ಜಯಿಸಲಾಗದ್ದು ಅಯೋಧ್ಯೆ.

ಇದು ಪದಾರ್ಥ. ಈ ಅರ್ಥದ ಪದವನ್ನು ಸುಖಾಸುಮ್ಮನೆ ಇಟ್ಟಿರಲಾರರು.

ಸೂರ್ಯವಂಶವು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ ನಗರವದು. ಸಮಸ್ತ ರಾಜರೂ ಗೌರವಿಸುತ್ತಿದ್ದ ಚಕ್ರವರ್ತಿ ಪೀಠದ ಕೇಂದ್ರವದು.

ಈ ಅರ್ಥದಲ್ಲಿ ಅದು ಅಯೋಧ್ಯೆ ಇರಬೇಕು.

ಗೌರವವು ಸಾಮರ್ಥ್ಯಾಧಿಕ್ಯದಿಂದಲೂ ಲಭಿಸುತ್ತದೆ, ಗುಣಾಧಿಕ್ಯದಿಂದಲೂ ಲಭಿಸುತ್ತದೆ. ಸೂರ್ಯವಂಶವು ಇವೆರಡನ್ನೂ ಹೊಂದಿತ್ತೆನ್ನುವುದು ಪ್ರತೀತಿ.

ಇರಲಿ. ಜಯಿಸಲಾಗದ್ದು ಈಚಿನ ಇತಿಹಾಸದಲ್ಲಿ ಸೋತುಹೋಯಿತೆಂಬಂತೆ ಆಯಿತು ಎಂದು ಅಯೋಧ್ಯೆಯ ಬಗೆಗಿನ ಚಿತ್ರಣವೊಂದು ಈವರೆಗೆ ಸದಾ ಕಾಡುತ್ತಿದ್ದ ಅಂಶವಾಗಿತ್ತು.

ಹೌದು, ರಾಮಮಂದಿರಕ್ಕೆ ಸಂಬಂಧಿಸಿ ಈ ಮಾತು.

ಅಯೋಧ್ಯೆಯ ಒಬ್ಬ ಚಕ್ರವರ್ತಿ ಸೋತ, ಮತ್ತೊಬ್ಬ ಗೆದ್ದ ಎಂಬ ವಿವರವು ಜನಮಾನಸಕ್ಕೆ ಗಾಸಿಮಾಡಬಲ್ಲ ಇಲ್ಲವೇ ಆನಂದವನ್ನೀಯಬಲ್ಲ ಸಾಮರ್ಥ್ಯವನ್ನು ಹೊಂದಿರಲಾರದು. ಆದರೆ ಅಲ್ಲಿದ್ದ ರಾಮನ ಮಂದಿರಕ್ಕೆ ಕೇಡಿಗಳಿಂದ ಹಾನಿಯಾದಾಗ ಜನಮಾನಸಕ್ಕೆ ಗಾಸಿಯಾಗುತ್ತದೆ.

ಯಾಕೆಂದರೆ ರಾಮ ಹಾಗಿದ್ದ ಮತ್ತು ಮಂದಿರವು ಆತನ ಜನ್ಮಸ್ಥಾನವೆಂದು ಶ್ರದ್ಧೆತೋರುವ ಜಾಗದಲ್ಲಿತ್ತು.

ಶ್ರದ್ಧಾಭಂಗವೇ ಲಕ್ಷ್ಯ

ರಾಜರ ಮೇಲಿನ ದಾಳಿಗೆ ಶ್ರದ್ಧಾಭಂಗದ ಉದ್ದೇಶವೂ ಇರಲಾರದು, ಅದರಿಂದ ಶ್ರದ್ಧಾಭಂಗವೂ ಸಾಧ್ಯವಾಗದು. ಆದರೆ ಅಯೋಧ್ಯೆಯ ಶ್ರೀರಾಮಜನ್ಮಭೂಮಿಸ್ಥಾನದ ಮಂದಿರದ ಮೇಲಿನ ದಾಳಿಗೆ ಇದ್ದುದು ಸ್ಪಷ್ಟವಾಗಿ ಶ್ರದ್ಧಾಭಂಗದ ಉದ್ದೇಶ. ಈ ರಾಷ್ಟ್ರದ ಆತ್ಮವೇ ಆಗಿರುವ ಹಿಂದೂಸಮಾಜದ ಶ್ರದ್ಧಾಭಂಗ.

ನಿಜಕ್ಕಾದರೆ; ರಾಮ ಹಿಂದೂಗಳಿಗಷ್ಟೆ ಶ್ರದ್ಧಾನ್ವಿತ ಎನ್ನುವುದು ಹ್ರಸ್ವನೋಟವಾದೀತು. ರಾಷ್ಟ್ರೀಯವಾಗಿ ಇಲ್ಲವೇ ಧಾರ್ಮಿಕವಾಗಿ ಇಲ್ಲವೇ ಸಾಂಸ್ಕೃತಿಕವಾಗಿ ಹಿಂದೂಗಳಲ್ಲದವರೂ ಕೂಡಾ ರಾಮನನ್ನು ಶ್ರದ್ಧೆಯಿಂದ ಕಾಣುವ ಚಿತ್ರಣ ಪ್ರಚಲಿತವೇ ಇದೆ. ಮುಸ್ಲಿಂ ಬಾಹುಳ್ಯದ ಇಂಡೋನೇಷ್ಯಾದ ಜನ, ಅಂದರೆ ಮುಸಲ್ಮಾನ ಜನ ರಾಮನನ್ನು ಎಷ್ಟು ಶ್ರದ್ಧೆಯಿಂದ ಕಾಣುತ್ತಾರೆಂಬುದನ್ನು ಯಾವುದೇ ದುರಭ್ಯಾಸವಿಲ್ಲದ ದುಶ್ಶೀಲನಲ್ಲದ ಗುಣಾಢ್ಯನನ್ನೇ ರಾಮಾಯಣ ಸಂಬಂಧಿತ ನಾಟಕದ ರಾಮನ ಪಾತ್ರಧಾರಿಯಾಗಿ ಆಯ್ಕೆಮಾಡುವ ಅವರ ಆಗ್ರಹವನ್ನು ನೋಡಿ ಅವಲೋಕಿಸಬಹುದು.

ರಾಮ, ಕೃಷ್ಣ ಮತ್ತು ಶಿವ – ಈ ಮೂವರು ಭಾರತದ ಆದರ್ಶ ವ್ಯಕ್ತಿತ್ವಗಳು ಎಂದು ಪ್ರಖರ ಸಮಾಜವಾದಿಯಾಗಿದ್ದ ರಾಮಮನೋಹರ ಲೋಹಿಯಾ ಅವರು ನೀಡಿದ್ದ ಹೇಳಿಕೆ ಪ್ರಸಿದ್ಧವೇ ಇದೆ. ಅವರಂತೂ ನಾಸ್ತಿಕರಾಗಿದ್ದರಷ್ಟೆ. ನಾಸ್ತಿಕರಿಗೂ ರಾಮನ ವ್ಯಕ್ತಿತ್ವವು ಆದರ್ಶದ ನೆಲೆಯಲ್ಲಿ ಮುಖ್ಯವಾಗುತ್ತದೆ. ಬೇಕಾಗುತ್ತದೆ.

