ಇಂದು ಜಯಂತಿ
ಮಹಾತ್ಮ ಬುದ್ಧ ಮಹಾನ್ ದಾರ್ಶನಿಕ, ಸಮಾಜ ಸುಧಾರಕ ಮತ್ತು ಬೌದ್ಧ ದರ್ಶನದ ಸ್ಥಾಪಕ. ಅವರು ತಮ್ಮ ಆಲೋಚನೆಗಳಿಂದ ಜಗತ್ತಿಗೆ ಹೊಸ ಮಾರ್ಗವನ್ನು ತೋರಿದವರು. ಬುದ್ಧ ಪೂರ್ಣಿಮೆ, ವೆಸೆಕ್‌ ಅಥವಾ ಬುದ್ಧ ಜಯಂತಿ ವಿಶ್ವದಾದ್ಯಂತ ಬೌದ್ಧರು ಆಚರಿಸುವ ಮಹತ್ವದ ದಿನವಾಗಿದೆ. ಸಾಮಾನ್ಯವಾಗಿ ವೈಶಾಖ ತಿಂಗಳ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಮೇ 23 ರಂದು ಮಹಾತ್ಮ ಬುದ್ಧನ ಜಯಂತಿಯನ್ನು ಆಚರಿಸಲಾಗುತ್ತಿದೆ.


ಪರಿಚಯ
ಗೌತಮ ಬುದ್ಧನ ಪೂರ್ವಾಶ್ರಮದ ಹೆಸರು ಸಿದ್ಧಾರ್ಥ. ಅವರು ಸಾಮಾನ್ಯ ಶಕ ವರ್ಷ ಪೂರ್ವ 563 ರಂದು ನೇಪಾಳದ ಲುಂಬಿನಿಯಲ್ಲಿ ಜನಿಸಿದರು. ಇವರ ತಂದೆ ಶುದ್ಧೋದನ, ತಾಯಿ ಮಾಯಾ ದೇವಿ. ಇವರನ್ನು ಹುಟ್ಟಿದ ಏಳು ದಿನಗಳಲ್ಲಿ ತಾಯಿ ನಿಧನರಾದರು. ಹೀಗಾಗಿ ಇವರು ಸಾಕುತಾಯಿ ಮಹಾಪ್ರಜಾಪತಿದೇವಿಯ (ಗೌತೈನಿ) ಆರೈಕೆಯಲ್ಲಿ ಬೆಳೆದರು. ಇದರಿಂದಾಗಿ ಸಿದ್ಧಾರ್ಥನಿಗೆ ಗೌತಮ ಎಂಬ ಹೆಸರೂ ಇತ್ತು. ಸಿದ್ದಾರ್ಥ ಯಶೋಧರ ಎಂಬುವರನ್ನು ವಿವಾಹವಾಗಿದ್ದನು. ರಾಹುಲ ಎಂಬ ಮಗನಿದ್ದನು.


ಸಿದ್ಧಾರ್ಥನ ತಂದೆ ಹೊರಗಿನ ಪ್ರಪಂಚ ಮತ್ತು ಅಲ್ಲಿನ ಸಂಕಟಗಳು ಆತನಿಗೆ ಕಾಣದಂತೆ ಅರಮನೆಯಲ್ಲಿ ಐಷಾರಾಮಿ ಜೀವನವನ್ನು ನೀಡಿದ್ದರು. ಸಿದ್ಧಾರ್ಥ 29 ವರ್ಷಗಳ ಕಾಲ ಐಷಾರಾಮಿ ಜೀವನ ನಡೆಸಿದ ನಂತರ ಒಂದು ದಿನ ಆತನಿಗೆ ನೈಜ ಪ್ರಪಂಚದ ದರ್ಶನವಾಗುತ್ತದೆ. ಒಬ್ಬ ಮುದುಕ, ರೋಗಿ, ಶವ ಹಾಗೂ ಸನ್ಯಾಸಿಯನ್ನು ಕಂಡನು. ಎಲ್ಲಾ ಜೀವಿಗಳು ವೃದ್ಧಾಪ್ಯ, ಅನಾರೋಗ್ಯ ಮತ್ತು ಮರಣಕ್ಕೆ ಒಳಗಾಗುತ್ತಾರೆ ಎಂಬ ಸತ್ಯವನ್ನು ಅರಿತು ಮನೆಯನ್ನು ತ್ಯಜಿಸಿ ಬರಲು ನಿರ್ಧರಿಸಿದನು.


