ಅಕ್ಟೋಬರ್ 30 ಮತ್ತು ನವೆಂಬರ್ 1, 2025ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಲಿ ಬೈಠಕ್ ನಲ್ಲಿ ನೀಡಿದ ಹೇಳಿಕೆ

ವಂದೇ ಮಾತರಂ 150 ಸಂಭ್ರಮ

ಮಾತೃಭೂಮಿಯ ಆರಾಧನೆ ಹಾಗೂ ಸಂಪೂರ್ಣ ರಾಷ್ಟ್ರಜೀವನದಲ್ಲಿ ಚೈತನ್ಯ ಸಂಚರಿಸುವಂತೆ ಮಾಡುವ ಅದ್ಭುತ ಮಂತ್ರವಾದ ವಂದೇ ಮಾತರಂ ರಚನೆಯ 150 ವರ್ಷಗಳು ಪೂರ್ಣಗೊಂಡ ಈ ಶುಭ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ವಂದೇ ಮಾತರಂ ರಚಿಸಿದ ಶ್ರದ್ಧೇಯ ಬಂಕಿಮಚಂದ್ರ ಚಟ್ಟೋಪಾಧ್ಯಾಯರನ್ನು ಕೃತಜ್ಞತೆಯೊಂದಿಗೆ ಸ್ಮರಿಸಿ, ಅವರಿಗೆ ಭಾವಪೂರ್ಣ ನಮನ ಸಲ್ಲಿಸುತ್ತದೆ. 1875ರಲ್ಲಿ ರಚಿತವಾದ ಈ ಗೀತೆಯನ್ನು 1896ರ ಕಾಂಗ್ರೆಸ್‌ನ ರಾಷ್ಟ್ರೀಯ ಅಧಿವೇಶನದಲ್ಲಿ ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ಅವರು ರಾಗಬದ್ಧವಾಗಿ ಹಾಡಿ, ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದರು. ಆ ಸಮಯದಿಂದಲೇ ಈ ಗೀತೆ ಕೇವಲ ದೇಶಭಕ್ತಿಯ ಮಂತ್ರವಲ್ಲ, ರಾಷ್ಟ್ರೀಯ ಉದ್ಘೋಷ, ರಾಷ್ಟ್ರೀಯ ಚೇತನ ಮತ್ತು ರಾಷ್ಟ್ರದ ಆತ್ಮಸ್ವರವಾಗಿ ಪರಿಣಮಿಸಿತು.