ಆದರ್ಶದ ಆರಾಧನೆ ಮಾಡುವವರ ಶ್ರದ್ಧೆಯೂ ಭಂಗವಾಗುವ ಪ್ರಕ್ರಿಯೆ ಅಯೋಧ್ಯೆ ಮೇಲಾದ ಪರಕೀಯ ದಾಳಿಯಲ್ಲಿ ಘಟಿಸಿದೆ ಎನ್ನುವುದನ್ನು ಗ್ರಹಿಸಬೇಕು.

ರಾಕ್ಷಸನ ನಿರ್ಣಯ

ರಾಮನನ್ನು ಕೇವಲ ಒಬ್ಬ ವ್ಯಕ್ತಿಯಾಗಿ ಆದಿಕವಿ ವಾಲ್ಮೀಕಿಗಳು ಚಿತ್ರಿಸಿಲ್ಲವಷ್ಟೆ. ಅವರು ತಮ್ಮ ಬಳಿ ಬಂದ ನಾರದರಲ್ಲಿ ಉತ್ತಮನಾರಿದ್ದಾನೆ ಎಂದು ಕೇಳುವ ಪ್ರಶ್ನೆಯಲ್ಲೇ ಗುಣಸಾಗರದ ವಿವರವಿದೆ. ಇದಕ್ಕೆ ಪೂರಕವಾಗಿ ದುಷ್ಟ ರಾಕ್ಷಸಕುಲದಲ್ಲಿ ಹುಟ್ಟಿಯೂ ಸದ್ಭಾವವೊಂದಷ್ಟನ್ನು ಹೊಂದಿದ್ದ ಮಾರೀಚ ರಾಮನನ್ನು ‘ಧರ್ಮವೇ ಮೂರ್ತಿವೆತ್ತ ರೂಪ’ ಎಂದು ವರ್ಣಿಸುತ್ತಾನೆ. ಆತ ಈ ವರ್ಣನೆಯನ್ನು ಮಾಡುವುದು ರಾಮನ ಮುಂದೆಯೂ ಅಲ್ಲ, ಋಷಿಮುನಿಗಳ ಮುಂದೆಯೂ ಅಲ್ಲ; ದುಷ್ಟಾಗ್ರೇಸರನಾದ ರಾವಣನ ಮುಂದೆ! ಅಂದರೆ ಆತ ಈ ವರ್ಣಣೆಯ ಮೂಲಕ ಮಾಡಿದ್ದು ಮೆಚ್ಚಿಸುವ ಕೆಲಸವನ್ನೂ ಅಲ್ಲ, ಗೋಸುಂಬೆತನದ ಅಭಿವ್ಯಕ್ತಿಯನ್ನೂ ಅಲ್ಲ; ಸತ್ಯವನ್ನಾಡುವ ಧೈರ್ಯವನ್ನು. ಮತ್ತಿದನ್ನಾತ ತೋರಿದ್ದು ಇಂಥ ಮಾತುಗಳನ್ನು ಕೇಳಲು ಯಾರು ಹೇವರಿಕೆಪಡುವರೋ, ತನ್ನ ತಲೆಯನ್ನೇ ತೆಗೆವರೋ ಅಂಥ ರಾವಣನ ಮುಂದೆ. ತನ್ನೀ ಮಾತಿನ ಮೂಲಕ ಆತ ಕಂಡುಕೊಂಡದ್ದು ತಾನು ಬದುಕುವ ದಾರಿಯನ್ನಲ್ಲ, ತನ್ನಳಿಯ ರಾವಣನನ್ನು ಬದುಕಿಸುವ ದಾರಿಯನ್ನು. ಅದು ಸ್ಪಷ್ಟವಾಗುವುದು ಆತನ ಮುಂದಿನ ನಡೆಯಲ್ಲಿ. ಏನು ಹೇಳಿದರೂ ಕೇಳದ ರಾವಣ, ತಾನು ಹೇಳಿದಂತೆ ಮಾಡಬೇಕು ಇಲ್ಲವೇ ತನ್ನ ಖಡ್ಗಕ್ಕೆ ಬಲಿಯಾಗಬೇಕು ಎಂದು ಮಾರೀಚನ ಮುಂದೆ ಆಯ್ಕೆಯನ್ನಿಟ್ಟಾಗ; ‘ನಿನ್ನ ಕೈಯಿಂದ ಸಾಯುವುದಕ್ಕಿಂತ ರಾಮಬಾಣಕ್ಕೆ ಈಡಾಗಿ ಬಲಿದಾನವಾಗುವುದೇ ಶ್ರೇಯಸ್ಕರವಾದುದು’ ಎಂದು ರಾವಣನಿಗೇ ಹೇಳಿ ಮಾಯಾಜಿಂಕೆಯಾಗಲು ಒಪ್ಪಿದ.

ಆತ ಒಂದಷ್ಟು ಸದ್ಭಾವ ಹೊಂದಿದ್ದರೂ ಮೂಲತಃ ರಾಕ್ಷಸ. ಹಾಗಾಗಿ ತನ್ನ ಶ್ರೇಯಸ್ಸನ್ನಷ್ಟೆ ನೋಡಿದ. ರಾಕ್ಷಸನಲ್ಲದಿರುತ್ತಿದ್ದರೆ ರಾಮನ ಹಿತವನ್ನು ಕಾಪಾಡುತ್ತಿದ್ದ.

ತನಗೆ ಶ್ರೇಯಸ್ಸುಂಟಾಗುವುದು ರಾಮಬಾಣಕ್ಕೆ ಬಲಿಯಾಗಿಯೇ ಎನ್ನುವ ಆತನ ಯೋಚನೆಯಲ್ಲಿರುವ ರಾಮಶ್ರದ್ಧೆಯನ್ನು ಒಮ್ಮೆ ಅವಲೋಕಿಸಿರಂತೆ!

ರಾಮನ ಕುರಿತ ಶ್ರದ್ಧೆಯು ನಾಸ್ತಿಕರನ್ನೂ ದಾಟಿ ದೇವವಿರೋಧಿಗಳ ತನಕ ವ್ಯಾಪಿಸಿದ್ದ ಅಪೂರ್ವ ದೃಷ್ಟಾಂತವಿದು.

ಹೋರಾಟಕ್ಕೇನು ಅರ್ಥ?

