ಪಂಡಿತ್ ಭೀಮಸೇನ ಜೋಶಿ ಅವರು ಹಿಂದೂಸ್ತಾನಿ ಸಂಗೀತಾಸಕ್ತರ ಹೃದಯ ಸಾಮ್ರಾಟ್ ಆಗಿ ವಿರಾಜಮಾನರಾದವರು. ಹಿಂದೂಸ್ತಾನಿ ಸಂಗೀತ ಹಾಗೂ ಘರಾನಾಗಳ ಮೂಲಕ ಶ್ರೋತೃಗಳ ಮೋಡಿ ಮಾಡಿದ ನಾದಲೋಲ ಪಂಡಿತ್ ಭೀಮಸೇನ ಜೋಶಿ ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅವರ ಜೀವನ ಮತ್ತು ಸಂಗೀತವು ಸದಾ ಪ್ರೇರಣೀಯ. ಇಂದು ಅವರ ಪುಣ್ಯಸ್ಮರಣೆ.


ಪರಿಚಯ
ಪಂಡಿತ ಭೀಮಸೇನ ಜೋಶಿ ಅವರು ಫೆಬ್ರವರಿ 4, 1922 ರಂದು ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಹೊಂಬಳ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಗುರುರಾಜ ಜೋಶಿ ಸಂಸ್ಕೃತದಲ್ಲಿ ಪಂಡಿತರು.
ಗದಗಿನ ಮುನಿಸಿಪಲ್ ಶಾಲೆಯಲ್ಲಿ ಶಿಕ್ಷಕರಾಗಿ, ಬಾಗಲಕೋಟೆಯ ಬಸವೇಶ್ವರ ಹೈಸ್ಕೂಲ್ನಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.


ಜೋಶಿಯವರು ಬಾಲ್ಯದಿಂದಲೂ ಸಂಗೀತದಲ್ಲಿ ಅಸಾಧಾರಣ ಆಸಕ್ತಿಯನ್ನು ಹೊಂದಿದ್ದರು. ಅವರು ವೃತ್ತಿಪರವಾಗಿ ಹಾಡುವುದನ್ನು ಮುಂದುವರಿಸಲು ಬಯಸಿದ್ದರು. ಆದರೆ ಅವರ ತಂದೆ ತನ್ನ ಮಗ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು ಬಯಸಿದ್ದರು. 1933 ರಲ್ಲಿ, 11 ನೇ ವಯಸ್ಸಿನಲ್ಲಿ, ಜೋಶಿಯವರು ಸಂಗೀತ ಕಲಿಯಲು ಗುರುವಿನ ಅನ್ವೇಷಣೆಯಲ್ಲಿ ಮನೆಯಿಂದ ಹೊರಬಂದರು.
ಸಂಗೀತದ ಬಗ್ಗೆ ಅತೀವ ಒಲವು ಹೊಂದಿದ್ದ ಜೋಶಿ ಅವರು ಮುಂಬೈಗೆ ಹೋದರು. ಅಲ್ಲಿ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಪಂಡಿತ್ ಭೀಮಸೇನ ಜೋಶಿ ಅವರು ಗ್ವಾಲಿಯರ್ ನಲ್ಲಿ ವಿನಾಯಕ್ ರಾವ್ ಪಟವರ್ಧನ್ ಇವರ ನಿರ್ದೇಶನದಂತೆ ಸವಾಯಿ ಗಂಧರ್ವರಲ್ಲಿ ಸಂಗೀತ ಸಾಧನೆ ಮಾಡಿದರು. ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ ಕಿರಾಣಾ ಘರಾನಾದಲ್ಲಿ ಪರಿಣತರಾದರು.


ಸಂಗೀತದಲ್ಲಿ ಅವರ ಕೊಡುಗೆ
ಸಂಗೀತದಲ್ಲಿ ‘ಕಲಾಶ್ರೀ’ ರಾಗ ರಚಿಸಿದ ಅವರು ಮರಾಠಿ ಅಭಂಗ, ನಾಟ್ಯ ಸಂಗೀತ, ಹಿಂದಿ ಭಜನ್, ಕನ್ನಡದಲ್ಲಿ ದೇವರನಾಮಗಳನ್ನು ಹಾಡಿದ್ದಷ್ಟೇ ಅಲ್ಲದೇ, ಹಲವು ಚಲನಚಿತ್ರಗಳಿಗೂ ತಮ್ಮ ಕಂಠದಾನ ಮಾಡಿದ್ದಾರೆ. ಭೀಮಸೇನರ ಸಂತವಾಣಿ ಭಾರೀ ಜನಪ್ರಿಯವಾಗಿದ್ದ ಕಾರ್ಯಕ್ರಮ. ಕನ್ನಡದಲ್ಲಿ ಬಿಡುಗಡೆಯಾದ ಭೀಮಸೇನ ಜೋಶಿಯವರ ಪ್ರಮುಖ ಆಲ್ಬಮ್ಗಳು ದಾಸವಾಣಿ, ಹಿಂದಿ ಭಜನೆಗಳು, ಮರಾಠಿ ಅಭಂಗ ಮತ್ತು ಹಲವು ನಾಟ್ಯಗೀತೆಗಳು ಹಾಡುಗಳ ಮೂಲಕವೇ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅವರು ಹಾಡಿನ ಮೂಲಕ ಸಂಗ್ರಹವಾದ ಹಣವನ್ನು ನಗರದ ವಿವಿಧ ಶಾಲೆಗಳ ಕೊಠಡಿ ನಿರ್ಮಾಣ ಕಾರ್ಯಗಳಿಗೆ ದೇಣಿಗೆ ನೀಡಿದ್ದರು.


ಪ್ರಶಸ್ತಿ
ಭೀಮಸೇನ ಜೋಶಿ ಅವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ, ಕರ್ನಾಟಕ ರತ್ನ ಪಶಸ್ತಿಗಳಿಗೆ ಭಾಜನರಾಗಿದ್ದಾರೆ. ಖ್ಯಾತ ಹಿಂದೂಸ್ತಾನಿ ಸಂಗೀತ ದಿಗ್ಗಜ ಪಂ.ಭೀಮಸೇನ ಜೋಷಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ.
ಪಂಡಿತ್ ಭೀಮಸೇನ ಜೋಶಿ ಅವರು ತಮ್ಮ 89ನೇ ವಯಸ್ಸಿನಲ್ಲಿ ಜನವರಿ 24, 2011 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.