ಬೆಂಗಳೂರು, ಮಾರ್ಚ್ 20: ದೇವಸ್ಥಾನ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳವಾಗಿದೆ. ಈ ಜಾಗಕ್ಕೆ ಬಂದ ಭಕ್ತಾಧಿಗಳು ನಾನಾ ಸಮಸ್ಯೆಗಳನ್ನು ಹೇಳಿಕೊಂಡರೆ ಪರಿಹಾರವಾಗುತ್ತದೆ ಎಂಬುದು ನಂಬಿಕೆ. ಅಂತಹ ನಮ್ಮ ದೇವಸ್ಥಾನಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ ಎಂದು ಹಿಂದು ಸೇವಾ ಪ್ರತಿಷ್ಠಾನದ ರಾಜ್ಯ ಸಂಯೋಜಕ ಸುರೇಶ್ ಹೇಳಿದರು.
ಚಿಕ್ಕಮಗಳೂರಿನ ಶೃಂಗೇರಿಯ ಆರ್ಷಾ ವಿದ್ಯಾ ಕೇಂದ್ರದಲ್ಲಿ ಮಂಥನ ಶೃಂಗೇರಿ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಂಬಾ ವರ್ಷಗಳಿಂದ ಶ್ರದ್ದಾ ಕೇಂದ್ರಗಳ ಮೇಲೆ ಅನ್ಯ ಮತೀಯರು ಆಕ್ರಮಣ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ದೇವಸ್ಥಾನದ ನಾಶದ ಜೊತೆಗೆ ಹಿಂದುಗಳ ಹತ್ತಿಕ್ಕುವ ಪ್ರಯತ್ನ ಆಗುತ್ತಿದೆ. ಅಷ್ಟೇ ಅಲ್ಲದೆ ಸರ್ಕಾರ ನಿರಂತರವಾಗಿ ದೇವಾಲಯಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಕಾಣಿಕೆ ಹಣವನ್ನು ನಮ್ಮ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಸಾಮಾಜಿಕ ಕಾರ್ಯಕ್ಕೆ ಬಳಸಲು ಬಿಡದೆ ಇನ್ನಿತರ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂದಿನ ಯುವಕರಿಗೆ ಶ್ರದ್ಧೆ ಮತ್ತು ಭಕ್ತಿಗಳು ಕಡಿಮೆ ಆಗುತ್ತಿರುವುದು ಹಿಂದೂ ಸಮಾಜದ ಪ್ರಮುಖ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಈ ಬಗ್ಗೆ ನಾವು ನಿರಂತರ ಜಾಗೃತಿಗಳ ಮೂಲಕ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ದೊಡ್ಡ ದೇವಸ್ಥಾನಗಳಲ್ಲಿ ಇಲ್ಲದ ಬೇಧಗಳು ಊರಿನ ಸಣ್ಣ ದೇವಸ್ಥಾನಗಳಲ್ಲಿ ಕಾಣುತ್ತಿದ್ದೇವೆ. ಹೀಗಾಗಿ ಸಾಮರಸ್ಯದ ಮೂಲಕ ಈ ಸವಾಲುಗಳನ್ನು ಎದುರಿಸಬೇಕು ಎಂದರು.
ಅಂದಹಾಗೆ ಇತ್ತೀಚಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಸಾವಿರಾರು ವರ್ಷಗಳು ಉಳಿಯಲು ಕೇವಲ ಇಂಜಿನಿಯರ್ ಕೆಲಸ ಮಾತ್ರ ಸಾಕಾಗುವುದಿಲ್ಲ ಬದಲಾಗಿ ನಾವು ನಾವಾಗಿ ಅಂದರೆ ಹಿಂದುಗಳಾಗಿ ಉಳಿದು ಈ ಎಲ್ಲಾ ಸವಾಲುಗಳನ್ನು ಎದುರಿಸಿದರೆ ಮಾತ್ರ ಉಳಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರಳೀಕೃಷ್ಣ ಭಟ್ ವೈಕುಂಠಪುರ ವಹಿಸಿದ್ದರು.