ಇಂಥ ರಾಮನನ್ನು ವಿಷ್ಣುವಿನ ಅವತಾರವೆಂಬ ಪಾರಂಪರಿಕ ಶ್ರದ್ಧೆಯ ಹೊರತಾಗಿಯೂ ಉಪಾಸಿಸಲು ಸದೃಢ ಕಾರಣಗಳಿವೆ. ಆದರ್ಶಪುರುಷ, ಮಹಾಪುರುಷ, ದೈವೀಪುರುಷ ಇತ್ಯಾದಿ ನೆಲೆಗಳಲ್ಲಿ ಗೌರವದಿಂದ ನೋಡಲು ಬಲವಾದ ಪುರಾವೆಗಳಿವೆ. ಭಾರತೀಯರಿಗಂತೂ ಆತ ಆರಾಧ್ಯನಾದುದು ಅಂಧಾಭಿಮಾನದಿಂದಲ್ಲ ಎನ್ನುವುದು ಸುವೇದ್ಯವೇ ಇದೆ.

ಇಂಥ ತಾತ್ತ್ವಿಕ ವ್ಯಕ್ತಿತ್ವವೊಂದಕ್ಕೆ ಗಾಸಿಮಾಡುವ ಅಕಾರ್ಯವನ್ನು ಬಾಬರ ಮಾಡಿದ. ಆತ ಪರಕೀಯ. ಆ ಹಿನ್ನೆಲೆಯಲ್ಲಿ ಆತನೇಕೆ ಹಾಗೆ ಮಾಡಿದ ಎಂಬುದನ್ನು ಅರ್ಥೈಸಿಕೊಳ್ಳಲು ಸಾಧ್ಯ. ಮೂಲತಃ ಇಲ್ಲಿಯವರೇ ಆದ, ಪರಕಿಯರ ಬಲಾತ್ಕಾರಕ್ಕೆ ಮತಾಂತರಗೊಂಡ ಇಲ್ಲಿಯ ಮುಸಲ್ಮಾನರು ಬಾಬರನ ಹೆಸರಿನಲ್ಲೇ ಸಂಸ್ಥೆ ಕಟ್ಟಿಕೊಂಡು ಹೋರಾಟಮಾಡಿ ಬಾಬರನ ಈ ಅಕಾರ್ಯವನ್ನು ಸಮರ್ಥಿಸುತ್ತಿರುವುದನ್ನು ಅರ್ಥೈಸಿಕೊಳ್ಳುವುದೆಂತು?

ಬಾಬರ ಅಂದು ಗೈದ ಶ್ರದ್ಧಾಭಂಗದ ಅಕಾರ್ಯವನ್ನು ಪ್ರತಿಭಟಿಸಿ ಲಕ್ಷಾಂತರ ಮಂದಿ ಹೋರಾಡಿದ್ದಾರೆ, ಬಲಿದಾನಗೈದಿದ್ದಾರೆ. ಪರಕೀಯ ಇಸ್ಲಾಂ ಆಳ್ವಿಕೆಯ ಕಾಲದ ಮತ್ತು ಸ್ವಾತಂತ್ರ್ಯಲಭಿಸುವ ತನಕದ ಈ ಹೋರಾಟಕ್ಕೆ ಬಲಿದಾನಕ್ಕೆ ಒಂದು ಅರ್ಥವಿದೆ. ಸ್ವಾತಂತ್ರ್ಯಾನಂತರವೂ ಹೋರಾಟ ಮಾಡಬೇಕಾಗಿ ಬಂತಲ್ಲ! ಹಲವರ ಬಲಿದಾನವೂ ನಡೆಯಿತಲ್ಲ! ಇದಕ್ಕೇನು ಅರ್ಥ?

ನಮ್ಮ ಮುಂದೆಯೂ ಮುಂಪೀಳಿಗೆಯ ಮುಂದೆಯೂ ಇರುವ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಡವೆ?

ತುಷ್ಟೀಕರಣವೊಂದನ್ನು ಬಿಟ್ಟರೆ ಬೇರೆ ಉತ್ತರ ಇದೆಯೇ?

ನಗ್ನಗೊಂಡ ಸೆಕ್ಯುಲರಿಸಂ

ತುಷ್ಟೀಕರಣ! ಯಾರ ತುಷ್ಟೀಕರಣ? ಇಲ್ಲಿಯ – ಹೊರ ದೇಶಗಳ ಅಲ್ಲ! – ಮುಸ್ಲಿಮರ ತುಷ್ಟೀಕರಣ! ಅರೆ! ಅಯೋಧ್ಯೆಯ ರಾಮಜನ್ಮಸ್ಥಾನದಲ್ಲಿ ರಾಮಮಂದಿರದ ವಿರುದ್ಧ, ಬಾಬರ ‘ಮಸೀದಿ’ಯ ಪರ ಇಲ್ಲಿಯ ಮುಸ್ಲಿಮರನ್ನು ತುಷ್ಟೀಕರಿಸಬೇಕಾಗಿದೆ! ಪಾಕಿಸ್ಥಾನವೂ ಸೇರಿದಂತೆ ಹೊರದೇಶಗಳ ಯಾವುದೇ ಮುಸಲ್ಮಾನ ಶಕ್ತಿಗಳ ಅಪೇಕ್ಷೆ – ಆಗ್ರಹಗಳಿಲ್ಲದೆಯೂ ಇಲ್ಲಿಯ ಮುಸ್ಲಿಮರು ಅಯೋಧ್ಯೆಯ ರಾಮಮಂದಿರದ ವಿರುದ್ಧ ಮತ್ತು ಬಾಬರ ‘ಮಸೀದಿ’ ಪರವಾಗಿ ಇದ್ದಾರೆಂದು ನಿರ್ಣಯವೇ!

ಈ ನಿರ್ಣಯವನ್ನು ಸ್ವೀಕರಿಸಿದವರಾರು?

ಸೆಕ್ಯುಲರ್ ರಾಜಕಾರಣಿಗಳ ಸರಕಾರ ಮತ್ತು ಸೆಕ್ಯುಲರ್ ಮಾಧ್ಯಮ.

ಮತ್ತದೇ ಗೋಳು; ಇಲ್ಲಿಗೆ ಸಲ್ಲದ ಈ ಸೆಕ್ಯುಲರ್‌ವಾದ ಬಂದಿದ್ದು ಯೂರೋಪಿನಿಂದ. ನಮ್ಮನ್ನು ಗುಲಾಮರನ್ನಾಗಿ ಮಾಡಿದ ಪರಕೀಯರಿಂದ.

