‘ಮಾತಾ ಭೂಮಿಃ, ಪುತ್ರೋಹಂ ಪೃಥಿವ್ಯಾ’ ಎನ್ನುವ ಸಾಲು ಭಾರತೀಯರು ಪ್ರಕೃತಿಯನ್ನು ಕಂಡ ಬಗೆಯನ್ನು ಸಾಕ್ಷೀಕರಿಸುತ್ತದೆ.   ಅರಣ್ಯವೆಂದರೆ ಸಸ್ಯ ಸಂಪತ್ತು. ಸಾವಿರಾರು ಜಾತಿ ಮರಗಳು ಪ್ರಾಕೃತಿಕವಾಗಿ ಬೆಳೆದು ಲಕ್ಷಾಂತರ ಜೀವವೈವಿಧ್ಯಗಳೊಂದಿಗೆ ಸೂಕ್ಷ್ಮಾಣುಗಳೊಂದಿಗೆ ರೂಪುಗೊಂಡಿರುವ ತಾಣ. ಲಕ್ಷಾಂತರ ಬೆಳೆ ಬಾಳುವ ಮರ ಗಿಡಗಳನ್ನು ಒಳಗೊಂಡಿದ್ದು, ಅನೇಕ ಜೀವರಾಶಿಗಳಿಗೆ ಅರಣ್ಯ ಆಸರೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯನಾಶ ಹೆಚ್ಚಾಗುತ್ತಿದ್ದು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್‌ 21 ರಂದು ವಿಶ್ವ ಅರಣ್ಯ ದಿನವನ್ನಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಅರಣ್ಯ ದಿನದ ಥೀಮ್‌ ಅರಣ್ಯಗಳು ಮತ್ತು ನಾವೀನ್ಯತೆ: ಉತ್ತಮ ಜಗತ್ತಿಗೆ ಹೊಸ ಪರಿಹಾರಗಳು ಎನ್ನುವುದಾಗಿದೆ.


ಇತಿಹಾಸ
1971ರ ನವೆಂಬರ್‌ನಲ್ಲಿ ಆಹಾರ ಮತ್ತು ಕೃಷಿ ಸಂಘಟನೆಯ 16ನೇ ಸಮ್ಮೇಳನದಲ್ಲಿ ವಿಶ್ವ ಅರಣ್ಯ ದಿನ ಆಚರಿಸುವ ನಿರ್ಣಯ ಅಂಗೀಕರಿಸಲಾಗಿತ್ತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2012 ರಲ್ಲಿ ಮಾರ್ಚ್ 21 ಅನ್ನು ಅಂತರರಾಷ್ಟ್ರೀಯ ಅರಣ್ಯ ದಿನ ಎಂದು ಘೋಷಿಸಿತು.

ಮಹತ್ವ
• ಅರಣ್ಯನಾಶದ ವಿರುದ್ಧದ ಹೋರಾಟಕ್ಕೆ ಹೊಸ ತಾಂತ್ರಿಕ ಪ್ರಗತಿಯ ಅಗತ್ಯವಿದೆ. ಸುಸ್ಥಿರ ಸರಕು ಉತ್ಪಾದನೆ ಮತ್ತು ಭೂ ನಕ್ಷೆ ಹಾಗೂ ಹವಾಮಾನ ಹಣಕಾಸು ಪ್ರವೇಶದ ಮೂಲಕ ಸ್ಥಳೀಯ ಜನರನ್ನು ಸಬಲೀಕರಣಗೊಳಿಸಲು ಅತ್ಯಗತ್ಯವಾಗಿದೆ.
• ನಮ್ಮ ಜೀವನದ ಬಹುತೇಕ ಎಲ್ಲಾ ಅಂಶಗಳು ಕಾಡುಗಳಿಗೆ ಸಂಬಂಧಿಸಿವೆ.
• ಅರಣ್ಯಗಳು ಮತ್ತು ಅವುಗಳ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯು ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಸಂರಕ್ಷಿಸುವ ಏಕೈಕ ಮಾರ್ಗವಾಗಿದೆ.
• ಅಂತರರಾಷ್ಟ್ರೀಯ ಅರಣ್ಯ ದಿನವು ಹವಾಮಾನ ಬದಲಾವಣೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಜಾಗತಿಕ ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ.
• ಅರಣ್ಯಗಳು ನಮಗೆ ಒದಗಿಸುವ ಸಂಪನ್ಮೂಲಗಳಿಗಾಗಿ ನಾವು ಅವುಗಳನ್ನು ಗೌರವಿಸಬೇಕು ಎಂದು ಈ ದಿನವು ನೆನಪಿಸುತ್ತದೆ.

“ಹಸಿರೇ ಉಸಿರು”, “ಕಾಡು ಬೆಳೆಸಿ ನಾಡು ಉಳಿಸಿ” – ಈ ರೀತಿಯ ನೂರಾರು ಸಾಲುಗಳು ಹಲವಾರು ಪರಿಸರ ಸಂರಕ್ಷಣೆಯ ಹೋರಾಟಗಳಲ್ಲಿ ಬಳಕೆಯಾಗುವುದು ಮತ್ತು ಆಗುತ್ತಲೇ ಇರುವುದು ಸದಾ ನಮ್ಮ ಗಮನಕ್ಕೆ ಬರುವ ವಿಚಾರಗಳೇ. ಆದರೆ ಹೋರಾಟವೊಂದು ಸಂಘಟಿತವಾದಾಗ ಸೃಷ್ಟಿಯಾಗುವಂತಹ ಉತ್ಸಾಹ, ಹುಮ್ಮಸ್ಸುಗಳು ನಂತರದ ದಿನಗಳಲ್ಲಿ ತಮ್ಮ ತೀವ್ರತೆಯನ್ನು ಕಳೆದುಕೊಳ್ಳುತ್ತಾ, ಅಂತಿಮವಾಗಿ ಹೋರಾಟದ ಫಲ ಶೂನ್ಯವೆನಿಸುವುದೂ ನಾವು ಕಾಣುತ್ತಾ ಬಂದಿದ್ದೇವೆ. ಅಭಿವೃದ್ಧಿಯ ಪಥದಲ್ಲಿ ಸಾಗುವ ಭರದಲ್ಲಿ ಸುತ್ತಲಿನ ಪರಿಸರದ ಪರಿವೆಯೇ ಇಲ್ಲದೆ ಮುಂದುವರಿಯುತ್ತಿರುವುದು, ತತ್ಪರಿಣಾಮವಾಗಿ ಅನೇಕ ಬೃಹದಾಕಾರದ ವೃಕ್ಷಗಳು ಧರಾಶಾಹಿಯಾಗುತ್ತಿರುವುದು, ಪ್ರಕೃತಿಪ್ರಿಯರ ಕಣ್ಣಿಗೆ ಭವಿಷ್ಯದ ಭಯಾನಕತೆಯ ಅನಾವರಣದಂತೆ ಗೋಚರಿಸುತ್ತದೆ. ಮೊದಲು ವೃಕ್ಷವನ್ನು ಧರೆಗುರುಳಿಸುವುದು, ನಂತರ ಅದರ ಸಂರಕ್ಷಣೆಗಾಗಿ ಪ್ರತಿಭಟಿಸುವುದು ಒಂದು ಚಾಳಿಯಾಗಿ ಹೋಗಿದೆ. ವಿಶ್ವದ ಜನ ಅರಣ್ಯ ಸಂರಕ್ಷಣೆಯಲ್ಲಿ ಎಡವುತ್ತಿರುವುದು ಈ ರೀತಿಯ ದ್ವಂದ್ವ ನಿಲುವಿನಿಂದಾಗಿಯೇ ಮತ್ತು ಹೀಗೆ ಮಾಡುತ್ತಿರುವ ಪರಿಣಾಮದಿಂದಾಗಿ ನಾವು ಕಳೆದು ಕೊಂಡದ್ದು ಏನು ಗೊತ್ತೆ? ನಾಳೆಯ ನಮ್ಮದೇ ಬದುಕಿನ ನೆಮ್ಮದಿಯ ತಳಹದಿಯನ್ನು ಮತ್ತು ಅಪೂರ್ವವಾದ ವೃಕ್ಷ ಸಂಪತ್ತನ್ನು! ವಿಶ್ವ ಅರಣ್ಯ ದಿನದ ಸಂದರ್ಭದಲ್ಲಿ ಇದರ ಕುರಿತು ಆಲೋಚಿಸಿ ಕಾರ್ಯಪ್ರವೃತ್ತರಾಗುವ ಅವಶ್ಯಕತೆ ಹೆಚ್ಚಿದೆ.


