ಇಸ್ಕಾನ್ ನ ಸನ್ಯಾಸಿ ಚಿನ್ಮಯಿಕೃಷ್ಣ ದಾಸ್ ಅವರ ಅನ್ಯಾಯಪೂರ್ವಕ ಸೆರೆವಾಸವನ್ನು ಮುಕ್ತಗೊಳಿಸಬೇಕು – ಆರ್ ಎಸ್ ಎಸ್ ಆಗ್ರಹ

ನಾಗ್ಪುರ ನ.30, 2024: ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಅನ್ಯಾಯವನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇಸ್ಕಾನ್ ನ ಸನ್ಯಾಸಿ ಚಿನ್ಮಯಿಕೃಷ್ಣ ದಾಸ್ ಅವರ ಬಂಧನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಖಂಡಿಸಿದೆ. ಆರ್ ಎಸ್ ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಪ್ರಕಟಣೆಯ ಮೂಲಕ ಬಾಂಗ್ಲಾದಲ್ಲಾಗುತ್ತಿರುವ ಘಟನೆಗಳ ಕುರಿತು ಹೇಳಿಕೆಯನ್ನು ನೀಡಿದ್ದಾರೆ.

ಆರ್ ಎಸ್ ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರ ಹೇಳಿಕೆ:

ನಾಗ್ಪುರ ನ.30, 2024: ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ದಾಳಿ, ಹತ್ಯೆ, ಲೂಟಿ, ಬೆಂಕಿಯ ದಾಳಿ ಹಾಗೂ ಮಹಿಳೆಯರ ಮೇಲಿನ ಅಮಾನವೀಯ ದೌರ್ಜನ್ಯಗಳನ್ನು ನಡೆಸುತ್ತಿರುವುದು ಅತ್ಯಂತ ಚಿಂತಾಜನಕ ಸಂಗತಿ. ಇಂತಹ ಹೇಯಕೃತ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಠೋರವಾಗಿ ಖಂಡಿಸುತ್ತದೆ.

ಈಗಿನ ಬಾಂಗ್ಲಾದೇಶದ  ಸರ್ಕಾರ  ಮತ್ತು ಅಲ್ಲಿನ ಇತರೆ ಸಂಸ್ಥೆಗಳು ಇದನ್ನು ತಡೆಯುವ ಬದಲು ಕೇವಲ ಮೂಕಪ್ರೇಕ್ಷಕರಾಗಿದ್ದಾರೆ. ಬಾಂಗ್ಲಾದೇಶದ ಹಿಂದೂಗಳು ತಮ್ಮ ರಕ್ಷಣೆಗಾಗಿ ಅನಿವಾರ್ಯವಾಗಿ ಪ್ರಜಾತಾಂತ್ರಿಕ ಮಾರ್ಗದಲ್ಲಿ ಧ್ವನಿಯೆತ್ತಲು ಮುಂದಾದರೆ, ಅವರ ವಿರುದ್ಧವೇ ಅನ್ಯಾಯ ಹಾಗೂ ಅತ್ಯಾಚಾರದಂತಹ ದುಷ್ಕೃತ್ಯಗಳನ್ನು ಎಸಗುವ ಹೊಸ ವಿಧಾನವೊಂದು ಹೊರಹೊಮ್ಮುತ್ತಿದೆ.

ಹಾಗೆಯೇ, ಇಂತಹ ಘಟನೆಗಳ ವಿರುದ್ಧ ಹಿಂದುಗಳ ಪರ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇಸ್ಕಾನ್‌ನ ಸಾಧು ಚಿನ್ಮಯ ಕೃಷ್ಣದಾಸರನ್ನು ಬಾಂಗ್ಲಾದೇಶದ ಸರ್ಕಾರ ಸೆರೆಮನೆಗೆ ಕಳುಹಿಸಿರುವುದು ಅನ್ಯಾಯಪೂರ್ಣವಾದದ್ದು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ತಕ್ಷಣವೇ ನಿಲ್ಲುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಇಸ್ಕಾನ್‌ನ ಚಿನ್ಮಯ ಕೃಷ್ಣದಾಸ್ ಅವರನ್ನು ಸೆರೆವಾಸದಿಂದ ಮುಕ್ತಗೊಳಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘವು ಬಾಂಗ್ಲಾದೇಶ ಸರ್ಕಾರವನ್ನು ಕೋರುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತ ಸರ್ಕಾರಕ್ಕೂ ಮನವಿ ಮಾಡುವುದೇನೆಂದರೆ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರೆ ಎಲ್ಲಾ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಡೆಯುವ ತನ್ನ ಪ್ರಯತ್ನವನ್ನು ಸರ್ಕಾರ ಮುಂದುವರಿಸಬೇಕು. ಜೊತೆಗೆ, ಅದಕ್ಕೆ ಪೂರಕವಾಗಿ ಜಾಗತಿಕ ಸಹಮತ ರೂಪಿಸುವ ದಿಕ್ಕಿನಲ್ಲಿ ಅವಶ್ಯಕ ಹೆಜ್ಜೆಗಳನ್ನು ಆದಷ್ಟೂ ಶೀಘ್ರದಲ್ಲಿ ಇರಿಸಬೇಕು.

ಈ ಮಹತ್ವಪೂರ್ಣ ಸಮಯದಲ್ಲಿ ಭಾರತ ಮತ್ತು ವೈಶ್ವಿಕ ಸಮುದಾಯವು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಜೊತೆ ನಿಂತು ಅವರಿಗೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕು ಮತ್ತು ಇದಕ್ಕಾಗಿ ತಮ್ಮತಮ್ಮ ಸರ್ಕಾರಗಳಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಒತ್ತಾಯಿಸಬೇಕಾಗಿರುವುದು ವಿಶ್ವ ಶಾಂತಿ ಮತ್ತು ಸಹೋದರತ್ವ ಮೂಡಿಸಲು ಅವಶ್ಯಕವಾಗಿದೆ.

– ದತ್ತಾತ್ರೇಯ ಹೊಸಬಾಳೆ,

ಸರಕಾರ್ಯವಾಹ,

ರಾಷ್ಟ್ರೀಯ ಸ್ವಯಂಸೇವಕ ಸಂಘ

30-11-2024

Leave a Reply

Your email address will not be published.

This site uses Akismet to reduce spam. Learn how your comment data is processed.