ಪರಕೀಯರಿಂದ ಯಾವುದೂ ಬರಕೂಡದೆಂದಲ್ಲ, ಪರಕೀಯರಿಂದ ಬಂದದ್ದೆಲ್ಲ ವರ್ಜ್ಯವೆಂದೂ ಅಲ್ಲ; ಆದರೆ ರಾಜ್ಯವನ್ನು ರಿಲಿಜನ್ ಮುಷ್ಟಿಯಿಂದ ಹೊರತಾಗಿಸುವ ಸೆಕ್ಯುಲರ್‌ವಾದ ರಿಲಿಜನ್ ತೆಕ್ಕೆಯಲ್ಲಿದ್ದ ಅಲ್ಲಿಗೆ ಬೇಕಿತ್ತು, ರಿಲಿಜನ್ ಪ್ರವೇಶ ಇಲ್ಲಿ ಬಲಾತ್ಕಾರದಿಂದಲೇ ಆಗಿದ್ದರೂ ಅದರ ಯಾವುದೇ ಪ್ರಭಾವ ಸರಕಾರದ ಮೇಲೆ ಇರದಿದ್ದ ಇಲ್ಲಿಗೇಕೆ? ಸಂವಿಧಾನದಲ್ಲಂತೂ ಅದು ಸೇರ್ಪಡೆಗೊಂಡಿದ್ದು ಪ್ರಜಾಪ್ರಭುತ್ವವನ್ನು ತಾತ್ಕಾಲಿಕವಾಗಿ ಹತ್ಯೆಗೈದಿದ್ದ ತುರ್ತುಸ್ಥಿತಿಯ ಸಂದರ್ಭದಲ್ಲಿ.

ಅಪಾಯಕಾರಿಯಾದ ವಿರೋಧಾಭಾಸವೆಂದರೆ ರಿಲಿಜನ್ ಪ್ರಭಾವದಿಂದ ಮುಕ್ತವಾಗಿರಬೇಕಿದ್ದ ಸೆಕ್ಯುಲರ್ ಸರಕಾರ ಇಲ್ಲಿ ರಿಲಿಜನ್ ತುಷ್ಟೀಕರಣದಲ್ಲಿ ತೊಡಗಿಕೊಂಡದ್ದು! ಬಾಬರ್ ಕಟ್ಟಡದ ಮೂರು ಗುಮ್ಮಟಗಳು 1992ರ ಡಿಸೆಂಬರ್ 6ರಂದು ಧರಾಶಾಯಿಯಾದಾಗ ಸೆಕ್ಯುಲರಿಸಮ್ಮಿನ ಮೂರು ಗುಮ್ಮಟಗಳು ನೆಲಸಮಗೊಂಡವು ಎಂದು ಸೆಕ್ಯುಲರ್ ರಾಜಕಾರಣಿಗಳೂ ಬುದ್ಧಿಜೀವಿಗಳೂ ಅಲವತ್ತುಕೊಂಡರಷ್ಟೆ!

ಅಲ್ಲಿಗೆ ಸೆಕ್ಯುಲರಿಸಮ್ ಎಂದರೆ ರಿಲಿಜನ್ ತುಷ್ಟೀಕರಣ ಎಂಬುದನ್ನು ಅದರ ಸಮರ್ಥಕರೆಲ್ಲ ಒಕ್ಕೊರಲಿನಿಂದ ಘೋಷಿಸಿಕೊಂಡಂತೆ ಆಯಿತು.

ಢೋಂಗಿ ಸೆಕ್ಯುಲರಿಸಂ ನಗ್ನಗೊಂಡ ದಿನ 1992ರ ಡಿಸೆಂಬರ್ 6.

ಸಲ್ಲದ ಸೆಮೆಟಿಕ್ ಆವೇಶ

ರಾಮಜನ್ಮಸ್ಥಾನದಲ್ಲಿ ಇರಬೇಕಾದುದು ರಾಮನ ಹೆಸರಿನ ಸಂಕೇತವೇ ವಿನಾ ಶಾಲೆಯೋ ಶೌಚಾಲಯವೋ ಮಸೀದಿಯೋ ಅಲ್ಲವಲ್ಲ! ಪರಕೀಯ ದಾಳಿಕೋರನ ಹೆಸರಿನ ಸಂಕೇತವಂತೂ ಅಲ್ಲವೇ ಅಲ್ಲ. ಈ ಮೂಲಭೂತ ಸತ್ಯವನ್ನು ಕಂಡುಕೊಳ್ಳಲು ಭಾರೀ ಜ್ಞಾನವೇನೂ ಬೇಕಿಲ್ಲ. ಆದರೂ ಇಲ್ಲಿಯ ಸೆಕ್ಯುಲರ್ ಬುದ್ಧಿಜೀವಿಗಳು ರಾಜಕಾರಣಿಗಳು ದಾಳಿಕೋರ ಪರಕಿಯನ ಪರವಾಗಿಯೇ ವಕಾಲತ್ತು ವಹಿಸಿದರು. ಶಾಲೆಕಟ್ಟಿಸಿ ಶೌಚಾಲಯ ಕಟ್ಟಿಸಿ ಎನ್ನುವಲ್ಲಿಯೂ ಇದ್ದುದು ಪರಕೀಯ ಸಮರ್ಥನೆಯ ಜತೆಗೆ ಸಲ್ಲದ ಕ್ರೂರವ್ಯಂಗ್ಯವಷ್ಟೆ, ದುಷ್ಟ ಲೇವಡಿಯಷ್ಟೆ!

ಈ ನಿಟ್ಟಿನಲ್ಲಿ ಇಲ್ಲಿಯ ಮುಸ್ಲಿಮರು ದಾರಿತಪ್ಪಿದರೆ? ಅಥವಾ ಅವರನ್ನು ದಾರಿತಪ್ಪಿಸಲಾಯಿತೆ?

ರಾಮಮಂದಿರದ ಪರವಾಗಿ ಉಳಿದ ಶ್ರದ್ಧಾನ್ವಿತ ಭಾರತೀಯರ ಜತೆ ಕೈಜೋಡಿಸಬೇಕಿದ್ದ ಭಾರತೀಯ ಮುಸ್ಲಿಮರು ತಮ್ಮನ್ನೇಕೆ ಇಲ್ಲಿಗೆ ದಾಳಿಗೈದ ಎಲ್ಲ ಪರಕೀಯರ ಜತೆ ಗುರುತಿಸಿಕೊಳ್ಳುತ್ತಾರೆ?

