ಜೈಪುರ: ಸಮರ್ಥ, ಸಮೃದ್ಧ ಮತ್ತು ಸ್ವಾಭಿಮಾನಿ ಭಾರತ ಮಾತ್ರ ವಿಶ್ವಶಾಂತಿಯನ್ನು ಖಾತ್ರಿ ಪಡಿಸುತ್ತದೆ. ಇದು ನಮ್ಮ ನಂಬಿಕೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದರು.
ರಾಜಸ್ಥಾನದ ಜೈಪುರದಲ್ಲಿರುವ ಜಾಮಡೋಲಿಯ ಕೇಶವ ವಿದ್ಯಾಪೀಠದಲ್ಲಿ ನಡೆಯುತ್ತಿರುವ ತೃತೀಯ ರಾಷ್ಟ್ರೀಯ ಸೇವಾ ಸಂಗಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವು ಸಣ್ಣ ಸೇವಾ ಘಟಕದಲ್ಲಿ ಸೇವೆ ಮಾಡುತ್ತಿರಬಹುದು. ಆದರೆ ನಮ್ಮ ವಿಚಾರ ವೈಶ್ವಿಕ ವ್ಯಾಪ್ತಿಯನ್ನು ಹೊಂದಿರಬೇಕು. ಭಾರತದ ಪ್ರತಿ ವ್ಯಕ್ತಿ ಸಮರ್ಥ, ಸಮೃದ್ಧ ಮತ್ತು ಸ್ವಾಭಿಮಾನಿಯಾದಾಗ ಮಾತ್ರ ಭಾರತ ಸಶಕ್ತವಾಗುತ್ತದೆ. ಸಮಾಜದಲ್ಲಿ ಕನಿಷ್ಠ ಗುರುತಿಸುವಿಕೆಗೆ ಒಳಗಾದವರ ಕಡೆಗೆ ಗರಿಷ್ಠ ಗಮನಕೊಡಬೇಕಾದ ಅವಶ್ಯಕತೆ ಇದೆ ಎಂದರು.
ಕುಷ್ಠ ರೋಗಿಗಳು ಮತ್ತು ವೇಶ್ಯಾವೃತ್ತಿಗೆ ದೂಡಲ್ಪಟ್ಟ ಮಹಿಳೆಯರ ಮಕ್ಕಳ ಭವಿಷ್ಯದ ಕುರಿತು ನಾವು ಚಿಂತಿಸಬೇಕಿದೆ. ಈ ವರ್ಗದ ಜನರ ಬದುಕನ್ನೂ ಹಸನಾಗಿಸುವ ಜವಬ್ದಾರಿ ಸಮಾಜದ ಮೇಲಿದೆ. ಅದಕ್ಕಾಗಿ ನಾವು ಸರ್ಕಾರವನ್ನು ಅವಲಂಬಿಸುವುದು ಸರಿಯಲ್ಲ. ಸಮಾಜದ ತಳವರ್ಗದ ಜನರನ್ನು ಮುಖ್ಯವಾಹಿನಿಗೆ ತರುವುದಕ್ಕೆ ಸಾಮೂಹಿಕ ಸಾಮಾಜಿಕ ಪ್ರಯತ್ನವನ್ನು ಮಾಡಬೇಕಿದೆ. ದೇಶ ನಮಗೆ ಎಲ್ಲವನ್ನೂ ಕೊಟ್ಟಿದೆ. ದೇಶಕ್ಕೆ ನಾನು ಏನಾದರೂ ಕೊಡಬೇಕು ಎನ್ನುವ ಭಾವನೆ ಜಾಗೃತಿಯಾಗಬೇಕು. ಅದರ ಮೂಲಕ ನಾವು ಇಂದು ಯಾರಿಗೆ ಸೇವೆ ಮಾಡುತ್ತಿದ್ದೇವೆಯೋ ಅವರು ಕೂಡ ಸೇವೆ ಮಾಡುವಷ್ಟು ಸಶಕ್ತರಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಂಗಮದಲ್ಲಿ ಸ್ನಾನ ಮಾಡುವುದರಿಂದ ಹೇಗೆ ಪುಣ್ಯ ಪ್ರಾಪ್ತಿಯಾಗುತ್ತದೆಯೋ ಅದೇ ರೀತಿ ಈ ಸೇವಾ ಸಂಗಮಕ್ಕೆ ಆಗಮಿಸಿ ಪುಣ್ಯ ಲಭಿಸಿದೆ. ಇಂತಹ ಸಂಗಮಗಳು ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಹೊಸದನ್ನು ಕಲಿಯುವ ಅವಕಾಶಗಳನ್ನೂ ಒದಗಿಸುತ್ತವೆ. ಅಲ್ಲದೆ, ಕೆಲವು ವೈಫಲ್ಯಗಳಿಂದ ಮನಸ್ಸು ದುರ್ಬಲವಾಗಿದ್ದರೆ ಇಂತಹ ಸಂಗಮವು ಸಕಾರಾತ್ಮಕವಾದ ಶಕ್ತಿಯನ್ನು ತುಂಬುತ್ತದೆ ಎಂದು ನುಡಿದರು.