ಅರಣ್ಯ ಸಂರಕ್ಷಣೆಯ ಬಗೆಗೆ ಚರ್ಚಿಸುವ ಮುನ್ನ ಪ್ರಸ್ತುತ ನಮ್ಮ ವಿಶ್ವದಲ್ಲಿನ ಶೇಕಡಾವಾರು ಅರಣ್ಯ ಸಂಪತ್ತಿನ ಬಗ್ಗೆ ಒಮ್ಮೆ ಸಿಂಹಾವಲೋಕನ ಮಾಡಿಕೊಳ್ಳುವುವುದು ಒಳ್ಳೆಯದು. ನಮ್ಮ ಪೃಥ್ವಿಯಲ್ಲಿರುವ ಭೂ ಪ್ರದೇಶದ ಶೇ.31ರಷ್ಟು ಅರಣ್ಯ ಪ್ರದೇಶ ವ್ಯಾಪಿಸಿದೆ. ಅಂದರೆ ಸರಿಸುಮಾರು ಭೂಭಾಗದ ಮೂರನೇ ಒಂದು ಭಾಗದಷ್ಟಾಗುತ್ತದೆ. ವಿಶ್ವ ಅರಣ್ಯ ಸಂಪನ್ಮೂಲ ಮೌಲ್ಯಮಾಪನದ ಪ್ರಕಾರ 2020ರಲ್ಲಿ ಭೂಭಾಗದ 4.06 ಬಿಲಿಯನ್ ಹೆಕ್ಟರ್‌ನಷ್ಟು ಜಾಗವನ್ನು ಅರಣ್ಯ ಪ್ರದೇಶವೆಂದು ಗುರುತಿಸಲಾಗಿತ್ತು. ಭೂಮಿಯ ಏಳು ಖಂಡಗಳ ಪೈಕಿ ವಿಸ್ತೀರ್ಣದಲ್ಲಿ ಆರನೇ ಸ್ಥಾನದಲ್ಲಿರುವ ಯೂರೋಪ್ ಅರಣ್ಯ ಪದೇಶದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ಯೂರೋಪ್ ಒಟ್ಟು 1 ಬಿಲಿಯನ್ ಹೆಕ್ಟರ್‌ನಷ್ಟು ಅರಣ್ಯ ಪದೇಶವನ್ನು ಹೊಂದಿದೆ. ಉಳಿದಂತೆ ದಕ್ಷಿಣ ಅಮೇರಿಕ 842 ಮಿಲಿಯನ್ ಹೆಕ್ಟರ್‌ನೊಂದಿಗೆ ದ್ವಿತೀಯ ಸ್ಥಾನ, ಉತ್ತರ ಅಮೇರಿಕ 751 ಮಿಲಿಯನ್ ಹೆಕ್ಟರ್‌ನಷ್ಟು ಅರಣ್ಯಪ್ರದೇಶವನ್ನು ಒಳಗೊಂಡು ಮೂರನೇ ಸ್ಥಾನವನ್ನೂ ಮತ್ತು ಆಫ್ರಿಕಾ ಮತ್ತು ಏಷಿಯಾ ಕ್ರಮವಾಗಿ 624 ಮತ್ತು 593 ಮಿಲಿಯನ್ ಹೆಕ್ಟೇರ್‌ನಷ್ಟು ಅರಣ್ಯಪ್ರದೇಶವನ್ನು ಒಳಗೊಂಡು ಕ್ರಮವಾಗಿ ನಾಲ್ಕನೆ ಮತ್ತು ಐದನೇ ಸ್ಥಾನವನ್ನು ಪಡೆದಿದೆ.
ಇನ್ನು ದೇಶಾವಾರು ಅರಣ್ಯವ್ಯಾಪ್ತಿಯನ್ನು ಗಮನಿಸಿದಾಗ ರಷ್ಯಾ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ದೇಶ. ರಷ್ಯಾ ವಿಶ್ವದ ಶೇ.20ರಷ್ಟು ಅರಣ್ಯಪ್ರದೇಶವನ್ನು ತಾನೊಂದೇ ರಾಷ್ಟ್ರ ಹೊಂದಿದೆ. ಬ್ರೆಜಿಲ್, ಕೆನಡಾ, ಅಮೇರಿಕ, ಚೀನಾ, ಆಸ್ಟ್ರೇಲಿಯಾ ದೇಶಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಇಷ್ಟೆಲ್ಲಾ ಅರಣ್ಯ ಪ್ರದೇಶ ಇರುವುದು ಮುಖ್ಯವಲ್ಲಾ, ಅರಣ್ಯ ಪ್ರದೇಶದ ಸಂರಕ್ಷಣೆ ಮತ್ತು ಬೆಳವಣಿಗೆ ಈ ದೇಶಗಳಲ್ಲಿ ಹೇಗೆ ಆಗುತ್ತಿದೆ ಎನ್ನುವುದು ಮುಖ್ಯ.

2000 ರಿಂದ 2010ರ ವರೆಗಿನ ಇಡೀ ವಿಶ್ವದ ಅರಣ್ಯದ ಕುರಿತು ಅಂಕಿ ಅಂಶವನ್ನು ಗಮನಿಸಿದಾಗ, ಈ ಹತ್ತು ವರ್ಷಗಳಲ್ಲಿ, ಪ್ರತೀ ವರ್ಷ ಸರಾಸರಿ ಶೇ.5.2 ಮಿಲಿಯನ್ ಹೆಕ್ಟರ್‌ನಷ್ಟು ಅರಣ್ಯಪ್ರದೇಶವನ್ನು ವಿಶ್ವ ಕಳೆದುಕೊಂಡಿದೆ. ಅದರ ಪರಿಣಾಮವಾಗಿ 1990ರಲ್ಲಿ ಶೇ.31.8 ಇದ್ದ ಒಟ್ಟು ಅರಣ್ಯ ಪ್ರದೇಶ, 2015ಕ್ಕಾಗುವಾಗ ಶೇ.30.8ಕ್ಕೆ ಇಳಿಯಿತು. ಕೇವಲ ಬ್ರೆಜಿಲ್ ದೇಶವೊಂದರಲ್ಲೇ ಪ್ರತಿ ವರ್ಷ 2.6 ಮಿಲಿಯನ್ ಹೆಕ್ಟರ್‌ನಷ್ಟು ಅರಣ್ಯ ಪ್ರದೇಶ ನಾಶ ಹೊಂದುತ್ತಿದೆ ಎನ್ನುವುದು ವಿಷಾದನೀಯ ಸಂಗತಿ.


