ದೀಪ್ತಿ ಅಡ್ಡಂತ್ತಡ್ಕ,ಪತ್ರಿಕೋದ್ಯಮ ವಿದ್ಯಾರ್ಥಿನಿ, ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು

ಕನ್ನಡದ ನವೋದಯ ಸಾಹಿತ್ಯದ ಹಿರಿಯ ಕವಿಗಳ ಸಾಲಿನಲ್ಲಿ ಗುರುತಿಸಬಹುದಾದ ಕನ್ನಡದ ಖ್ಯಾತ ವಿದ್ವಾಂಸ ಸಾಹಿತಿ, ನಾಟಕಕಾರ ಜಿಜ್ಞಾಸೆಯ ಕವಿ ಪುತಿನ ಎಂದೇ ಪ್ರಖ್ಯಾತಿ ಪಡೆದವರು ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರರು. ಇಂದು ಅವರ ಜಯಂತಿ.

1905 ಮಾರ್ಚ್ 17ರಂದು ಮೇಲುಕೋಟೆಯಲ್ಲಿ ಜನಿಸಿದರು. ತಮ್ಮ ತಂದೆ ತಿರುನಾರಾಯಣ ಅಯ್ಯಂಗಾರರ ಊರಾದ ಮೇಲುಕೋಟೆ ಹಾಗೂ ತಾಯಿ ಶಾಂತಮ್ಮರ ಊರಾದ ಗೊರೂರುನಲ್ಲಿ ಬೆಳೆದು, ಓದಿಗಾಗಿ ಮೈಸೂರು, ನಂತರ ವೃತ್ತಿ ಜೀವನಕ್ಕಾಗಿ ಬೆಂಗಳೂರಿನ ಮಲ್ಲೇಶ್ವರಕ್ಕೆ ಬಂದರು.  ನಾನಾ ಕಡೆಗಳಲ್ಲಿ ಸಂಚರಿಸಿ ಬೆಳೆದ‌ ಇವರು ಪ್ರಕೃತಿ, ಪ್ರಕೃತಿಯಲ್ಲಿ ದೈವತ್ವ, ಆಧ್ಯಾತ್ಮಿಕ ಪರಿಸರ, ಗುಡ್ಡ ಕಾಡು ಬೆಟ್ಟಗಳಿಂದ ಪ್ರೇರಣೆಗೊಂಡು ಸಾಹಿತ್ಯ ಕ್ಷೇತ್ರದತ್ತ ಆಸಕ್ತಿ ವಹಿಸಿದರು.

ತಂದೆಯವರು ವೃತ್ತಿಯಲ್ಲಿ ವೈದಿಕರಾದರೂ ಜೀವನ ಸಾಗಿಸುವುದು ಸ್ವಲ್ಪ ಕಷ್ಟಕರವಾಗಿದ್ದರಿಂದ ಪು.ತಿ.ನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದರು. ಇವರ ಮಾತೃಭಾಷೆ ತಮಿಳು. ಮೈಸೂರಿನಲ್ಲಿ ಆಂಗ್ಲ ಭಾಷೆ ಮತ್ತು ಕನ್ನಡದಲ್ಲಿ ಪ್ರಾವೀಣ್ಯತೆ ಪಡೆದು ನಂತರ ಹಿರಿಯಣ್ಣ ಹಾಗೂ ಮಿತ್ರರಾದ ಶಿವರಾಮ ಶಾಸ್ತ್ರಿ, ತೀನಂಶ್ರೀಕಂಠಯ್ಯನವರ ಪರಿಚಯವಾಯಿತು. ಬೆಂಗಳೂರಿನಲ್ಲಿ ಸೇನಾ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಇವರು ಕೃತಿ ರಚನೆಯಲ್ಲಿ ತೊಡಗಿಕೊಂಡರು.