ಬುದ್ಧನ ಜ್ಞಾನೋದಯ
ಸಿದ್ಧಾರ್ಥನು ತನಗೆ ಆಗಿರುವ ನೋವುಗಳನ್ನು ತೊಡೆದು ಹಾಕುವ ಸಲುವಾಗಿ ನಿರಂಜನ ನದಿಯಲ್ಲಿ ಸ್ನಾನ ಮಾಡಿ ಪರಮ ಸಂಕಲ್ಪದಿಂದ ಬೋಧಿ ವೃಕ್ಷದ ಕೆಳಗೆ ಜ್ಞಾನದ ಅರಸುವಿಕೆಯಿಂದ ತಪಸ್ಸುಗೈದನು. ಹೀಗಾಗಿ ಮರದ ಕೆಳಗೆ ಜ್ಞಾನಕ್ಕಾಗಿ ತಪಸ್ಸಿನಲ್ಲಿ ತೊಡಗಿಸಿಕೊಂಡಿದ್ದ ಪರಿಣಾಮವಾಗಿ ಜ್ಞಾನೋದಯಕ್ಕೆ ಕಾರಣವಾಯಿತು.ಸಂಸ್ಕೃತದಲ್ಲಿ ಜ್ಞಾನೋದಯ ಎಂಬ ಪದಕ್ಕೆ ಬುದ್ಧನೆಂದು ಕರೆಯುತ್ತಾರೆ. ಅಂದಿನಿಂದ ಸಿದ್ಧಾರ್ಥ ಗೌತಮ ಬುದ್ಧನಾದವನು.

ಜನ್ಮಾಂತರಗಳ ಅರಿಯುವಿಕೆ, ನಿತ್ಯಾನಿತ್ಯ ವಸ್ತುಗಳ ವಿವೇಕೋದಯ, ದುಃಖಕ್ಕೆ ಕ್ಷಣಿಕ ವಸ್ತುಗಳ ತೃಷೆಯೇ ಕಾರಣ, ಆಧ್ಯಾತ್ಮ ತತ್ತ್ವದ ಸಾಕ್ಷಾತ್ಕಾರ ಎಂಬ ಈ ನಾಲ್ಕು ಅನುಭವಗಳನ್ನು ಆತ ಪಡೆದನು. ಗೌತಮ ಬುದ್ಧ ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ, ಮೌಢ್ಯಗಳನ್ನು ಸಂಪೂರ್ಣವಾಗಿ ಜಯಿಸಿದನು. ಇದರಿಂದಾಗಿ ಬುದ್ಧ ಎಂಬ ಹೆಸರು ಜಗತ್ತಿಗೆ ಪ್ರಸಿದ್ಧವಾಯಿತು. ಕಠಿಣ ಪರಿಶ್ರಮ ಮೂಲಕ ಜ್ಞಾನವನ್ನು ಪಡೆದು ಬುದ್ಧನಾಗಿ ವರ್ಷಗಳ ಕಾಲ ಧರ್ಮೋಪದೇಶ ನೀಡಿದನು.


