ನಾಡೋಜ ಪಾಟೀಲ್ ಪುಟ್ಟಪ್ಪ ಅವರು ಸಾಹಿತಿ, ಪತ್ರಕರ್ತ ಮತ್ತು ಕನ್ನಡ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದರು.‘ಪಾಪು’ ಎಂದೇ ಜನಮಾನಸದಲ್ಲಿ ಪ್ರಸಿದ್ಧರಾಗಿದ್ದ ಪಾಟೀಲ್ ಪುಟ್ಟಪ್ಪ ಅವರು ಸಾಹಿತ್ಯ ಹಾಗೂ ಪತ್ರಿಕೋದ್ಯಮಕ್ಕೆ ಅವರು ನೀಡಿರುವ ಕೊಡುಗೆ ಅಮೂಲ್ಯವಾದದ್ದು. ಕನ್ನಡದ ಪರ ಕಾಳಜಿಯಿಂದಲೇ ಕನ್ನಡಿಗರ ಮನದಲ್ಲಿ ಉಳಿದಿರುವ ಪುಟ್ಟಪ್ಪ ಅವರ ಜಯಂತಿ ಇಂದು.
ಪರಿಚಯ:
ಪುಟ್ಟಪ್ಪನವರು ಜನವರಿ 14, 1919ರಲ್ಲಿ ಹಾವೇರಿ ತಾಲೂಕಿನ ಕುರುಬಗೊಂಡ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸಿದ್ದಲಿಂಗಪ್ಪ, ತಾಯಿ ಮಲ್ಲಮ್ಮ. ಇವರು ತಮ್ಮ ಪ್ರಾಥಮಿಕ ಶಿಕ್ಷಣ ಹಾವೇರಿಯ ಹಲಗೇರಿಯಲ್ಲಿ ಮುಗಿಸಿದರು. ನಂತರ 1943 ರಲ್ಲಿ ಬೆಳಗಾವಿಯ ಕಾನೂನು ಕಾಲೇಜಿಗೆ ಸೇರಿಕೊಂಡು 1945 ರಲ್ಲಿ ಕಾನೂನು ಪದವಿ ಪಡೆದರು.
ವೃತ್ತಿ:
ಪಾಟೀಲ್ ಪುಟ್ಟಪ್ಪ ಅವರು ವಿಜಯಪುರದಲ್ಲಿ ಕಾನೂನು ವೃತ್ತಿ ಆರಂಭಿಸಿದರು. ಆದರೆ ಅಲ್ಲಿ ಅವರಿಗೆ ಸರಿಯಾದ ಕಕ್ಷಿದಾರರು ಸಿಗದೆ ಕ್ಲಿಷ್ಠಕರ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಅಲ್ಲಿಂದ ಹೈಕೋರ್ಟ್ನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಬಾಂಬೆಗೆ ತೆರಳಿದರು. ಆದರೆ ಅಲ್ಲಿ ಪತ್ರಿಕೋದ್ಯಮದ ಕುರಿತು ಆಸಕ್ತಿ ಮೂಡಿದ್ದರಿಂದ ಪತ್ರಕರ್ತರ ಜೊತೆ ಸ್ನೇಹ ಬೆಳೆಸಿಕೊಂಡರು. ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಪತ್ರಿಕೋದ್ಯಮದ ಹಾದಿ
ಹಾವೇರಿಯಲ್ಲಿ ಓದುತ್ತಿರುವಾಗ ‘ನಮ್ಮ ನಾಡು’ ಕೈ ಬರಹದ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. 1936ರಲ್ಲಿ ವಾರ ಪತ್ರಿಕೆ
‘ವಿಶಾಲ ಕರ್ನಾಟಕ’ದ ಸಂಪಾದಕರಾಗಿದ್ದರು. ನಂತರ ಕ್ಯಾಲಿಫೋರ್ನಿಯಾದಿಂದ ಬಂದ ಅವರು, 1952ರಲ್ಲಿ ನವಯುಗ, 1954ರಲ್ಲಿ ಪ್ರಪಂಚ ಸಾಪ್ತಾಹಿಕ, 1956ರಲ್ಲಿ ಸಂಗಮ ಮಾಸಿಕ, 1959ರಲ್ಲಿ ವಿಶ್ವವಾಣಿ, 1961ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, 1964ರಲ್ಲಿ ಸ್ತ್ರೀ ಮಾಸಿಕ ಸೇರಿ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದರು. ಜತೆಗೆ ಹಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಗುರುತಿಸಿಕೊಂಡರು.