ಇಲ್ಲಿಗೆ ದಾಳಿಗೈದ ಪರಕೀಯ ಮುಸಲ್ಮಾನರಲ್ಲಿ ಒಂದು ಸೆಮೆಟಿಕ್ ಆವೇಶವಿತ್ತು. ಅದು ತನ್ನ ರಿಲಿಜನ್ನನ್ನು ಅಪ್ಪುವಂತೆ ಬಲಾತ್ಕಾರಿಸುವ ಮತ್ತು ತನ್ನನ್ನೊಪ್ಪದವರನ್ನು ಯೇನಕೇನ ನಿವಾರಿಸುವ ಆವೇಶ. ಈ ಸೆಮೆಟಿಕ್ ಆವೇಶದಿಂದಾಗಿ ತಮ್ಮದೇ ಮೂಲದ ಬಗ್ಗೆ ಒಂದು ವಿದ್ವೇಷವೂ ಕಾಡುವುದು ಆಗುತ್ತದೆ. ಇಂಥ ಸೆಮೆಟಿಕ್ ಆವೇಶ ಇಲ್ಲಿಯ ಕೆಲವರನ್ನು ಕಾಡುತ್ತಿದೆಯೇ? ಸಂಬಂಧಿಸಿದವರು ಕೇಳಿಕೊಳ್ಳಬೇಕಾದ ಗಂಭೀರ ಪ್ರಶ್ನೆಯಿದು.

ಅವರಲ್ಲಿ ಇರುವ ಇಂಥ ಆವೇಶವು ಸ್ಪಷ್ಟವಾಗಿ ಎಲ್ಲರ ಗೋಚರಕ್ಕೆ ಬಂದ ಸಂದರ್ಭ ಅಯೋಧ್ಯಾ ಆಂದೋಲನ.

ಸೆಮೆಟಿಕ್ ಆವೇಶದಿಂದಾಗಿ ಭಾರತೀಯ ಮುಸಲ್ಮಾನರು ದಾರಿತಪ್ಪಿದರೆನ್ನುವುದು ಒಂದು ನೋಟ.

ಸೆಕ್ಯುಲರ್ ಅಪಪ್ರಚಾರವೂ ಮತ್ತದು ನೀಡಿದ ಬೆಂಬಲವೂ ಅವರನ್ನು ದಾರಿತಪ್ಪಿಸಿತು ಎನ್ನುವುದು ಒಂದು ನೋಟ.

ಅಪಪ್ರಚಾರದ ಪರಿಣಾಮಶಕ್ತಿ ಅಂತಹುದು. ಮತ್ತದನ್ನು ರಾಮಾಯಣವೇ ಕಂಡುಂಡಿದೆ.

ಅಪಪ್ರಚಾರದ ಶಕ್ತಿ

ಪುರಾಣಗಳು ದಾಖಲಿಸಿದ್ದನ್ನು ಆಧಾರವಾಗಿಟ್ಟುಕೊಂಡು ಸುರಾಣಕ ಎಂಬ ಹೆಸರಿನ ರಾಕ್ಷಸರ ಗುಂಪೊಂದು ಕಾರ್ಯಪ್ರವೃತ್ತವಾದ ವಿವರವನ್ನು ತಮ್ಮ ‘ಶ್ರೀಮಹಾಭಾರತತಾತ್ಪರ್ಯನಿರ್ಣಯ’ ಗ್ರಂಥದಲ್ಲಿ ಮಧ್ವಾಚಾರ್ಯರು ಉಲ್ಲೇಖಿಸಿದ್ದಾರೆ.

ಈ ರಾಕ್ಷಸರು ಮೋಕ್ಷಾಕಾಂಕ್ಷಿಗಳಾಗಿ ತಪಸ್ಸು ಗೈದು ಬ್ರಹ್ಮನನ್ನು ಮೆಚ್ಚಿಸಿದರು. ‘ವಿಷ್ಣು-ಲಕ್ಷ್ಮಿಯರನ್ನು ಬೇರ್ಪಡಿಸಿದರೆ ನಿಮ್ಮ ಆಕಾಂಕ್ಷೆ ಈಡೇರುವುದು’ ಎಂದು ಬ್ರಹ್ಮ ವರನೀಡಿದ. ಮುಂದೆ ಅವರು ರಾಮನ ರಾಜ್ಯದಲ್ಲಿ ಹುಟ್ಟಿ ರಾಮನ ವಿರುದ್ಧ ಸೀತೆಯ ಬಗ್ಗೆ ಅಪಪ್ರಚಾರ ಮಾಡಿದರು. ಈ ಅಪಪ್ರಚಾರದ ಅವರ ಉದ್ದೇಶ ರಾಮಸೀತೆಯರನ್ನು ಅಗಲಿಸುವುದೇ ಆಗಿತ್ತು. ಅವರ ಅಪಪ್ರಚಾರದ ಪರಿಣಾಶಕ್ತಿ ಎಷ್ಟಿತ್ತೆಂದರೆ ರಾಮಸೀತೆಯರನ್ನು ಸಾಕ್ಷಾತ್ ದೇವರೆಂದೇ ಕಾಣುತ್ತಿದ್ದ ಅಯೋಧ್ಯೆ ಪ್ರಜೆಗಳೂ ಈ ಮಾನವರೂಪೀ ರಾಕ್ಷಸರ ಮಾತನ್ನು ನಿಜವೆಂದೇ ನಂಬಿದರು. ಹಾಗೆ ನಂಬಿದ್ದು ಮಾತ್ರಲ್ಲ, ತಾವೂ ಅವರ ಅಪಪ್ರಚಾರದ ಸಾಧನಗಳಾದರು. ಅವರು ನಿರೀಕ್ಷೆಯೇ ಮಾಡಿರದಿದ್ದ, ಅನಾಯಾಸವಾಗಿ ಒದಗಿಬಂದ ಫಲವಿದು!

ವಾಲ್ಮೀಕಿಯನ್ನು ತಿದ್ದಹೊರಟ ಕೆಲವು ಕವಿಗಳು ಒಬ್ಬ ಅಗಸ ಸೀತೆಯ ಬಗ್ಗೆ ಕೇವಲವಾಗಿ ಮಾತನಾಡಿದ ಎಂದು ಬಿಂಬಿಸಿದ್ದಾರೆ. ಆದರೆ ಮೂಲದಲ್ಲಿ ಹಾಗಿಲ್ಲ. ಪ್ರಜೆಗಳು ಸೀತೆಯ ಶೀಲದ ಕುರಿತೂ ಅಂಥ ಸೀತೆಯನ್ನು ಸ್ವೀಕರಿಸಿದ ರಾಮನ ಕುರಿತೂ ಸಲ್ಲದ ಮಾತುಗಳನ್ನು ಆಡುತ್ತಿದ್ದ ವಿವರಗಳನ್ನು ವಾಲ್ಮೀಕಿ ಮಹರ್ಷಿ ದಾಖಲಿಸಿದ್ದಾರೆ.

