ಬೆಂಗಳೂರು, ಡಿಸೆಂಬರ್ 31, 2023:
ಶ್ರೀರಾಮ ನಮ್ಮ ಧರ್ಮದ ನೈಜ ವಿಗ್ರಹ. ಸಕಲ ಸದ್ಗುಣಗಳ ಮೇಲ್ಪಂಕ್ತಿ. ಅಂತಹ ರಾಮ ಜನಿಸಿದ ಅಯೋಧ್ಯೆ ರಾಮನಿಗೇ ಸಲ್ಲಬೇಕು ಎನ್ನುವುದಕ್ಕಾಗಿ ಅನೇಕ ಮಂದಿ ಪ್ರಾಣಾರ್ಪಣೆ ಮಾಡಿದ್ದಾರೆ‌. ರಾಮನಿಗಾಗಿ ನಡೆದ ಆಂದೋಲನಗಳ ಪ್ರತಿಫಲವಾಗಿ ಇಂದು ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ನಮ್ಮ ಇತಿಹಾಸದಲ್ಲಿ ನಿಜವಾದ ರಾಷ್ಟ್ರೀಯ ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಪಡೆದ ಸಂತಸವನ್ನು ಜನಮಾನಸದಲ್ಲಿ ಉಂಟು ಮಾಡಿದೆ ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕ ಜೆ ನಂದಕುಮಾರ್ ಹೇಳಿದರು‌.

ಮಂಥನ ಬೆಂಗಳೂರು ವತಿಯಿಂದ ಎನ್ ಆರ್ ಕಾಲನಿಯ ಡಾ. ಸಿ.ಅಶ್ವತ್ಥ್ ಕಲಾ ಭವನದಲ್ಲಿ ಆಯೋಜಿಸಲಾಗಿದ್ದ ಲೇಖಕಿ ರಶ್ಮೀ ಸಾಮಂತ್ ಅವರು ಬರೆದ ‘ರಾಮ ಜನ್ಮಭೂಮಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು.

25 ಪೀಳಿಗೆಗಳಿಂದ ನಾವು ಒಂದು ರಾಷ್ಟ್ರವಾಗಿ ರಾಮಜನ್ಮಭೂಮಿಯ ವಿಷಯದಲ್ಲಿ ಅತ್ಯಂತ ಸಂಕಟವನ್ನು ಅನುಭವಿಸಿದ್ದೇವೆ. ಇದೀಗ ರಾಮಮಂದಿರ ನಿರ್ಮಾಣದಿಂದಾಗಿ ನಾವು ಅನುಭವಿಸಿದ ಸಾಮೂಹಿಕ ಸಂಕಟವನ್ನು ಸಾಮೂಹಿಕ ಗರಿಮೆಯಾಗುವಂತೆ ಮಾಡಿದೆ. ಶತಮಾನಗಳ ಕಾಲ ಒಂದು ರಾಷ್ಟ್ರೀಯ ಆಂದೋಲನವೆಂಬಂತೆ ರಾಮಮಂದಿರ ನಿರ್ಮಾಣ ರಾಮಜನ್ಮಭೂಮಿಯಲ್ಲೆ ಆಗಬೇಕು ಎಂದು ಹೋರಾಡಿದ ಹಿಂದುಗಳ ಪ್ರಯತ್ನ ಇಂದು ಫಲಕೊಟ್ಟಿದೆ‌ ಎಂದು ಅಭಿಪ್ರಾಯಪಟ್ಟರು.

ರಾಮಮಂದಿರ ನಿರ್ಮಾಣವು ವಸಾಹತುಶಾಹಿತ್ವದ ಕುರುಹುಗಳನ್ನು ಅಳಿಸಿದೆ‌. ರಾಷ್ಟ್ರೀಯ ಗರಿಮೆ ಮತ್ತು ಗತವೈಭವದ ಸಾಕ್ಷಿಮಂದಿರ ರಾಮಮಂದಿರವಾಗಲಿದೆ. ಭಾರತದ ಅಮೃತಕಾಲದ ಆರಂಭಕ್ಕೆ ಶುಭಾರಂಭದಂತಿದೆ. ರಾಮನ ಜನ್ಮಭೂಮಿಯನ್ನು ಮರಳಿ ಪಡೆದಿದ್ದೇವೆ ಎನ್ನುವುದು ನಮ್ಮ ಸ್ವತ್ವವನ್ನು ಮರಳಿ ಪಡೆದಿರುವುದಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಲೇಖಕಿ ರಶ್ಮೀ ಸಾಮಂತ್ ಶ್ರೀರಾಮ ನಮ್ಮ ರಾಷ್ಟ್ರೀಯ ಐಕ್ಯತೆಯ ಸಂಕೇತ. ರಾಮ ನಡೆದ ಹಾದಿ ರಾಮಾಯಣ ಎನ್ನುವುದು ಕಾಲ್ಪನಿಕವಲ್ಲ, ಅದು ಇತಿಹಾಸ. ನಮ್ಮ ಇತಿಹಾಸವನ್ನು ಸುಳ್ಳೆಂದು ನಿರೂಪಿಸುವ ಮತ್ತು ಇತಿಹಾಸವನ್ನೂ ಮಾರ್ಪಡಿಸುವ ಅಸತ್ಯದ ಕಥನಗಳನ್ನು ಅರಹುವ ಕಾಲಾಂತರಗಳಿಂದ ಆಗುತ್ತಿದೆ. ಅವುಗಳನ್ನೆಲ್ಲ ಬದಿಗಿರಿಸಿ, ರಾಷ್ಟ್ರೀಯತೆಯ ನವಜಾಗರಣಕ್ಕೆ ರಾಮಮಂದಿರ ನಿರ್ಮಾಣ ಸಾಕ್ಷಿಯಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಜ್ಞಾಪ್ರವಾಹದ ಅಖಿಲ ಭಾರತಿಯ ಸಹ ಸಂಯೋಜಕ ರಘುನಂದನ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.