ಸಾಧನೆ
ಪಾಟೀಲ್ ಪುಟ್ಟಪ್ಪ ಅವರು ಪತ್ರಿಕಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾರ್ವಜನಿಕ ರಂಗಗಳಲ್ಲಿ ಸಹ ಸಾಕಷ್ಟು ಕೆಲಸ ಮಾಡಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ರಾಜ್ಯಸಭೆಯ ಸದಸ್ಯರಾಗಿ, ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ಸಂಸ್ಥಾಪನಾ ಅಧ್ಯಕ್ಷರಾಗಿ, ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ನಾನಾ ಮಹತ್ತರದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಟೀಲ್ ಪುಟ್ಟಪ್ಪನವರು ಸಕ್ರಿಯವಾಗಿ ಭಾಗವಹಿಸಿದ್ದರು. ಜನಸಾಮಾನ್ಯರಲ್ಲಿ ಏಕೀಕರಣದ ಬೀಜ ಬಿತ್ತಿ ಅಖಂಡ ಕರ್ನಾಟಕ ಕಟ್ಟಿದ ಹೆಮ್ಮೆಯ ಕನ್ನಡಿಗರಲ್ಲೊಬ್ಬರಾಗಿದ್ದರು. 1949ರ ಆರಂಭದಲ್ಲಿ ಕಲಬುರಗಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತಿನಲ್ಲಿ ಮೈಸೂರು ರಾಜ್ಯ ಕರ್ನಾಟಕವಾಗಬೇಕೆನ್ನುವುದನ್ನು ಪಾಟೀಲ್ ಪುಟ್ಟಪ್ಪ ಮಂಡಿಸಿದ್ದರು.
ನಂತರ 1982ರಲ್ಲಿ ಗೋಕಾಕ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ ಮಾಡಿದರು. ಆಂದೋಲನ, ಸಂಘಟನೆಯಿಂದ ಸರ್ಕಾರ ಗೋಕಾಕ ವರದಿಯನ್ನು ಒಪ್ಪುವಂತೆ ಮಾಡಿದರು. 1985ರಲ್ಲಿ ಕರ್ನಾಟಕ ಸರ್ಕಾರ ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿ ರಚಿಸಿ, ಪುಟ್ಟಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಿತು.
ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ
ಸಾಹಿತಿಯಾಗಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ನನ್ನದು ಈ ಕನ್ನಡ ನಾಡು, ನಮ್ಮದು ಈ ಭರತ ಭೂಮಿ, ಕರ್ನಾಟಕದ ಕಥೆ, ಸೋವಿಯತ್ ದೇಶ ಕಂಡೆ, ಸಾವಿನ ಮೇಜವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆ ನುಡಿದಳು, ಕಲಾ ಸಂಗಮ, ಬೆಳೆದ ಬದುಕು, ಭಾರತದ ಬೆಳಕು, ನೆಲದ ನಕ್ಷತ್ರಗಳು, ಸರ್ ಸಾಹೇಬರು, ಹೊಸಮನಿ ಸಿದ್ದಪ್ಪ, ಪ್ರಪಂಚ ಪಟುಗಳು, ನಮ್ಮ ಜನ ನಮ್ಮ ದೇಶ, ಈಗ ಹೊಸದನ್ನು ಕಟ್ಟೋಣ, ಅಮೃತವಾಹಿನಿ, ವ್ಯಕ್ತಿ ಪ್ರಪಂಚ ಸೇರಿದಂತೆ ಪ್ರಮುಖ ಪುಸ್ತಕ ಬರೆದಿದ್ದಾರೆ. 2003ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
ಪ್ರಶಸ್ತಿ
ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಟಿ.ಎಸ್.ಆರ್. ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ , ನೃಪತುಂಗ ಪ್ರಶಸ್ತಿಗಳು ಪಾಟೀಲ್ ಪುಟ್ಟಪ್ಪನವರಿಗೆ ಸಂದಿವೆ.
ಪಾಟೀಲ್ ಪುಟ್ಟಪ್ಪ ಅವರು ಅನಾರೋಗ್ಯದಿಂದ ಮಾರ್ಚ್ 16, 2020 ರಲ್ಲಿ ನಿಧನರಾದರು.