜ ಅವರು ಮುಂದುವರೆದು ಮಾತನಾಡುತ್ತಾ, “1951ರ ವಿಶ್ವಸಂಸ್ಥೆಯ ವರದಿಯಲ್ಲಿ ಮೂರನೆಯ ಜಗತ್ತಿನ ರಾಷ್ಟ್ರಗಳು ತಮ್ಮ ಸಾಂಸ್ಕೃತಿಕ ಮಾದರಿಗಳಿಂದ ಹೊರಬಂದು ಪಾಶ್ಚಿಮಾತ್ಯ ಮಾದರಿಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿತು. ಆದರೆ ಅದರ ಪರಿಣಾಮ ಸ್ವರೂಪವಾಗಿ, ಜಗತ್ತು ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡಿದೆ. ಅದರಿಂದ ಹೊರ ಬರುವ ದಾರಿ ಕಾಣದೆ ಭಾರತದ ಕಡೆ ನೋಡುತ್ತಿದೆ. 2010ರಲ್ಲಿ ಮತ್ತೆ ವಿಶ್ವ ಸಂಸ್ಥೆ ಇದನ್ನು ಮರುಯೋಚಿಸಿತು”.

“ಆಡಳಿತವೆನ್ನುವುದು ಸ್ಥಳೀಯ ಜನರ ಎಲ್ಲ ಆಶೋತ್ತರಗಳ ಜೊತೆಗೆ ಮಿಳಿತವಾಗಬೇಕು. ಈ ನಿಟ್ಟಿನಲ್ಲಿ ಈ ಸಮ್ಮೇಳನವು ಹೆಜ್ಜೆ ಇಡುತ್ತಿದೆ. ಅಷ್ಟು ಮಾತ್ರವಲ್ಲದೆ ಪಂಚಭೂತ, ಧರ್ಮ, ಅಭ್ಯುದಯ, ಸುರಾಜ್ಯ, ಸ್ವಾಸ್ಥ್ಯ ಎಂಬ ಐದು ಆಯಾಮಗಳಲ್ಲಿ ಈ ಸಮ್ಮೇಳನವು ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ‌” ಎಂದರು.

ಪರಿಚಯಾತ್ಮಕವಾಗಿ ಮಾತನಾಡಿದ ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸಹ ಸಂಯೋಜಕರಾದ ಶ್ರೀ ರಘುನಂದನ ಅವರು ಮಾತನಾಡಿ, “ಸ್ವರಾಜ್ – ಎನ್ನುವ ಶಬ್ದದಲ್ಲಿ, ಸ್ವ ಹಾಗು ರಾಜ್ಯ ಎನ್ನುವುದು ಮೂಲ. ರಾಜ್ಯ ಎನ್ನುವಾಗ ಸಾಮಾನ್ಯವಾಗಿ ರಾಜನಿಂದ ಎಂದು ಭಾವಿಸುತ್ತೇವೆ, ಅಲ್ಲಿ ಆಳುವವನು ಇಲ್ಲ ಆಳುವಿಕೆ ಇದೆ. ಸ್ವ ಎಂದರೆ ನನ್ನತನ. ಪ್ರತಿಯೊಬ್ಬರಿಗೂ ಅವರದೇ ಆದಂತಹ ಸ್ವಂತ ಗಳಿಸಿದಂತಹ ಭಾವಗಳು ಮತ್ತು ಕೌಶಲ್ಯ ಇರುತ್ತದೆ. ಅದರ ಉನ್ನತೀಕರಣವೇ ಮೂಲ ಉದ್ದೇಶ. ಎಲ್ಲರೂ ಒಂದೇ ತರಹ ಆಗುವುದು ಉದ್ದೇಶವಲ್ಲ, ಬದಲಾಗಿ ಎಲ್ಲವೂ ತನ್ನದೇ ರೀತಿಯಲ್ಲಿ ವಿಕಾಸ ಹೊಂದುವುದು ಸಹಜ ಪ್ರಕ್ರಿಯೆ. ಆ ರೀತಿಯಲ್ಲಿ ವಿಕಾಸವಾಗಿದ್ದು ಚೈತನ್ಯವಾಗಿರುತ್ತದೆ. ಅದೇ ಸ್ವ. ಅದು ವ್ಯಕ್ತಿಗೆ ಹೇಗೋ ಸಮಾಜಕ್ಕೂ, ದೇಶಕ್ಕೂ ಇದೆ.

