ಬೆಂಗಳೂರು: ದೇಶವು 2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವದತ್ತ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ, ಭಾರತದ ಭವಿಷ್ಯದ ರೂಪುರೇಷೆ ಹೇಗಿರಬೇಕು ಎಂಬ ಕುರಿತು ಚರ್ಚಿಸಲು ಯುವ ಮನಸ್ಸುಗಳು ಒಂದೆಡೆ ಸೇರಿದ್ದವು. ಥಿಂಕರ್ಸ್ ಫೋರಂ, ಕರ್ನಾಟಕದ ವತಿಯಿಂದ ‘ಭಾರತ @2047: ಪರಂಪರೆ, ಪ್ರಗತಿ ಮತ್ತು ಪರಿವರ್ತನೆ’ ಶೀರ್ಷಿಕೆಯಡಿಯಲ್ಲಿ 5ನೇ ರಾಜ್ಯಮಟ್ಟದ ‘ಯಂಗ್ ಥಿಂಕರ್ಸ್ ಮೀಟ್’ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ಶಿಕ್ಷಣ, ಪತ್ರಿಕೋದ್ಯಮ, ತಂತ್ರಜ್ಞಾನ, ನೀತಿ ಸಂಶೋಧನೆ ಸೇರಿದಂತೆ ವೈವಿಧ್ಯಮಯ ಕ್ಷೇತ್ರಗಳಿಂದ ಆಯ್ದ 76 ಯುವ ಪ್ರತಿನಿಧಿಗಳು ಮೂರು ದಿನಗಳ ವೈಚಾರಿಕ ಸಮಾಗಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಅಕ್ಟೋಬರ್ 2ರಂದು ಸಂಜೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್, ಆರ್‌‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ ಗುರುಪ್ರಸಾದ್ ಮತ್ತು ಜನಸೇವಾ ವಿದ್ಯಾಕೇಂದ್ರದ ಗೌರವ ಕಾರ್ಯದರ್ಶಿ ಎ.ಎಸ್. ನಿರ್ಮಲ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಾಷಣ ಮತ್ತು ಬರವಣಿಗೆ ಅವಧಿಗಳು ವೈಯಕ್ತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದವು. ಉದಯವಾಣಿ ಪತ್ರಿಕೆಯ ಹಿರಿಯ ವಿಶೇಷ ವರದಿಗಾರ ರಮೇಶ ದೊಡ್ಡಪುರ ಹಾಗೂ ಮಂಗಳೂರಿನ ಸಾಮಾಜಿಕ ಕಾರ್ಯಕರ್ತರಾದ ಸುನಿಲ್‌ ಕುಲಕರ್ಣಿ ಈ ಅವಧಿಯಲ್ಲಿ ಶಿಬಿರಾರ್ಥಿಗಳನ್ನು ಹೊಸಚಿಂತನೆಗೆ ಒಯ್ಯುವ ಕಾರ್ಯಮಾಡಿದರು.

ಯುವಜನರಿಗೆ ಕೇವಲ ರೆಡಿಮೇಡ್ ಮಾಹಿತಿಗಳನ್ನು ಕೊಡುವುದಕ್ಕಿಂತ, ದೇಶದ ಪ್ರಸ್ತುತ ಸವಾಲುಗಳು ಮತ್ತು ಭವಿಷ್ಯದ ಸಾಧ್ಯತೆಗಳ ಬಗ್ಗೆ ಸ್ವತಂತ್ರವಾಗಿ ಆಲೋಚಿಸುವ, ಪ್ರಶ್ನಿಸುವ ಹಾಗೂ ಪರಿಹಾರಗಳನ್ನು ಹುಡುಕುವ ವಾತಾವರಣ ನಿರ್ಮಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿತ್ತು. ಮುಕ್ತ ಚರ್ಚೆ, ವಿಚಾರ ಮಂಡನೆ, ಸಮಾವೇಶದ ವಿವಿಧ ಗೋಷ್ಠಿಗಳಲ್ಲಿ ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಮನ್ವಯ, ತಾಂತ್ರಿಕ ಪ್ರಗತಿಯೊಂದಿಗೆ ಸಾಂಸ್ಕೃತಿಕ ಮೌಲ್ಯಗಳನ್ನು ಕೊಂಡೊಯ್ಯುವ ಕುರಿತು ಆಳವಾದ ಚರ್ಚೆಗಳು ನಡೆದವು. ವಿವಿಧ ಕ್ಷೇತ್ರಗಳ ಪ್ರಮುಖ ತಜ್ಞರು ಯುವ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