ಇದೆಲ್ಲಾ ವಿಶ್ವದ ಹಾಗೂ ಕೆಲವು ದೇಶಗಳ ಅಂಕಿಅಂಶವಾದರೆ ಭಾರತದ ಅರಣ್ಯ ಪ್ರದೇಶದ ಕುರಿತಾದ ಮಾಹಿತಿ ಇಲ್ಲಿದೆ. ಭಾರತ ವಿಶ್ವದ ಏಳನೇ ದೊಡ್ಡ ರಾಷ್ಟ್ರ. 2017ರ ಅಂಕಿಅಂಶದ ಪ್ರಕಾರ ಭಾರತ ತನ್ನ ಭೂಭಾಗದ ಶೇ.24.39ರಷ್ಟು ಅರಣ್ಯಪ್ರದೇಶವನ್ನು ಒಳಗೊಂಡಿದೆ. ಆ ಮೂಲಕ ವಿಶ್ವದ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಒಳಗೊಂಡ ರಾಷ್ಟ್ರಗಳ ಪೈಕಿ 10ನೇ ಸ್ಥಾನ ಪಡೆದಿದೆ. 2019ರ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ ಪ್ರಕಾರ 2017ರ ನಂತರದ ಅವಧಿಯಲ್ಲಿ ಭಾರತದಲ್ಲಿ 5188ಚ.ಕಿ.ಮೀನಷ್ಟು ಅರಣ್ಯ ಪ್ರದೇಶ ವೃದ್ಧಿಯಾಗಿದೆ. ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಅರಣ್ಯ ಅಭಿವೃದ್ಧಿ, ರಾಷ್ಟçದ ಈ ಬೆವಣಿಗೆಯಲ್ಲಿ ಮಹತ್ತರದ ಪಾತ್ರವಹಿಸಿದೆ.


ಭಾರತದಲ್ಲಿ ಅರಣ್ಯ ಸಂರಕ್ಷಣೆಯ ಕುರಿತು ಹೇಳುವುದಾದರೆ, ಭಾರತೀಯರಾದ ನಾವು ಪ್ರತಿಯೊಂದು ವಸ್ತುವಿನಲ್ಲೂ ದೈವತ್ವವನ್ನು ಕಾಣುವವರು. ಅದು ಗಿಡ, ಮರ, ಕಲ್ಲು, ಮಣ್ಣು ಇತ್ಯಾದಿಗಳಾಗಿರಬಹುದು. ಸೂಕ್ಷವಾಗಿ ನಮ್ಮ ಆಚರಣೆಗಳನ್ನು ಗಮನಿಸಿದರೆ, ಅದರಲ್ಲೂ ವೃಕ್ಷಗಳನ್ನು ಪ್ರೀತಿಸುವ, ಆರಾಧಿಸುವ ಸಂಗತಿಗಳನ್ನು ಕಾಣಬಹುಸು. ಉದಾಹರಣೆಗೆ ನಮ್ಮ ದೇಶದಲ್ಲಿ ಸಾವಿರಾರು ನಾಗನ ಕಟ್ಟೆಗಳು ಕಾಣಸಿಗುತ್ತವೆ. ಈ ಎಲ್ಲಾ ನಾಗನ ಕಟ್ಟೆಗಳು ಯಾವುದಾದರು ಒಂದು ಮರದ ಬುಡದಲ್ಲಿಯೇ ನಿರ್ಮಾಣವಾಗಿರುವುದನ್ನು ಕಾಣಬಹುದು. ಹಾಗೆಯೇ ನಮ್ಮಲ್ಲಿ ಶಿವನನ್ನು ಪಶುಪತಿ, ವನಸ್ಪತಿ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು. ಕೇವಲ ಶಿವನ ಆರಾಧನೆ ಮಾತ್ರವಲ್ಲ ಹಿಂದುಗಳು ಪೂಜಿಸುವ ಎಲ್ಲಾ ದೇವರಿಗೂ ಯಾವುದಾದರೊಂದು ಪ್ರಾಣಿ ವಾಹನವಾಗಿರುತ್ತದೆ. ಹಾಗೆಯೇ ಆ ದೇವರಿಗೆ ಪ್ರಿಯವಾದ ಯಾವುದಾದರು ಗಿಡ ಅಥವಾ ಮರವಿರುತ್ತದೆ. ಈ ಪ್ರಾಣಿಗಳನ್ನು ಮತ್ತು ಗಿಡಮರಗಳನ್ನು ಪೂಜಿಸುವ ಜೊತೆಗೆ ಅದರ ಹಿಂಸೆಯನ್ನು ನಿಷೇಧಿಸಿದ್ದರು. ಕೋಟ್ಯಾಂತರ ಅರಳಿಕಟ್ಟೆಗಳು, ಪಂಚಾಯ್ತಿಕಟ್ಟೆಗಳು, ದೇವಾಲಯಗಳಲ್ಲಿ ಧಾರ್ಮಿಕ ಮರಗಿಡಗಳು ನಮಗೆ ಕಾಣಸಿಗುತ್ತವೆ. ಹೀಗೆ ಧಾರ್ಮಿಕ ಆಚರಣೆಗಳ ಜೊತೆ ಜೊತೆಗೆ ಪರಿಸರ ಸಂರಕ್ಷಣೆಗೂ ಮಹತ್ವವನ್ನು ಕೊಟ್ಟ ಹೆಗ್ಗಳಿಕೆ ನಮ್ಮ ಭಾರತೀಯ ಸಂಸ್ಕೃತಿಗೆ ಸಲ್ಲುತ್ತದೆ.
ಆದರೆ ಪ್ರಸ್ತುತ ಪರಿಸ್ಥಿತಿ ಬದಲಾಗಿದೆ. ವೃಕ್ಷಗಳನ್ನು ಕೇವಲ ಮಾನವ ಉಪಯೋಗಿ ವಸ್ತುವನ್ನಾಗಿಯಷ್ಟೇ ಕಾಣುವ ಪರಿಪಾಠ ಬೆಳೆಯುತ್ತಿದೆ. ಹಾಗಾಗಿಯೇ ಮರಗಳನ್ನು ಕಡೆಯುವುದೇ ಅಭಿವೃದ್ಧಿಯಾಗಿ ಹೊಗಿದೆ! ಯಾಕೆಂದರೆ ರಸ್ತೆ ನಿರ್ಮಾಣ, ರೈಲ್ವೆ ಹಳಿ ನಿರ್ಮಾಣ, ಕಂಪೆನಿಗಳ ನಿರ್ಮಾಣ, ನಗರೀಕರಣ ಇನ್ನೂ ನೂರಾರು ಸಣ್ಣ ಪುಟ್ಟ ಕಾರ್ಯಗಳಿಗೂ ಮರವನ್ನು ಕಡಿಯುವುದೇ ಪ್ರಾಥಮಿಕ ಆದ್ಯತೆ ಎನಿಸುತ್ತಿದೆ. ಮರ ಕಡಿದಲ್ಲಿ ಅಂದುಕೊಂಡ ಯೋಜನೆಗಳು ಆಗುತ್ತದೋ ಇಲ್ಲವೋ, ಆದರೆ ಮೊದಲು ಮರ ಕಡಿದಾಗಿರುತ್ತದೆ!
ಹಾಗಾದರೆ ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆ ಸಾಧ್ಯವಿಲ್ಲವೇ?. ಯಾಕೆ ಸಾಧ್ಯವಿಲ್ಲ? ಹಾಗಿದ್ದರೆ ಈ ಮೊದಲು ನಮ್ಮಲ್ಲಿ ಅಭಿವೃದ್ಧಿ ಕಾರ್ಯಗಳಾಗಲಿಲ್ಲವೇ?. ಇಂದಿಗೂ ವಿಶ್ವದ ಜನರು ನಮ್ಮ ಸಿಂಧೂ ನದಿಯ ನಾಗರಿಕತೆಯ ಬಗ್ಗೆ ಕೇಳಿದಾಗಲೆಲ್ಲ ಬೆರಗಾಗುತ್ತಾರೆ. ಯಾಕೆಂದರೆ, ಜಗತ್ತಿನ ಜನರಿಗೆ ದೇಹಕ್ಕೆ ಬಟ್ಟೆ ಧರಿಸುವ ಸಂಗತಿ ಗೊತ್ತಿಲ್ಲದ ಕಾಲದಲ್ಲಿ, ನಮ್ಮ ಜನ ಮಸ್ಲಿನ್ ಎನ್ನುವಂತಹ ಶ್ರೇಷ್ಠ ನೇಯ್ಗೆಯಿಂದ ಮಾಡಿದ ಬಟ್ಟೆಗಳನ್ನು ಧರಿಸುತ್ತಿದ್ದರು. ಪ್ರಪಂಚದ ಜನ ಕಾಡು ಮೇಡುಗಳಲ್ಲಿ ಅಲೆಮಾರಿಗಳಾಗಿ ಅಲೆದಾಡುತ್ತಿದ್ದ ಸಂದರ್ಭದಲ್ಲಿ ಸಿಂಧೂ ನದಿಯ ನಾಗರೀಕತೆಯ ಜನರು ಎರಡರಿಂದ ಮೂರು ಮಳಿಗೆಯ ಮನೆಗಳನ್ನು ನಿರ್ಮಿಸಿ ಉತ್ಕೃಷ್ಟವಾಗಿ ಜೀವಿಸುತ್ತಿದ್ದರೆನ್ನುವುದಕ್ಕೆ ಸಾಕ್ಷಿಗಳು ಸಿಗುತ್ತದೆ. ಅಷ್ಟು ಮಾತ್ರವಲ್ಲ ಉತ್ತಮ ರಸ್ತೆ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಆಹಾರ ಶೇಖರಣೆ ವ್ಯವಸ್ಥೆ ಮುಂತಾದವು ಇಂದಿಗೂ ವಿಶ್ವದ ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಅರ್ಥಾತ್ ಅರಣ್ಯ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಸಾಧ್ಯ ಎಂಬುದು ಆ ಕಾಲದಲ್ಲೇ, ಅದೂ ಭಾರತದಲ್ಲೇ ಸಾಕ್ಷೀಕೃತವಾಗಿತ್ತು ಎಂಬುದನ್ನು ಗಮನಿಸಬೇಕು.
