ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಕೈಗೊಳ್ಳಲಾದ ನಿರ್ಣಯ
ಕಲಿಯುಗಾಬ್ದ 5125 ಪುಷ್ಯ ಶುಕ್ಲ ದ್ವಾದಶಿಯ ದಿನದಂದು ಶ್ರೀ ರಾಮಜನ್ಮಭೂಮಿಯಲ್ಲಿ ಜರುಗಿದ ಭವ್ಯ ಹಾಗೂ ದಿವ್ಯ ರಾಮಲಲಾ ವಿಗ್ರಹದ ಪ್ರಾಣಪ್ರತಿಷ್ಠಾ ಸಮಾರಂಭವು ಪ್ರಪಂಚದ ಇತಿಹಾಸದ ಸುವರ್ಣ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವಂತಹ ದಿನಗಳಲ್ಲಿ ಒಂದು. ಹಿಂದೂ ಸಮಾಜದ ನೂರಾರು ವರ್ಷಗಳ ಅವಿರತ ಹೋರಾಟ ಮತ್ತು ತ್ಯಾಗ, ಪೂಜ್ಯ ಸಾಧು ಸಂತರ ಮಾರ್ಗದರ್ಶನದಲ್ಲಿ ರಾಷ್ಟ್ರವ್ಯಾಪಿ ನಡೆದ ಚಳುವಳಿಗಳು ಮತ್ತು ಸಮಾಜದ ವಿವಿಧ ವರ್ಗಗಳ ಸಾಮೂಹಿಕ ಸಂಕಲ್ಪದ ಪರಿಣಾಮವಾಗಿ ಪ್ರತಿರೋಧದ ಅವಧಿಯಲ್ಲಿ ಸುದೀರ್ಘ ಅಧ್ಯಾಯಕ್ಕೆ ಒಂದು ಆನಂದದಾಯಕ ನಿರ್ಣಯವನ್ನು ಸಾಧಿಸಿದಂತಾಗಿದೆ. ನಮ್ಮೆಲ್ಲರ ಜೀವನದಲ್ಲಿ ಈ ಅಮೂಲ್ಯ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುವ ಘಳಿಗೆಯನ್ನು ಒದಗಿಸಿಕೊಟ್ಟಂತಹ ಸಂಶೋಧಕರು, ಪುರಾತತ್ವಜ್ಞರು, ಚಿಂತಕರು, ವಕೀಲ ಶಿರೋಮಣಿಗಳು, ಮಾಧ್ಯಮದವರು, ಹುತಾತ್ಮರಾದ ಕರಸೇವಕರನ್ನೂ ಒಳಗೊಂಡಂತೆ ಸಮಗ್ರ ಹಿಂದೂ ಸಮಾಜ, ಸರ್ಕಾರ ಹಾಗೂ ಆಡಳಿತ ವರ್ಗ, ಇವರೆಲ್ಲರ ಪಾತ್ರವೂ ಶ್ಲಾಘನೀಯ. ಅಖಿಲ ಭಾರತೀಯ ಪ್ರತಿನಿಧಿ ಸಭಾ ಈ ಆಂದೋಲನದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹುತಾತ್ಮರಾದ ಎಲ್ಲಾ ಜೀವಗಳಿಗೆ ಶ್ರದ್ಧಾಂಜಲಿಯನ್ನು ಮತ್ತು ಮೇಲೆ ತಿಳಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತದೆ.