ಯಾವುದೇ ಕಾರ್ಯದ ಫಲದ ಪ್ರಮಾಣದಲ್ಲಿ ದೇವರ ಕೃಪೆಯೂ ಮುಖ್ಯವಾಗಿರುತ್ತದೆ. ಇದನ್ನು ಭಗವದ್ಗೀತೆಯೂ ತಿಳಿಸುತ್ತದೆ. ಹೇಗೆ ರೈತ ಹೊಲ ಉಳುಮೆ ಮಾಡಿ, ಬಿತ್ತಿದರೂ ಕೊನೆಗೆ ಬೆಳೆಗೆ ಅನುಕೂಲವಾಗುವಂತೆ ಮಳೆ, ಚಳಿ, ಬೇಸಗೆಯನ್ನು ದೇವರು ನಿರ್ಧರಿಸುತ್ತಾನೋ ಹಾಗೆಯೇ ಸೇವೆಯ ಕಾರ್ಯವನ್ನು ನಾವು ದೈವಿಕ ಕಾರ್ಯವೆಂದು ಪರಿಗಣಿಸಿ ಮಾಡಬೇಕು ಎಂದರು.
ಅಜ್ಞಾನಿಗಳು ಮತ್ತು ಅವಿದ್ಯಾವಂತರ ನೋವನ್ನು ಆಲಿಸದೇ ಇರುವವರು ದ್ರೋಹಿಗಳಾಗುತ್ತಾರೆ. ಹಾಗೆಯೇ ಮೂರ್ಖ ಜಗತ್ತು ಮನುಷ್ಯರು ಎಂದು ಕರೆಯುವ ದೇವರನ್ನು ನಾನು ಆರಾಧಿಸುತ್ತೇನೆ. ಪ್ರತಿ ಮನುಷ್ಯನೂ ಪರಮಾತ್ಮನ ಅಂಶವೆಂದುಕೊಂಡು ಸೇವಾಕಾರ್ಯ ಮಾಡಬೇಕು ಎಂದು ವಿವೇಕಾನಂದರು ಹೇಳುತ್ತಾರೆ ಎಂದು ತಿಳಿಸಿದರು.
ಸೇವಾಕಾಂಕ್ಷಿಗಳು ತಮ್ಮ ಕಾರ್ಯವನ್ನು ನಿರಂತರವಾಗಿ ಪರಿಶೀಲಿಸುವ ಅವಶ್ಯಕತೆ ಇದೆ. ವಿಮರ್ಶೆ ಇದರ ನಂತರದ ದಾರಿ. ವಿಮರ್ಶೆಯ ಮೂಲಕ ಮುಂದಿನ ಹಾದಿ ಸುಗಮವಾಗುತ್ತದೆ. ಗುಂಪಿನಲ್ಲಿ ಕೆಲಸ ಮಾಡುವುದು ವೈಯಕ್ತಿಕ ಕಾರ್ಯಕ್ಕಿಂತ ಹೆಚ್ಚು ಪರಿಣಾಮಕಾರಿ ಹಾಗೂ ಒಗ್ಗಟ್ಟಿನಿಂದ ಮಾಡಿದ ಕೆಲಸದಲ್ಲಿ ಹೆಚ್ಚು ದೋಷಗಳಿರುವುದಿಲ್ಲ ಎಂದು ಹೇಳಿದರು.
ನಮ್ಮಲ್ಲಿ ಸೇವಾ ಗುಣ ಸ್ವಾಭಾವಿಕವಾಗಿದೆ. ಇಡೀ ಭಾರತ ದೇಶವು ಸೇವೆಯ ರೂಪದಲ್ಲಿ ಟ್ರಸ್ಟ್ ಮತ್ತು ನಾವೆಲ್ಲರೂ ಅದರ ಟ್ರಸ್ಟಿಗಳು. ಇದು ನಮ್ಮ ಪ್ರಾಯೋಗಿಕ ಆಧ್ಯಾತ್ಮಿಕತೆ. ಇದನ್ನು ಅರಿತುಕೊಳ್ಳಲು, ಸೇವೆಯಲ್ಲಿ ನಿಜವಾದ ಮನಸ್ಸು ಇಟ್ಟುಕೊಳ್ಳಬೇಕಾಗುತ್ತದೆ ಎಂದು ನುಡಿದರು.