ನಂತರದ ಕಾಲಘಟ್ಟವನ್ನು ಗಮನಿಸಿದರೂ ಅರಣ್ಯಗಳಿಗೆ ನೀಡಿದ ಮಹತ್ವ ಇತಿಹಾಸದಿಂದ ತಿಳಿದುಬರುತ್ತದೆ. ನಮ್ಮ ರಾಷ್ಟçವನ್ನಾಳಿದ ಹಲವಾರು ರಾಜಮಹಾರಾಜರು ಉತ್ತಮವಾದ ರಸ್ತೆಗಳನ್ನು, ರಸ್ತೆಗಳ ಎರಡೂ ಬದಿಯಲ್ಲೂ ಸಾಲು ಮರಗಳನ್ನು, ಹಲವು ಮೈಲಿಗಳಿಗೊಂದು ವಿಶ್ರಾಂತಿ ಗೃಹವನ್ನು ನಿರ್ಮಿಸಿದ್ದು ಐತಿಹಾಸಿಕವಾಗಿ ದಾಖಲಾಗಿ ಉಳಿದಿದೆ. ಹಾಗೆಯೇ ಅರಣ್ಯದ ಸಾರ್ವಭೌಮತ್ವಕ್ಕೆ ಧಕ್ಕೆ ತಾರದೆ ಸೂಕ್ಷ್ಮ ಕೆತ್ತನೆಯ ಭವ್ಯ ಮಂದಿರಗಳ ನಿರ್ಮಾಣಕ್ಕೂ ಹಲವಾರು ಭಾರತೀಯ ರಾಜಮನೆತನಗಳು ತಮ್ಮ ಕೊಡುಗೆಯನ್ನು ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಇಷ್ಟೇ ಅಲ್ಲದೇ ಇನ್ನು ಅನೇಕ ಉದಾಹರಣೆಗಳು ನಿಸರ್ಗವನ್ನು ಉಳಿಸಿಕೊಂಡು, ಅಭಿವೃದ್ಧಿಪರ ಕಾರ್ಯಗಳನ್ನು ಮಾಡಿರುವುದಕ್ಕೆ ಸಿಗುತ್ತವೆ. ಹಾಗಾದರೆ ಪ್ರಸ್ತುತದ ಸಮಸ್ಯೆಗಳಿಗೆ ಪರಿಹಾರವಿಲ್ಲವೆ? ಖಂಡಿತ ಇದೆ.


ಹಲವಾರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಡುವುತ್ತಿರುವುದೆಲ್ಲಿ ಎಂದರೆ, ಸಮಸ್ಯೆಯ ಮೂಲಕ್ಕೆ ಹೋಗಿ ಅದನ್ನು ಬುಡಸಮೇತ ಕಿತ್ತು ಹಾಕುವಲ್ಲಿ. ಯಾವುದೇ ಸಮಸ್ಯೆಗೆ ಆಗಲಿ ಅದರ ಮೂಲವನ್ನು ಹುಡುಕಬೇಕು. ಹಾಗೆಯೇ ಮನೆಯ ಮೂಲಕ ಮುಂದೆ ಸಮಾಜಕ್ಕೆ ಪರಿಚಯವಾಗುವ ಮಕ್ಕಳಿಗೆ ಮನೆಯೇ ಮೂಲ. ಆದ್ದರಿಂದ ಮನೆಯ ಹಂತದಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ಅವಕಾಶಗಳು ಸಿಗಬೇಕು. ಪ್ರತಿಯೊಂದು ಮಗುವಿಗೂ ಮನೆಯೇ ಮೊದಲ ಪಾಠಶಾಲೆ, ಆದ್ದರಿಂದ ಮಗುವಿಗೆ ಪರಿಸರದ ಕುರಿತಾದ ಜ್ಞಾನವನ್ನು, ಅರಣ್ಯವನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂಬ ಪ್ರಜ್ಞೆಯನ್ನು ಮನೆಯಲ್ಲೇ ಬಿತ್ತುವುದು ಸೂಕ್ತ. ಮಗುವಿನ ಹುಟ್ಟುಹಬ್ಬವನ್ನು ಐಷಾರಾಮಿಯಾಗಿ ಆಚರಿಸುವುದರ ಜೊತೆಗೆ, ಗಿಡಗಳನ್ನು ನೆಡುವುದರ ಮೂಲಕ ಎಳೆ ವಯಸ್ಸಿನಲ್ಲೇ ಸಮಾಜಕ್ಕೆ ಕೊಡುಗೆ ನೀಡುವ ಸತ್ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಪ್ರಯತ್ನಗಳಾಗಬೇಕು.