ಪಟ್ಟಾಭಿಷೇಕ ಸಂದರ್ಭ, ಕೈಕೇಯಿ ಕುಯುಕ್ತಿಯಂತೆ ರಾಮಸೀತೆಯರು ವನವಾಸಕ್ಕೆ ಹೊರಟಾಗ ಇದೇ ಪ್ರಜೆಗಳು ವನವಾಸಕ್ಕೆ ಹೋಗಬೇಡಿರೆಂದು ತಡೆದಿದ್ದರು. ಹೋಗುವುದೇ ಆದರೆ ತಾವೂ ಬರುವೆವೆಂದು ರಾಮನ ಸಂಗಡ ಹೊರಟಿದ್ದರು. ಒಂದಷ್ಟು ದಿನ ರಾಮನ ಜತೆ ಹೆಜ್ಜೆಯಿಕ್ಕಿದ್ದರು. ಕೊನೆಗೊಮ್ಮೆ ಅವರು ಏಳುವ ಮುನ್ನವೇ ಎದ್ದು ಗೊತ್ತಾಗದಂತೆ ದೂರ ಸಾಗಿ ತನ್ನೀ ವಾತ್ಸಲ್ಯಮಯೀ ಪ್ರಜೆಗಳಿಂದ ಮುಕ್ತವಾಗಲು ರಾಮನಿಗೆ ಸಾಕುಸಾಕಾಗಿತ್ತು. ಅಂದು ರಾಮನಿಗೆ ಅನ್ಯಾಯವಾಗಿದೆ ಎಂದು ನಿರ್ಣಯಿಸಿದ ಪ್ರಜೆಗಳು ಇಂದು ಸೀತೆಯ ವಿರುದ್ಧದ ಅಪಪ್ರಚಾರದ ಬಲೆಗೆ ತಾವೂ ಬಿದ್ದು ಅದನ್ನು ಮತ್ತಷ್ಟು ಗಟ್ಟಿಗೊಳಿಸಿದರಲ್ಲ! ಅಂದು ರಾಮನೊಂದಿಗೆ ಕಾಡುಸೇರಲು ಹೆಜ್ಜೆಹಾಕಿದವರು ಇಂದು ಸೀತೆ ಅನ್ಯಾಯವಾಗಿ ಕಾಡಿಗೆ ಹೋಗುವುದಕ್ಕೆ ತಾವೇ ಕಾರಣರಾದರಲ್ಲ!

ಕಾಡಿಗೆ ತಾವೂ ಬರುತ್ತೇವೆ ಎಂದ ಅದೇ ಅಯೋಧ್ಯೆ ಪ್ರಜೆಗಳು ಸೀತೆಯನ್ನು ಕಾಡಿಗಟ್ಟಲು ಕಾರಣರಾಗಿ, ಕಾಡಿಗಟ್ಟಿದಾಗ ಬೇಡ ಎಂದು ಒತ್ತಾಯಿಸದೆ, ಸೀತೆಯಂಥ ಸೀತೆಯ ಹಿಂದೆ ಹೋಗದೆ ಅತೀವ ನಿರ್ಭಾವುಕರಾಗಿಬಿಟ್ಟರಲ್ಲ!

ಅಪಪ್ರಚಾರದ ಪರಿಣಾಮಶಕ್ತಿ ಅದು.

ಅಂದು ರಾಮಸೀತೆಯರ ವಿಷಯದಲ್ಲಿ ನಡೆದ ಅಪಪ್ರಚಾರ ಇದೀಗ ಅಯೋಧ್ಯೆ ವಿಷಯದಲ್ಲಿ ನಡೆಯಿತು. ಇಂದು ಮಾನವರೂಪೀ ರಾಕ್ಷಸರ ಜಾಗದಲ್ಲಿ ಸೆಕ್ಯುಲರ್ ಪಡೆ ನಿಂತಿದೆ, ಅಷ್ಟೇ.

ಸೆಕ್ಯುಲರ್ ಅಪಪ್ರಚಾರದಿಂದಾಗಿ ದಾರಿತಪ್ಪಿದವರು ಭಾರತೀಯ ಮುಸಲ್ಮಾನರೂ ಹೌದು, ಉಳಿದ ಕೆಲವು ಭಾರತೀಯರೂ ಹೌದು.

ಕ್ಷಮೆಕೇಳುವವರಿಲ್ಲ!

ಪರಕೀಯ ಬಾಬರ ಮತ್ತವನ ಮೀರಬಾಕಿ ಪಡೆ ಮಾಡಿದ್ದು, ಯಾವುದೇ ಜಾಗದಲ್ಲಿ ನಿಂತು ನೋಡಿದರೂ ಅವನದೇ ಜಾಗದಲ್ಲಿ ನಿಂತು ನೋಡಿದರೂ ತಪ್ಪೇ. ಯಾವುದೇ ದೇಶ, ಜನಾಂಗ ಕ್ಷಮಿಸಲಾರದ ತಪ್ಪದು.

ಇತಿಹಾಸವು ಶಕ್ತಿಯುಳ್ಳವನ ಕಡೆಗಿರುತ್ತದೆ. ವರ್ತಮಾನವನ್ನು ಮೌಲ್ಯದೆಡೆಗೊಯ್ಯುವುದು ನಮ್ಮೆಲ್ಲರ ಹೊಣೆಯಾಗಬೇಕಷ್ಟೆ.

ಪ್ರಪಂಚದ ಎಲ್ಲೆಡೆ ದೋಚಿ ಕ್ರೌರ್ಯಮೆರೆದು ಸಾಮ್ರಾಜ್ಯ ಸ್ಥಾಪನೆಗೈದು ಮತಾಂತರಮಾಡಿದ ಕಳಂಕದ ಕಪ್ಪುಕಲೆ ರಿಲಿಜನ್ ಮಂದಿಯ ಮೈಮೇಲಿದೆ. ಕ್ಷಮಿಸಲಾಗದ ಕಳಂಕವಿದು. ಇದಕ್ಕೆ ಎಲ್ಲೋ ಅಲ್ಲೊಂದು ಇಲ್ಲೊಂದು ಕ್ಷಮೆಕೇಳುವ ಶಕ್ತಿಹೀನ ನಾಟಕ ನಡೆದಿದೆ. ಜಗತ್ತು ನಾಗರಿಕತೆಯ ತುಟ್ಟತುದಿಯಲ್ಲಿದೆ ಎನ್ನಲಾಗುತ್ತಿದೆ. ಆದರೆ ತಮ್ಮ ಪೂರ್ವಜರೆಸೆದ ಕಳಂಕದ ಬಗ್ಗೆ ಕ್ಷಮೆಕೇಳಬೇಕೆಂದನಿಸಬಲ್ಲ ಸೂಕ್ಷ್ಮತೆ ಇನ್ನೂ ಯಾರಲ್ಲೂ ಹುಟ್ಟಿಕೊಂಡಂತೆ ಕಾಣುತ್ತಿಲ್ಲ. ಬಿಡಿ, ಕ್ಷಮೆಕೇಳಿದಾಕ್ಷಣ ಎಲ್ಲವೂ ಸರಿಹೋಗುವುದಿಲ್ಲ. ಆದರೆ ಮನಸ್ಸಿನ ಸಂವೇದನೆ ಒಂದು ಕನಿಷ್ಠ ಮಟ್ಟಕ್ಕಾದರೂ ಏರಬೇಕಲ್ಲವೇ! ಅದೂ ಸಾಧ್ಯವಾಗುತ್ತಿಲ್ಲ ಎಂಬುದಷ್ಟೇ ಇಲ್ಲಿ ದಕ್ಕುವ ನೋಟ.

