-ಅಕ್ಷಯಾ ಗೋಖಲೆ
ಭಾರತವೆಂದರೆ ನೆನಪಿಗೆ ಬರುವುದು ಭಾವನೆಗಳಲ್ಲೇ ಬದುಕುವ ಮಂದಿ. ಕುಚೇಲನಿಂದ ಶ್ರೀಕೃಷ್ಣ ಪರಮಾತ್ಮನವರೆಗೆ ಪ್ರತಿಯೊಬ್ಬನೂ ಸಂಬಂಧಗಳಿಗೆ ಬೆಲೆ ನೀಡಿ ‘ನಾನು ನಿನಗೆ, ನೀನು ನನಗೆ’ ಎನ್ನುತ್ತಲೇ ಎಲ್ಲರೊಳಗೊಂದಾಗಿ ಜೀವನದ ನಿಜಾರ್ಥವನ್ನು ತಿಳಿದವರು ಮತ್ತು ಜಗತ್ತಿಗೆ ತಿಳಿಸಿದವರು. ಪ್ರಪಂಚದಲ್ಲಿ ಹಲವಾರು ರೀತಿಯ ಬಾಂಧವ್ಯತೆಯಿದ್ದರೂ ಅತೀ ವಿಶಿಷ್ಟವಾದದ್ದು ಒಡಹುಟ್ಟಿದವರ ನಡುವಿನ ಸಂಬಂಧ. ಅದರಲ್ಲಿ ಅಮ್ಮನ ಪ್ರೀತಿ, ಅಪ್ಪನ ಕಾಳಜಿ, ಗುರುವಿನ ಶಿಕ್ಷಣ, ಗೆಳೆಯನ ಸ್ನೇಹ, ಗೆಳತಿಯ ವಾತ್ಸಲ್ಯ, ಬಂಧುವಿನ ಸಹಕಾರವಿದೆ. ಒಟ್ಟಲ್ಲಿ ಅದೊಂದು ಸುಮಧುರವಾದ ಆನಂದದ, ಪ್ರೀತಿಯ full package.
ತೊಟ್ಟಿಲಲ್ಲಿರುವ ಬೊಚ್ಚು ಬಾಯಿಯ ಕಂದನ ಪುಟ್ಟ ಕೈಗಳನ್ನು ಬೊಗಸೆಯಲ್ಲಿ ಹಿಡಿದುಕೊಂಡು ಮುತ್ತಿಟ್ಟು ತನ್ನ ಸಣ್ಣ ಕಂಗಳಲ್ಲಿ ಇಬ್ಬರ ಭವಿಷ್ಯದ ಕನಸು ಕಾಣುವ ಅಣ್ಣನೋ, ಅಕ್ಕನೋ ಅದರ ಸಾಕಾರತೆಗಾಗಿ ಶ್ರಮ ಪಡುವ ರೀತಿ ಅನನ್ಯವಾದುದು. ತನ್ನ ಚೀಲದೊಂದಿಗೆ ತಮ್ಮನದ್ದೋ, ತಂಗಿಯದ್ದೋ ಚೀಲವನ್ನೂ ಹೆಗಲಿಗೇರಿಸಿಕೊಂಡು ತರಗತಿಯ ಬಾಗಿಲವರೆಗೆ ಬಂದು, ಅವರನ್ನಲ್ಲಿ ಬಿಟ್ಟು ಶಾಲೆಯಲ್ಲಿ ಅಪ್ಪನಂತೆ ಕಾಯುವ ಒಡಹುಟ್ಟಿದವರ ಪ್ರೀತಿಗೆ ಕೊನೆಯಿಲ್ಲ. ಗಂಜಿಯೂಟವೋ- ಪಿಜ್ಜಾ –ಬರ್ಗರ್- ಬಾಕಲೇಟ್ –ಬಿಸ್ಕುಟ್ ಏನೇ ಇರಲಿ ಪರಸ್ಪರ ಕಿತ್ತಾಡಿಕೊಂಡು ತುತ್ತಿಟ್ಟುಕೊಂಡು ತಿಂದಾಗ ಸ್ವರ್ಗಕ್ಕೆ ಮೂರೇ ಗೇಣು ಎನಿಸುವುದು ಸುಳ್ಳಲ್ಲ. ಕಾಲೇಜು ಮೆಟ್ಟಲೇರಿದಾಗ ಅಮ್ಮನಂತೆ ಬುದ್ಧಿಮಾತು ಹೇಳಿ ಅವರ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ತಪ್ಪುದಾರಿ ಹಿಡಿದಾಗ ಗುರುವಿನಂತೆ ತಿದ್ದಿ ಸುಂದರ ಭವಿಷ್ಯ ಅವರದಾಗುವಂತೆ ಮಾಡುತ್ತಾರೆ. ಸಮಾಜವನ್ನು ಸರಿಯಾಗಿ ನೋಡುವ ಮೊದಲೇ ಜನರು ತುಳಿಯಲು ಪ್ರಯತ್ನಿಸಿದಾಗ, ತುಳಿದಷ್ಟು ಚಿಗುರಿನಿಲ್ಲುವ – ಕತ್ತರಿಸಿದಷ್ಟು ಹುಲುಸಾಗಿ ಬೆಳೆಯುವ ಹುಲ್ಲನ್ನು ತೋರಿಸಿ ಅವರ ಮುಖದಲ್ಲಿ ಮುಗುಳ್ನಗೆಯನ್ನೂ, ಮನದಲ್ಲಿ ಆತ್ಮವಿಶ್ವಾಸವನ್ನೂ ಮೂಡಿಸುವ ಸ್ನೇಹಿತರಾಗುತ್ತಾರೆ. ಏನಾದರೂ ಸಾಧಿಸಿ ಗೆದ್ದು ಬೀಗಬೇಕು ಎನ್ನುವ ತನಗಿಂತ ಕಿರಿಯರ ಆಸೆಗೆ ಹೆಗಲುಕೊಡುವ, ಸದಾ ಅವರ ಏಳ್ಗೆಯನ್ನು ಬಯಸುವ ಬಂಧುವಾಗುತ್ತಾರೆ. ಹೆಣ್ಣುಮಕ್ಕಳು ಮದುವೆಯಾಗಿ ಇನ್ನೊಂದು ಮನೆ ಸೇರುವ ಹೊತ್ತಿನಲ್ಲಿ, ತಾನಿನ್ನು ತವರುಮನೆಯ ಅತಿಥಿಯಷ್ಟೇ ಅನ್ನುವ ಭಾವದಿಂದ ಕಣ್ಣು ತುಂಬಿದಾಗ ಸೋದರನ ಪ್ರೀತಿಯ ಅಪ್ಪುಗೆ ಹೇಳುವ ‘ಎಲ್ಲೇ ಇರು, ನಿನ್ನೊಂದಿಗೆ ನಾನಿದ್ದೇನೆ’ ಎನ್ನುವ ಮಾತು ಭರವಸೆಯನ್ನೂ – ಧೈರ್ಯವನ್ನೂ ನೀಡುತ್ತದೆ. ತಾನು ಸುಖದ ಸುಪ್ಪತ್ತಿಗೆಯಲ್ಲಿದ್ದರೂ ಸೋದರನ ಔನ್ನತ್ಯಕ್ಕಾಗಿ ಪ್ರತಿದಿನವೂ ಪ್ರಾರ್ಥಿಸುವ ಸೋದರಿಗೆ ಸಾಟಿ ಯಾರು?
