ನಾಗ್ಪುರ: ಭಾರತದ ಏಕತೆ, ಅಖಂಡತೆ, ಏಕಾತ್ಮತೆಗಾಗಿ ಎಲ್ಲರೂ ಶ್ರಮಿಸಬೇಕಿದೆ, ರಾಷ್ಟ್ರಹಿತಕ್ಕಾಗಿ ನಾವೆಲ್ಲರೂ ಒಂದಾಗಬೇಕು. ರಾಜಕೀಯ ವ್ಯವಸ್ಥೆಯಲ್ಲಿ ಪರಸ್ಪರ ಟೀಕೆ ಮಾಡುವುದು ಸಹಜವೇ. ಆದರೆ ಜನರಲ್ಲಿ ವಿಷಮತೆ ಬೆಳೆಸಬಾರದು, ಪರಸ್ಪರ ಜಗಳಕ್ಕೆ ಎಡೆಮಾಡಿಕೊಡಬಾರದು, ಸ್ವತ್ವದ ಆಧಾರದ ಮೇಲೆ ರಾಷ್ಟ್ರೋತ್ಥಾನದ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸುವ ಸಂಕಲ್ಪವನ್ನು ನಾವೆಲ್ಲರೂ ತೊಡಬೇಕು ಎಂದು ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದ್ದಾರೆ.
ಗುರುವಾರ ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮುಖ್ಯಭಾಷಣ ಮಾಡಿದರು.
ಯಾವ ರಾಷ್ಟ್ರದ ಸಾಮಾನ್ಯ ಜನರು ತಮ್ಮ ನಡುವಿನ ಬೇಧ ಮತ್ತು ಸ್ವಾರ್ಥವನ್ನು ಬಿಟ್ಟು ಒಂದಾಗಿ ತನ್ನ ತಾಯ್ನಾಡಿಗಾಗಿ ಬದುಕುವುದನ್ನು ಮತ್ತು ಬಲಿದಾನವಾಗುವುದನ್ನು ಕಲಿಯುತ್ತಾರೋ ಆ ರಾಷ್ಟ್ರ ಉತ್ಥಾನವಾಗುತ್ತದೆ ಎಂದು ಡಾ.ಮೋಹನ್ ಭಾಗವತ್ ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಯಾವ ಮಹಾನ್ ಪುರುಷರ ಜೀವನಾಧಾರಿತ ಘಟನೆಗಳನ್ನು ಕೇಳಿದಾಕ್ಷಣ ಉತ್ಸಾಹ ಚಿಮ್ಮುವುದೋ ಅಂತಹ ಸಹಸ್ರಾರು ಘಟನೆಗಳು ಜನಮಾನಸವನ್ನು ತಲುಪಿದೆ. ಅವುಗಳು ನಮ್ಮ ಸ್ವಾಭಿಮಾನ ಮತ್ತು ರಾಷ್ಟ್ರದ ಮೇಲಿನ ಗೌರವವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಜೀವನವೂ ಅಂತಹ ಮಹಾನ್ ಪುರುಷರ ಹಾದಿಯಲ್ಲಿ ಸಾಗಬೇಕು ಎಂಬ ಪ್ರೇರಣೆಯನ್ನೂ ನೀಡಿದೆ ಎಂದರು.
ಕ್ಲಿಷ್ಟಕರ ಸವಾಲುಗಳ ಸಮರ್ಥ ನಿರ್ವಹಣೆಯ ಕಾರಣಕ್ಕಾಗಿ ಇಂದು ಭಾರತವನ್ನು ಜಗತ್ತಿನ ಜನರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಇತ್ತೀಚೆಗೆ ಲೋಕಾರ್ಪಣೆಗೊಂಡ ನೂತನ ಸಂಸತ್ತಿನಲ್ಲಿ ಪ್ರಕಟಗೊಂಡ ರಾಷ್ಟ್ರದ ಸಾಂಸ್ಕೃತಿಕ ಸಂಕೇತದ ಚಿಹ್ನೆಗಳು ಜನರನ್ನು ಸಾಂಸ್ಕತಿಕವಾಗಿ ಜಾಗೃತಿಗೊಳಿಸುವ ಪ್ರಯತ್ನವನ್ನು ಮಾಡಿದೆ ಎಂದರು.
