– ಹರ್ಷಿತ್ ಶೆಟ್ಟಿ, ಉಜಿರೆ

ಪ್ರಾಥಮಿಕ ಶಾಲಾ ದಿನಗಳಲ್ಲಿ ಅಧ್ಯಾಪಕರು ಅಧಿಕ ವರ್ಷದ ಬಗ್ಗೆ ವಿವರಿಸುತ್ತಿದ್ದ ಸಂದರ್ಭ. ಅಧಿಕ ವರ್ಷ ನಾಲ್ಕು ವರ್ಷಗಳಿಗೊಮ್ಮೆ ಬರುತ್ತದೆ ಎಂಬ ವಿಷಯವನ್ನು ಉದಾಹರಣೆಯೊಂದಿಗೆ ಸರಳೀಕರಿಸಲು ಪ್ರಯತ್ನಿಸುತ್ತಿದ್ದರು. ಆಗ ಅವರು ಅಧಿಕ ವರ್ಷದಲ್ಲಿ ೩೬೬ ದಿನಗಳು ಹಾಗೆಯೇ ಫೆಬ್ರವರಿ ತಿಂಗಳಲ್ಲಿ ೨೯ ದಿನಗಳು ಬರುತ್ತದೆ. ಆದುದರಿಂದ ಫೆಬ್ರವರಿ ೨೯ ರಂದು ಜನಿಸಿದವರಿಗೆ ನಾಲ್ಕು ವರ್ಷಗಳಿಗೊಮ್ಮೆ ಜನ್ಮದಿನವನ್ನು ಆಚರಿಸುವ ಅವಕಾಶ ಸಿಗುತ್ತದೆ ಎಂದು ತಿಳಿಸುತ್ತಿದ್ದರು. ಆಗ ವಿದ್ಯಾರ್ಥಿ ಸಮೂಹದಲ್ಲೊಂದು ಪ್ರಶ್ನೆ ಎದ್ದಿತ್ತು. ಅದೇನೆಂದರೆ, ಫೆಬ್ರವರಿ ೨೯ ರಂದು ಜನಿಸಿದವರು ಯಾರಾದರೂ ಇದ್ದಾರೆಯೇ? ಎಂದು. ಈ ಪ್ರಶ್ನೆಯನ್ನು ಶಿಕ್ಷಕರ ಮುಂದೆ ಇಟ್ಟಾಗ ಅವರು ಹೌದು ಎಂದು, ಮೊರಾರ್ಜಿ ದೇಸಾಯಿಯವರು ಇದ್ದಾರೆ ಅವರು ಭಾರತದ ಮಾಜಿ ಪ್ರಧಾನಿ ಎಂದು ವಿವರಿಸಿದರು. ಮುಂದೊಂದು ದಿನ ರಸಪ್ರಶ್ನೆ ಸ್ಪರ್ಧೆಯಲ್ಲಿ, ಭಾರತದ ಮೊದಲ ಕಾಂಗ್ರೇಸೇತರ ಪ್ರಧಾನಿ ಯಾರು? ಎಂಬ ಪ್ರಶ್ನೆಯನ್ನು ಕೇಳಿದ್ದರು. ಅವತ್ತು ಅದಕ್ಕೆ ಉತ್ತರ ತಿಳಿದಿರಲಿಲ್ಲ. ಸ್ಪರ್ಧೆಯ ನಂತರ ತಿಳಿಯಿತು ಅದು ಮೊರಾರ್ಜಿ ದೇಸಾಯಿ ಎಂದು. ಕೆಲವು ವಸತಿ ಶಾಲೆಗಳ ಹೆಸರು ಕೂಡ ಮೊರಾರ್ಜಿ ದೇಸಾಯಿ ಎಂದು ಇತ್ತು, ಇಂದಿಗೂ ಇದೆ. ಅದರೂ ಮನಸ್ಸಲ್ಲೊಂದು ಪ್ರಶ್ನೆ ಕಾಡುತ್ತಿತ್ತು. ಬಾಂಬೆ ರಾಜ್ಯದ ಮುಖ್ಯಮಂತ್ರಿಯಾಗಿ, ಭಾರತದ ಹಣಕಾಸು ಮಂತ್ರಿಯಾಗಿ, ಗೃಹ ಮಂತ್ರಿಯಾಗಿ, ಭಾರತದ ಎರಡನೇ ಉಪಪ್ರಧಾನಿಯಾಗಿ, ಜವಹರಲಾಲ್‌ ನೆಹರೂ, ಲಾಲ್‌ ಬಹೂದ್ಧೂರ್‌ ಶಾಸ್ತ್ರಿ, ಇಂದಿರಾ ಗಾಂಧಿಯವರ ನಂತರ ಭಾರತದ ನಾಲ್ಕನೇ ಪ್ರಧಾನಿಯಾದರೂ ಕೂಡ ಇವರೇಕೆ ಈ ಮೂವರಷ್ಟು ಪ್ರಸಿದ್ಧಿಯನ್ನು ಹೊಂದಲಿಲ್ಲ? ಈ ಪ್ರಶ್ನೆ ಸಾಮಾನ್ಯ ವ್ಯಕ್ತಿಯೋರ್ವನನ್ನು ಕಾಡದೇ ಇರದು. ಉತ್ತರ ಸಿಗುವ ಪ್ರಶ್ನೆಯು ಇದಲ್ಲ. ಆದರೂ ಮೊರಾರ್ಜಿ ದೇಸಾಯಿಯವರ ಬಗೆಗೆ ತಿಳಿಯಪಡಿಸುವ ಸಣ್ಣ ಪ್ರಯತ್ನ.