ಅಕ್ಟೋಬರ್‌ 3ರಂದು ‘ವೇದ ವಿಜ್ಞಾನ ಗುರುಕುಲ’ಕ್ಕೆ ಭೇಟಿ ನೀಡಲಾಯಿತು. ನಂತರ ಮಹತ್ತರ ಚರ್ಚೆಗಳಿಗೆ ಸಾಕ್ಷಿಯಾಯಿತು. ‘ಮನಸ್ಸುಗಳನ್ನು ರೂಪಿಸುವುದು ಮತ್ತು ಭವಿಷ್ಯವನ್ನು ಪೋಷಿಸುವಲ್ಲಿ ಮಾಧ್ಯಮ ಮತ್ತು ಶಿಕ್ಷಣದ ಪಾತ್ರ’ ವಿಷಯದ ಕುರಿತಂತೆ ಸಂಸ್ಕೃತ ವಿದ್ವಾಂಸೆ, ವಿಭು ಅಕಾಡೆಮಿಯ ಸಂಸ್ಥಾಪಕಿ ಮತ್ತು ನಿರ್ದೇಶಕಿ ಡಾ. ವಿ.ಬಿ. ಆರತಿ, ಪ್ರಜಾವಾಣಿ ಡಿಜಿಟಲ್‌ ಸಂಪಾದಕ ರಾಧಾಕೃಷ್ಣ ಭಡ್ತಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ನಂತರ ನಡೆದ ‘ಎಐ- ಇದು ಮಾತ್ರವೇ ಭವಿಷ್ಯವೇ?’ ಅವಧಿಯು ಸುರಭಿ ಹೊದಿಗೆರೆ, ಅಮಿತ್‌ ಹೆಬ್ಬಾರ್‌, ಕಾರ್ತಿಕ್ ಎನ್.ಎಸ್ ಅವರ ಸ್ಪಷ್ಟ ವಿಚಾರ ಮಂಡನೆಯೊಂದಿಗೆ ಶಿಬಿರಾರ್ಥಿಗಳು ತಮ್ಮ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಪಡೆಯುವಲ್ಲಿ ಯಶಸ್ವಿಯಾಯಿತು.

ಭಾರತದ ಜನಸಂಖ್ಯಾ ಗಣತಿ ಪ್ರಸ್ತುತ ಮಹತ್ವದ ವಿಷಯವಾಗಿ ಚರ್ಚೆಯಲ್ಲಿರುವಾಗ, ಯಂಗ್‌ ಥಿಂಕರ್ಸ್‌ ಮೀಟ್‌ ಕೂಡ ಇದರಿಂದ ಹೊರತಾಗಲಿಲ್ಲ. ‘ಜನಸಂಖ್ಯಾ ಅಸಮತೋಲನ: ರಾಷ್ಟ್ರೀಯ ಭದ್ರತೆಯ ಮೇಲಿನ ಪರಿಣಾಮ ಮತ್ತು ಸವಾಲುಗಳು’ ವಿಷಯಾಧಾರಿತವಾಗಿ ಹೊಸದಿಗಂತ ಪತ್ರಿಕೆಯ ಸಂಪಾದಕ ವಿನಾಯಕ್‌ ಭಟ್‌ ಮುರೂರು, ಥಿಂಕರ್ಸ್‌ ಫೋರಂ ಕರ್ನಾಟಕದ ಸಂಯೋಜಕಿ ಸಿ.ಎಸ್.‌ ಸ್ಫೂರ್ತಿ ಮುರಳೀಧರ್‌ ಹಾಗೂ ಬಿಜೆಪಿ ವಕ್ತಾರ ಉತ್ಕರ್ಷ್ ಕೆ.ಎಸ್ ಸಂವಾದನಡೆಸಿದರು.

ರಾಷ್ಟ್ರಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಎಂ. ಜಯಪ್ರಕಾಶ್ ಅವರು ಭಾರತಮಾತೆಗೆ ದೀಪ ಪ್ರಜ್ವಲನೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ರಾಜೇಶ್ ಪದ್ಮಾರ್ ಮಾತನಾಡಿ, ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ‘ವಂದೇ ಮಾತರಂ’ ಗೀತೆ ಕೇವಲ ಸಾಹಿತ್ಯ ಕೃತಿಯಾಗಿರದೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದ ಮಂತ್ರವಾಯಿತು. ದೇಶದ ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಜಾಗೃತಿಯಲ್ಲಿ ಈ ಗೀತೆಯ ಪಾತ್ರ ಅನನ್ಯವಾದದ್ದು ಎಂದು ಸ್ಮರಿಸಿದರು.

