
ಗುವಾಹಟಿ, ಅಸ್ಸಾಂ: ಜಗತ್ತಿನ ಕಲ್ಯಾಣವನ್ನು ಬಯಸುವ ಹಿಂದೂ ಜೀವನಶೈಲಿಯು ಆಚರಣೆಯ ವಿಷಯವಾಗಿದೆ. ಹಾಗಾಗಿ ನಾವೆಲ್ಲರೂ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ಶಾಂತಕುಮಾರಿ ಅವರು ಹೇಳಿದರು.
ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತ ಬೈಠಕ್ ನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು . “ನಮ್ಮ ರಾಷ್ಟ್ರವನ್ನು ವೈಭವಶಾಲಿಯನ್ನಾಗಿಸಲು, ಪಂಚ ಪರಿವರ್ತನೆ(ಸ್ವದೇಶಿ ಜೀವನಶೈಲಿ, ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ ಮತ್ತು ನಾಗರಿಕ ಕರ್ತವ್ಯ) ವಿಷಯಗಳನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಸಮಾಜಕ್ಕೂ ಅದನ್ನು ತಲುಪಿಸಬೇಕು” ಎಂದು ಅವರು ಹೇಳಿದರು. ನಮ್ಮ ಶಕ್ತಿ, ದೌರ್ಬಲ್ಯ, ಅವಕಾಶಗಳು, ಸವಾಲುಗಳ ಕುರಿತು ಅವಲೋಕಿಸುವ ಮೂಲಕ ನಮ್ಮ ಕಾರ್ಯವನ್ನು ಬಲಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಗುವಾಹಟಿಯ ಐಐಟಿ ಕ್ಯಾಂಪಸ್ನಲ್ಲಿ ಫೆಬ್ರವರಿ 22 ರಿಂದ ನಡೆದ ಈ ಎರಡು ದಿನಗಳ ಸಭೆಯಲ್ಲಿ ಭಾರತದಾದ್ಯಂತ 34 ಪ್ರಾಂತಗಳಿಂದ 108 ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಮಿತಿಯ ಅಖಿಲ ಭಾರತ ಪ್ರಮುಖ್ ಕಾರ್ಯವಾಹಿಕಾ ಸೀತಾ ಅನ್ನದಾನಮ್ ರವರು ಬೈಠಕ್ ನಲ್ಲಿ ಪ್ರಸ್ತುತ ಕಾರ್ಯಗಳ ಸ್ಥಿತಿಗತಿ, ಪೂರ್ಣಗೊಂಡಿರುವ ವಿಶೇಷ ಕಾರ್ಯಕ್ರಮಗಳು ಮತ್ತು ಮುಂದಿನ ಕಾರ್ಯಗಳ ಯೋಜನೆಗಳ ವಿವರಗಳನ್ನು ನೀಡುತ್ತಾ ಗುಣವತ್ತಾದ ಕಾರ್ಯವನ್ನು ಮುಂದುವರಿಸಬೇಕು, ಈ ವರ್ಷ ಸಂತ ನಾಮದೇವರ 675ನೇ ಜಯಂತಿ, ರಾಣಿ ದುರ್ಗಾವತಿಯ 501ನೇ ಜಯಂತಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಈ ಎಲ್ಲರ ಸ್ಪೂರ್ತಿದಾಯಕ ಜೀವನ ಚರಿತ್ರೆಗಳನ್ನು ಜನರ ಮುಂದೆ ಕೊಂಡೊಯ್ಯುವ ಜೊತೆಗೇ ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