1896, ಫೆಬ್ರವರಿ ೨೯ ರಂದು ರಾಂಚೋಡ್ಜಿ ನಾಗರ್ಜಿ ದೇಸಾಯಿ ಹಾಗೂ ವಜಿಯಾಬೆನ್‌ ದೇಸಾಯಿ ದಂಪತಿಗಳ ಪ್ರಥಮ ಪುತ್ರನಾಗಿ ಅಂದಿನ ಬಾಂಬೆ ಪ್ರೆಸಿಡೆನ್ಸಿಯ ಬುಲ್ಸರ್‌ ಜಿಲ್ಲೆಯ ಭಡೇಲಿ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶಾಲಾ ಶಿಕ್ಷಕರಾಗಿದ್ದರು. ಶಿಸ್ತುಬದ್ಧ ಕುಟುಂಬದಲ್ಲಿ ಜನಿಸಿದ ಇವರು ಸೈಂಟ್‌ ಬಾಲ್ಸ್‌ ಶಾಲೆ, ಮುಂಬೈನ ವಿಲ್ಸನ್‌ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದರು. ಮುಂದೆ ನಾಗರೀಕ ಸೇವೆಗೆ ಸೇರಿದರು. ೧೯೩೦ ರ ವರೆಗೆ ೧೨ ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿದರು. ೧೯೨೭-೨೮ ರ ಗಲಭೆಯ ಸಂದರ್ಭದಲ್ಲಿ ದೇಸಾಯಿಯವರು ಹಿಂದುಗಳ ಮೇಲೆ ಮೃದು ಧೋರಣೆಯನ್ನು ಹೊಂದಿದ್ದರು ಎಂಬ ಆಪಾದನೆಗೆ ಒಳಗಾದರು. ೧೯೩೦ರಲ್ಲಿ ಗೋಧ್ರಾದ ಡೆಪ್ಯುಟಿ ಕಲೆಕ್ಟರ್‌ ಹುದ್ದೆಗೆ ರಾಜೀನಾಮೆಯನ್ನು ನೀಡಿ, ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಗಾಂಧೀಜಿಯವರು ಬ್ರಿಟಿಷರ ವಿರುಧ್ಧ ಅಸಹಕಾರ ಚಳುವಳಿಗೆ ಕರೆ ನೀಡಿದ್ದ ಸಂದರ್ಭದಲ್ಲಿ ಅವರ ಜತೆಯಾದರು, ಜೈಲು ಶಿಕ್ಷೆಯನ್ನೂ ಅನುಭವಿಸಿದರು. ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಬಂಧಿಸಲ್ಪಟ್ಟ ದೇಸಾಯಿಯವರು ೧೯೪೧ ರಲ್ಲಿ ಬಿಡುಗಡೆ ಹೊಂದಿದರು. ೧೯೪೨ ರಲ್ಲಿ ಮತ್ತೆ ಕ್ವಿಟ್‌ ಇಂಡಿಯಾ ಚಳವಳಿಗೆ ಧುಮುಕಿದರು, ಆಗಸ್ಟ್‌ ೧೯೪೨ ರಲ್ಲಿ ಮತ್ತೆ ಜೈಲು ಸೇರಿದರು. ಹೋರಾಟದ ಬದುಕು, ನಿಷ್ಠುರವಾದ, ನೇರನುಡಿಗೆ ಹೆಸರಾಗಿದ್ದ ಮೊರಾರ್ಜಿ ದೇಸಾಯಿಯವರು ೧೯೩೧ರಲ್ಲಿ ಗುಜರಾತ್ ಅಖಿಲ ಭಾರತ ಕಾಂಗ್ರೇಸ್‌ ಸಮಿತಿಯನ್ನು ಸೇರಿ, ಕಾಂಗ್ರೆಸ್‌ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸಿದ ದೇಸಾಯಿಯವರು ಮುಂದೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾದರು. ೧೯೩೪ ಮತ್ತು ೧೯೩೭ರಲ್ಲಿ ಪ್ರಾಂತೀಯ ಚುನಾವಣೆಗಳು ನಡೆದ ಸಂದರ್ಭದಲ್ಲಿ ಬಾಂಬೆ ಪ್ರಾಂತ್ಯದಲ್ಲಿ ಕಂದಾಯ, ಕೃಷಿ, ಅರಣ್ಯ, ಸಹಕಾರ ಸಚಿವರಾಗಿದ್ದರು. ಆದರೆ ೧೯೩೯ರಲ್ಲಿ ಎರಡನೇ ವಿಶ್ವಯುದ್ಧ ನಡೆದ ಸಂದರ್ಭದಲ್ಲಿ ಭಾರತವು ಬ್ರಿಟಿಷರನ್ನು ಪ್ರತಿನಿಧಿಸಿ, ಭಾಗವಹಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್‌ ಸಂಪುಟವು ಹೊರಬಂದಿತು. ೧೯೪೬ರಲ್ಲಿ ವಿಧಾನಸಭೆ ಚುನಾವಣೆಗಳು ನಡೆದ ನಂತರ, ದೇಸಾಯಿಯವರು ಬಾಂಬೆ ರಾಜ್ಯದ ಗೃಹ ಹಾಗೂ ಕಂದಾಯ ಸಚಿವರಾಗಿಯೂ ಆಯ್ಕೆಯಾದರು. ಇಂದು ಭಾರತದಲ್ಲಿ ಉಳುವವನೇ ಹೊಲದೊಡೆಯ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಶ್ರೀಮತಿ ಇಂದಿರಾ ಗಾಂಧಿ. ಆದರೆ ೧೯೫೦ರ ದಶಕದಲ್ಲಿಯೇ ಉಳುವವನಿಗೆ ಭೂಮಿ ಎಂಬ ಭೂಸುಧಾರಣೆಯ ಮೂಲಕ ದುಡಿಯುವ ಕೈಗಳಿಗೆ ಭೂಭದ್ರತೆಯನ್ನು ನೀಡಲು ಪ್ರಯತ್ನಿಸಿದವರು ಮೊರಾರ್ಜಿ ದೇಸಾಯಿಯವರು. ಸಮಾಜವಾದಿ ಚಿಂತನೆಗಳ ನಾಯಕರುಗಳ ಜೊತೆಗೆ ಒರ್ವ ರಾಷ್ಟ್ರೀಯವಾದಿ ನಾಯಕರಾಗಿ ಬಾಂಬೆ ರಾಜ್ಯದ ಮುಖ್ಯಮಂತ್ರಿಯಾಗಿ ನಂತರ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಳ್ಳುವುದಕ್ಕಿಂತ ಮೊದಲು ಇವರು ಬಾಂಬೆ ರಾಜ್ಯದ ಪೊಲೀಸ್ ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತಂದರು. ೧೯೫೨ರಲ್ಲಿ ಅಂದಿನ ಬಾಂಬೆ ರಾಜ್ಯದ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ದೇಸಾಯಿಯವರು ಮರಾಠಿ ಮತ್ತು ಗುಜರಾತಿ ಭಾಷಿಕರ ನಡುವಿನ ಸಂಘರ್ಷವನ್ನು ಎದುರಿಸಬೇಕಾಯಿತು. ಸಂಘರ್ಷವನ್ನು ನಿಯಂತ್ರಿಸಲು ದೇಸಾಯಿಯವರು ಪೋಲಿಸ್‌ ಫೈರಿಂಗ್‌ಗೆ ಆದೇಶ ನೀಡಿದರು. ಈ ಗಲಭೆಯಲ್ಲಿ ನೂರಕ್ಕೂ ಅಧಿಕ ಮಂದಿ ಹತರಾದರು. ಇದೊಂದು ಇವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆಯಾಯಿತು. ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧೀಜಿಯ ಒಡನಾಡಿ ಭಾಷಾ ಹೋರಾಟಗಾರರ ಹತ್ಯೆಗೆ ಕಾರಣರಾದರು. ನೇರ ನಿಲುವು, ನಿಷ್ಠುರತೆ, ಸಮಾಜಮುಖಿ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದ ಮೊರಾರ್ಜಿ ದೇಸಾಯಿಯವರು ೧೯೫೬ರಲ್ಲಿ ಕೇಂದ್ರ ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವರಾಗುವುದರೊಂದಿಗೆ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟರು.

೧೯೫೮ ರಲ್ಲಿ ಹಣಕಾಸು ಸಚಿವರಾದರು. ೧೯೬೩ ರಲ್ಲಿ ಕೇಂದ್ರ ಸಂಪುಟಕ್ಕೆ ರಾಜೀನಾಮೆಯನ್ನು ನೀಡಿದರು. ೧೯೬೭ರಲ್ಲಿ ಉಪಪ್ರಧಾನಿ ಖಾತೆಯ ಜತೆಗೆ ಇಂದಿರಾ ಗಾಂಧಿ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ನಿರ್ವಹಿಸಿದರು. ೧೯೬೯ ರಲ್ಲಿ ಇಂದಿರಾ ಗಾಂಧಿ ಹಣಕಾಸು ಖಾತೆಯನ್ನು ತೆಗೆದುಕೊಂಡಾಗ ಉಪಪ್ರಧಾನಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ಹದಿನಾಲ್ಕು ಬ್ಯಾಂಕ್‌ಗಳ ರಾಷ್ಟ್ರೀಕರಣಕ್ಕೆ ದೇಸಾಯಿಯವರು ಸ್ವಷ್ಟ ವಿರೋಧವನ್ನೂ ವ್ಯಕ್ತಪಡಿಸಿದರು. ಮುಂದೆ ಕಾಂಗ್ರೆಸ್‌ ಪಕ್ಷವು ಎರಡು ಭಾಗವಾದಾಗ ಇಂದಿರಾ ಗಾಂಧಿಯವರು ಕಾಂಗ್ರೆಸ್‌ (ಆಡಳಿತ) ಎಂಬ ಬಣದಲ್ಲಿದ್ದರೆ, ದೇಸಾಯಿಯವರು ಕಾಂಗ್ರೆಸ್‌ (ಸಂಘಟನೆ) ಎಂಬ ಬಣವನ್ನು ಸೇರಿದರು. ೧೯೭೫ರಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲು ಸೇರಿದರು. ೧೯೭೭ ರಲ್ಲಿ ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಸೋತಾಗ ಮೊರಾರ್ಜಿ ದೇಸಾಯಿಯವರು ಜನತಾಪಕ್ಷದ ಬೆಂಬಲದಿಂದ ಪ್ರಧಾನಿಯಾದರು. ಮೊದಲ ಕಾಂಗ್ರೆಸೇತರ ಪ್ರಧಾನಿ ಎಂಬ ಹೆಗ್ಗಳಿಕೆಯೊಂದಿಗೆ, ಭಾರತ ಅತಿ ಹಿರಿಯ ವಯಸ್ಸಿನ ಪ್ರಧಾನಿ ಎಂಬ ಹಿರಿಮೆಯು ಇವರಿಗೆ ಸಂದಿತ್ತು, ಯಾಕೆಂದರೆ ಇವರಿಗೆ ಪ್ರಧಾನಿ ಹುದ್ದೆ ಸಿಗುವಾಗ ೮೧ ವರ್ಷ ವಯಸ್ಸಾಗಿತ್ತು. ಹಾಗೆಯೇ ೨ ವರ್ಷ ೧೨೬ ದಿನಗಳವರೆಗೆ ಮಾತ್ರ ಅಧಿಕಾರದಲ್ಲಿದ್ದು, ಅವಧಿ ಪೂರ್ಣಗೊಳಿಸದೆ ರಾಜೀನಾಮೆ ನೀಡಿದ ಮೊದಲ ಪ್ರಧಾನಿ ಎಂಬ ಬಯಸದ ಸಾಧನೆಗೂ ಮೊರಾರ್ಜಿ ದೇಸಾಯಿಯವರು ಪಾತ್ರರಾಗಿದ್ದರು.

ಮೊರಾರ್ಜಿ ದೇಸಾಯಿಯವರ ರಾಜಕೀಯ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ ಬದಲಾಗಿ ಅದು ಮುಳ್ಳಿನ ಹಾಸಿಗೆಯಾಗಿತ್ತು. ವೃತ್ತಿ ಜೀವನದಲ್ಲೂ ಗಲಭೆಯ ಸಂದರ್ಭ ಹಿಂದುಗಳ ಪರ ಮೃದು ಧೋರಣೆ ಹೊಂದಿದ್ದರು ಎಂಬ ಆಪಾದನೆ ಇವರ ಮೇಲಿತ್ತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೂ ಇವರು ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಮುಂದೆ ಬಾಂಬೆ ಪ್ರೆಸಿಡೆನ್ಸಿಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಎರಡು ಭಾಷಿಕರ ನಡುವಿನ ಸಂಘರ್ಷವನ್ನೂ ಎದುರಿಸಬೇಕಾಯಿತು ಮತ್ತು ಆ ಸಂಘರ್ಷವನ್ನು ಹತ್ತಿಕ್ಕುವ ಸಲುವಾಗಿ ನಡೆದ ಪೊಲೀಸ್ ಫೈರಿಂಗ್ ನಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದರು. ಕೇಂದ್ರ ಸಂಪುಟದಲ್ಲಿ ಜವಹರಲಾಲ್‌ ನೆಹರು ನಂತರ ಪ್ರಧಾನಿಯಾಗುವ ಆಕಾಂಕ್ಷೆ ಹೊಂದಿದ್ದರು ದೇಸಾಯಿ. ಆದರೆ ಜವಹರಲಾಲ್‌ ನೆಹರು ಮರಣನಂತರ ಲಾಲ್‌ ಬಹದ್ಧೂರ್‌ ಶಾಸ್ತ್ರಿಯವರು ಪ್ರಧಾನಿಯಾದರು. ೧೯೬೬ ರಲ್ಲಿ ಶಾಸ್ತ್ರಿಯವರು ಅಕಾಲಿಕ ಮರಣವನ್ನಪ್ಪಿದ್ದಾಗ ಮತ್ತೆ ಪ್ರಧಾನಿಯಾಗುವ ಕನಸು ಕಂಡರು ದೇಸಾಯಿ. ಆದರೆ ಇಂದಿರಾ ಗಾಂಧಿಯವರ ವಿರುದ್ಧ ಸೋತು ಉಪಪ್ರಧಾನಿ ಹಾಗೂ ಹಣಕಾಸು ಸಚಿವ ಹುದ್ದೆಗೆ ತೃಪ್ತಿ ಪಟ್ಟುಕೊಂಡರು. ಮುಂದೆ ಆ ಹುದ್ದೆಗಳಿಗೂ ರಾಜೀನಾಮೆ ನೀಡಿ, ಕಾಂಗ್ರೆಸ್‌ ತ್ಯಜಿಸಿದರು. ೧೯೭೭ ರಲ್ಲಿ ಇವರು ಪ್ರಧಾನಿಯಾದರೂ ಜನತಾ ಮೈತ್ರಿಯ ಅಂತರಿಕ ಸಮಸ್ಯೆಗಳಿಂದ ಹಲವು ತೊಂದರೆಗಳನ್ನು ಅನುಭವಿಸಿದರು. ಜನತಾ ಮೈತ್ರಿಯ ಪ್ರಮುಖ ನಾಯಕರಾದ ಚರಣ್‌ ಸಿಂಗ್‌ ಮತ್ತು ರಾಜ್‌ ನಾರಾಯಣ್‌ ೧೯೭೯ರಲ್ಲಿ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡ ಕಾರಣ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ೧೯೮೦ ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಮೊರಾರ್ಜಿ ದೇಸಾಯಿವರು ಸ್ಪರ್ಧಿಸಲಿಲ್ಲ, ಆದರೆ ಜನತಾ ಪಕ್ಷದ ಪರವಾಗಿ ಪ್ರಚಾರಮಾಡಿದರು.

ಮೊರಾರ್ಜಿ ದೇಸಾಯಿಯವರ ಸುದೀರ್ಘ ರಾಜಕೀಯ ಜೀವನದಲ್ಲಿ ಸೋಲು, ಗೆಲುವು, ಸಾಧನೆ, ವಿವಾದ ಎಲ್ಲವೂ ಸುತ್ತುವರೆಯಲ್ಪಟ್ಟಿದ್ದವು. ಒರ್ವ ಹಣಕಾಸು ಸಚಿವನಾಗಿ ಅತ್ಯಧಿಕ ಮುಂಗಡ ಪತ್ರಗಳನ್ನು ಪ್ರಸ್ತುತಪಡಿಸಿದ ದಾಖಲೆ ಇಂದಿಗೂ ಮೊರಾರ್ಜಿ ದೇಸಾಯಿಯವರ ಹೆಸರಿನಲ್ಲಿದೆ. ೮ ವಾರ್ಷಿಕ ಮತು ೨ ಮಧ್ಯಂತರ ಮುಂಗಡ ಪತ್ರಗಳೊಂದಿಗೆ ಒಟ್ಟು ೧೦ ಮುಂಗಡ ಪತ್ರಗಳನ್ನು ಪ್ರಸ್ತುತಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಎರಡನೇ ಸ್ಥಾನದಲ್ಲಿರುವ ಪಿ. ಚಿದಂಬರಂ ೯ ಮುಂಗಡ ಪತ್ರಗಳನ್ನು ಪ್ರಸ್ತುತ ಪಡಿಸಿದ್ದಾರೆ. ೧೯೭೮ರಲ್ಲಿ ₹೧೦೦೦, ₹೫೦೦೦, ₹೧೦,೦೦೦ ಮುಖಬೆಲೆಯ ನೋಟುಗಳನ್ನು ಅಮಾನ್ಯ ಗೊಳಿಸಿದ ಶ್ರೇಯ ದೇಸಾಯಿ ಸರ್ಕಾರಕ್ಕೆ ಸಲ್ಲುತ್ತದೆ. ಕಡು ರಾಷ್ಟ್ರೀಯವಾದಿ ಎಂಬ ಬಿರುದುನೊಂದಿಗೆ ಭ್ರಷ್ಟಾಚಾರ ವಿರೋಧಿ ಎಂದು ಕರೆಸಿಕೊಂಡಿದ್ದ ದೇಸಾಯಿಯವರ ಈ ನಡೆಯು ಭ್ರಷ್ಟಚಾರ ವಿರೋಧಿಸುವವರಿಂದ ಪ್ರಶಂಸೆಗೆ ಪಾತ್ರವಾಗಿತ್ತು. ಮೊರಾರ್ಜಿ ದೇಸಾಯಿ ಭಾರತವು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವುದಿಲ್ಲ ಮತ್ತು ಶಾಂತಿಯುತ ಪರಮಾಣು ಸ್ಫೋಟಗಳನ್ನು ಸಹ ಮಾಡುವುದರಿಂದ ದೂರವಿರುತ್ತದೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದರು. ದೇಶಗಳ ನಡುವಿನ ಶಾಂತಿಗಾಗಿ ಮೊರಾರ್ಜಿ ದೇಸಾಯಿಯವರು ಶ್ರಮಿಸಿರುವುದನ್ನು ನಾವು ಗಮನಿಸಬಹುದಾಗಿದೆ. ಭಾರತ – ಚೀನಾ, ಭಾರತ – ಪಾಕಿಸ್ತಾನ ನಡುವಿನ ಸಂಬಂಧದ ಅಭಿವೃದ್ಧಿಗಾಗಿ ದೇಸಾಯಿಯವರು ಪ್ರಯತ್ನಿಸಿದರು. ಇದಕ್ಕಾಗಿಯೊ ಏನೋ ೧೯೯೦ರಲ್ಲಿ ಪಾಕಿಸ್ತಾನವು ಮೊರಾರ್ಜಿ ದೇಸಾಯಿಯವರಿಗೆ ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನವನ್ನು ನೀಡಿ ಗೌರವಿಸಿದೆ. ದೇಸಾಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಲವಾರು ಬದಲಾವಣೆ ಮತ್ತು ತಿದ್ದುಪಡಿಗಳನ್ನು ಜಾರಿಗೆ ತಂದರು. ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದ್ದ ಸಂಧರ್ಭದಲ್ಲಿ ಅದನ್ನು ವಿರೋಧಿಸಿದ್ದ ದೇಸಾಯಿಯವರು, ನಂತರ ಪ್ರಧಾನಿಯಾದಾಗ ಇಂದಿರಾ ಗಾಂಧಿಯವರು ಜಾರಿಗೆ ತಂದಿದ್ದ ೪೨ನೇ ತಿದ್ದುಪಡಿಯನ್ನು ರದ್ದುಪಡಿಸಿ ೪೪ನೇ ತಿದ್ದುಪಡಿಯನ್ನು ತಂದರು. ಆ ತಿದ್ದುಪಡಿಯ ಪ್ರಕಾರ ಮುಂದೆ ತುರ್ತು ಪರಿಸ್ಥಿತಿಯನ್ನು ಹೇರುವುದು ಕಷ್ಟಕರವಾಗುವಂತೆ ಮಾಡಿದರು. ೧೯೭೫ರಲ್ಲಿ ಗುಜರಾತ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಭ್ರಷ್ಟಾಚಾರದ ವಿರುದ್ಧ ನಡೆಸಲ್ಪಟ್ಟ ನವನಿರ್ಮಾಣ ಆಂದೋಲನಕ್ಕೆ ಮೊರಾರ್ಜಿ ದೇಸಾಯಿಯವರು ಬೆಂಬಲ ಸೂಚಿಸಿದರು ಮತ್ತು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೂಡ ಕೈಗೊಂಡರು. ಪರಿಣಾಮವಾಗಿ ಗುಜರಾತ್‌ನಲ್ಲಿ ಚುನಾಯಿತ ಸರ್ಕಾರವು ವಿಸರ್ಜನೆಯಾಯಿತು. ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾಗಿದ್ದ ರಿಸರ್ಚ್‌ ಆಂಡ್‌ ಅನಾಲಿಸಿಸ್‌ ವಿಂಗ್‌ ಅನ್ನು ದೇಸಾಯಿಯವರು ಇಂದಿರಾ ಗಾಂಧಿಯವರ ಸಿಬ್ಬಂದಿ ಎಂದು ಕರೆದಿದ್ದರು. ದೇಸಾಯಿವರು ಈ ವಿಂಗ್‌ ಕಾರ್ಯಗಳಿಗೆ ಮಿತಿಯನ್ನು ಹಾಕಿದರು.