ಈ ನೋಟವನ್ನು ಮತ್ತಷ್ಟು ನಿಖರವಾಗಿಸಿದ ಸಂದರ್ಭ ಅಯೋಧ್ಯೆಯದು.

ಬಾಬರ ಗೈದ ತಪ್ಪಿಗೆ ಯಾರು ಕೇಳಬೇಕು ಕ್ಷಮೆ? ಮಂಗೋಲ ಮೂಲದ, ತುರ್ಕಿ ಹಿನ್ನೆಲೆಯ ಆತನ ವಾರಸುದಾರರನ್ನು ಗುರುತಿಸುವುದು ಕಷ್ಟ. ಅಲ್ಲಿಯ ಯಾರೂ ಈಗ ತಮ್ಮನ್ನು ಆತನ ವಾರಸುದಾರರೆಂದು ಹೇಳಿಕೊಳ್ಳಲಾರರು. ಆದರೆ ಆತನ ಸಮರ್ಥಕರಾಗಿ ಇಲ್ಲಿಯ ಕೆಲವು ಮುಸಲ್ಮಾನರಿದ್ದಾರೆ. ವಾರಸುದಾರರೆಂದುಕೊಳ್ಳುವವರವರು. ಅಂಥವರು ಆತ ಗೈದ ತಪ್ಪನ್ನೇ ಸಮರ್ಥಿಸುವವರಾದುದರಿಂದ ಆತನ ವಾರಸುದಾರರು. ಅವರು ಸುತರಾಂ ಕ್ಷಮೆಕೇಳಲಾರರು. ಒಂದೊಮ್ಮೆ ಇಲ್ಲಿಯ ಮುಸಲ್ಮಾನರು ತಮ್ಮನ್ನು ಬಾಬರನಂಥ ಪರಕೀಯ ದಾಳಿಕೋರರ ವಾರಸುದಾರರಲ್ಲವೆಂದುಕೊಂಡರೆ ಆಗ ಕ್ಷಮೆಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಇದೊಂದು ವಿರೋಧಾಭಾಸ. ಇರಲಿ.

ನ್ಯಾಯದ ತೀರ್ಪು

ಅಯೋಧ್ಯೆ ರಾಮಜನ್ಮಭೂಮಿ ಹೋರಾಟ ಐನೂರು ವರ್ಷಗಳದು. ಈಗ ಒಂದು ನಿರ್ಣಾಯಕ ಘಟ್ಟವನ್ನು ತಲುಪಿದೆ. ಇದನ್ನು ಹೇಗೆ ಸ್ವೀಕರಿಸಬೇಕು ಎನ್ನುವಲ್ಲಿ ಹೆಜ್ಜೆ ತಪ್ಪಬಾರದಲ್ಲವೆ!

ನ್ಯಾಯಾಲಯದ ತೀರ್ಪೇ ಅಂತಿಮ, ಅದನ್ನು ಎಲ್ಲರೂ ಗೌರವಿಸಬೇಕು ಎನ್ನುತ್ತಿತ್ತು ಸೆಕ್ಯುಲರ್ ಪಡೆ.

ರಾಮಮಂದಿರದ ಸಮರ್ಥಕರು ನ್ಯಾಯಾಲಯದ ತೀರ್ಪನ್ನು ಮನ್ನಿಸಲಾರರು ಎಂಬ ಧ್ವನಿಯಲ್ಲಿ ಬಂದ ಹೇಳಿಕೆಯಿದು. ನ್ಯಾಯಪೀಠದಲ್ಲಿ ಕುಳಿತವರು ‘ತಮ್ಮವರು’ ಎಂಬ ಅಂಶವೂ ಅವರಲ್ಲಿ ಈ ವಿಶ್ವಾಸವನ್ನು ತುಂಬಿರಬಹುದು.

ನ್ಯಾಯಾಲಯದ ತೀರ್ಪು ಬಂದಾಗ ಯಾರು ಸ್ವಾಗತಿಸಿದರು, ಯಾರು ವಿಮರ್ಶೆಯ ಮಾತಾಡಿದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಎಲ್ಲ ಶೋಧ – ವಾದಗಳನ್ನು ಅವಲೋಕಿಸಿ ಬಂದ ತೀರ್ಪಿದು. ಬಹುದೀರ್ಘಕಾಲದ ವಿಚಾರಣೆಯ ನಂತರ ಹೊರಬಂದ ತೀರ್ಪಿದು. ಓರ್ವ ಮುಸ್ಲಿಂ ನ್ಯಾಯಾಧೀಶರೂ ಸೇರಿದಂತೆ ಐವರು ನ್ಯಾಯಾಧೀಶರ ಪೀಠವು (ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್, ಎಸ್‌. ಎ. ಬೋಬ್ಡೆ, ಡಿ. ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್) ಏಕಕಂಠದಿಂದ ನೀಡಿದ ತೀರ್ಪಿದು. ನ್ಯಾಯಪೀಠವನ್ನು ಮತೀಯ ನೆಲೆಯಲ್ಲಿ ನೋಡಕೂಡದು. ಆದರೆ ಆ ನೆಲೆಯಲ್ಲಿ ನೋಡುವವರೂ ಇದ್ದಾರಷ್ಟೆ. ಅಂಥ ಪಾರ್ಶ್ವನೋಟಕರ ಗಮನಕ್ಕಾಗಿ ಈ ಮಾತು.

ಉತ್ಖನನದ ಆಧಾರದಲ್ಲಿ ಅಲ್ಲೊಂದು ಹಿಂದೂಮಂದಿರವಿತ್ತೆಂದು ಹೇಳಿದ ಪುರಾತತ್ತ್ವ ಅಧಿಕಾರಿ ಓರ್ವ ಮುಸ್ಲಿಮರೇ ಆಗಿದ್ದರು. ಇದಕ್ಕೇನು ಅಚ್ಚರಿಪಡಬೇಕಿಲ್ಲ. ಶೋಧಪ್ರಕ್ರಿಯೆಯು ನಿಷ್ಪಾಕ್ಷಿಕವಾಗಿ ನಡೆದಿತ್ತೆಂಬುದನ್ನಷ್ಟೆ ಇಲ್ಲಿ ಗ್ರಹಿಸಬೇಕಾದುದು.