ಸರಳ ಸಜ್ಜನ ಆತ್ಮೀಯ ಸ್ವಭಾವ ಹೊಂದಿದ್ದ ಪುತಿನ ಗದ್ಯ ಬರಹಗಾರರಾಗಿದ್ದರು. ಅವರು ಶಾಸ್ತ್ರೀಯ ಸಂಗೀತದಲ್ಲೂ ಪರಿಣಿತರಾಗಿದ್ದರು. ಸಾಹಿತ್ಯ ಮತ್ತು ಸಂಗೀತದಲ್ಲಿ ಸಮಾನ ಪ್ರತಿಭೆಯುಳ್ಳ ವಾಗ್ಗೇಯಕಾರರೂ ಆಗಿದ್ದರು. ಸಂಗೀತಕ್ಕೆ ಹಲವು ಹೊಸ ರಾಗಗಳನ್ನು ಕಂಡುಹಿಡಿಯುವುದರ ಮೂಲಕ ಕೊಡುಗೆ ಸಲ್ಲಿಸಿದವರು.

ಕವಿ ಒಮ್ಮೆ ಆಕಾಶವಾಣಿಯ ಸಂದರ್ಶನವೊಂದರಲ್ಲಿ ಹೀಗನ್ನುತ್ತಾರೆ, “ನನಗೆ ಓಲಗ ಅಂದರೆ ತುಂಬಾ ಇಷ್ಟ. ಅದು ಬಿಟ್ಟರೆ ವೀಣೆ. ಎರಡೇ ಇಷ್ಟವಾದದ್ದು. ವೀಣೆ ಏತಕ್ಕೆ ಇಷ್ಟ ಅಂತಾ ಹೇಳಿದ್ರೆ ನಮ್ಮ ದೇವಸ್ಥಾನದ ಆವರಣದಲ್ಲಿ ಅವರು ಸಣ್ಣದಾಗಿ ನುಡಿಸಿದರೂ ಕೂಡ ಆ ಸುಶ್ರಾವ್ಯವಾದ ನಾದ ಕೇಳಿದ್ರೆ ಮನಸ್ಸಿಗೆ ತುಂಬಾ ಅಪ್ಯಾಯಮಾನವಾಗಿರ್ತಿತ್ತು. ಬೇರೆ ಒಂದು ಲೋಕವನ್ನೇ ಸೃಷ್ಟಿಸುವಂತಾಗುತ್ತಿತ್ತು. ಆ ಸ್ತೋತ್ರ ಪಾಠಗಳನ್ನು ರಾಗವಾಗಿ ಹೇಳ್ತಾ ಇದ್ರಲ್ಲ ಇದು ಮತ್ತು ಜಾತ್ರೆ ಉತ್ಸವದ ಸಮಯದಲ್ಲಿ ಬರುತ್ತಿದ್ದಂತಹ ವಿದ್ವಾಂಸರು ಮೈಸೂರು ಕಡೆಯಿಂದ ವಾಸುದೇವಾಚಾರ್ಯರು, ಬಿಡಾರಂ ಕೃಷ್ಣಪ್ಪನವರು, ವೀಣೆ ಶೇಷಣ್ಣನವರು ಇವರೆಲ್ಲ ನಮ್ಮ ಮನೆಯ ಎದುರು ಮನೆಯಲ್ಲೇ ಬಿಡಾರ ಮಾಡ್ತಾ ಇದ್ರು. ಇವೆಲ್ಲವೂ ನನ್ನ ಮನಸ್ಸಿನಲ್ಲಿ ಬೇರೂರಿದೆ. ಇದೇ ನನಗೆ ಬರೆಯಲು ಸ್ಫೂರ್ತಿ ಅಂದರು.


ಸೌಮ್ಯ ವ್ಯಕ್ತಿತ್ವದ ಕವಿಗೆ ಅರ್ಹವಾಗಿಯೇ ಹಲವಾರು ಪ್ರಶಸ್ತಿಗಳು ಸಂದಿವೆ. 1966 ರಲ್ಲಿ ‘ಹಂಸ ದಮಯಂತಿ ಮತ್ತು ಇತರ ರೂಪಕಗಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯದ ಡಿ ಲಿಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹೀಗೆ ಇನ್ನಿತರೆ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1981 ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ 53ನೇ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.


