ರಾಷ್ಟ್ರ ಸೇವಿಕಾ ಸಮಿತಿ ಹೊಯ್ಸಳ ಪ್ರಾಂತ ವಿಶೇಷ ವರ್ಗ, ಪ್ರವೇಶ, ಪ್ರಬೋಧ ಶಿಕ್ಷಾ ವರ್ಗ – 2024
ಮೈಸೂರು: ಹೆಣ್ಣು ಮಕ್ಕಳಲ್ಲಿ ಸ್ವಸಂರಕ್ಷಣಾ ಕ್ಷಮತೆಯನ್ನು ಬೆಳೆಸುವುದರ ಜೊತೆಗೆ ಶಾರೀರಿಕ ದೃಢತೆ, ಮಾನಸಿಕ ಬಲ, ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವುದು. ಕೌಟುಂಬಿಕ ಜವಾಬ್ದಾರಿಯ ಜೊತೆಗೆ ರಾಷ್ಟ್ರೀಯ ಜವಾಬ್ದಾರಿಗಳ ಕುರಿತು ಮಹಿಳೆಯರು ಜಾಗೃತರಾಗಿರುವಂತೆ ಮಾಡುವುದು ರಾಷ್ಟ್ರ ಸೇವಿಕಾ ಸಮಿತಿಯು ಉದ್ದೇಶವಾಗಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಕ್ಷೇತ್ರ ಕಾರ್ಯವಾಹಿಕಾ ಸಾವಿತ್ರಿ ಸೋಮಯಾಜಿ ಹೇಳಿದರು.
ಮೈಸೂರಿನ ಶ್ರೀನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಮೇ 8, 2024 ರಿಂದ ಮೇ 22, 2024ರವರೆಗೆ ನಡೆದ ಹೊಯ್ಸಳ ಪ್ರಾಂತದ ರಾಷ್ಟ್ರ ಸೇವಿಕಾ ಸಮಿತಿ ವಿಶೇಷ ವರ್ಗ, ಪ್ರವೇಶ, ಪ್ರಬೋಧ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಮೈಸೂರಿನ ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಸುಧಾ ಅವರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿಯ ಆಹಾರ ಹಾಗೂ ವಿಚಾರಗಳು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಬದಲಾಗುತ್ತಿದೆ. ನಮ್ಮ ಸಂಸ್ಕೃತಿಯನ್ನು ನಾವು ಸಂರಕ್ಷಣೆ ಮಾಡುವ ನಿಟ್ಟಿನಿಂದ ಉತ್ತಮ ಸಂಸ್ಕಾರವನ್ನು ಪಡೆಯಬೇಕು. ಶಿಕ್ಷಾ ವರ್ಗ ಅತ್ಯಂತ ಸ್ಫೂರ್ತಿದಾಯಕವಾಗಿದ್ದು ಇಲ್ಲಿನ ಶಿಕ್ಷಣದಿಂದ ಇನ್ನಷ್ಟು ಪ್ರೇರಣೆ ಪಡೆದು ತರುಣಿಯರು ಹಾಗೂ ಮಾತೆಯರು ಸಮಾಜ ಮತ್ತು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ತಿಳಿಸಿದರು.
ಮೇ 21ರಂದು ಜೆ.ಪಿ. ನಗರದ ವಿವಿಧ ರಸ್ತೆಗಳಲ್ಲಿ ಗಣವೇಷಧಾರಿ ಸೇವಿಕೆಯರಿಂದ ಘೋಷ್ ವಾದನ ಸಹಿತ ಶಿಸ್ತುಬದ್ಧ ಸಂಚಲನ ನಡೆಯಿತು. ಸಮಾರೋಪದಲ್ಲಿ ಶಿಕ್ಷಾರ್ಥಿಗಳಿಂದ ಘೋಷ್ ವಾದನ, ಸೂರ್ಯ ನಮಸ್ಕಾರ, ಯೋಗಾಸನ , ದಂಡ, ಯಷ್ಠಿ , ನಿಯುದ್ಧ, ಯೋಗಛಾಪ್ ಹಾಗೂ ವ್ಯಾಯಾಮಗಳ ಪ್ರಾತ್ಯಕ್ಷಿಕೆ ನಡೆಯಿತು.
ಪ್ರಬೋಧ್ ವರ್ಗಾಧಿಕಾರಿ ವಸಂತಾ ಸ್ವಾಮಿಯವರು ಪ್ರಬೋಧ್ ವರ್ಗದ ವರದಿ ಹಾಗೂ ಪ್ರವೇಶ ವರ್ಗಾಧಿಕಾರಿ ಪೂರ್ಣಿಮಾ ರವಿಶಂಕರ್ ಪ್ರವೇಶ ವರ್ಗದ ವರದಿ ನೀಡಿದರು.
ಪ್ರಾಂತ ಶಾರೀರಿಕ ಪ್ರಮುಖ್ ಶಿಲ್ಪಾ ಭಾರ್ಗವ, ಪ್ರಾಂತ ಕಾರ್ಯಾಲಯ ಪ್ರಮುಖ್ ಅರುಣಾ ಪುರೋಹಿತ್, ಪ್ರಾಂತ ತರುಣಿ ಪ್ರಮುಖ್ ಸುಮಂಗಲಾ ಬಾಪಟ್ ಹಾಗೂ ಪ್ರಾಂತ ಪ್ರಚಾರ ಪ್ರಮುಖ್ ಮಯೂರಲಕ್ಷ್ಮೀ ಉಪಸ್ಥಿತರಿದ್ದರು.