ಇಡೀ ಸಮಾಜ ರಾಮಮಂದಿರದ ಪವಿತ್ರ ಮಂತ್ರಾಕ್ಷತೆಯನ್ನು ಎಲ್ಲರಿಗೂ ತಲುಪಿಸುವ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ. ಲಕ್ಷಾಂತರ ರಾಮಭಕ್ತರು ಹಳ್ಳಿ ಪಟ್ಟಣಗಳಲ್ಲಿರುವ ಕೋಟ್ಯಂತರ ಕುಟುಂಬಗಳನ್ನು ಸಂಪರ್ಕಿಸಿದ್ದಾರೆ. ಜನವರಿ 22ರಂದು ಭಾರತ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮೆರವಣಿಗೆ, ದೀಪೋತ್ಸವ, ಮನೆ ಮನೆಯಲ್ಲೂ ಭಗವಾಧ್ವಜ, ದೇವಾಲಯಗಳಲ್ಲಿ ಭಜನಾ ಕಾರ್ಯಕ್ರಮಗಳಂತಹ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸಮಾಜದಲ್ಲಿ ಒಂದು ಹೊಸ ಚೈತನ್ಯವನ್ನು ತುಂಬಿದೆ.
ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆಯ ದಿನದಂದು ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಜೀವನದ ಎಲ್ಲಾ ಶ್ರೇಣಿಗಳ ಹಾಗೂ ಎಲ್ಲಾ ನಂಬಿಕೆ, ಸಂಪ್ರದಾಯ, ಪಂಥಗಳಿಗೆ ಸೇರಿದ ಸಂತರ ಉಪಸ್ಥಿತಿಯನ್ನು ಕಾಣಬಹುದಾಗಿತ್ತು. ಇದರಿಂದಾಗಿ ಶ್ರೀರಾಮನ ಜೀವನಾಧಾರಿತ ಸಾಮರಸ್ಯಭರಿತ ಹಾಗೂ ಶಿಸ್ತುಬದ್ಧ ರಾಷ್ಟ್ರೀಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬಹುದಾದ ವಾತಾವರಣವು ಸೃಷ್ಟಿಯಾಗಿತ್ತು. ಇದು ಭಾರತದ ರಾಷ್ಟ್ರೀಯ ಪುನರುಜ್ಜೀವನದ ಒಂದು ಮಹಾಧ್ಯಾಯದ ಶುಭಾರಂಭದ ಸಂಕೇತವಾಗಿದೆ. ಶ್ರೀರಾಮಜನ್ಮಭೂಮಿಯಲ್ಲಿ ರಾಮಲಲಾ ಪ್ರಾಣಪ್ರತಿಷ್ಠಾಪನೆಯೊಂದಿಗೆ ಪಾಶ್ಚಾತ್ಯರ ಆಡಳಿತಾವಧಿ ಮತ್ತು ಸಂಘರ್ಷದಲ್ಲಿ ಹುಟ್ಟಿಕೊಂಡಿದ್ದಂತಹ ಆತ್ಮವಿಶ್ವಾಸದ ಕೊರತೆ ಮತ್ತು ಸ್ವ-ತ್ವದ ಮರೆವಿನಿಂದ ಸಮಾಜ ಹೊರಬರುತ್ತಿದೆ. ಹಿಂದುತ್ವದ ಚೈತನ್ಯದಲ್ಲಿ ಮುಳುಗಿರುವ ಇಡೀ ಸಮಾಜವು ಅದರ ‘ಸ್ವ’ವನ್ನು (ಸ್ವ-ತ್ವ) ಗುರುತಿಸಲು ತಯಾರಿ ನಡೆಸುತ್ತಿದೆ ಮತ್ತು ಅದರಂತೆ ಬದುಕಲು ಸಿದ್ಧವಾಗುತ್ತಿದೆ.