ಇದೇ ಆಧಾರದ ಮೇಲೆ ಭಾರತದಲ್ಲಿ ಸ್ವಭಾವ ನಿರ್ಮಾಣವಾಯಿತು. ಅದು ಯೋಗಮುಖೇನ ಅಥವಾ ಇನ್ನಾವುದೇ ರೀತಿ ವ್ಯಕ್ತವಾಗುತ್ತಿದೆ. ಇದರ ಜೊತೆ ಈಗ ಭೋಗಯುಕ್ತ ಚಿಂತನೆಯೂ ಬಂದಿದೆ. ನಮ್ಮೊಳಗಿನ ರಿಸೋರ್ಸ್‌ಗಳನ್ನು ಉಪಭೋಗಿಸುವ ಕ್ಯಾಪಿಟಲಿಸ್ಟ್ ಚಿಂತನೆಗಳೂ ಬಂದಿದೆ. ಗ್ಲೋಬಲೈಸೇಶನ್ನಿನ ಪರಿಣಾಮಗಳು ಹೆಚ್ಚೆಚ್ಚು ನಡೆಯುತ್ತಿದೆ. ‘ಮಿನಿಮಮ್ ಗವರ್ನಮೆಂಟ್,ಮ್ಯಾಕ್ಸಿಮಮ್ ಗೌವರ್ನೆನ್ಸ್’ ಎನ್ನುವ ಮಾತನಾಡುತ್ತಿದ್ದೇವೆ. ಈ ಹಿಂದೆ ನಮ್ಮೂರಿನ ಜಲಮೂಲಗಳ ರಕ್ಷಣೆ ಮಾಡುತ್ತಿದ್ದವರು ಯಾರು? ಈಗ ಯಾರು? ಹಿಂದೆ ಅದರ ಪರಿಸ್ಥಿತಿ ಹೇಗಿತ್ತು? ಈಗ ಹೇಗಿದೆ? ಈ ಹಿಂದೆ ಆ ರೀತಿಯ ಸಾಮುದಾಯಿಕ ಕೆಲಸಗಳಿಗೆ, ಅದರ ಉಸ್ತುವಾರಿಗಳಿಗೆ ಪಂಚಾಯತಿ ವ್ಯವಸ್ಥೆ ಇತ್ತು. ಗೌರವದ ಕಾರಣದಿಂದ ಅದು ನಡೆಯುತ್ತಿತ್ತು. ಆದರೆ ನೇಷನ್ ಸ್ಟೇಟ್‌ಗಳು ಅಸ್ತಿತ್ವಕ್ಕೆ ಬಂದ ಮೇಲೆ ಈ ರೀತಿಯ ಪಂಚಾಯತಿ ಮಾಡೆಲ್ಗಳನ್ನು ಒತ್ತಡದಿಂದ ಅಳಿಸಲಾಯಿತು. ಇದರಿಂದ ನಮ್ಮ ಪಂಚಾಯತಿ ವ್ಯವಸ್ಥೆಗಳು ಹಾಳಾಯಿತು. ಇವತ್ತು ಆಧುನಿಕ ವ್ಯವಸ್ಥೆಗಳು ಹೆಚ್ಚಾಗಿದೆ, ಸುಖ ಹೆಚ್ಚಾಗಿದೆ, ಆದರೆ ಜೀವನದ ಗುಣಮಟ್ಟ ಕಡಿಮೆಯಾಗಿದೆ. ಕ್ಯಾಪಿಟಲಿಸಂ,ಸೋಷಿಯಲಿಸಂ ಎನ್ನುವ ಚಿಂತನೆಗಳು ‘ರಿಸೋರ್ಸ್’ಗಳ ಒಡೆತನದ ಬಗ್ಗೆ ಮಾತನಾಡುತ್ತಿದೆ‌.