ಹಂಸದಮಯಂತಿ, ಹಣತೆ, ಗೋಕುಲ ನಿರ್ಗಮನ, ವಿಕಟ ಕವಿ ವಿಜಯ, ಶಾರದ ಯಾಮಿನಿ,ಗಣೇಶ ದರ್ಶನ, ಹೃದಯ, ಶಬರಿ, ಹರಿನಾಭಿಸರಣ, ಕುಚೇಲ ಕೃಷ್ಣ, ರಥಸಪ್ತಮಿ, ಹಳೆಯ ಬೇರು ಹೊಸ ಚಿಗುರು, ಮಲೆ ದೇಗುಲ, ರಸ ಸರಸ್ವತಿ ಇವು ಪ್ರಸಿದ್ಧ ನಾಟಕಗಳಾದರೆ, ರಾಮಾಚಾರಿಯ ನೆನಪು, ಮಸಾಲೆ ದೋಸೆ, ದೇನುಕೋಪಾಖ್ಯಾನ ಇವು ಪ್ರಸಿದ್ಧ ಪ್ರಬಂಧಗಳಾಗಿವೆ. 

ಅವರು ದೇಗುಲಗಳು ಎಂಬ ಪರಿಕಲ್ಪನೆಯ ಮೇಲೆ ಬರೆದ ಸುಮಾರು 52 ಕವಿತೆಗಳು ಸಂಕಲನಗೊಂಡಿವೆ. ಈ ಎಲ್ಲ ಪದ್ಯಗಳಲ್ಲಿ ದೇಗುಲ ಎಂಬುದೊಂದೇ ಚಿಂತನೆ ಹರಿದಾಡಿದೆ. ಮನುಷ್ಯನ ನೆಲೆಯಲ್ಲಿ ಏರಿಳಿತಗಳು ಸಹಜ. ಅವುಗಳ ನಿಯಂತ್ರಣಕ್ಕೆ  ಒಂದೇ ಉಪಾಯವೆಂದರೆ ದೇಗುಲಗಳು. ಕವಿಯು ಮೊದಲೇ ಹೇಳಿರುವಂತೆ ಇಲ್ಲಿಯ ಎಲ್ಲ ಕವನಗಳಿಗೂ ಒಂದೇ ಶೀರ್ಷಿಕೆ ಮಲೆ ದೇಗುಲ. ಏಕೆಂದರೆ ಭಾವ ಒಂದೇ ಇರುವ ಹಲವು ಕವಿತೆಗಳು ಇಲ್ಲಿ ಕಾಣಸಿಗುತ್ತವೆ.


ಕಾರಂತರಿಂದ ಇವರ ಗೋಕುಲ ನಿರ್ಗಮನ, ಅಹಲ್ಯೆ ಎಂಬ ನಾಟಕಗಳು ರಂಗ ಪ್ರದರ್ಶನಗೊಂಡಿರುತ್ತದೆ. ಮಾತ್ರವಲ್ಲ ಎಲ್ಲರ ಮನೆ ಮಾತಾಗಿದೆ. ಗೋಕುಲ ನಿರ್ಗಮನ ಅವರ ಹೆಸರಾಂತ ನಾಟಕವಾಗಿದೆ. ಪ್ರಣಯಿಯೂ, ಸಂಗೀತಗಾರನೂ ಆಗಿರುವ ಕೃಷ್ಣ ಮುಂದೆ ಕೊಳಲನ್ನು ಬಿಸುಟು ಬೇರೆಯದೇ ದಾರಿ ಹಿಡಿಯುವ ಸೂಚನೆ ದೊರೆಯುತ್ತದೆ. ಮುಂದೆ ಮಹಾಭಾರತ, ಮಧುರೆ, ದ್ವಾರಕೆ ಎಲ್ಲಿಯೂ ಕೂಡ ಕೃಷ್ಣ ಕೊಳಲನ್ನು ಹಿಡಿಯುವುದಿಲ್ಲ.


ಶ್ರೀಹರಿಚರಿತೆ ಆಧುನಿಕ ಯುಗದಲ್ಲಿ ಕೃಷ್ಣನ ಕಲ್ಪನೆಯನ್ನು ಸಾಕ್ಷಾತ್ಕರಿಸುವ ಪ್ರಯತ್ನವಾಗಿದೆ. ಇಂತಹ ಪೌರಾಣಿಕ ಸಂಗೀತಮಯ ನಾಟಕಗಳ ರಚನೆಗೆ ಪ್ರೇರಣೆ ಸಿಕ್ಕಿದ್ದು ಹರಿಕಥೆಗಳು, ಅರಮನೆ ನಾಟಕ ಕಂಪೆನಿಗಳಲ್ಲಿದ್ದ ಒಳ್ಳೆಯ ಸಂಗೀತಗಾರರು ಮತ್ತು ಅವರ ಪಾತ್ರ ನಿರ್ವಹಣೆ, ಮಾರ್ಷ್ ಶಿವಿಲಿಯರ್‌ನ Spring time in Paris’ ಎಂಬ ಆಧುನಿಕ ಅಪೆರಾ, ತಮಿಳಿನಲ್ಲಿ ವಲ್ಲಿ ಪರಿಣಯ’ ಎನ್ನುವ ಹಾಡುಗಳಿಂದಲೇ ನಿರ್ವಹಿಸಲ್ಪಟ್ಟ ನಾಟಕ ಹಾಗೂ ಕಂಪೆನಿ ನಾಟಕಗಳಿಂದ.