ಶಿಶು ಅವಸ್ಥೆಯಿಂದ ಬಾಲ್ಯಕ್ಕೆ ಕಾಲಿಡುವ ಮಕ್ಕಳಿಗೆ ಶಾಲೆಗಳಲ್ಲಿ ಪರಿಸರ ಹಾಗೂ ಅದರ ಸಂರಕ್ಷಣೆ ನಮ್ಮ ಹೊಣೆ ಎನ್ನುವ ಮೂಲ ಸಂಗತಿಯನ್ನು ಸ್ವಭಾವಗೊಳ್ಳುವಂತೆ ಮಾಡಬೇಕು. ನಂತರ ಕಾಲೇಜು ಹಂತಕ್ಕೆ ತಲುಪುವ ವಿದ್ಯಾರ್ಥಿಗಳಲ್ಲೂ ಇಂತಹ ಕಾರ್ಯಗಳ ಕುರಿತು ಮಾಹಿತಿ ಒದಗಿಸಬೇಕು. ಇದಲ್ಲದೇ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ, ಎಲ್ಲಾ ಸಂಘ ಸಂಸ್ಥೆಗಳಲ್ಲಿ, ಎಲ್ಲಾ ರಾಜಕೀಯ ಪಕ್ಷಗಳಲ್ಲಿ, ಎಲ್ಲಾ ಕಂಪೆನಿಗಳಲ್ಲಿ, ಎಲ್ಲಾ ಧಾರ್ಮಿಕ ಕೇಂದ್ರಗಳ ಆಡಳಿತ ಮಂಡಳಿಗಳಲ್ಲಿ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಂಪೆನಿ, ಆಸ್ಪತ್ರೆ ಮತ್ತು ಯಾವುದೇ ಸಂಸ್ಥೆಯಲ್ಲಿ ಏಕರೂಪದ ಒಂದು ನಿಯಮ ತರುವುದರಿಂದ ಅರಣ್ಯ ಬೆಳೆಸುವುದಕ್ಕೆ ಒಂದು ದೊಡ್ಡ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ. ಆ ನಿಯಮವೇನೆಂದರೆ, ಎಲ್ಲಾ ಸಂಸ್ಥೆಯ ವಿದ್ಯಾರ್ಥಿಗಳು, ಕಾರ್ಮಿಕರು, ಸದಸ್ಯರು, ಉದ್ಯೋಗಿಗಳು ಹಾಗೂ ಆ ಸಂಸ್ಥೆಗೆ ಒಳಪಟ್ಟ ಯಾವುದೇ ವ್ಯಕ್ತಿಯಾಗಿರಬಹುದು, ಅವರೆಲ್ಲಾ ಒಂದು ಗಿಡ ನೆಟ್ಟು ಅದರ ಪೂರ್ಣ ಜವಾಬ್ದಾರಿಯನ್ನು ಅವರೇ ನೋಡಿಕೊಳ್ಳಬೇಕು. ಇದಕ್ಕೆ ಒಂದು ಸಚಿವಾಲಯವೋ, ವಿದ್ಯಾರ್ಥಿಗಳ ಸಂಘವೋ, ಸದಸ್ಯರ ಸಂಘವೋ ಇನ್ನಾವುದೇ ರೀತಿಯ ಮಂಡಳಿಗಳನ್ನು ಮಾಡಿ ಆ ಕಾರ್ಯ ಸರಿಯಾದ ರೀತಿಯಲ್ಲಾಗುತ್ತಿದೆಯೇ ಎಂದು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಕಾರ್ಯಗಳು ಸರಿಯಾಗಿ ಜರುಗದಿದ್ದರೆ ಅದಕ್ಕೆ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕು.
