ಯೋಗಾಚಾರ್ಯ ಪ್ರೊ. ಬಿ.ಕೆ.ಎಸ್ ಅಯ್ಯಂಗಾರ್ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಆಧುನಿಕ ಯೋಗದ ಪಿತಾಮಹ ಎಂದು ಪ್ರಸಿದ್ಧರಾಗಿದ್ದಾರೆ. ಭಾರತ ಜಗತ್ತಿಗೆ ನೀಡಿದ ಬಹುದೊಡ್ಡ ಕೊಡುಗೆಯಾದ ಯೋಗಕ್ಕೆ ಜಾಗತಿಕ ಮನ್ನಣೆ ತಂದುಕೊಡುವುದರಲ್ಲಿ ಪ್ರಮುಖ ಪಾತ್ರವಹಿಸಿದವರು. ದಶಕಗಳ ಕಾಲ ಯೋಗವನ್ನು ಕಲಿಸುವ ಮೂಲಕ ವಿಶ್ವಾದ್ಯಂತ ನೂರಾರು ವಿದ್ಯಾರ್ಥಿ ಮತ್ತು ಶಿಕ್ಷಕರ ನೆಲೆಯನ್ನು ಸೃಷ್ಟಿಸಿದ್ದವರು. ಅನೇಕ ವಿದ್ವತ್ಪೂರ್ಣ ಪುಸ್ತಕಗಳನ್ನು ಪ್ರಕಟಿಸಿ ಯೋಗದ ಬಗ್ಗೆ ಹೆಚ್ಚು ಅರಿವು ಮೂಡಿಸಿದ್ದಾರೆ. ಇಂದು ಯೋಗ ಗುರು ಅಯ್ಯಂಗಾರ್ ಅವರ ಜನ್ಮದಿನ.

ಪರಿಚಯ
ಯೋಗ ಶಿಕ್ಷಕರಾಗಿದ್ದ ಬಿಕೆಎಸ್ ಅಯ್ಯಂಗಾರರು ಡಿಸೆಂಬರ್ 14 , 1918 ರಲ್ಲಿ ಕೋಲಾರ ಜಿಲ್ಲೆಯ ಬೆಳ್ಳೂರು ಎಂಬಲ್ಲಿ ಜನಿಸಿದರು. ಅವರ ತಂದೆ ಕೃಷ್ಣಮಾಚಾರ್ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಬಿಕೆಎಸ್ ಅಯ್ಯಂಗಾರ್ ತಮ್ಮ ಒಂಬತ್ತನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ನಂತರ ಸಂಬಂಧಿಕರ ಮನೆಯಲ್ಲಿ ಆಶ್ರಯವನ್ನು ಪಡೆದರು.

ಜೀವ ಉಳಿಸಿದ ಯೋಗ
ಅಯ್ಯಂಗಾರ್ ಅವರಿಗೆ ಇನ್ ಫ್ಲುಯೆಂಝಾ, ವಿಷಮ ಜ್ವರ , ಮಲೇರಿಯಾ ಹಾಗೂ ಕ್ಷಯ ರೋಗ ಸೇರಿ ವಿವಿಧ ಕಾಯಿಲೆಗಳಿಂದ ಬಳಲುತಿದ್ದರು. ಹೀಗಾಗಿ ಅವರು ಅನುಭವಿಸುತ್ತಿದ್ದ ಅಸಹನೀಯ ಕಾಯಿಲೆಗಳಿಂದ ದೂರವಾಗಲು ಯೋಗಾಭ್ಯಾಸದಲ್ಲಿ ತೊಡಗಿದ್ದರು. ಅದುವೇ ಅವರನ್ನು ಮುಂದೆ ವಿಶ್ವಯೋಗಾಚಾರ್ಯನನ್ನಾಗುವಂತೆ ಮಾಡಿತ್ತು.

ಅಯ್ಯಂಗಾರ್ ಅವರು ಹದಿನೈದು ವರ್ಷದಲ್ಲಿದ್ದಾಗಲೇ 1934ರಲ್ಲಿ ಮೈಸೂರಿನಲ್ಲಿ ನೆಲೆಸಿದ್ದ ತಮ್ಮ ಭಾವ ಟಿ.ಕೃಷ್ಣಮಾಚಾರಿಯವರ ಬಳಿ ಎರಡು ವರ್ಷ ಯೋಗ ಅಧ್ಯಯನ ನಡೆಸಿದ್ದರು. ಆದ್ರೆ ಟಿ.ಕೃಷ್ಣಮಾಚಾರ್ ಅವರು ಹಿಮಾಲಯದಲ್ಲಿ ಯೋಗಗುರುಗಳಿಂದ ವಿದ್ಯಾಭ್ಯಾಸ ಪಡೆದು ದಕ್ಷಿಣ ಭಾರತದ ಕಡೆ ಪ್ರಚಾರ ಮಾಡುವ ಸಲುವಾಗಿ ಮೈಸೂರು ಒಡೆಯರ ಆಶ್ರಯ ಪಡೆದಿದ್ದರು. ಅವರ ಮಾರ್ಗದರ್ಶನದಲ್ಲಿ ಬಿಕೆಎಸ್ ಎಲ್ಲಾ ಕಾಯಿಲೆಗಳಿಂದ ಮುಕ್ತಿ ಪಡೆದುಕೊಂಡಿದ್ದರು.

ವಿದೇಶಗಳಲ್ಲಿ ಯೋಗ

1954ರಲ್ಲಿ ಮೆನ್ಯೂಹಿನ್ ಬಿಕೆಎಸ್ ಅಯ್ಯಂಗಾರ್ ಅವರನ್ನು ಸ್ವಿಡ್ಜರ್ ಲ್ಯಾಂಡ್ ಗೆ ಕರೆಸಿಕೊಂಡಿದ್ದರು. ಮೆನ್ಯೂಹಿನ್ ತಮ್ಮ ಯೋಗ ಗುರುವಿನ ಪರಿಚಯವನ್ನು ಪಾಶ್ಚಾತ್ಯ ದೇಶಗಳಿಗೆ ಮಾಡಿಕೊಟ್ಟರು. ಇದರಿಂದ ಅಯ್ಯಂಗಾರ್ ವಿದೇಶಗಳಲ್ಲಿಯೂ ಯೋಗತರಗತಿಗಳನ್ನು ಸಾಧ್ಯವಾಯಿತು.

ಇನ್ನು ಭಾರತದಲ್ಲಿ ನೆಹರು , ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್, ಅಚ್ಯುತ್ ಪಟವರ್ಧನ್ , ದಿಲೀಪ್ ಕುಮಾರ್ ರಾಯ್ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ , ಅನಿಲ್ ಕುಂಬ್ಳೆ , ರಾಹುಲ್ ದ್ರಾವಿಡ್ , ಕಿರಣ್ ಮೋರೆ, ಜಹೀರ್ ಖಾನ್ ಸೇರಿದಂತೆ ಅನೇಕ ಗಣ್ಯರಿಗೆ ಯೋಗ ಗುರುಗಳಾಗಿದ್ದರು.

ಅಯ್ಯಂಗಾರ್ ಅವರಿಗೆ ವಿಶೇಷ ಗೌರವ
14 ಡಿಸೆಂಬರ್ 2015ರಂದು ಅಯ್ಯಂಗಾರ್ ಅವರ 97 ನೇ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಲಾಯಿತು

ಪುಸ್ತಕಗಳು

ಬಿಕೆಎಸ್ ಅವರು ಅನೇಕ ಕೃತಿಗಳನ್ನು ರಚಿಸಿದರು. 1966 ರಲ್ಲಿ ಲೈಟ್ ಆನ್ ಯೋಗ, 1978 ರಲ್ಲಿ ಪ್ರಾಣಾಯಾಮಾ, 1985ರಲ್ಲಿ ಆರ್ಟ್ ಆಫ್ ಯೋಗ ಎಂಬ ಪುಸ್ತಕಗಳು ಬಿಡುಗಡೆಯಾಗಿತ್ತು.

ಪ್ರಶಸ್ತಿಗಳು
ಅಯ್ಯಂಗಾರ್ ಅವರಿಗೆ 1991ರಲ್ಲಿ ಪದ್ಮಶ್ರೀ ಪ್ರಶಸ್ತಿ, 2002ರಲ್ಲಿ ಪದ್ಮಭೂಷಣ, 2014ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಬಂದಿದೆ.
ಇನ್ನು ಟೈಮ್ಸ್ ನಿಯತಕಾಲಿಕವು 2004ರಲ್ಲಿ ಬಿಕೆಎಸ್ ಅಯ್ಯಂಗಾರರನ್ನು ವಿಶ್ವದ ನೂರು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಎಂದು ಗುರುತಿಸಿದ್ದರು.

ಬಿ.ಕೆ.ಎಸ್ ಅಯ್ಯಂಗಾರ್ ಅವರು ಅಗಸ್ಟ್ 20ರ 2014 ರಂದು ತಮ್ಮ 95ನೇ ವಯಸ್ಸಿನಲ್ಲಿ ಪುಣೆಯಲ್ಲಿ ವಿಧಿವಶರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.