ನರಾಜ್ಯಂ ಎನ್ನುವ ವಿಚಾರ ಹೇಳಲಾಗಿದೆ. ನರಾಜ್ಯಂ ಎಂದರೆ ಪಾಶ್ಚಿಮಾತ್ಯರ ಅನಾರ್ಕಿಯಲ್ಲ. ಡಿವಿಜಿಯವರು ತಮ್ಮ ರಾಜ್ಯಶಾಸ್ತ್ರದಲ್ಲಿ  ಸಂವಿಧಾನದ ಬಗೆಗೆ ಮಾತನಾಡುತ್ತಾ, ಅದರಲ್ಲಿ ಹೇಗೆ ಹಕ್ಕುಗಳ ಬಗ್ಗೆ ಹೇಳುವಾಗ ಅಧಿಕಾರಯುತವಾಗಿ ಹೇಳುತ್ತದೆಯೋ ಹಾಗೆಯೇ ಕರ್ತವ್ಯಾಧಾರಿತವಾಗಿ ಮಾಡಬೇಕಾದ ಕೆಲಸಗಳ ಪಾಲನೆ ಮಾಡುವ ವಿಚಾರಗಳನ್ನು ಎನ್‌ಫೊರ್ಸ್ ಮಾಡುವ ಸಲುವಾಗಿ ಮಾಡಬೇಕಾಗುತ್ತದೆ‌ ಎನ್ನುತ್ತಾರೆ. ಇದೇ ನಿಟ್ಟಿನಲ್ಲಿ ಫಾಲಿ ನಾರಿಮನ್ ಅವರು ಮನುಷ್ಯನಿಗೆ ಪಾಪ ಭೀತಿ ಬೇಕು ಎನ್ನುತ್ತಾರೆ.”

“ಪರಿವಾರ ಸಮಾಜದ ಮೊದಲ ಸೆಲ್ಫ್ ಗೌವರ್ನೆನ್ಸ್ ವ್ಯವಸ್ಥೆ. ಹೀಗೆ ನಮ್ಮನ್ನು ನಾವು ಆಳಿಕೊಳ್ಳುವ ವ್ಯವಸ್ಥೆಯು ಸಮಾಜದ ಎಲ್ಲ ಸ್ಥರಗಳಲ್ಲೂ ನಾವು ಕಾಣಬಹುದು. ಸಮಾಜದಲ್ಲಿ ಈ ವ್ಯವಸ್ಥೆಗಳನ್ನು ಯುಗಾನುಕೂಲ ವ್ಯವಸ್ಥೆಗಳಾಗಿ ರೂಪಿಸುವ ಬಗ್ಗೆ ಪ್ರಾಜ್ಞರು ಯೋಚಿಸಬೇಕಿದೆ. ಅಕಾಡೆಮಿಕ್ ಮತ್ತು ಅನುಭವಜನ್ಯವಾದ ವಿಚಾರಗಳೆರೆಡೂ ಕೂಡ ಕೂಡಿದಂತಹ, ಸಮಾಜದ ಎಲ್ಲ ಸ್ಥರದ ಪ್ರಾಜ್ಞರು, ತಜ್ಞರು ಒಟ್ಟಿಗೆ ಸೇರಿ ಚರ್ಚೆ ಮಾಡುವ, ಸಮಾಜದ ವಿನ್ಯಾಸಗಳನ್ನು ಪರಿಸ್ಥಿತಿಯ ಅನುಗುಣವಾಗಿ ರೂಪಿಸುವ ನಿಟ್ಟಿನಲ್ಲಿ ಚಿಂತನೆಗಳನ್ನು ನಡೆಸುವ ಸಲುವಾಗಿ ಈ ಸಮ್ಮೇಳನವನ್ನು ರೂಪಿಸಲಾಗಿದೆ” ಎಂದರು.