ವೈವಿಧ್ಯತೆಯನ್ನು ಈ ರಾಷ್ಟ್ರಕ್ಕೆ ಎಲ್ಲಿಂದಲೋ ಎರವಲು ತಂದಿದ್ದಲ್ಲ. ಅದು ಶತಮಾನಗಳಿಂದ ಇಲ್ಲಿನ ಸಂಸ್ಕೃತಿಯಲ್ಲೇ ಸಮನ್ವಯಗೊಂಡಿರುವಂತದ್ದು.ನಮ್ಮ ದೇಶದಲ್ಲಿರುವ ಹಲವು ಆಚಾರಗಳಲ್ಲಿ ಹಲವು ವಿದೇಶಿ ಆಚಾರಗಳೂ ಇವೆ. ಆದರೆ ಒಂದು ಸಮಾಜವಾಗಿ ನಾವು ಈ ದೇಶದವರು. ನಮ್ಮ ಪೂರ್ವಜರು ಇಲ್ಲಿಗೆ ಸಂಬಂಧಪಟ್ಟವರು ಎಂಬ ವಾಸ್ತವವನ್ನು ಒಪ್ಪಬೇಕು. ನಾವು ಆತ್ಮವಿಸ್ಮರಣೆಗೆ ಒಳಗಾದೆವು ಎಂದರು.
ಬಂಧು ಭಾವದ ಆಧಾರದ ಮೇಲೆ ಅದರ ರಕ್ಷಣೆಯಾಗಬೇಕು. ವಿವಿಧತೆಗೆ ತೊಂದರೆ ನೀಡುವ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು ಎಂದರು.
ನಮ್ಮ ದುಸ್ಥಿತಿಗೆ ನಾವು ನಮ್ಮ ಸ್ವತ್ವವನ್ನು ಮರೆತದ್ದೇ ಕಾರಣ. ಅದರಿಂದಾಗಿ ವಿಭಜನೆಗೊಂಡು ನಮ್ಮ ಸಂಘಟಿತ ಶಕ್ತಿ ಕಳೆದುಕೊಂಡೆವು. ಅಲ್ಲಿಂದ ನಮ್ಮ ಸಮಾಜದ ವಿಘಟನೆ ಆರಂಭವಾಯಿತು. ಆದ್ದರಿಂದ ನಾವು ನಮ್ಮ ಸ್ವತ್ವವನ್ನು ಕಂಡುಕೊಳ್ಳಬೇಕು ಎಂದು ನುಡಿದರು.
ನಮ್ಮ ರಾಷ್ಟ್ರೀಯ ಪರಂಪರೆಯ ಆಧಾರಿತವಾಗಿ ಭಾರತವನ್ನು ವಿಶ್ವಗುರು ಮಾಡಿ ಜಗತ್ತಿನ ಸಮಸ್ಯೆಗಳಿಗೆ ಉತ್ತರ ನೀಡುವ ಸಂಕಲ್ಪ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೊಲ್ಲಾಪುರದ ಕನೇರಿಯ ಶ್ರೀ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನಮ್ಮ ರಾಷ್ಟ್ರವು ವಿಶ್ವ ಗುರುವಾಗಿತ್ತು ಮತ್ತು ಆ ಸ್ಥಾನಕ್ಕೆ ಮರುಸ್ಥಾಪಿಸಲು, ನಿರಂತರವಾಗಿ ಕೆಲಸ ಮಾಡುವ ಮತ್ತು ಸಮರ್ಥವಾಗಿರುವ ಯಾವುದೇ ಸಂಸ್ಥೆ ಇದ್ದರೆ, ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದು ಅಭಿಪ್ರಾಯಪಟ್ಟರು.
ಸಂಘವು ಅನುಶಾಸನ, ಸೇವೆ, ಸಮರ್ಪಣೆ, ಜ್ಞಾನ, ಸಜ್ಜನತೆ, ಸಕಾರಾತ್ಮಕತೆ, ಸಾಮರಸ್ಯ, ಹಿಂದುತ್ವಕ್ಕೆ ಅನ್ವರ್ಥ ಹೆಸರು. ಹಿಂದುತ್ವವೇ ರಾಷ್ಟ್ರೀಯತೆ ಎಂದರು.