ಜವಹರಲಾಲ್‌ ನೆಹರು ಅವರ ಕಾಲದಿಂದ ಪ್ರಧಾನಿಮಂತ್ರಿ ಆಗಬೇಕೆಂದುಕೊಂಡಿದ್ದ ಮೊರಾರ್ಜಿ ದೇಸಾಯಿ ಅವರು ಕೊನೆಗೆ ೧೯೭೭ರಲ್ಲಿ ಪ್ರಧಾನಿಯಾದರೂ ಅವಧಿ ಪೂರ್ಣಗೊಳಿಸಲು ಆಗಲಿಲ್ಲ. ಪಾಕಿಸ್ತಾನದಿಂದ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಪಡೆದ ಏಕೈಕ ಭಾರತೀಯ ದೇಸಾಯಿ ಅವರು. ಭ್ರಷ್ಟಾಚಾರ ವಿರೋಧಿ ಹೋರಾಟಗಳಲ್ಲಿ ಜತೆಯಾಗಿದ್ದ ಜಯಪ್ರಕಾಶ್‌ ನಾರಾಯಣ್‌ ಅವರನ್ನು ನಂತರದ ದಿನಗಳಲ್ಲಿ ದೂರವಿರಿಸಿದ್ದರು. ೧೯೭೯ರಲ್ಲಿ ಅವರ ಅಂತ್ಯಕ್ರಿಯೆಯಲ್ಲೂ ದೇಸಾಯಿಯವರು ಭಾಗವಹಿಸಲಿಲ್ಲ. ೧೯೯೧ ರಲ್ಲಿ ಭಾರತ ಸರ್ಕಾರವು ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಶಿಸ್ತು, ಜ್ಞಾನ, ನಿಷ್ಠುರತೆಯನ್ನು ಒಳಗೂಡಿಸಿಕೊಂಡಿದ್ದ ಮೊರಾರ್ಜಿ ದೇಸಾಯಿಯವರು ೧೯೯೫ ಏಪ್ರಿಲ್‌ ೧೦ರಂದು ಇಹಲೋಕ ತ್ಯಜಿಸಿದರು. ಮೊರಾರ್ಜಿ ದೇಸಾಯಿಯವರು ಅಧಿಕಾರಿದಾಹಿಯಾಗಿದ್ದರು ಎಂದು ಹೇಳುವವರೇ ಅಧಿಕಮಂದಿ. ರಾಜಕೀಯಕ್ಕೆ ಬಂದು ಅಧಿಕಾರಕ್ಕೆ ಆಸೆ ಪಡೆಯದವರು ಎಷ್ಟು ಮಂದಿ ಇದ್ದಾರೆ? ಯಕ್ಷ ಪ್ರಶ್ನೆಯೇ ಸರಿ. ರಾಜಕೀಯ ಜೀವನದಲ್ಲಿ ಹಲವಾರು ಪದವಿಗಳನ್ನು ಸ್ವೀಕರಿಸಿ ತಮ್ಮ ನೇರ ಮಾತು, ರಾಷ್ಟ್ರವಾದಿತನಗಳ ದೇಸಾಯಿಯವರನ್ನು ಅವರ ದೂರದೃಷ್ಟಿ ಯೋಚನೆ, ಭ್ರಷ್ಟಾಚಾರ ರಹಿತ ಸಮಾಜದ ಕನಸು ಇವುಗಳಿಗಾಗಿಯಾದರೂ ನಾವು ನೆನೆಯಲೇ ಬೇಕು.

Leave a Reply

Your email address will not be published.

This site uses Akismet to reduce spam. Learn how your comment data is processed.