ಐಆರ್‌ಎಂಎಯ ನಿರ್ದೇಶಕರಾದ ಪ್ರೊ.ಉಮಾಕಾಂತ್ ದಾಶ್ ಅವರು ಮಾತನಾಡಿ, “ಗೌವರ್ನೆನ್ಸ್ ಅಥವಾ ಆಡಳಿತಕ್ಕೆ ಈ ಹಿಂದೆ ನಮ್ಮ ದೇಶದಲ್ಲಿ ಅತ್ಯಂತ ಉನ್ನತವಾದ ವ್ಯವಸ್ಥೆ ಇತ್ತು, ಆದರೆ ವಸಾಹತುಶಾಹಿಯ ಸಲುವಾಗಿ ಎಲ್ಲವನ್ನು ಕಳೆದುಕೊಳ್ಳಬೇಕಾಯಿತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನಾವೀಗ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಹಂತಕ್ಕೆ ಬಂದಿದ್ದೇವೆ. ಈಗ ನಮ್ಮ ವಿಶ್ವವಿದ್ಯಾಲಯಗಳೂ ಅದರ ಕುರಿತು ಮಾತನಾಡಲು ಆರಂಭಿಸಿದೆ. ನಮ್ಮಲ್ಲಿ ಈ ಕುರಿತು ಓದುವ ಎಲ್ಲರಿಗೂ ಗ್ರಾಮೀಣ ಪ್ರದೇಶಕ್ಕೆ ಕಳುಹಿಸುತ್ತಿದ್ದೇವೆ. ಸಮಾಕದ ಅನುಭವ ಪಡೆದ ಯುವ ವೃತ್ತಿಪರರು ತಯಾರಾಗುತ್ತಿದ್ದಾರೆ. ಅದು ಗುಜರಾತಿನಲ್ಲಿ ಹಲವು ದಶಕಗಳ ಹಿಂದೆ ಮಾಡಿದ ಪ್ರಯೋಗ ಯಶಸ್ವಿಯಾಗಿದ್ದು ಮೊದಲ ಶ್ವೇತ ಕ್ರಾಂತಿಯನ್ನು ಮೊದಲುಗೊಂಡು ನಂತರ ಬೃಹದಾಕಾರವಾಗಿ ಬೆಳೆದಿದೆ.

ಸ್ವರಾಜ್ವ ಎಂದರೆ ಮೌಲ್ಯ, ಮಾನವೀಯತೆ, ಗೌರವದಿಂದ ನಡೆಸಿಕೊಳ್ಳುವುದೇ ಆಗಿದೆ.ಆಡಳಿತದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕಾಗಿದೆ. ಇದನ್ನು ಸಾಧಿಸಲು ನಾವು ಎಸಿ ಹಾಲುಗಳ ಸೆಮಿನಾರು ಮಾತ್ರವಲ್ಲ, ಹಳ್ಳಿಗಳಲ್ಲಿ ಕೆಲಸ ಮಾಡುವ ರೀತಿಯಲ್ಲೂ ಕೆಲಸ ಮಾಡಬೇಕಿದೆ. ಇಲ್ಲಿ ಸಾಂಸ್ಥಿಕ ಸ್ವರೂಪದ ಜೊತೆಗೆ ಸಮಾಜದ ಪಾತ್ರವೂ ಬಹಳ ಮುಖ್ಯವಾಗಿದೆ” ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಸ್ಆರ್ಡಿಪಿಆರ್‌ ವಿಶ್ವವಿದ್ಯಾಲಯದ ಉಪಕುಲತಿಗಳಾದ ಶ್ರೀ ವಿಷ್ಣುಕಾಂತ ಚಟಪಲ್ಲಿಯವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ” ಗ್ರಾಮೀಣಾಭಿವೃದ್ಧಿಯಲ್ಲಿ ಕಲಿಕೆ ಮತ್ತು ವಾಸ್ತವದ ನಡುವೆ ಬಹಳ ಅಂತರವಿದೆ. ಕಳೆದ 75ವರ್ಷಗಳಲ್ಲಿ ನಡೆದ ಎಲ್ಲ ಹಣಕಾಸು ಮತ್ತು ಸಂಪನ್ಮೂಲಗಳ ವಿನಿಯೋಗ ಎಲ್ಲಿ ಆಗಿದೆ ಎನ್ನುವುದರ ಪರಿಣಾಮ ನೋಡಿದಾಗ ವಿಷಾದವೆನಿಸುತ್ತದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಮ್ಮ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕೇವಲ ಕ್ಲಾಸ್ ರೂಮಿಗೆ ಸೀಮಿತವಾಗದೆ, ಕೆಲಸದಲ್ಲಿ ತೊಡಗುವ ನಿಟ್ಟಿನಲ್ಲಿ ರೂಪಿಸಲಾಗುತ್ತಿದೆ‌.