ಇಂದು ವಿಕಸಿತ ರೂಪದಲ್ಲಿ ಯಾವ ಕ್ಷೇತ್ರವನ್ನು ನೋಡುತ್ತಿದ್ದೇವೆಯೋ ಆ ಎಲ್ಲಾ ಕ್ಷೇತ್ರಗಳಲ್ಲಿ ಅಸಂಖ್ಯಾತ ಮಂದಿ ಋಷಿ ಮುನಿಗಳು ಶತಮಾನಗಳಿಂದಲೂ ಕೊಡುಗೆ ನೀಡಿದ್ದಾರೆ. ನಮ್ಮ ಸಾಂಸ್ಕೃತಿಕ ವಿರಾಸತ್ತನ್ನು ವಿಶ್ವದ ಅನೇಕ ರಾಷ್ಟ್ರಗಳು ಅನುಸರಿಸಲು ಇಚ್ಛಿಸುತ್ತಿದ್ದಾರೆ. ನಾವು ಕೂಡ ನಮ್ಮ ಸಂಸ್ಕೃತಿಯ ಕುರಿತಾಗಿ ತಿಳಿದುಕೊಳ್ಳಬೇಕು ಎಂದು ನುಡಿದರು.
ನಮ್ಮ ರಾಷ್ಟ್ರದ ಯುವಕರ ಸಾಮರ್ಥ್ಯ ವ್ಯರ್ಥವಾಗಬಾರದು. ನಮ್ಮ ವೈಭವಶಾಲಿ ಸಂಸ್ಕೃತಿ ವಿಸ್ಮೃತಿಗೆ ಒಳಗಾಗಬಾರದು. ನಮ್ಮ ಅಂತಃಸತ್ವವು ಶಾರೀರಿಕ, ಬೌದ್ಧಿಕ, ಮಾನಸಿಕ ಮತ್ತು ವಾಚಿಕ ರೂಪದಲ್ಲಿ ಪ್ರಕಟೀಕರಣಗೊಳ್ಳಬೇಕು. ಈ ಕೆಲಸ ಸಂಘ ಶಿಕ್ಷಾ ವರ್ಗದಿಂದಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಂಘ ಶಿಕ್ಷಾ ವರ್ಗದ ವರ್ಗಾಧಿಕಾರಿ ಕೃಷ್ಣಮೋಹನ್, ವಿದರ್ಭ ಪ್ರಾಂತ ಸಂಘಚಾಲಕ ರಾಮ ಹರಕರೆ ಹಾಗೂ ನಾಗ್ಪುರ ಮಹಾನಗರ ಸಂಘಚಾಲಕ ರಾಜೇಶ್ ಲೋಯಾ ಉಪಸ್ಥಿತರಿದ್ದರು. ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ ಶಿಬಿರದ ಶಿಕ್ಷಾರ್ಥಿಗಳಿಂದ ವಿವಿಧ ಶಾರೀರಿಕ ಪ್ರಾತ್ಯಕ್ಷಿಕೆ ನಡೆಯಿತು.
ವರ್ಗ ಕಾರ್ಯವಾಹ ನಾ. ತಿಪ್ಪೇಸ್ವಾಮಿ ವರ್ಗದ ವರದಿ ವಾಚಿಸಿದರು. ಅಖಿಲ ಭಾರತೀಯ ಪದಾಧಿಕಾರಿಗಳಾದ ಸುರೇಶ್ ಭಯ್ಯಾಜಿ ಜೋಶಿ, ಸಹಸರಕಾರ್ಯವಾಹ ರಾಮದತ್ತ ಚಕ್ರಧರ, ಅಖಿಲ ಭಾರತೀಯ ಶಾರೀರಿಕ ಪ್ರಮುಖ್ ಸುನೀಲ್ ಕುಲಕರ್ಣಿ, ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್, ವ್ಯವಸ್ಥಾ ಪ್ರಮುಖ ಮಂಗೇಶ್ ಬೇಂಢೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಮೇ 8 ರಂದು ಪ್ರಾರಂಭಗೊಂಡ ತೃತೀಯ ವರ್ಷ ಸಂಘ ಶಿಕ್ಷಾ ವರ್ಗದಲ್ಲಿ ದೇಶದ ಎಲ್ಲಾ 45 ಪ್ರಾಂತಗಳಿಂದ ಆಯ್ದ 676 ಶಿಕ್ಷಾರ್ಥಿಗಳು ಭಾಗವಹಿಸಿದ್ದರು.