ಬೆಂಗಳೂರು,14 ಜನವರಿ 2024: ಇಂದಿನ ಯುವ ಜನತೆಯೇ ನಮ್ಮ ರಾಷ್ಟ್ರದ ನಿರ್ಮಾಪಕರು. ಅವರ ಜ್ಞಾನ, ಶಿಕ್ಷಣ ನಮ್ಮ ರಾಷ್ಟ್ರದ ಏಳಿಗೆಗಾಗಿ ಇರಬೇಕು ಎಂದು ಆಂಧ್ರಪ್ರದೇಶದ ಬೆಸ್ಟ್ ಇನೋವೇಷನ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಸಂಸ್ಥಾಪಕಿ ಡಾ.ರೂಪ ವಾಸುದೇವನ್ ಹೇಳಿದರು.

ಸಮರ್ಥ ಭಾರತ ವತಿಯಿಂದ ನಡೆಯುತ್ತಿರುವ ‘ಬಿ ಗುಡ್ ಡು ಗುಡ್’ ಅಭಿಯಾನದ ಆನ್ ಲೈನ್ ಉಪನ್ಯಾಸ ಸರಣಿಯ ಮೂರನೆಯ ದಿನ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ಮಾತಿನಂತೆ ನಾವು ಯಶಸ್ವಿಯಾಗಲು ಪ್ರಚಂಡ ಪರಿಶ್ರಮ ಹಾಗೂ ಇಚ್ಛೆಯನ್ನು ಹೊಂದಿರಬೇಕು. ಅದಕ್ಕಾಗಿ ಯುವ ಜನತೆಯಲ್ಲಿ ಮುಖ್ಯವಾಗಿ ಏಕಾಗ್ರತೆ ಇರಬೇಕು. ನಮ್ಮ‌ ಆಲೋಚನೆಗಳಂತೆ ನಾವಾಗುವುದರಿಂದ ಉದಾತ್ತ ಚಿಂತನೆಗಳು ನಮ್ಮಲ್ಲಿರಬೇಕು. ಆರೋಗ್ಯಯುತ ಜೀವನಶೈಲಿಯನ್ನು ರೂಢಿಸಿಕೊಂಡು, ಆರಾಮದಾಯಕ ವಲಯದಿಂದ ಹೊರಬಂದು ಕಾರ್ಯಪ್ರವೃತ್ತರಾಗಬೇಕು ಎಂದು ನುಡಿದರು.

ಇವತ್ತಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲವನ್ನೂ ಪಡೆಯಬಹುದು ಹಾಗೂ ತಿಳಿಯಬಹುದಾಗಿದೆ. ಇದು ಯುವಕರ ಮೇಲೆ ಬಹಳ ಪ್ರಭಾವ ಬೀರುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮಲ್ಲಿ ಸಕಾರಾತ್ಮಕ ಚಿಂತನೆಗಳು ಸೃಜಿಸಬೇಕೇ ಹೊರತು ನಕಾರಾತ್ಮಕ ವಿಚಾರವಲ್ಲ. ನಮ್ಮ ಚಿಂತನೆಗಳು, ಕೌಶಲ್ಯ, ಆಸಕ್ತಿಯು ಸಮಾಜಕ್ಕೆ ಏನನ್ನಾದರೂ ಒಳಿತನ್ನು ಮಾಡುವಂತೆ ಇರಬೇಕು ಎಂದು ಅಭಿಪ್ರಾಯಪಟ್ಟರು.

ಸಮೃದ್ಧ ಪರಂಪರೆಯ ದೇಶದಲ್ಲಿ ನಾವು ಬಾಳಿ ಬದುಕುತ್ತಿದ್ದೇವೆ. ಮುಂದಿನ ಈ ರಾಷ್ಟ್ರದ ಪರಂಪರೆಯು ಯುವಕರ ಮೇಲೆ ಅವಲಂಬಿತವಾಗಿದೆ. ಎಲ್ಲಾ ಸೌಲಭ್ಯವನ್ನು, ಆಚಾರ ವಿಚಾರಗಳನ್ನು ಹೊಂದಿರುವ ನಮ್ಮ ಈ ದೇಶದಲ್ಲಿ ಮುಂದಿನ ಪೀಳಿಗೆಯ ಪರಂಪರೆಯ ರವಾನೆಯಲ್ಲಿ ಯುವಕರ ಪಾತ್ರ ಬಹಳಷ್ಟಿದೆ. ಅವರ ಬೆಳವಣಿಗೆ ಅವರು ಕಲಿಯುವ ಶಿಕ್ಷಣ, ಅಳವಡಿಸಿಕೊಂಡ ಶಿಸ್ತಿನ ಮೇಲೆ ನಿಂತಿರುತ್ತದೆ ಎಂದು ತಿಳಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.