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜೀವನ ಸಮಾಜ ಹಾಗೂ ರಾಷ್ಟ್ರಕ್ಕಾಗಿ ತ್ಯಾಗ ಮಾಡುವುದಕ್ಕೆ ಮತ್ತು ಸಾಮಾಜಿಕ ಬಾಧ್ಯತೆಗಳಿಗೆ ಬದ್ಧವಾಗಿರುವುದಕ್ಕೆ ಪ್ರೇರಣೆ. ಅವನ ಆಡಳಿತಾವಧಿಯು ಇತಿಹಾಸದಲ್ಲಿ ‘ರಾಮರಾಜ್ಯ’ವೆಂದೇ ಹೆಸರುವಾಸಿಯಾಗಿ ಸಾರ್ವತ್ರಿಕ ಹಾಗೂ ಅಲೌಕಿಕ ಆದರ್ಶಗಳನ್ನು ತೋರಿಸಿಕೊಟ್ಟಿದೆ. ಇಂದು ಪ್ರಪಂಚದಲ್ಲಿ ಕ್ಷೀಣಿಸುತ್ತಿರುವ ಜೀವನ ಮೌಲ್ಯಗಳು, ಪತನವಾಗುತ್ತಿರುವ ಮಾನವೀಯ ಸೂಕ್ಷ್ಮತೆ, ಹೆಚ್ಚುತ್ತಿರುವ ವಿಸ್ತರಣಾವಾದಿ ಹಿಂಸಾಚಾರ, ಕ್ರೌರ್ಯ ಮುಂತಾದ ಸವಾಲುಗಳನ್ನು ಎದುರಿಸಲು ಇಂದಿಗೂ ‘ರಾಮರಾಜ್ಯ’ ಪರಿಕಲ್ಪನೆಯು ಅನುಕರಣಗೆ ಯೋಗ್ಯವಾಗಿದೆ.
ಶ್ರೀರಾಮಮಂದಿರ ನಿರ್ಮಾಣವು ಅರ್ಥಪೂರ್ಣವಾಗಬೇಕಾದಲ್ಲಿ ಇಡೀ ಸಮಾಜವು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶಗಳನ್ನು ಪಾಲಿಸುವ ಪ್ರತಿಜ್ಞೆಯನ್ನು ಮಾಡಬೇಕೆಂದು ಅಖಿಲ ಭಾರತೀಯ ಪ್ರತಿನಿಧಿ ಸಭಾ ಅಭಿಪ್ರಾಯ ಪಡುತ್ತದೆ. ಶ್ರೀರಾಮನ ಜೀವನದಲ್ಲಿ ಕಂಡುಬರುವಂತಹ ತ್ಯಾಗ, ವಾತ್ಸಲ್ಯ, ನ್ಯಾಯ, ಕ್ಷಾತ್ರತ್ವ, ದಯೆ, ಸಮಾನತೆಯಂತಹ ಧರ್ಮದ ಅಲೌಕಿಕ ಮೌಲ್ಯಗಳನ್ನು ಸಮಾಜದಲ್ಲಿ ಉತ್ತೇಜಿಸುವುದು ಅತ್ಯಗತ್ಯ. ಎಲ್ಲಾ ರೀತಿಯ ಪರಸ್ಪರ ಕಲಹ ಮತ್ತು ತಾರತಮ್ಯಗಳನ್ನು ಹೋಗಲಾಡಿಸಿ ಸಾಮರಸ್ಯದ ಆಧಾರದ ಮೇಲೆ ಪುರುಷಾರ್ಥಿ ಸಮಾಜವನ್ನು ನಿರ್ಮಿಸುವುದು ಶ್ರೀರಾಮನ ನಿಜವಾದ ಆರಾಧನೆಯಾಗಿದೆ.
ಭ್ರಾತೃತ್ವ, ಕರ್ತವ್ಯ ಪ್ರಜ್ಞೆ, ಮೌಲ್ಯಾಧಾರಿತ ಜೀವನ ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಸಮರ್ಥ ಭಾರತವನ್ನು ನಿರ್ಮಿಸಲು ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಎಲ್ಲಾ ಭಾರತೀಯರಿಗೆ ಕರೆ ನೀಡುತ್ತದೆ. ಇದರ ಆಧಾರದ ಮೇಲೆ, ವಿಶ್ವದ ಕಲ್ಯಾಣವನ್ನು ಖಚಿತಪಡಿಸುವ ಜಾಗತಿಕ ಕ್ರಮವನ್ನು ಬೆಳೆಸುವಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸುತ್ತದೆ.