ಮುಸಲ್ಮಾನರೂ ಸೇರಿದಂತೆ (ಹೀಗೆ ಹೇಳಬೇಕಾದ ಸಂದರ್ಭವೇ ಬರಬಾರದಿತ್ತು) ಎಲ್ಲಾ ಭಾರತೀಯರೂ ಈ ತೀರ್ಪನ್ನು ಸಂಭ್ರಮಿಸಬೇಕಿತ್ತು. ಹಾಗಾಗದೇ ಹೋದುದು ವಿಷಾದದ ಸಂಗತಿ. ಇದೀಗ ಕೆಲವು ಮುಸ್ಲಿಂ ಮುಖ್ಯರು ‘ಮುಂದೆ ತಮ್ಮ ಕೈಮೇಲಾದಾಗ ರಾಮಮಂದಿರವನ್ನು ಧ್ವಂಸಗೊಳಿಸಿಯೇ ಸಿದ್ಧ’ ಎಂದು ಹೇಳಿಕೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಈ ಹೇಳಿಕೆಗಳು ಭಾರೀ ಸದ್ದುಮಾಡುತ್ತಿವೆ. ಯಾರೂ ಈವರೆಗೆ ಇದನ್ನು ಪ್ರಶ್ನಿಸಿಲ್ಲ. ಪ್ರಶ್ನಿಸಬೇಡವೇ? ಯಾರು ಪ್ರಶ್ನಿಸಬೇಕು? ಪರಕೀಯ ದಾಳಿಕೋರರ ಅಸಹಿಷ್ಣು ವಾರಸಿಕೆಯನ್ನು ಯಾವುದೇ ವಿಮರ್ಶೆಯಿಲ್ಲದೆ, ಅಂತಃಸಾಕ್ಷಿಯನ್ನು ಹತ್ಯೆಗೈದು ಮುಂದುವರೆಸುತ್ತಿದ್ದಾರಲ್ಲ! ಇವರಿಗೆ ನೆಮ್ಮದಿ ಇದೆಯೇ? ಇವರಿಂದ ನಾಡಿಗೆ ನೆಮ್ಮದಿ ಇದೆಯೇ?

ರಾಷ್ಟ್ರಪುರುಷ

ಇಂಡೋನೇಷ್ಯಾ ಮತ್ತಿತರ ಹೊರದೇಶಗಳ ಮುಸ್ಲಿಮರಿಗೆ ರಾಮ ಆದರ್ಶ ದೈವೀಪುರುಷ. ಇಲ್ಲಿಯ ಮುಸ್ಲಿಮರಿಗೆ ಅಲ್ಲವೇನು?

ರಾಮ ಕೇವಲ ಹಿಂದೂಗಳಿಗಷ್ಟೆ ಅಲ್ಲ, ಇಡಿಯ ಜಗತ್ತಿಗೆ ದೇವರು ಎಂದು ಈಚೆಗೆ ಫಾರೂಕ್ ಅಬ್ದುಲ್ಲಾ ಒಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹೇಳಿಕೆಯಲ್ಲಿ ಅಚ್ಚರಿಯಿಲ್ಲ, ಅವರು ನೀಡಿದ್ದರಿಂದ ಅಚ್ಚರಿ! ಈವರೆಗೆ ಅವರು ಹೊಂದಿದ್ದ ನಿಲುವು ಇದಕ್ಕೆ ವಿರುದ್ಧವಾಗಿತ್ತು ಎನ್ನುವುದಕ್ಕಾಗಿ ಅಚ್ಚರಿ. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದವರವರು. ಕಾಶ್ಮೀರೀ ಪಂಡಿತರ ರಕ್ತ ಅವರ ದೇಹದಲ್ಲೂ ಹರಿಯುತ್ತಿದೆ ಬಿಡಿ. ಬದಲಾಗಬೇಕಾದಂತೆ ಬದಲಾಗಿದ್ದಾರೆ.

ಇಲ್ಲಿಯ ಎಲ್ಲರೂ – ಮುಸ್ಲಿಮರೂ ಕ್ರೈಸ್ತರೂ ಸೆಕ್ಯುಲರಿಸ್ಟರೂ – ಹೀಗೇ ಬದಲಾಗಬೇಕಲ್ಲವೆ?

ನಿಜ ರಾಷ್ಟ್ರೀಯರಾಗಬೇಕಲ್ಲವೆ?

ನಾಸ್ತಿಕರಾಗಿದ್ದ ರಾಮಮನೋಹರ ಲೋಹಿಯಾರ ಮಾತನ್ನು ಮತ್ತೆ ನೆನಪಿಸಿಕೊಂಡು ಸಮಾಪನಗೈಯುವುದಾದರೆ; ರಾಮ, ಕೃಷ್ಣ ಮತ್ತು ಶಿವ – ಈ ಮೂರು ವ್ಯಕ್ತಿತ್ವಗಳಿಂದ ಭಾರತದ ಸಾಂಸ್ಕೃತಿಕ ಆದರ್ಶವು ಸಂಪನ್ನಗೊಂಡಿದೆ. ಈ ಮೂವರನ್ನು ಬಿಟ್ಟು ಭಾರತವನ್ನು ನೋಡಲಾಗದು, ಇವರನ್ನು ಆವಾಹಿಸಿಕೊಳ್ಳದೆ ಭಾರತೀಯರೆನಿಸಿಕೊಳ್ಳಲಾಗದು.

ರಾಮ; ಕೆಲವರಿಗೆ ದೈವೀಪುರುಷ, ಕೆಲವರಿಗೆ ಆದರ್ಶಪುರುಷ, ಕೆಲವರಿಗೆ ಮಹಾಪುರುಷ.. ವಿಶ್ವದೆಲ್ಲೆಡೆಯ ಜನ ಅವನನ್ನು ಹೀಗೆ ಹಲವು ರೀತಿಯಲ್ಲಿ ನೋಡಬಲ್ಲರು. ಇಲ್ಲಿಯೂ ಇದೇ ವಿಭಿನ್ನ ರೀತಿಯ ನೋಟವಿದ್ದೀತು. ಅದರ ಜತೆಗೆ ಆತ ಭಾರತೀಯರೆಲ್ಲರಿಗೂ ಓರ್ವ ರಾಷ್ಟ್ರಪುರುಷನೂ ಹೌದು.

ಈ ಹಿನ್ನೆಲೆಯಲ್ಲಿ ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯ ಮೂಲಕ ಉದ್ಘಾಟನೆಯಾಗುತ್ತಿರುವ ರಾಮಮಂದಿರವು ಎಲ್ಲರಿಂದಲೂ ಶ್ರದ್ಧೆಯಿಂದ ಸ್ವಾಗತಿಸಲ್ಪಡಬೇಕಾದ ರಾಷ್ಟ್ರಮಂದಿರವೇ ಆಗಿದೆ.

("ವಿಕ್ರಮ" ವಾರಪತ್ರಿಕೆಗೆ ಬರೆದ ಲೇಖನ)

Leave a Reply

Your email address will not be published.

This site uses Akismet to reduce spam. Learn how your comment data is processed.