ಪುತಿನ ಬದುಕಿರುವಾಗಲೇ ಅವರ ಶತಮಾನದ ಮನೆ ಸ್ಮಾರಕವಾಯಿತು. ಆಗ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದರು. “ನಾನು ಬದುಕಿರುವಾಗಲೇ ಬಾಳಿ ಬದುಕಿದ ನಮ್ಮನೇ ಸ್ಮಾರಕವಾಗಬೇಕು, ನಾನು ಬರೆದ ಸಾಹಿತ್ಯ ನಿಂತ ನೀರಾಗದೆ ನನ್ನ ಸಾವಿನ ಆಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು” ಎಂಬುವುದು ಕವಿಯ ಮನದಾಳದ ಆಶಯವಾಗಿತ್ತು. ಅದರಂತೆ 1996ರಲ್ಲಿ ಮನೆ ಸ್ಮಾರಕವಾಯಿತು. ಈಗ ಸರಕಾರಕ್ಕೆ ಸೇರಿದೆ. 1998 ತಮ್ಮ 93ನೇ ವಯಸ್ಸಿನಲ್ಲಿ ಪುತಿನ ವಿಧಿವಶರಾದ ಮೇಲೆ 2000 ನೇಯ ಇಸವಿಯಲ್ಲಿ ಪ್ರಾಚ್ಯ ವಸ್ತು ಇಲಾಖೆ ಹಣ ಗುತ್ತಿಗೆ ನೀಡಿ ಕವಿಯ ಬಯಕೆಯಂತೆ ಮೂಲ ರೂಪವನ್ನು ಬದಲಾಯಿಸದೆ, ಅದರಲ್ಲಿರುವ ಕರಕುಶಲ ವಸ್ತುಗಳನ್ನು ಬಳಸಿ ಹೊಸ ರೂಪವನ್ನು ನೀಡಿ ಸ್ಮಾರಕವನ್ನು ಸುಂದರವಾಗಿಸಿದರು. ಇಂದಿಗೂ ಇಲ್ಲಿ ಕವಿ ಬಳಸುತ್ತಿದ್ದಂತಹ ಮಣೆ, ಊರುಗೋಲು, ಟೋಪಿ, ಕವಿ ಬರೆದ ‘ಹರಿ ಚರಿತೆ’, ‘ಮನೆ ದೇಗುಲ’, ‘ಗೋಕುಲ ನಿರ್ಗಮನ’ ಹೀಗೆ ಹಲವು ಕೃತಿಗಳ ಪ್ರಥಮ ಮುದ್ರಣ ಭದ್ರವಾಗಿ ಪ್ರದರ್ಶನಕ್ಕೆ ಇರಿಸಲಾಗಿದೆ.


ಇಂತಹ ಕವಿವರೇಣ್ಯರು ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಅಪಾರ ಕನ್ನಡ ಉಳಿಸಿ ಬೆಳೆಸುವಲ್ಲಿ ಇವರುಗಳ ಪಾತ್ರ ಪ್ರಮುಖವಾದದ್ದು. ಇಂತಹ ಕವಿಗಳ ಕೃತಿಗಳನ್ನು ನಾವೆಲ್ಲ ಓದಬೇಕು. ಅದರಲ್ಲಿರುವಂತಹ ಜೀವನ ಮೌಲ್ಯಗಳು, ಪಾಠಗಳನ್ನು ಅರಿತು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು.

Leave a Reply

Your email address will not be published.

This site uses Akismet to reduce spam. Learn how your comment data is processed.