ನಾವು ‘ಸ್ವಗ್ರಾಮ ಫೆಲೋಶಿಪ್’ಗೆ ಕರೆ ನೀಡಿ ಕೇವಲ 75 ಗ್ರಾಮಗಳಲ್ಲಿ ಇದರ ಕಾರ್ಯ ವಿಸ್ತಾರಕ್ಕೆ ಯೋಜನೆ ಹಮ್ಮಿಕೊಂಡೆವು, ಆದರೆ ಇದಕ್ಕೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಇದು ನಿಜಕ್ಕೂ ಸಕಾರಾತ್ಮಕವಾದ ನಡೆಯೇ ಆಗಿದೆ. ಗ್ರಾಮೀಣಾಭಿವೃದ್ಧಿಯ ಕೆಲಸ ಮಾಡುವ ಅನೇಕ ಮಂದಿ ಅನಾಮಿಕರಾಗಿಯೇ ಇದ್ದಾರೆ. ಅವರೆಲ್ಲರ ವಿಚಾರ ಕೆಲಸಗಳಿಗೆ ವೇದಿಕೆಯಾಗುವ ಹಾಗೆ, ಸ್ವರಾಜ್ಯದ ಕುರಿತು ಭಾರತದ ವಿಚಾರಗಳ ಚರ್ಚೆಯಾಗುವಂತೆ ಸಮ್ಮೇಳನವು ಆಯೋಜನೆಗೊಳ್ಳುತ್ತಿದೆ. ಈ ಹಿಂದೆ ಯೋಗದ ಕುರಿತಾಗಿ ಜನ ರಿಸರ್ಚ್, ಅಕಾಡೆಮಿಕ್ ಆದ ದಾಖಲೆಗಳನ್ನು ಕೇಳುತ್ತಿದ್ದರು. ಆದರೆ ಯೋಗ ಮಾಡಿದ ಮೇಲೆ ಜಗತ್ತು ಅದನ್ನು ಒಪ್ಪಿಕೊಂಡಿದೆ‌. ಈಗ ಸ್ವರಾಜ್ಯದ ದೃಷ್ಟಿಯಿಂದಲೂ ಇದೇ ಪರಿಣಾಮ ಆಗಲಿದೆ.” ಎಂದರು.

ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರು, ಓಡಿಶಾ ಕೇಂದ್ರಿಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಶ್ರೀ ಪಿ.ವಿ.ಕೃಷ್ಣಭಟ್, ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶ್ರೀನಿವಾಸ ಬಳ್ಳಿಯವರು, ಕೆಎಸ್ಆರ್ಡಿಪಿಆರ್‌ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಶ್ರೀ ತಿಮ್ಮೇಗೌಡರು, ಚಾಣಕ್ಯ ವಿಶ್ವವಿದ್ಯಾಲಯದ ಕುಲಸಚಿವರಾದ ಸುಶಾಂತ್ ಜೋಶಿ, ಹೈಯರ್ ಎಜುಕೇಶನ್ ಕೌನ್ಸಿಲ್ ಚೇರ್ಮನ್ ಗೋಪಾಲ ಜೋಶಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.