ಬೌದ್ಧ ದರ್ಶನದಲ್ಲಿನ ತ್ರಿರತ್ನಗಳು
ಬುದ್ಧಂ ಶರಣಂ ಗಚ್ಛಾಮಿ (ನಾನು ಬುದ್ಧನಿಗೆ ಶರಣಾಗುತ್ತೇನೆ.), ಧಮ್ಮಂ ಶರಣಂ ಗಚ್ಛಾಮಿ (ನಾನು ಧರ್ಮಕ್ಕೆ ಶರಣಾಗುತ್ತೇನೆ.)
ಸಂಘಂ ಶರಣಂ ಗಚ್ಛಾಮಿ (ನಾನು ಸಂಘಕ್ಕೆ ಶರಣಾಗುತ್ತೇನೆ.). ಬುದ್ಧನು ಮೈತ್ರಿ, ದಯೆ, ಸಮತೆ, ಪ್ರೀತಿ, ಅನುಕಂಪ ಮತ್ತು ಜ್ಞಾನೋದಯದೊಂದಿಗೆ ಅಷ್ಟಾಂಗ ಮಾರ್ಗವನ್ನು ತೋರಿಸಿಕೊಟ್ಟವರು.

ಬುದ್ಧನು ಧರ್ಮವೇ ಜೀವನದ ಮಾರ್ಗವೆಂದು ಸಾರಿದ್ದಾರೆ. ಪರಿಶುದ್ಧವಾದ ಜೀವನ ನಡೆಸುವುದು ಪ್ರತಿಯೊಬ್ಬರ ಕರ್ತವ್ಯ.
ಇದು ಎಲ್ಲರಿಗೂ ಮುಕ್ತವಾದ ರೀತಿಯಲ್ಲಿ ಸತ್ಯದ ಬೆಳಕು ಚೆಲ್ಲುವಂತಹ ಮಾರ್ಗವಾಗಿದೆ. ಇದರಿಂದ ಜೀವನ ಸಾಕ್ಷಾತ್ಕಾರವನ್ನು ಪಡೆಯಬಹುದು. ಬುದ್ಧನ ಉಪದೇಶಗಳು ಜ್ಞಾನ ಮಾರ್ಗವನ್ನು ಬೋಧಿಸಿದೆ.

ಬೌದ್ಧ ದರ್ಶನದ ನಾಲ್ಕು ಉದಾತ್ತ ಸತ್ಯಗಳು
• ಪ್ರಪಂಚವು ದುಃಖದಿಂದ ತುಂಬಿದೆ
• ಆಸೆಯೇ ಎಲ್ಲಾ ದುಃಖಗಳಿಗೂ ಮೂಲ ಕಾರಣ
• ಆಸೆಯನ್ನು ಗೆಲ್ಲುವ ಮೂಲಕ ದುಃಖವನ್ನು ಗೆಲ್ಲಬಹುದು
• ಅಷ್ಟಾಂಗಿಕ ಮಾರ್ಗಗಳನ್ನು ಅನುಸರಿಸುವ ಮೂಲಕ ಆಸೆಯನ್ನು ಜಯಿಸಬಹುದು

ಬೌದ್ಧ ದರ್ಶನದ ಅಷ್ಟಾಂಗಿಕ ಮಾರ್ಗವೆಂದರೆ:
ಸರಿಯಾದ ತಿಳುವಳಿಕೆ
ಸರಿಯಾದ ನಿರ್ಣಯ
ಸರಿಯಾದ ಮಾತು
ಸರಿಯಾದ ಕ್ರಿಯೆ
ಸರಿಯಾದ ಜೀವನ
ಸರಿಯಾದ ಪ್ರಯತ್ನಗಳು
ಸರಿಯಾದ ಆಲೋಚನೆ
ಸರಿಯಾದ ಸ್ವಯಂ ಏಕಾಗ್ರತೆ.


ಗೌತಮ ಬುದ್ಧನು ಸಾಮಾನ್ಯ ಶಕ ವರ್ಷ ಪೂರ್ವ 483 ರಂದು ತಮ್ಮ 80 ವಯಸ್ಸಿನಲ್ಲಿ ಉತ್ತರಪ್ರದೇಶದಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.