ಇವತ್ತು ಪ್ರಪಂಚದಾದ್ಯಂತ ಜನಸಂಖ್ಯಾ ನಿಯಂತ್ರಣಕ್ಕಾಗಿಯೋ, ಅನುಕೂಲಕ್ಕಾಗಿಯೋ, ಸೌಂದರ್ಯದ ರಕ್ಷಣೆಗಾಗಿಯೋ ‘ನಾವಿಬ್ಬರು – ನಮಗೊಬ್ಬರು’ ಅನ್ನುವಂತಹ ಬದುಕು. ಆ ಮಗುವಿಗೆ ಅಪ್ಪ-ಅಮ್ಮನಲ್ಲಿ ಹೇಳಿಕೊಳ್ಳಲಾಗದ ಅನೇಕ ವಿಚಾರಗಳನ್ನು ಹೇಳಲು – ಕೇಳಲು ಒಡಹುಟ್ಟಿದವರಿಲ್ಲ. ಮಗುವಿನ ಭವಿಷ್ಯಕ್ಕಾಗಿ ಹಣದ ಹಿಂದೆ ಹೋಗುವ ಹೆತ್ತವರಿಗೆ ಮಗುವಿನ ಜೊತೆ ಕಳೆಯಲು ಸಮಯವಿಲ್ಲ. ಆದ್ದರಿಂದಲೇ ಇಂದಿನ ಯುವಜನರಿಗೆ ಖಿನ್ನತೆ, ಒಂಟಿತನ, ಮಾದಕದ್ರವ್ಯ ಚಟಗಳು ಅಂಟಿಕೊಂಡಿವೆ. ಹೊಂದಾಣಿಕೆ ಗೊತ್ತಿಲ್ಲದೆ ವೈವಾಹಿಕ ಬದುಕು ಗೊಂದಲದ ಗೂಡಾಗಿ ಅನೇಕ ಮನೆಗಳು – ಮನಸ್ಸುಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ.
ತಮ್ಮನೋ – ತಂಗಿಯೋ ಒಡಹುಟ್ಟಿದವರೊಬ್ಬರು ಬದುಕಿಗೆ ಬೇಕು. ಅಕ್ಕನೋ – ಅಣ್ಣನೋ ಕಿರಿಯರ ಪಾಲಿನ ಹೀರೋಗಳಾಗಲೇ ಬೇಕು. ಅಪ್ಪನ ರಾಜಕುಮಾರನೋ – ರಾಜಕುಮಾರಿಯೋ ಆಗಿರುವ ಪ್ರತಿಯೊಂದು ಮಗುವೂ ಮುಂದೆ ಯಾರದ್ದೋ ಮನದರಸನೋ – ಹೃದಯದರಸಿಯೋ ಆದರೂ ಒಡಹುಟ್ಟಿದವರ ಮನಸ್ಸಲ್ಲಿ ಸದಾ ಪುಟ್ಟ ಕೂಸಾಗಿ – ಪ್ರೀತಿಯಧಾರೆಯನ್ನು ಹರಿಸುವ ದೊಡ್ಡಕ್ಕ ದೊಡ್ಡಣ್ಣನಾಗಿ ಕಡೆಯುಸಿರಿರುವವರೆಗೂ ಇರುವುದು ಅದಕ್ಕಿಂತ ಹೆಚ್ಚಿನ ನೆಮ್ಮದಿಯನ್ನು, ಸಾರ್ಥಕತೆಯನ್ನೂ ನೀಡುತ್ತದೆ. ಇಂದು ವಿಶ್ವ ಒಡಹುಟ್ಟಿದವರ ದಿನವಂತೆ. ವರ್ಷದ ಮುನ್ನೂರೈವತ್ತು ದಿನವೂ ಒಡಹುಟ್ಟಿದವರ ರಕ್ಷೆಗಾಗಿ ಪ್ರಾರ್ಥಿಸುವ ಭಾರತೀಯರಿಗೆ ಇದೊಂದು ಬಹಳ ವಿಶೇಷ ದಿನವಲ್ಲ. ಆದರೂ ಆಚರಿಸಲಡ್ಡಿಯಿಲ್ಲ. ಹುಟ್ಟುತ್ತ ಒಡಹುಟ್ಟಿದವರು ಬೆಳೆಯುತ್ತ ದಾಯಾದಿಗಳಾಗದಿರೋಣ, Happy Siblings’ Day.