ಮನೋಹರ್ ಪರಿಕ್ಕರ್ ಅವರು ಒಬ್ಬ ದೇಶಭಕ್ತ, ನಿಷ್ಠಾವಂತ , ದಕ್ಷ ಆಡಳಿತಗಾರ ಹಾಗೂ ಮುತ್ಸದ್ಧಿಯಾಗಿ ಜನಮಾನಸದಲ್ಲಿ ಗುರುತಿಸಿಕೊಂಡವರು . ರಾಜಕೀಯ ಕ್ಷೇತ್ರದಲ್ಲಿ ಅವರು ನೀಡಿರುವ ಕೊಡುಗೆ ಅಪಾರ. ಭಾರತೀಯ ಜನತಾ ಪಕ್ಷದ ಪ್ರಭಾವಿ ನಾಯಕರಲ್ಲೊಬ್ಬರಾದ ಅವರು ಗೋವಾದಲ್ಲಿ ಕಮಲ ಅರಳಿಸಲು ಪ್ರಮುಖ ಪಾತ್ರವಹಿಸಿದ್ದರು. ಇಂದು ಮನೋಹರ್ ಪರಿಕ್ಕರ್ ಅವರ ಜಯಂತಿ.
ಪರಚಯ:
1955ರ ಡಿಸೆಂಬರ್ 13ರಂದು ಗೋವಾದ ಮಾಪುಸದಲ್ಲಿ ಗೋಪಾಲಕೃಷ್ಣ ಹಾಗೂ ರಾಧಾಬಾಯಿ ದಂಪತಿಯ ಪುತ್ರನಾಗಿ ಮನೋಹರ್ ಪರಿಕ್ಕರ್ ಜನಿಸಿದರು. ಮರ್ಗೋವಾದ ಲಯೋಲಾ ಪ್ರೌಢಶಾಲೆಯಲ್ಲಿ ಮರಾಠಿಯಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದರು. 1978ರಲ್ಲಿ ಅವರು ಐಐಟಿ ಬಾಂಬೆಯಲ್ಲಿ ಮೆಟಲರ್ಜಿಕಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದರು. ಬಳಿಕ ಅವರು ವ್ಯಾಪಾರ ಆರಂಭಿಸಿದ್ದರು, ಜೊತೆಗೆ ಮಾಪುಸಾದಲ್ಲೇ ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.
ಪರಿಕ್ಕರ್ ಗೆ ಆರ್ಎಸ್ ಎಸ್ ಜೊತೆ ನಂಟು:
ಉತ್ತರ ಗೋವಾದ ಮಾಪುಸಾದಲ್ಲಿ ಜನಿಸಿದ್ದ ಪರಿಕ್ಕರ್ ಐಐಟಿಗೆ ಸೇರಿದ್ದಾಗಲೇ ಆರ್ಎಸ್ಎಸ್ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಯುವಕ ಪರಿಕ್ಕರ್ ಮೇಲೆ ಆರ್ಎಸ್ಎಸ್ ಪ್ರಾಂತ ಪ್ರಚಾರಕ ಡಿ.ನಾಡಕರ್ಣಿ ಪ್ರಭಾವ ಬೀರಿದ್ದರು. 1973ರಲ್ಲಿ ಐಐಟಿಗೆ ಪರಿಕ್ಕರ್ ಅವರು ಸೇರಿದ್ದರು, ಅದೇ ವರ್ಷದಲ್ಲೇ ಅವರು ಸಂಘದ ಪೊವಾಯ್ ಹಾಸ್ಟೆಲ್ ವಿಭಾಗದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಇನ್ನು 1988ರಲ್ಲಿ ತಮ್ಮ 26ನೇ ವಯಸ್ಸಿನಲ್ಲೇ ಮಾಪುಸಾದ ಆರ್ಎಸ್ಎಸ್ ವಿಭಾಗದ ಸಂಘಚಾಲಕರಾಗಿ ನೇಮಕಗೊಂಡಿದ್ದರು.