ಶಿಬಿರದ ಮೂರನೇ ಮತ್ತು ಕೊನೆಯ ದಿನ ಅರ್ಥವತ್ತಾದ ಮಾಹಿತಿಗಳನ್ನು ಶಿಬಿರಾರ್ಥಿಗಳೊಂದಿಗೆ ಚರ್ಚಿಸುವಲ್ಲಿ ಯಶಸ್ವಿಯಾಯಿತು. ‘ಕಥನಗಳ ಸಂಘರ್ಷ’ ವಿಷಯದ ಕುರಿತಂತೆ ಸುರಭಿ ಹೊದಿಗೆರೆ, ಸ್ಪೂರ್ತಿ ಮುರಳೀಧರ್ ಹಾಗೂ ಕಿರಣ್‌ ಕೆ.ಎಸ್‌ ಅವರು ವಿಷಯಪೂರ್ಣವಾಗಿ ಸಂವಾದ ನಡೆಸಿದರು.

ಒಂದು ವಿಶ್ವ: ಭಾರತೀಯ ದೃಷ್ಟಿಕೋನ

ಖ್ಯಾತ ಅಂಕಣಕಾರ ಹಾಗೂ ಲೇಖಕ ಡಾ. ರಾಮ್ ಮಾಧವ್ ಅವರು “Universal Oneness: Bharat’s Vision for a United World” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಗತ್ತನ್ನು ಒಂದೇ ಕುಟುಂಬವಾಗಿ ಕಾಣುವ ‘ವಸುಧೈವ ಕುಟುಂಬಕಂ’ ಪರಿಕಲ್ಪನೆ ಭಾರತೀಯ ಚಿಂತನೆಯ ಬೇರಾಗಿದೆ. ಇಂದಿನ ಜಾಗತಿಕ ಅಸ್ಥಿರತೆಯ ವಾತಾವರಣದಲ್ಲಿ ಜಗತ್ತಿನ ಏಕತೆ ಮತ್ತು ಪರಸ್ಪರ ಸಹಕಾರಕ್ಕೆ ಭಾರತ ನೀಡಬಹುದಾದ ಕೊಡುಗೆ ಅತ್ಯಂತ ದೊಡ್ಡದು ಎಂದು ಅವರು ಪ್ರತಿಪಾದಿಸಿದರು. ಉಪನ್ಯಾಸದ ನಂತರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಅವರು ಯುವಕರ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿ, ಸಮಾರೋಪ ಭಾಷಣ ಮಾಡಿದರು.


 
2047ರ ಭಾರತದ ನಿರ್ಮಾಣದಲ್ಲಿ ಯುವಜನರ ಹೊಣೆ

ಕಾರ್ಯಕ್ರಮದುದ್ದಕ್ಕೂ ವ್ಯಕ್ತವಾದ ಪ್ರಮುಖ ಆಶಯವೆಂದರೆ @2047ರ ವಿಕಸಿತ ಭಾರತದ ಕನಸು ನನಸಾಗಲು ಯುವಶಕ್ತಿಯೇ ಮುಖ್ಯ ಚಾಲಕ ಶಕ್ತಿ. ತಮ್ಮ ಸಾಂಸ್ಕೃತಿಕ ಬೇರುಗಳು ಮತ್ತು ಪರಂಪರೆಯ ಬಲವನ್ನು ಮರೆಯದೆ, ಆಧುನಿಕ ತಂತ್ರಜ್ಞಾನ ಹಾಗೂ ನಾವೀನ್ಯತೆಯನ್ನು (Innovation) ಅಳವಡಿಸಿಕೊಂಡು ಮುನ್ನಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ. ಬದಲಾಗುತ್ತಿರುವ ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುತ್ತಾ, ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಯುವಕನೂ ತನ್ನದೇ ಆದ ಧನಾತ್ಮಕ ಕೊಡುಗೆ ನೀಡಬೇಕಿದೆ. ಒಟ್ಟಿನಲ್ಲಿ ರಾಜ್ಯದ ವಿವಿಧ ಮೂಲೆಗಳ, ಭಿನ್ನ ಕ್ಷೇತ್ರಗಳ ಯುವ ಮನಸ್ಸುಗಳನ್ನು ಒಂದೇ ಸೂರಿನಡಿ ತಂದು, ‘ಭಾರತ @2047’ರ ಸ್ಪಷ್ಟ ದೃಷ್ಟಿಕೋನವನ್ನು ರೂಪಿಸುವಲ್ಲಿ 5ನೇ ಯಂಗ್ ಥಿಂಕರ್ಸ್ ಮೀಟ್ ಯಶಸ್ವಿಯಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.