ಮಂಗಳೂರು: 500 ವರ್ಷದ ಹಿಂದೂಗಳು ಕನಸು ರಾಮ ಮಂದಿರದ ಮೂಲಕ ನನಸ್ಸಗಿದೆ. ಜೀವನದಲ್ಲಿ ರಾಮನ ನಡೆಯನ್ನು ಮತ್ತು ಕೃಷ್ಣನ ನುಡಿಯನ್ನು ನಾವು ಪಾಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.
ಸುರತ್ಕಲ್ ನ ಗೋವಿಂದದಾಸ ಪದವಿ ಕಾಲೇಜಿನಲ್ಲಿ ಮಂಥನ ವೈಚಾರಿಕ ವೇದಿಕೆಯ ವತಿಯಿಂದ “ಅಯೋಧ್ಯೆಯ ವಿಜಯಧ್ವನಿ”ಎಂಬ ವಿಷಯದ ಕುರಿತು ಮಾತನಾಡಿದರು.
ರಾಮಜನ್ಮ ಭೂಮಿ ಹೋರಾಟವನ್ನು ಮೆಲುಕು ಹಾಕಬೇಕು. ಜನ್ಮ ಭೂಮಿ ಹೋರಾಟ ದೇಶದ ಚಿಂತನೆಯನ್ನು ಬದಲಾವಣೆ ಮಾಡಿದೆ. ಹಿಂದೂಗಳಿಗೆ ಅವರ ಇರುವಿಕೆಯನ್ನು ತೋರಿಸಿಕೊಟ್ಟಿರುವುದು ರಾಮಜನ್ಮ ಭೂಮಿ ಹೋರಾಟ ಎಂದು ನುಡಿದರು.
ಹಿಂದೂ ಸಮಾಜ ದೇವಾನು ದೇವತೆಗಳನ್ನು ರಾಮನಲ್ಲಿ ಕಾಣುತ್ತಾರೆ. ಮರ್ಯಾದ ಪುರುಷೋತ್ತಮ ಶ್ರೀ ರಾಮ ರಾಜನಾಗಿ,ಮಗನಾಗಿ, ಪತಿಯಾಗಿ, ಸ್ನೇಹಿತನಾಗಿ ಪರಿಪೂರ್ಣ ವ್ಯಕ್ತಿತ್ವದ ಸಾಕಾರ ಮೂರ್ತಿ ಎಂದರು.
ಶ್ರೀರಾಮ ರಾಷ್ಟ್ರ ಪುರುಷ. ಅವನ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣ ರಾಮರಾಜ್ಯ ಸ್ಥಾಪನೆಯ ಒಂದು ಮೈಲಿಗಲ್ಲು. ರಾಮ ಜನ್ಮಭೂಮಿ ಹೋರಾಟ ಅದು ಪ್ರತಿ ರಾಷ್ಟ್ರ ಭಕ್ತನ ಸಂಕಲ್ಪ ಹಾಗೂ ಅದರ ವಿಜಯ ಸತ್ಯದ ವಿಜಯ ಎಂದು ಅಭಿಪ್ರಾಯ ಪಟ್ಟರು.
ರಾಮಮಂದಿರ ನಿರ್ಮಾಣಕ್ಕೆ ರಾಜ ಮಹಾರಾಜರ ಕೊಡುಗೆ ಅಪಾರ. ರಾಜರ ಮಡದಿಯರು ಮಂದಿರದ ನಿರ್ಮಾಣಕ್ಕೆ ಹೋರಾಟವನ್ನು ಮಾಡಿದ ಕುರುಹುವಿದೆ. 1986 ರಲ್ಲಿ ‘ರಾಮ್ ಜಾನಕಿ ರಥ ಯಾತ್ರೆಯ’ ಮೂಲಕ ಇಡೀ ದೇಶದಲ್ಲಿ ರಾಮನ ಅಲೆಯನ್ನು ಸೃಷ್ಟಿ ಮಾಡಿತ್ತು ಎಂದು ನುಡಿದರು.
ಅಯೋಧ್ಯೆ ಪುಣ್ಯ ಭೂಮಿಯ ಮೇಲೆ ಮೊಘಲರು, ಮುಸ್ಲಿಂರಿಂದ ನಿರಂತರ ದಾಳಿಯನ್ನು ಕಂಡರೂ ಸುಮಾರು 500 ವರ್ಷದ ನಂತರ 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೋಟ್ಯಂತರ ಹಿಂದೂಗಳ ಕನಸ್ಸನ್ನು ರಾಮ ಮಂದಿರವನ್ನು ಲೋಕಾರ್ಪಣೆ ಮಾಡುವ ಮೂಲಕ ನನಸು ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಜಿಲ್ಲಾ ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಸುನೀಲ್ ಆಚಾರ್ ಉಪಸ್ಥಿತರಿದ್ದರು.