ವಂಗಭಂಗ ಆಂದೋಲನ ಸಹಿತ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರತಿಯೊಬ್ಬ ಸ್ವಾತಂತ್ರ್ಯ ಸೇನಾನಿಯ ಘೋಷಮಂತ್ರವೂ ವಂದೇ ಮಾತರಂ ಆಗಿತ್ತು. ಈ ಮಹಾಮಂತ್ರದ ವ್ಯಾಪಕತೆಯನ್ನು ಮಹರ್ಷಿ ಶ್ರೀ ಅರವಿಂದ, ಮೇಡಮ್ ಭಿಕಾಜಿ ಕಾಮಾ, ಮಹಾಕವಿ ಸುಬ್ರಹ್ಮಣ್ಯಂ ಭಾರತೀ, ಲಾಲಾ ಹರದಯಾಳ್, ಲಾಲಾ ಲಜಪತರಾಯ್ ಮುಂತಾದ ದೇಶದ ಅನೇಕ ಮಹರ್ಷಿಗಳು ಮತ್ತು ಮಹನೀಯರು ತಮ್ಮ ಪತ್ರ ಮತ್ತು ಪತ್ರಿಕೆಗಳಲ್ಲಿ ವಂದೇ ಮಾತರಂ ಎಂಬ ಶಬ್ದವನ್ನು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡಿದ್ದರು ಎಂಬ ಸಂಗತಿಯಲ್ಲಿ ಕಾಣಬಹುದು. ಮಹಾತ್ಮ ಗಾಂಧಿಯವರೂ ಕೂಡ ತಮ್ಮ ಅನೇಕ ಪತ್ರಗಳ ಅಂತ್ಯದಲ್ಲಿ ವಂದೇ ಮಾತರಂ ಎಂದೇ ಬರೆದು ಗೌರವಿಸುತ್ತಿದ್ದರು.
ವಂದೇ ಮಾತರಂ ರಾಷ್ಟ್ರದ ಆತ್ಮ ಗಾನವಾಗಿದ್ದು, ಅದು ಪ್ರತಿಯೊಬ್ಬನಿಗೂ ಪ್ರೇರಣೆಯನ್ನು ನೀಡುತ್ತದೆ. ತನ್ನ ದಿವ್ಯ ಪ್ರಭಾವದ ಕಾರಣದಿಂದಾಗಿ 150 ವರ್ಷಗಳಾದ ನಂತರವೂ ಅದು ಸಂಪೂರ್ಣ ಸಮಾಜವನ್ನು ರಾಷ್ಟ್ರದ ಕುರಿತು ಸಮರ್ಪಣ ಭಾವದಿಂದ ಓತಪ್ರೋತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಇಂದು ಪ್ರಾಂತ, ಭಾಷೆ, ಜಾತಿ ಇತ್ಯಾದಿ ಸಂಕುಚಿತತೆಗಳ ಆಧಾರಗಳಿಂದ ವಿಭಜನೆಗೆ ಒತ್ತು ನೀಡುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ವಂದೇ ಮಾತರಂ ಎಂಬುದು ಸಮಾಜವನ್ನು ಏಕತೆಯಲ್ಲಿ ಕಟ್ಟಿ ಇಡುವ ಪವಿತ್ರ ಸೂತ್ರವಾಗಿದೆ. ಭಾರತ ದೇಶದ ಎಲ್ಲ ಪ್ರಾಂತಗಳಲ್ಲಿ, ಸಮಾಜಗಳಲ್ಲಿ ಹಾಗೂ ಭಾಷೆಗಳಲ್ಲಿ ಇದರ ಸ್ವೀಕಾರ ಅತ್ಯಂತ ಸಹಜವಾಗಿದೆ. ಇದು ಇಂದಿಗೂ ನಮ್ಮ ರಾಷ್ಟ್ರೀಯ ಚೇತನ, ಸಾಂಸ್ಕೃತಿಕ ಅಸ್ಮಿತೆ ಮತ್ತು ಏಕಾತ್ಮ ದರ್ಶನ ಭಾವದ ಸಶಕ್ತ ಆಧಾರವಾಗಿದೆ. ರಾಷ್ಟ್ರೀಯ ಚೇತನದ ಪುನರ್ ಜಾಗರಣ ಮತ್ತು ರಾಷ್ಟ್ರನಿರ್ಮಾಣದ ಪವಿತ್ರ ವೇಳೆಯಲ್ಲಿ, ಈ ಮಹಾಮಂತ್ರದ ಭಾವನೆಗಳನ್ನು ಹೃದಯಂಗಮಗೊಳಿಸುವ ಅಗತ್ಯವಿದೆ.

ವಂದೇ ಮಾತರಂ ಗೀತೆಯ ರಚನೆಯ 150 ವರ್ಷಗಳ ಪುಣ್ಯ ಸಂದರ್ಭವನ್ನು ಸ್ಮರಿಸುತ್ತ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲಾ ಸ್ವಯಂಸೇವಕರು ಸೇರಿದಂತೆ ಸಮಸ್ತ ಸಮಾಜ ಬಾಂಧವರಿಗೆ ವಂದೇ ಮಾತರಂ ಮಂತ್ರದ ಪ್ರೇರಣೆಯನ್ನು ಪ್ರತಿಯೊಬ್ಬರ ಹೃದಯದಲ್ಲೂ ಜಾಗೃತಗೊಳಿಸಿ, ’ಸ್ವ’ ಆಧಾರದ ಮೇಲೆ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಮತ್ತು ಈ ಸಂದರ್ಭವನ್ನು ಸ್ಮರಿಸುವ ಕಾರ್ಯಕ್ರಮಗಳಲ್ಲಿ ಉತ್ಸಾಹಭರಿತವಾಗಿ ಭಾಗವಹಿಸಿ ಎಂದು ಆಹ್ವಾನಿಸುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.