ರಾಜಕೀಯ ಜೀವನ:
1991ರಲ್ಲಿ ಮೊದಲ ಬಾರಿಗೆ ಉತ್ತರ ಗೋವಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಆದರೆ 1994ರಲ್ಲಿ ಅವರು ಪಣಜಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಅದೇ ವೇಳೆ ಬಿಜೆಪಿ ಸಹ ಮೊದಲ ಬಾರಿಗೆ ಗೋವಾ ರಾಜ್ಯದಲ್ಲಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅಕ್ಟೋಬರ್ 24, 2000ರಂದು ಮೊದಲ ಬಾರಿಗೆ ಗೋವಾ ಸಿಎಂ ಆಗಿ ಪರಿಕ್ಕರ್ ಅಧಿಕಾರ ವಹಿಸಿಕೊಂಡಿದ್ದರು. ಈ ವೇಳೆ ಅವರು ಐಐಟಿಯಲ್ಲಿ ಓದಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆಗೂ ಪಾತ್ರರಾಗಿದ್ದರು
2001ರಲ್ಲಿ ಪರಿಕ್ಕರ್ , ಸೈಬರೇಜ್ ಯೋಜನೆಯನ್ನು ಘೋಷಿಸಿದ್ದರು. ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಉನ್ನತ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ಗಳನ್ನು ನೀಡಿದ್ದರು. 2014ರಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಸಂಚಲನ ಮೂಡಿಸಿದ್ದ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚಿಸಿತು. ಆಗ ಮನೋಹರ್ ಪರಿಕ್ಕರ್ ಅವರು ನವೆಂಬರ್ ನಲ್ಲಿ ರಕ್ಷಣಾ ಸಚಿವರಾಗಿ ಆಯ್ಕೆಯಾಗಿದ್ದರು. ಅದೇ ತಿಂಗಳಲ್ಲಿ ಅವರು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ನೇಮಕಗೊಂಡಿದ್ದರು. ನಂತರ ಮಾರ್ಚ 2017ರಲ್ಲಿ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಾಲ್ಕನೇ ಹಾಗೂ ಕೊನೆಯ ಬಾರಿಗೆ ಗೋವಾ ಸಿಎಂ ಆಗಿ ಆಯ್ಕೆಯಾಗಿದ್ದರು.
ಪರಿಕ್ಕರ್ ಜೀವನದ ವಿಶೇಷ ಘಟನೆಗಳು:
ಸೆಪ್ಟಂಬರ್ 18, 2016 ರಲ್ಲಿ ಉರಿ ದಾಳಿ ನಂತರ ಸೆಪ್ಟೆಂಬರ್ 26, 2016ರಲ್ಲಿ ಎಲ್ಒಸಿಯನ್ನು ದಾಟಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತದ ಸೇನಾ ಮೈಲಿಗಲ್ಲಿನ ಹಿಂದಿನ ಶಕ್ತಿಗಳಲ್ಲಿ ಆಗ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಕೂಡ ಒಬ್ಬರು.
ಸೆಪ್ಟೆಂಬರ್ 18 ರಂದು ಕಾಶ್ಮೀರದ ಉರಿಯಲ್ಲಿನ ಸೇನಾ ನೆಲೆಯ ಮೇಲೆ ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ದಾಳಿಗೆ 19 ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸೆಪ್ಟೆಂಬರ್ 2016ರಲ್ಲಿ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.
ಜೀವನಚರಿತ್ರೆ:
ಜೂನ್ 2020ರಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದಿಂದ An Extraordinary Life : A Biography of Manohar Parrikar ಎಂಬ ಜೀವನಚರಿತ್ರೆಯನ್ನು ಪ್ರಕಟಿಸಲಾಯಿತು.
ಪ್ರಶಸ್ತಿಗಳು:
2020ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2018 ಸೆಪ್ಟೆಂಬರ್ 18ರಲ್ಲಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗೋವಾದಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ.
ಫೆಬ್ರವರಿ 2018ರಲ್ಲಿ ಪರಿಕ್ಕರ್ ಅವರಿಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಇರುವುದು ತಿಳಿದುಬಂದಿತ್ತು. ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಕೂಡ ಕರ್ತವ್ಯ ನಿಷ್ಠರಾಗಿದ್ದರು. ಕೊನೆಗೆ ಮನೋಹರ್ ಪರಿಕ್ಕರ್ ಅವರು ಮಾರ್ಚ 17 , 2019ರಲ್ಲಿ ವಿಧಿವಶರಾದರು. ಮನೋಹರ್ ಪರಿಕ್ಕರ್ ಅವರ ಜೀವನದ ಆದರ್ಶ ಇಂದಿನ ಪೀಳಿಗೆಯ ಯುವಕರಲ್ಲಿ ಮಾದರಿಯಾಗಬೇಕು.