ಹಾಗೆಯೇ ಮನುಷ್ಯರನ್ನು ಕೊಂದರೆ ಯಾವ ರೀತಿಯಲ್ಲಿ ಶಿಕ್ಷೆಯಾಗುತ್ತದೆಯೋ, ಮರವನ್ನು ಅನಾವಶ್ಯಕವಾಗಿ ಕಡಿದರೂ ಶಿಕ್ಷೆಯಾಗುವಂತಹ ಕಾನೂನು ಬರಬೇಕು. ಹಲವಾರು ಜಾಗೃತಿ ಕಾರ್ಯಕ್ರಮಗಳು ರಾಷ್ಟçದಾದ್ಯಂತ ಜರುಗುತ್ತವೆ, ಆದರೆ ಗಿಡನೆಡುವ ಪ್ರಾಯೋಗಿಕ ಜಾಗೃತಿ ಕಾರ್ಯಕ್ರಮಗಳು ಆಗುವುದು ಕಡಿಮೆ. ಅಂದರೆ ಜಾಗೃತಿ ಕಾರ್ಯಕ್ರಮಗಳಲ್ಲಿ ಗಂಟೆಗಟ್ಟಲೆ ಭಾಷಣ ಮಾಡುವ ಬದಲು, ಆ ಪರಿಸರದಲ್ಲಿ ಗರಿಷ್ಟ ಎಷ್ಟು ಗಿಡ ನೆಡಬಹುದೋ ಅಷ್ಟು ಗಿಡಗಳನ್ನು ಕಾರ್ಯಕ್ರಮದ ಜೊತೆಗೆ ಕೊಂಡೊಯ್ದು, ಗಿಡ ನೆಡುವ ಕಾರ್ಯಗಳು ಹೆಚ್ಚಾಗಬೇಕು. ಇದರಲ್ಲಿ ಆ ಪರಿಸರದ ಗ್ರಾಮಸ್ಥರನ್ನು ಜೋಡಿಸಿಕೊಳ್ಳುವ ಅಗತ್ಯತೆ ಇದೆ.


ಇನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೊಳ್ಳುವ ಯೋಜನೆಗಳು. ಅಬ್ಬಾ! ಇಡೀ ವಿಶ್ವದಲ್ಲೆ ಬಹುಷಃ ಭಾರತದಲ್ಲಾದಷ್ಟು ಯೋಜನೆಗಳಾಗಿರಲಿಕ್ಕಿಲ್ಲ. ಅಷ್ಟು ಯೋಜನೆಗಳು ಈ ದೇಶದಲ್ಲಾಗುತ್ತವೆ. ಎಲ್ಲಾ ಯೋಜನೆಗಳು ಸರಿಯಾಗಿ ಕೆಲಸ ಮಾಡಿದ್ದರೆ, ಭಾರತವನ್ನು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶದ ಸಾಲಿನಲ್ಲೇ ಕಾಣುವ ದುಸ್ಥಿತಿ ಬರುತ್ತಿರಲಿಲ್ಲ. ಒಂದು “ಕೋಟಿ ವೃಕ್ಷ ಅಭಿಯಾನ” ಎಂಬ ಯೋಜನೆ ಅಡಿಯಲ್ಲಿ ನೆಟ್ಟ ಎಲ್ಲಾ ಗಿಡಗಳು ಫಲಕಾರಿಯಾಗಿ ಬೆಳೆದು ನಿಂತಿದ್ದರೆ, ಇಷ್ಟೊತ್ತಿಗಾಗಲೆ ಭಾರತದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಈಗಿನ ದುಪ್ಪಟ್ಟಾಗುತ್ತಿದ್ದವು. ಆದ್ದರಿಂದ ರೂಪಿಸಿದಂತಹ ಯೋಜನೆಗಳನ್ನು ಸರಿಯಾಗಿ ಉಪಯೋಗವಾಗುವಂತೆ ಮಾಡಿದರೆ ಅಭಿವೃದ್ಧಿ ಸಾಧ್ಯ.
ಒಳ್ಳೆಯದನ್ನು, ಪ್ರಯೋಜನಾತ್ಮಕವಾದ ಸಂಗತಿಗಳು ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಅದನ್ನು ಇಲ್ಲಿಗೆ ಶೇ.100ರಷ್ಟು ಅಳವಡಿಸುವುದಕ್ಕೆ ಸಾಧ್ಯವಾಗುವಂತಿದ್ದರೆ, ಅಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಒಂದು ಕಾಲಕ್ಕೆ ಕಾಡು ಕಡಿಯುವುದು ಪೌರುಷದ ಸಂಕೇತವಾಗಿರಬಹುದು. ಆದರೆ ಈಗ ಅದೇ ಸಮಸ್ಯೆ. ಆ ಸಮಸ್ಯೆಯನ್ನು ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಮನಸ್ಸು ಮಾಡಿ, ಕಾರ್ಯ ಪ್ರವೃತ್ತರಾದರೆ ಸಾಕು. ಬದಲಾವಣೆ ತನ್ನಿಂದ ತಾನೇ ಆಗುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.